ಬೆಂಗಳೂರು:ನಾನು ಈ ಬಾರಿ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿ.ನನಗೆ ಟಿಕೆಟ್ ನೀಡದೇ ಇದ್ದರೆ ಸ್ವಲ್ಪ ನೋವಾಗುತ್ತೆ ಎಂದು ಮಾಜಿ ಮುಖ್ಯಮಂತ್ರಿ, ಮಾಜಿ ಕೇಂದ್ರ ಸಚಿವರೂ ಆಗಿರುವ ಬೆಂಗಳೂರು ಉತ್ತರ ಕ್ಷೇತ್ರದ ಸಂಸದ ಡಿ.ವಿ.ಸದಾನಂದ ಗೌಡ ಹೇಳಿದ್ದಾರೆ.ಚುನಾವಣಾ ಸಕ್ರಿಯ ರಾಜಕಾರಣದಿಂದ ತಾನು ನಿವೃತ್ತಿ ಹೊಂದುತ್ತಿರುವುದಾಗಿ ಕೆಲ ಸಮಯದ ಹಿಂದೆಯಷ್ಟೆ ಹೇಳಿದ್ದ ಪುತ್ತೂರಿನ ಮಾಜಿ ಶಾಸಕ, ದ.ಕ.ಲೋಕಸಭಾ ಕ್ಷೇತ್ರದ ಮಾಜಿ ಸಂಸದರೂ ಆಗಿರುವ ಡಿ.ವಿ.ಸದಾನಂದ ಗೌಡ ಅವರು ಇದೀಗ ಈ ರೀತಿ ಹೇಳಿಕೆ ನೀಡಿರುವುದು ರಾಜಕೀಯ ವಲಯದಲ್ಲಿ ಮತ್ತೆ ಚರ್ಚೆಗೆ ಗ್ರಾಸವಾಗಿದ್ದು ಕುತೂಹಲಕ್ಕೆ ಕಾರಣವಾಗಿದೆ.
ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಽಗಳೊಂದಿಗೆ ಮಾತನಾಡಿದ ಬಿಜೆಪಿಯ ಹಿರಿಯ ನಾಯಕರೂ ಆಗಿರುವ ಡಿ.ವಿ.ಸದಾನಂದ ಗೌಡ, ‘ಈ ಹಿಂದೆ ಬೇರೆಯವರಿಗೆ ಟಿಕೆಟ್ ಕೊಡಿ ಎಂದು ಹೇಳಿದ್ದೆ.ಆದರೆ, ಕ್ಷೇತ್ರದ ಎಲ್ಲ ಶಾಸಕರು, ಮುಖಂಡರು ನೀವೇ ಸ್ಪಽಸಬೇಕು ಎಂದು ಒತ್ತಾಯ ಮಾಡಿದ್ದಾರೆ.ಇನ್ನೂ ನಾನು ಹತ್ತು ವರ್ಷ ರಾಜಕೀಯದಲ್ಲಿರಬಹುದು.ನಾನು ಬೆಂಗಳೂರು ಉತ್ತರ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದು ನನಗೆ ಟಿಕೆಟ್ ಸಿಗುವ ವಿಶ್ವಾಸವಿದೆ,ಒಂದು ವೇಳೆ ನನಗೆ ಟಿಕೆಟ್ ಕೊಡದಿದ್ರೆ ಸ್ವಲ್ಪ ನೋವಾಗುತ್ತದೆ. ಬಿಜೆಪಿ ನನಗೆ ಎಲ್ಲವೂ ಕೊಟ್ಟಿದೆ’ ಎಂದು ಹೇಳಿರುವುದಾಗಿ ವರದಿಯಾಗಿದೆ.
ಶೀಘ್ರ ಬಿಜೆಪಿ ಪಟ್ಟಿ:
ಶೀಘ್ರವೇ ಬಿಜೆಪಿ ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆಗೊಳ್ಳಲಿದ್ದು ಇದರಲ್ಲಿ ರಾಜ್ಯದ ಸುಮಾರು 15 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರು ಪ್ರಕಟವಾಗಲಿದ್ದು ಇದರಲ್ಲಿ ಡಿ.ವಿ.ಯವರ ಹೆಸರು ಇರುವುದೇ ಕಾದು ನೋಡಬೇಕಾಗಿದೆ.ಡಿ.ವಿ.ಸದಾನಂದ ಗೌಡ ಅವರ ಮನವೊಲಿಸಿ ಪುನಃ ಟಿಕೆಟ್ ನೀಡುವ ಚರ್ಚೆ ನಡೆದಿದೆಯೇ ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ್ದ ವಿಪಕ್ಷ ನಾಯಕ ಆರ್.ಅಶೋಕ್, ಬೆಂಗಳೂರು ಉತ್ತರ, ದಕ್ಷಿಣ ಮತ್ತು ಕೇಂದ್ರ ಸೇರಿದಂತೆ ಎಲ್ಲ ಕ್ಷೇತ್ರಗಳಿಗೆ ಸಂಭಾವ್ಯ ಅಭ್ಯರ್ಥಿಗಳ ಬಗ್ಗೆ ವರಿಷ್ಠರಿಗೆ ತಿಳಿಸಲಾಗಿದೆ.ಕೇಂದ್ರೀಯ ನಾಯಕರು ಸಹ ಬಂದು ಸಮೀಕ್ಷೆ ನಡೆಸಿದ್ದಾರೆ ಎಂದು ಹೇಳಿದ್ದ್ದರು.ಕರ್ನಾಟಕ ಸೇರಿದಂತೆ ಲೋಕಸಭೆ ಚುನಾವಣೆಗೆ ಪಕ್ಷದ ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಈ ವಾರ ಅಂತಿಮಗೊಳಿಸಲಾಗುವುದು.ಲೋಕಸಭಾ ಚುನಾವಣೆ ಟಿಕೆಟ್ ಹಂಚಿಕೆ ಬಗ್ಗೆ ಚರ್ಚಿಸಲು ದೆಹಲಿಯಲ್ಲಿ ಬುಧವಾರ ಪಕ್ಷದ ಸಭೆ ಕರೆಯಲಾಗಿದ್ದು, ನಾನೂ ಭಾಗವಹಿಸುತ್ತಿದ್ದೇನೆ.ರಾಜ್ಯದ ಇತರ ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ ಅಂತಿಮವಾಗಲಿದೆ ಎಂದು ಮಾಜಿ ಸಿಎಂ ಯಡಿಯೂರಪ್ಪ ಹೇಳಿದ್ದಾರೆ.
ಕೆಲ ಸಮಯದ ಹಿಂದೆ ಹಾಸನದಲ್ಲಿ ಮಾತನಾಡಿದ್ದ ಡಿ.ವಿ.ಸದಾನಂದ ಗೌಡ, ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಿಸಿದ್ದರು.ಅದಾದ ಬಳಿಕ ವಿಪಕ್ಷ ನಾಯಕ ಆರ್.ಅಶೋಕ್ ಸಹಿತ ಪಕ್ಷದ ಕೆಲ ನಾಯಕರು ಅವರ ಮನವೊಲಿಸುವಲ್ಲಿ ಸಫಲರಾಗಿದ್ದರು.ಅದಾದ ಬಳಿಕ ಅವರು, ಚುನಾವಣಾ ರಾಜಕಾರಣಕ್ಕೆ ನಿವೃತ್ತಿ ಘೋಷಣೆಯನ್ನು ಹಿಂಪಡೆಯುತ್ತೇನೆ ಎಂದಿದ್ದರು.ಇದೀಗ, ನಾನು ಈ ಬಾರಿಯ ಬಿಜೆಪಿ ಟಿಕೆಟ್ ಆಕಾಂಕ್ಷಿ ಎಂದು ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.