ಮಿತ್ತೂರಿನಲ್ಲಿ ಮಿಹ್ರಾಬ್ ಜಿಲ್ಲಾ ಖತೀಬರ ಸಂಗಮ

0

ಸಂಘಟಿತ ಪ್ರಯತ್ನದಿಂದ ಅನಾಚಾರ ನಿರ್ಮೂಲನೆ ಸಾಧ್ಯ – ಮುಹಮ್ಮದ್ ಬಾಖವಿ

ಪುತ್ತೂರು: ಖತೀಬ್ ಉಸ್ತಾದರುಗಳ ಸಂಘಟಿತ ಪ್ರಯತ್ನದಿಂದ ಮಾತ್ರ ಸಮಾಜದಲ್ಲಿ ತುಂಬಿದ ಅನಾಚಾರ, ದುಂದುವೆಚ್ಚದಂತಹ ಸಾಮಾಜಿಕ ಪಿಡುಗುಗಳ ನಿರ್ಮೂಲನೆ ಸಾಧ್ಯ ಎಂದು ದಾರುಲ್ ಹುದಾ ಇಸ್ಲಾಮಿಕ್ ವಿಶ್ವವಿದ್ಯಾಲಯದ ಪ್ರೊಫೆಸರ್, ಖ್ಯಾತ ಕರ್ಮಶಾಸ್ತ್ರ ಪಂಡಿತ ಉಸ್ತಾದ್ ಮುಹಮ್ಮದ್ ಬಾಖವಿ ಚೆಮ್ಮಾಡ್ ಹೇಳಿದರು.

ಸಮಸ್ತ ಕೇರಳ ಜಂಇಯ್ಯತುಲ್ ಖುತಬಾ ದ.ಕ ಜಿಲ್ಲಾ ಸಮಿತಿ ವತಿಯಿಂದ ಮಿತ್ತೂರು ಮದ್ರಸಾ ಸಭಾಂಗಣದಲ್ಲಿ ನಡೆದ ಮಿಹ್ರಾಬ್-2024 ಜಿಲ್ಲಾ ಖತೀಬರ ಸಂಗಮದಲ್ಲಿ ವಿಷಯ ಮಂಡನೆಗೈದು ಮಾತನಾಡಿದರು. ಇಂದು ಸಮಾಜದಲ್ಲಿ ಮಾದಕ ವಸ್ತುಗಳ ಬಳಕೆ ಸಹಿತ ಹಲವಾರು ದುಶ್ಚಟಗಳು ವರ್ಧಿಸುತ್ತಿದ್ದು ಈ ಬಗ್ಗೆ ಜಮಾಅತರನ್ನು ತಿದ್ದುವ ಜವಾಬ್ದಾರಿ ಖತೀಬರ ಮೇಲಿದೆ. ಈ ನಿಟ್ಟಿನಲ್ಲಿ ಸಂಘಟಿತರಾಗಿ ನಿಸ್ವಾರ್ಥವಾಗಿ ಸೇವೆಗೈಯ್ಯುವ ಮೂಲಕ ಸಮಾಜವನ್ನು ಇಸ್ಲಾಮಿನ ತಳಹದಿಯಲ್ಲಿ ಮಾದರಿ ಸಮಾಜವಾಗಿ ತಯಾರುಗೊಳಿಸಬೇಕೆಂದು ಕರೆ ನೀಡಿದರು.

ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ಕೇಂದ್ರ ಮುಶಾವರ ಸದಸ್ಯರಾದ ಉಸ್ಮಾನುಲ್ ಫೈಝಿ ತೋಡಾರು ಅಧ್ಯಕ್ಷತೆ ವಹಿಸಿದ್ದರು. ಸಮಸ್ತ ಕೇಂದ್ರ ಮುಶಾವರ ಸದಸ್ಯರಾದ ಬಂಬ್ರಾಣ ಉಸ್ತಾದ್ ಉದ್ಘಾಟನೆ ನೆರವೇರಿಸಿದರು. ಜಂಇಯ್ಯತುಲ್ ಖುತಬಾ ಕೇಂದ್ರ ಕಾರ್ಯದರ್ಶಿ ಅಬ್ದುಲ್ ಹಮೀದ್ ದಾರಿಮಿ ಸಂಪ್ಯ, ಜಿಲ್ಲಾಧ್ಯಕ್ಷರಾದ ಅಬ್ಬಾಸ್ ದಾರಿಮಿ ಕೆಲಿಂಜ, ಜಂಇಯ್ಯತುಲ್ ಖುತಬಾ ವಿಟ್ಲ ವಲಯಾಧ್ಯಕ್ಷರಾದ ಅನಸ್ ತಂಙಳ್ ಕರ್ವೇಲು, ಕಡಬ ವಲಯ ಕಾರ್ಯದರ್ಶಿ ಇಬ್ರಾಹಿಂ ದಾರಿಮಿ ಕಡಬ, ಅಬ್ಬಾಸ್ ಮದನಿ ಗಟ್ಟಮನೆ, ಮಿತ್ತೂರು ಖತೀಬ್ ಸಯ್ಯಿದ್ ಅಲಿ ಮನ್ನಾನಿ ಶುಭ ಹಾರೈಸಿದರು. ಮಿತ್ತೂರು ಜಮಾಅತ್ ಅಧ್ಯಕ್ಷರಾದ ಕೆ.ಬಿ ಸಲೀಂ ಧ್ವಜಾರೋಹಣಗೈದರು. ನೋಂದಾಯಿತ ಖತೀಬ್ ಉಸ್ತಾದರುಗಳಿಗೆ ಗುರುತಿನ ಚೀಟಿಯನ್ನು ತೋಡಾರ್ ಉಸ್ತಾದ್ ಸಂಪ್ಯ ಹಮೀದ್ ದಾರಿಮಿಯವರಿಗೆ ನೀಡುವ ಮೂಲಕ ವಿತರಣೆಗೆ ಚಾಲನೆ ನೀಡಿದರು.

ಕುಕ್ಕಿಲ ಅಬ್ದುಲ್ ಖಾದರ್ ದಾರಿಮಿ, ಮಿತ್ತೂರು ಜಮಾಅತ್ ಕಾರ್ಯದರ್ಶಿ ಹಂಝ ಕಂದಕ್, ಕೋಶಾಧಿಕಾರಿ ಅಬ್ದುಲ್ ರಹ್ಮಾನ್ ಹಾಜಿ, ಉಪಾಧ್ಯಕ್ಷರಾದ ಆದಂ, ಜೊತೆ ಕಾರ್ಯದರ್ಶಿಗಳಾದ ಸಿದ್ದೀಕ್, ಸ್ವಾದಿಕ್, ಮದ್ರಸಾ ಮೇನೇಜ್ಮೇಂಟ್‌ನ ಕೆ.ಬಿ ಸಿರಾಜ್, ಜಮಾಅತ್ ಲೆಕ್ಕ ಪರಿಶೋಧಕ ಅಝೀಝ್ ಅಶ್ಫಾಕ್, ಯಂಗ್‌ಮೆನ್ಸ್ ಅಧ್ಯಕ್ಷರಾದ ಮುಹಮ್ಮದ್ ಶರೀಫ್, ಮಾಜಿ ಅಧ್ಯಕ್ಷರಾದ ಅಹ್ಮದ್ ಹಾಜಿ ಕುಕ್ಕರಬೆಟ್ಟು ಉಪಸ್ಥಿತರಿದ್ದರು. ಜಂಇಯ್ಯತುಲ್ ಖುತಬಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಶೀದ್ ರಹ್ಮಾನಿ ಪರ್ಲಡ್ಕ ಸ್ವಾಗತಿಸಿದರು. ಜಿಲ್ಲಾ ವರ್ಕಿಂಗ್ ಕಾರ್ಯದರ್ಶಿ ಅಬ್ದುಲ್ ರಶೀದ್ ಯಮಾನಿ ವಂದಿಸಿದರು. ವಿಟ್ಲ ವಲಯ ವರ್ಕಿಂಗ್ ಕಾರ್ಯದರ್ಶಿ ಸಿ.ಹೆಚ್ ಇಬ್ರಾಹಿಂ ಮುಸ್ಲಿಯಾರ್ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here