ಪೆರುವಾಯಿ ಗ್ರಾಮದಲ್ಲಿ 65.20 ಲಕ್ಷ ರೂ ವೆಚ್ಚದ ಕಾಮಗಾರಿಗೆ ಶಿಲಾನ್ಯಾಸ

0

ದ ಕ ಜಿಲ್ಲೆಗೆ ಕೇಂದ್ರದಿಂದ 1 ಲಕ್ಷ ಕೋಟಿ ಬಂದಿರುವ ಬಗ್ಗೆ ದಾಖಲೆ ಕೊಡಿ : ಅಶೋಕ್ ರೈ


ಪುತ್ತೂರು: ಪುತ್ತೂರು ವಿಧಾನಸಭಾ ಕ್ಷೇತ್ರಕ್ಕೆ ಸರಕಾರ 400 ಮನೆಗಳನ್ನು‌ ಮಂಜೂರು‌ ಮಾಡಿದ್ದು ಮನೆಯೇ ಇಲ್ಲದ ಅತ್ಯಂತ ಕಡು ಬಡವರಿಗೆ ಈ ಮನೆಯನ್ನು ನೀಡಲಾಗುವುದು ಎಂದು‌ ಪುತ್ತೂರು ಶಾಸಕರಾದ ಅಶೋಕ್ ರೈ ಹೇಳಿದರು.
ಕಳೆದ ಹಲವು ವರ್ಷಗಳಿಂದ ಕ್ಷೇತ್ರಕ್ಕೆ ಮನೆ ಬಂದಿಲ್ಲ. ಮನೆ ಇಲ್ಲದ ಬಡವರಿಗೆ ಇದರಿಂದ ತೊಂದರೆಯಾಗಿದೆ. ಪ್ರತೀ ಗ್ರಾಪಂ ಗಳಲ್ಲಿ ಬಡವರನ್ನು ಹುಡುಕಿ ಮನೆಯನ್ನು ಹಂಚಲಾಗುವುದು ಎಂದು ಹೇಳಿದರು. ಗ್ಯಾರಂಟಿ ಯೋಜನೆಯಿಂದ ರಾಜ್ಯದ ಅನೇಕ ಕುಟುಂಬಗಳು ನೆಮ್ಮದಿಯ ಬೆಳಕು ಕಂಡಿದೆ. ಗ್ಯಾರಂಟಿ ಯೋಜನೆಗಳು ಬಡವರ ಬಾಳನ್ನು ಬೆಳಗಿಸಿದೆ ಎಂದು ಹೇಳಿದರು.ಮುಂದಿನ‌ ಒಂದು ವರ್ಷದೊಳಗೆ ಪ್ರತೀ‌ ಮನೆಗೂ ಕುಡಿಯುವ ನೀರಿನ ಪೂರೈಕೆಯಾಗಲಿದೆ ಎಂದು ಶಾಸಕರು ಹೇಳಿದರು.


ಗ್ಯಾರಂಟಿ ಸುಳ್ಳು ಎಂದು ಹೇಳಿದವರು ಎಲ್ಲಿದ್ದಾರೆ?
ಕಾಂಗ್ರೆಸ್ ಸರಕಾರದ ಐದು ಗ್ಯಾರಂಟಿ ಯೋಜನೆಗಳು ಸುಳ್ಳು, ಅದನ್ನು ಕೊಡುವುದೇ ಇಲ್ಲ ಎಂದು ಹೇಳುತ್ತಿದ್ದವರು ಈಗ ಎಲ್ಲಿದ್ದಾರೆ ಎಂದು ಪ್ರಶ್ನಿಸಿದರು.


ಒಂದು‌ ಲಕ್ಷ ಕೋಟಿಯ ಲೆಕ್ಕ ಕೊಡಿ
ದ ಕ ಜಿಲ್ಲೆಗೆ ಕೇಂದ್ರ ಸರಕಾರದಿಂದ ಒಂದು ಲಕ್ಷ ಕೋಟಿ ಅನುದಾನ ಬಂದಿದೆ ಎಂದು ಜನಪ್ರತಿನಿದಿಯೋರ್ವರು ಹೇಳಿದ್ದಾರೆ ಅದು ಸತ್ಯವೋ ಸುಳ್ಳೋ ಗೊತ್ತಿಲ್ಲ, ಅಷ್ಟೊಂದು ಅನುದಾನ ಬಂದಿದ್ದರೆ ಅದನ್ನು‌ಮಾಧ್ಯಮದಲ್ಲಿ ಪ್ರಕಟಿಸಿ ,ಜನರಿಗೆ ತಿಳಿಸಿ ಎಂದು‌ ಶಾಸಕರು ಸವಾಲು ಹಾಕಿದರು. ನಾನು ನನ್ನ ಕ್ಷೇತ್ರಕ್ಕೆ ತಂದಿರುವ 1400 ಕೋಟಿ ಅನುದಾನ ಲೆಕ್ಕ ಕೊಡ್ತೇನೆ ಬನ್ನಿ ಎಂದು ಸವಾಲು ಹಾಕಿದ ಶಾಸಕರು ಜಿಲ್ಲೆಗೆ ಒಂದು‌ ಲಕ್ಷ‌ಕೋಟಿ ಬಂದಿದ್ದೇ ಆಗಿದ್ದರೆ ಪುತ್ತೂರಿನಿಂದ ಮಂಗಳೂರಿಗೆ ಹೈವೇಯಲ್ಲಿ ಹೋಗುವಾಗಲೇ ಅನುಭವ ಆಗುತ್ತದೆ ಎಂದು ವ್ಯಂಗ್ಯವಾಡಿದರು.


ವಿಟ್ಲ ಉಪ್ಪಿನಂಗಡಿ ಬ್ಲಾಕ್ ಅಧ್ಯಕ್ಷ ಡಾ. ರಾಜಾರಾಂ ಕೆ ಬಿ ಮಾತನಾಡಿ ಅಶೋಕ್ ರೈ ಶಾಸಕರಾದ ನಂತರ ಪುತ್ತೂರು ವಿಧಾನಸಭಾ ಕ್ಷೇತ್ರ ಅಭಿವೃದ್ದಿಯಲ್ಲಿ‌ ಮುಂಚೂಣಿಯಲ್ಲಿದೆ. ಅಭಿವೃದ್ದಿ ಪರ್ವ ಆರಂಭವಾಗಿದೆ. ಕ್ಷೇತ್ರಕ್ಕೆ 1400 ಕೋಟಿಗೂ‌ ಮಿಕ್ಕಿ‌ ಅನುದಾನ ತಂದಿರುವುದು ಇತಿಹಾಸವಾಗಿದೆ ಎಂದು ಹೇಳಿದರು. ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷವನ್ನು ಭದ್ರಗೊಳಿಸುವ ಮೂಲಕ ಕ್ಷೇತ್ರದ ಅಭಿವೃದ್ದಿಗೆ ನಾವೆಲ್ಲರೂ ಕೈ ಜೋಡಿಸಬೇಕು ಎಂದು ಹೇಳಿದರು.


ಕೆಪಿಸಿಸಿ ಕಾರ್ಯದರ್ಶಿ ಎಂ ಎಸ್ ಮಹಮ್ಮದ್ ಮಾತನಾಡಿ ಶಾಸಕ ಅಶೋಕ್ ರೈ ಯವರು ಅಭಿವೃದ್ದಿಪರ ಚಿಂತಕರು. ಗ್ಯಾರಂಟಿ ಯೋಜನೆಯಿಂದ ಅಭಿವೃದ್ದಿ ಕೆಲಸಕ್ಕೆ ಹಿನ್ನಡೆಯಾಗಿದೆ ಎಂದು ವಿರೋಧ ಪಕ್ಷಗಳು ಆರೋಪ ಮಾಡಿದ್ದವು ಆದರೆ ಕ್ಷೇತ್ರಕ್ಕೆ ಭರಪೂರ ಅನುದಾನ ಬಂದಿದೆ ಇದನ್ನು ಸಹಿಸಲಾಗದ ಬಿಜೆಪಿ ಅಪಸ್ವರ ಎತ್ತುತ್ತಿದೆ ಎಂದು ಹೇಳಿದರು. ಯಾವ ಇಲಾಖೆಯನ್ನೂ ಬಿಡದೆ ಎಲ್ಲವುಗಳಿಂದಲೂ ಕ್ಷೇತ್ರಕ್ಕೆ ಅನುದಾನ ತಂದಿದ್ದಾರೆ. ಜನಪ್ರತಿನಿಧಿಗಳು, ಶಾಸಕರಾದವರು ಪುತ್ತೂರು ಶಾಸಕರನ್ನು‌ ನೋಡಿ ಕಲಿಯವುದು ತುಂಬಾ ಇದೆ. ನಂಜಿ ಕಾರುವುದನ್ನು ಬಿಟ್ಟು ಅಭಿವೃದ್ದಿ ಕಾರ್ಯಕ್ಕೆ ಕೈ ಜೋಡಿಸಿ ಎಂದು ಎಂ ಎಸ್ ರವರು ಮನವಿ ಮಾಡಿದರು.ಅನುದಾನ ಬಂದಿದೆ ಎಂದು ಪತ್ರಿಕೆಯಲ್ಲಿ ಸುಳ್ಳು‌ಮಾಹಿತಿ‌ ನೀಡುವ ಹವ್ಯಾಸ ಕಾಂಗ್ರೆಸ್ ನವರಿಗಿಲ್ಲ ಎಂದು ಹೇಳಿದರು.


ಕೆಪಿಸಿಸಿ ಕಾರ್ಯದರ್ಶಿ ಮಹಮ್ಮದ್ ಎಂ ಎಸ್, ಪಂಜಿಗುಡ್ಡೆ ಈಶ್ವರಭಟ್, ಅಳಿಕೆ ಗ್ರಾಪಂ ಅಧ್ಯಕ್ಷ ಪದ್ಮನಾಭ ಪೂಜಾರಿ, ಅಳಿಕೆ ಗ್ರಾಪಂ ಸದಸ್ಯ ಸೀತಾರಾಮ ಶೆಟ್ಟಿ, ಪೆರುವಾಯಿ ಗ್ರಾಪಂ ಅಧ್ಯಕ್ಷೆ ಪುಷ್ಪಲತಾ ಶೆಟ್ಟಿ, ಉದ್ಯಮಿ‌ನಿಹಾಲ್ ಶೆಟ್ಟಿ, ಪೆರುವಾಯಿ ಗ್ರಾಪಂ ಅಧ್ಯಕ್ಷೆ ನೆಬಿಸಾ, ವಿಕ್ತಂ ಶೆಟ್ಟಿ, ವಲಯ ಕಾಂಗ್ರೆಸ್ ಅಧ್ಯಕ್ಣ ರಾಜೇಂದ್ರನಾಥ ಶೆಟ್ಟಿ, ಗ್ರಾಪಂ ಸದಸ್ಯೆ ರಶ್ಮಿ, ವಿ ಎ ರಶೀದ್ ವಿಟ್ಲ ಮತ್ತಿತರರು ಉಪಸ್ಥಿತರಿದ್ದರು. ರಹಿಮಾನ್ ಖಾನ್ ಸ್ವಾಗತಿಸಿ ವಂದಿಸಿದರು.

LEAVE A REPLY

Please enter your comment!
Please enter your name here