ಪುತ್ತೂರು: ಇತ್ತೀಚೆಗೆ ಭಾರತೀಯ ಭೂಸೇನೆಯ ಲೆಫ್ಟಿನೆಂಟ್ ಆಗಿ ನಿಯುಕ್ತಿಗೊಂಡ ಪುತ್ತೂರಿನ ವಿವೇಕಾನಂದ ಪದವಿಪೂರ್ವ ಕಾಲೇಜಿನ ಹಿರಿಯ ವಿದ್ಯಾರ್ಥಿ ಅಜಿತೇಶ್‌ಗೆ ವಿವೇಕಾನಂದ ಪದವಿಪೂರ್ವ ಕಾಲೇಜಿನ ವತಿಯಿಂದ ಸನ್ಮಾನಿಸಲಾಯಿತು.
ವಿವೇಕಾನಂದ ಪದವಿ ಪೂರ್ವ ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ರವೀಂದ್ರ ಪಿ. ಹಿರಿಯ ವಿದ್ಯಾರ್ಥಿಯನ್ನು ಸನ್ಮಾನಿಸಿ ಮಾತನಾಡಿದ ಅವರು “ವಿವೇಕಾನಂದ ಪದವಿಪೂರ್ವ ಕಾಲೇಜು ರಾಷ್ಟ್ರ ಸೇವೆಯ ಪರಿಕಲ್ಪನೆಯೊಂದಿಗೆ ಕಾರ್ಯವೆಸಗುತ್ತಾ ಬಂದಿದೆ. ನಮ್ಮ ಸಂಸ್ಥೆಯ ಅದೆಷ್ಟೋ ಹಿರಿಯ ವಿದ್ಯಾರ್ಥಿಗಳು ದೇಶದ ವಿವಿಧ ಭಾಗಗಳಲ್ಲಿ ವಿವಿಧ ಕ್ಷೇತ್ರಗಳಲ್ಲಿ ದೇಶ ಸೇವೆಯಲ್ಲಿ ತೊಡಗಿದ್ದಾರೆ. ಇದೀಗ ನಮ್ಮ ಮತ್ತೋರ್ವ ಹಿರಿಯ ವಿದ್ಯಾರ್ಥಿ ಭೂಸೇನೆಯ ಲೆಫ್ಟಿನೆಂಟ್ ಆಗಿ ನಿಯುಕ್ತಿಗೊಂಡಿರುವುದು ಹೆಮ್ಮೆಯ ವಿಚಾರ. ನಮ್ಮ ದೇಶದ ಸೈನ್ಯಗಳು ಜಗತ್ತಿನ ಅತ್ಯಂತ ಶಕ್ತಿಶಾಲಿ ಸೈನ್ಯಗಳಲ್ಲಿ ಒಂದಾಗಿ ಗುರುತಿಸಿಕೊಂಡಿರುವ ಈ ಪರ್ವಕಾಲದಲ್ಲಿ ನಮ್ಮ ಹಿರಿಯ ವಿದ್ಯಾರ್ಥಿಗೆ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಲು ಭಾಗ್ಯ ದೊರೆತಿರುವುದು ನಮಗೆ ಬಹಳ ಸಂತಸದ ವಿಷಯ. ಈ ಸಾಧನೆಗೆ ಅವರಿಗೆ ಬೆಂಬಲ ನೀಡಿದ ಅವರ ಪೋಷಕರಿಗೆ, ಮಾರ್ಗದರ್ಶನ ನೀಡಿದ ಎಲ್ಲಾ ಶಿಕ್ಷಕರಿಗೆ ಈ ಸಂದರ್ಭದಲ್ಲಿ ವಿಶೇಷ ಅಭಿನಂದನೆಗಳನ್ನು ಸಲ್ಲಿಸುತ್ತೇನೆ” ಎಂದು ಹೇಳಿ ತಮ್ಮ ಸಂತಸ ವ್ಯಕ್ತಪಡಿಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಅಜಿತೇಶ್ “ನಾನು ವಿದ್ಯಾಭ್ಯಾಸ ಮಾಡಿದ ನನ್ನನ್ನು ಬೆಳೆಸಿದ ಈ ಸಂಸ್ಥೆಗೆ ಆಗಮಿಸಿ ನನಗೆ ಮಾರ್ಗದರ್ಶನ ನೀಡಿದ ಅಧ್ಯಾಪಕರ ಸಮ್ಮುಖದಲ್ಲಿ ಸನ್ಮಾನ ಸ್ವೀಕರಿಸುತ್ತಿರುವುದು ನನಗೆ ಬಹಳ ಖುಷಿಯಾಗುತ್ತಿದೆ. ನನ್ನ ಬೆಳವಣಿಗೆಗೆ ಸಹಕರಿಸಿದ ವಿವೇಕಾನಂದ ಪದವಿಪೂರ್ವ ಕಾಲೇಜಿಗೆ ನಾನು ಚಿರಋಣಿ. ನನ್ನ ಪೋಷಕರಿಗೆ ಹಾಗೂ ನನ್ನ ಅಧ್ಯಾಪಕರಿಗೆ ಈ ಸಂದರ್ಭದಲ್ಲಿ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ” ಎಂದು ಹೇಳಿದರು.
ಈ ಸಂದರ್ಭದಲ್ಲಿ ಪ್ರಾಂಶುಪಾಲ ಮಹೇಶ್ ನಿಟಿಲಾಪುರ, ಉಪಪ್ರಾಂಶುಪಾಲ ದೇವಿಚರಣ್ ರೈ ಎಂ., ವಿವಿಧ ವಿಭಾಗಗಳ ಮುಖ್ಯಸ್ಥರು, ಉಪನ್ಯಾಸಕರು ಹಾಗೂ ಉಪನ್ಯಾಸಕೇತರ ವೃಂದದವರು ಉಪಸ್ಥಿತರಿದ್ದರು.
ಅಜಿತೇಶ್ ಪಿ. ಎಸ್. ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಕುಕ್ಕೆ ಸುಬ್ರಹ್ಮಣ್ಯದ ನೂಚಿಲ ನಿವಾಸಿಯಾಗಿದ್ದು, ಕುಕ್ಕೆ ಸುಬ್ರಹ್ಮಣ್ಯದ ಕುಮಾರಸ್ವಾಮಿ ವಿದ್ಯಾಸಂಸ್ಥೆಯ ಮುಖ್ಯಶಿಕ್ಷಕಿ ವಿದ್ಯಾರತ್ನ ಹಾಗೂ ಬಿಳಿನೆಲೆ ಶ್ರೀ ಗೋಪಾಲಕೃಷ್ಣ ಪ್ರೌಢಶಾಲೆಯ ನಿವೃತ್ತ ಮುಖ್ಯಶಿಕ್ಷಕ ಶ್ರೀಕೃಷ್ಣ ಶರ್ಮ ಪಿ. ಅವರ ಸುಪುತ್ರ. ಇತ್ತೀಚೆಗಷ್ಟೆ ಭಾರತೀಯ ಭೂಸೇನೆಗೆ ಲೆಫ್ಟಿನೆಂಟ್ ಆಗಿ ನಿಯುಕ್ತಿಗೊಂಡಿರುವ ಇವರು ಮಾರ್ಚ್ 29 ರಂದು ತಮ್ಮ ಸೇವೆಯನ್ನು ಆರಂಭಿಸಲಿದ್ದು, ಲಡಾಖ್ ನಲ್ಲಿ ಸೇವೆ ಪ್ರಾರಂಭಿಸಲಿದ್ದಾರೆ.