ಪುತ್ತೂರು: ಮರೀಲ್ ಕ್ಯಾಂಪ್ಕೋ ಚಾಕೊಲೇಟ್ ಫ್ಯಾಕ್ಟರಿ ಬಳಿ ನಿಂತಿದ್ದ ಗೂಡ್ಸ್ ಲಾರಿಗೆ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಡಿಕ್ಕಿಯಾಗಿ ಗಂಭೀರ ಗಾಯಗೊಂಡಿದ್ದ ಮಹಿಳೆ ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ಮಾ.10ರಂದು ನಡೆದಿದೆ.
ಕಾರಿನಲ್ಲಿದ್ದ ಕಾಸರಗೋಡು ಜಿಲ್ಲೆಯ ಪೈವಳಿಕೆ ಗ್ರಾಮದ ಸುಳ್ಳಿಮಲೆ ನಿವಾಸಿ ಗುಲಾಬಿ(55ವ.) ಮೃತಪಟ್ಟ ದುರ್ದೈವಿ ಮಹಿಳೆಯಾಗಿದ್ದಾರೆ. ಮೃತ ಮಹಿಳೆಯ ಪತಿ ಕೃಷ್ಣಪ್ಪ ನಾಯ್ಕ (60ವ.) ಅವರು ಕೂಡಾ ತೀವ್ರ ಗಾಯಗೊಂಡಿದ್ದಾರೆ.
ಉಳಿದಂತೆ ಕಾರಿನಲ್ಲಿದ್ದ ರೋಹಿಣಿ (32ವ), ಎರಡು ವರ್ಷದ ಗನ್ಯ ಎಂಬ ಮಗು ಸಣ್ಣಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾರೆ. ಇವರೆಲ್ಲರೂ ಒಂದೇ ಕುಟುಂಬದವರಾಗಿದ್ದಾರೆ ಎಂದು ವರದಿಯಾಗಿದೆ. ಗಂಭೀರ ಗಾಯಗೊಂಡಿದ್ದ ಗುಲಾಬಿ ಅವರು ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ. ಘಟನಾ ಸ್ಥಳಕ್ಕೆ ಸಂಚಾರ ಪೊಲೀಸರು ತೆರಳಿ ಮಾಹಿತಿ ಪಡೆದು ಕೊಂಡಿದ್ದಾರೆ.