ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ 10ನೇ ತರಗತಿ ವಿದ್ಯಾರ್ಥಿಗಳಿಗೆ ಬೀಳ್ಗೋಡುಗೆ ಕಾರ್ಯಕ್ರಮ

0

ಪುತ್ತೂರು: ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ, ತೆಂಕಿಲ ಇಲ್ಲಿ ಪ್ರಸಕ್ತ ಶೈಕ್ಷಣಿಕ ಸಾಲಿನ ಹತ್ತನೇ ತರಗತಿಯ ಮಕ್ಕಳ ಬೀಳ್ಕೋಡುಗೆ ಸಮಾರಂಭ ‘ದೀಪ ಪ್ರದಾನ’ ನೆರವೇರಿತು. ಕಾರ್ಯಕ್ರಮದ ಉದ್ಘಾಟಕರಾಗಿ ಪುತ್ತೂರಿನ ದಂತ ವೈದ್ಯರಾದ ಶ್ರೀಕೃಷ್ಣ ಭಟ್ ಆಗಮಿಸಿ ವಿದ್ಯಾರ್ಥಿಗಳು ಪರೀಕ್ಷಾ ಸಮಯದಲ್ಲಿ ವಹಿಸಬೇಕಾದ ಪೂರ್ವಸಿದ್ಧತಾ ವಿಚಾರಗಳನ್ನು ತಿಳಿಸಿ ಶಾಲೆಯ ಧನಾತ್ಮಕ ಹಾಗೂ ಕ್ರಿಯಾತ್ಮಕ ಬೆಳವಣಿಗೆಯಲ್ಲಿ ಪೋಷಕರ ಹಾಗೂ ವಿದ್ಯಾರ್ಥಿಗಳ ಸಹಕಾರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಉಡುಪಿಯ ವಿದ್ವಾನ್‌ ದಾಮೋದರ ಶರ್ಮಾ ಅವರು ಮಾತೃವಂದನೆ ಮಹತ್ವ ಹಾಗೂ ವಿಧಾನವನ್ನು ತಿಳಿಸಿ, ಭಾರತೀಯ ಸಂಸ್ಕತಿಯಲ್ಲಿ ತಾಯಿ-ತಂದೆ, ಗುರು-ಹಿರಿಯರ ಸ್ಥಾನಮಾನ, ಕರ್ತವ್ಯಗಳ ಬಗ್ಗೆ ತಿಳಿಸುತ್ತಾ ಎಳವೆಯಿಂದಲೇ ನಮ್ಮ ಆಚರಣೆಗಳ ವೈಜ್ಞಾನಿಕ ಪ್ರಾಮುಖ್ಯತೆಯ ಅರಿವು ನಮಗಿದ್ದಲ್ಲಿ ನಮ್ಮ ವ್ಯಕ್ತಿತ್ವ ರೂಪುಗೊಳ್ಳಲು ಪ್ರಧಾನ ಭೂಮಿಕೆಯಾಗಿದೆ ಎಂದು ತಿಳಿಸಿದರು.

ಭಾರತ ಮಾತೆಯ ಭಾವಚಿತ್ರಕ್ಕೆ ಪುಷ್ಫಾರ್ಚನೆ ನೆರವೇರಿಸಿ ದೀಪದೊಂದಿಗೆ ಅಖಂಡ ಭಾರತವನ್ನು ಬೆಳಗಿದ ವಿದ್ಯಾರ್ಥಿಗಳು ಹಾಗೂ ಪೋಷಕರು ತಮ್ಮ ಮಕ್ಕಳು ಮೊದಲ ಬಾರಿಗೆ ತಮ್ಮ ಪಾದ ಪೂಜೆ ಮಾಡಿ ಆಶೀರ್ವಾದ ಪಡೆದು ಸಿಹಿ ಹಂಚಿಕೊಂಡರು. ಅಂಕ ಪಟ್ಟಿಯೊಂದಿಗೆ ನಮ್ಮ ಮಕ್ಕಳ ಶಾಲಾ ಕಲಿಕೆ ಅಂತ್ಯವಾಗದೆ ಶಾಲೆ ಮತ್ತು ನಮ್ಮ ಸಂಬಂಧ ನಿತ್ಯ ನಿರಂತರವಾಗಿರುವಂತೆ ಬಾಂಧವ್ಯವಿರಿಸಿರುವ ಸಹಶಿಕ್ಷಕ ವೃಂದಕ್ಕೆ ಪೋಷಕರು ತಮ್ಮ ಅನಿಸಿಕೆಗಳಲ್ಲಿ ಕೃತಜ್ಞತೆ ಸಲ್ಲಿಸಿದರು.
10ನೇ ತರಗತಿಯ ಮಕ್ಕಳು, 9ನೇ ತರಗತಿಯ ಮಕ್ಕಳಿಗೆ ದೀಪ ಪ್ರದಾನ ಮಾಡಿ ಶುಭ ಹಾರೈಸಿದರು. ವೇದಿಕೆಯಲ್ಲಿ ಸಭಾಧ್ಯಕ್ಷತೆ ವಹಿಸಿದ ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರಾದ ರಮೇಶ್ಚಂದ್ರ, ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ಜಯಂತ ಪ್ರೌಢ ವಿಭಾಗದ ಮುಖ್ಯಗುರು ಆಶಾ ಬೆಳ್ಳಾರೆ, ಪ್ರಾಥಮಿಕ ವಿಭಾಗದ ಮುಖ್ಯಗುರು ನಳಿನಿ ವಾಗ್ಲೆ, ಆಡಳಿತ ಮಂಡಳಿ ಕೋಶಾಧಿಕಾರಿ ಅಶೋಕ್‌ ಕುಂಬ್ಳೆ, ಸದಸ್ಯರಾದ ವೀಣಾ ನಾಗೇಶ್‌ ತಂತ್ರಿ ಉಪಸ್ಥಿತರಿದ್ದರು. ಶಾಲಾ ಸಹಶಿಕ್ಷಕರಾದ ರಾಜೇಶ್‌ ಕಾರ್ಯಕ್ರಮ ನಿರೂಪಿಸಿದರು. ದೇಶಭಕ್ತಿ ಗೀತೆಯೊಂದಿಗೆ ಆರಂಭವಾದ ಕಾರ್ಯಕ್ರಮವು ಶಾಂತಿ ಮಂತ್ರ ಹಾಗೂ ಸಾಮೂಹಿಕ ಸಹಭೋಜನದೊಂದಿಗೆ ಸಂಪನ್ನಗೊಂಡಿತು.

LEAVE A REPLY

Please enter your comment!
Please enter your name here