ಪುತ್ತೂರು: ರೋಟರಿ ಕ್ಲಬ್ ಪುತ್ತೂರು ಕಣ್ಣಿನ ಆಸ್ಪತ್ರೆ ಮತ್ತು ಪ್ರಸಾದ್ ನೇತ್ರಾಲಯ ಇದರ ಸಂಯುಕ್ತ ಆಶ್ರಯದಲ್ಲಿ ಉಚಿತ ನೇತ್ರ ತಪಾಸಣಾ ಶಿಬಿರವು ಮಾ.15 ರಂದು ಪುತ್ತೂರು ರಾಧಾಕೃಷ್ಣ ಬಿಲ್ಡಿಂಗ್ ನಲ್ಲಿನ ಪುತ್ತೂರು ರೋಟರಿ ಕಣ್ಣಿನ ಆಸ್ಪತ್ರೆಯಲ್ಲಿ ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ನಡೆಯಿತು.
ರೋಟರಿ ಜಿಲ್ಲಾ ಗವರ್ನರ್ ಎಚ್.ಆರ್ ಕೇಶವ್ ರವರು ರೋಟರಿ ಕ್ಲಬ್ ಪುತ್ತೂರು ಸಂಸ್ಥೆಗೆ ಅಧಿಕೃತ ಭೇಟಿ ನೀಡಿದ ಸಂದರ್ಶನದಲ್ಲಿ ಅವರು ರೋಟರಿ ಕ್ಲಬ್ ಪುತ್ತೂರು ಕಣ್ಣಿನ ಆಸ್ಪತ್ರೆಗೆ ಭೇಟಿಯಿತ್ತು ಆಸ್ಪತ್ರೆಯ ಸಕಲ ಸಿದ್ಧತೆಗಳ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಪುತ್ತೂರು ರೋಟರಿ ಕ್ಲಬ್ ಈಗಾಗಲೇ ಬ್ಲಡ್ ಬ್ಯಾಂಕ್, ಡಯಾಲಿಸಿಸ್ ಕೇಂದ್ರ ಮುಂತಾದ ಶಾಶ್ವರ ಕೊಡುಗೆಗಳನ್ನು ನೀಡುತ್ತಾ ಬಂದಿದ್ದು ಇದೀಗ ಮತ್ತೊಂದು ಶಾಶ್ವತ ಯೋಜನೆಯಾದ ಕಣ್ಣಿನ ಆಸ್ಪತ್ರೆಯನ್ನು ಲೋಕಾರ್ಪಣೆಗೊಳಿಸಿದೆ. ಈ ಕಣ್ಣಿನ ಆಸ್ಪತ್ರೆಯಲ್ಲಿ ಉಚಿತ ನೇತ್ರ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿದ್ದು ಈ ಶಿಬಿರದಲ್ಲಿ ಕಣ್ಣಿನ ಸಂಪೂರ್ಣ ತಪಾಸಣೆ, ಅಗತ್ಯವುಳ್ಳವರಿಗೆ ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆ ಉಚಿತವಾಗಿ ಮಾಡಲಾಗುವುದು. ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆಯನ್ನು ನಿಗದಿಪಡಿಸಿದ ದಿನಾಂಕಗಳಲ್ಲಿ ಮಾಡಲಾಗುತ್ತದೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಶಿಬಿರದ ಸದುಪಯೋಗವನ್ನು ಪಡೆದುಕೊಂಡಿರುತ್ತಾರೆ ಎಂದು ರೋಟರಿ ಕ್ಲಬ್ ಪುತ್ತೂರು ಅಧ್ಯಕ್ಷ ಜೈರಾಜ್ ಭಂಡಾರಿರವರು ತಿಳಿಸಿದರು.
ನೇತ್ರ ತಪಾಸಣೆಗೆ ಆಗಮಿಸಿದ ಫಲಾನುಭವಿಗಳಿಗೆ ನೇತ್ರ ಚಿಕಿತ್ಸಾ ತಜ್ಞರು ಸೂಕ್ತ ಮಾರ್ಗದರ್ಶನ ನೀಡಿದರು. ರೋಟರಿ ಅಸಿಸ್ಟೆಂಟ್ ಗವರ್ನರ್ ನರಸಿಂಹ ಪೈ, ವಲಯ ಸೇನಾನಿ ಝೇವಿಯರ್ ಡಿ’ಸೋಜ, ನಿಯೋಜಿತ ಅಧ್ಯಕ್ಷ ಡಾ.ಶ್ರೀಪತಿ ರಾವ್, ಕಾರ್ಯದರ್ಶಿ ಸುಜಿತ್ ಡಿ.ರೈ, ಸಮುದಾಯ ವಿಭಾಗದ ನಿರ್ದೇಶಕ ಸೋಮಶೇಖರ್ ರೈ, ಕ್ಲಬ್ ಮಾಜಿ ಅಧ್ಯಕ್ಷರುಗಳು, ಪದಾಧಿಕಾರಿಗಳು, ಸದಸ್ಯರು, ರೋಟರಿ ಪುತ್ತೂರು ಚಾರಿಟೇಬಲ್ ಟ್ರಸ್ಟ್ ಪಿ.ಆರ್.ಒ ಕುಲದೀಪ್ ಸಹಿತ ಹಲವರು ಉಪಸ್ಥಿತರಿದ್ದರು.