ಅಧ್ಯಕ್ಷರಿಂದ ಅನುದಾನ ದುರುಪಯೋಗದ ಪ್ರಕರಣ – ಏಳು ದಿನದೊಳಗೆ ವರದಿ ನೀಡಲು ತಾ.ಪಂ.ಇಒ ಆದೇಶ – ಸರಕಾರದ ವತಿಯಿಂದ ಸಮಿತಿ ರಚನೆ ಮಾಡಲು ನಿರ್ಧಾರ- 34 ನೆಕ್ಕಿಲಾಡಿ ಗ್ರಾ.ಪಂ. ಸಾಮಾನ್ಯ ಸಭೆ

0

ಉಪ್ಪಿನಂಗಡಿ: 34 ನೆಕ್ಕಿಲಾಡಿ ಗ್ರಾ.ಪಂ. ಅಧ್ಯಕ್ಷರ ಮೇಲಿರುವ ಸರಕಾರದ ಅನುದಾನವನ್ನು ದುರುಪಯೋಗ ಪಡಿಸಿಕೊಂಡಿರುವ ಆರೋಪದ ಕುರಿತಾಗಿ ಪರಿಶೀಲಿಸಿ ಏಳು ದಿನಗಳೊಳಗೆ ವರದಿ ನೀಡುವಂತೆ ತಾ.ಪಂ. ಕಾರ್ಯನಿರ್ವಹಣಾಧಿಕಾರಿಯವರಿಂದ ಪತ್ರದ ಬಗ್ಗೆ ಸಾಮಾನ್ಯ ಸಭೆಯಲ್ಲಿ ಚರ್ಚಿಸಿ, ಈ ಬಗ್ಗೆ ಸರಕಾರದ ವತಿಯಿಂದ ಸಮಿತಿ ರಚನೆ ಮಾಡಿ ಪರಿಶೀಲನೆ ನಡೆಸಲು 34 ನೆಕ್ಕಿಲಾಡಿ ಸಾಮಾನ್ಯ ಸಭೆಯಲ್ಲಿ ತೀರ್ಮಾನಿಸಲಾಯಿತು.

ಗ್ರಾ.ಪಂ. ಅಧ್ಯಕ್ಷೆ ಸುಜಾತ ರೈ ಅಲಿಮಾರ್ ಅವರ ಅಧ್ಯಕ್ಷತೆಯಲ್ಲಿ ಗ್ರಾ.ಪಂ. ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆಯಿತು. ಸಾಮಾಜಿಕ ಹೋರಾಟಗಾರ ಜತೀಂದ್ರ ಶೆಟ್ಟಿಯವರು ಗ್ರಾ.ಪಂ. ಅಧ್ಯಕ್ಷೆ ಸುಜಾತ ರೈ ಅಲಿಮಾರ್ ಅವರ ವಿರುದ್ಧ ಸರಕಾರದ ಅನುದಾನವನ್ನು ದುರುಪಯೋಗಪಡಿಸಿಕೊಂಡಿರುವ ಆರೋಪ ಹೊರಿಸಿದ್ದಲ್ಲದೆ, ಅವರ ಸದಸ್ಯತ್ವ ರದ್ದತಿಗೆ ಕೋರಿ ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿಗೆ ಪತ್ರ ಬರೆದಿದ್ದರು. ಈ ಬಗ್ಗೆ ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿಯವರು ತಾ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿಗೆ ಪತ್ರ ಬರೆದಿದ್ದು, ಅದರಂತೆ ತಾ.ಪಂ. ಮುಖ್ಯಕಾರ್ಯನಿರ್ವಹಣಾಧಿಕಾರಿಯವರು 34 ನೆಕ್ಕಿಲಾಡಿ ಗ್ರಾ.ಪಂ. ಪಿಡಿಒ ಅವರಿಗೆ ಪತ್ರ ಬರೆದು, ಜತೀಂದ್ರ ಶೆಟ್ಟಿಯವರು ನೀಡಿದ ದೂರನ್ನು ಉಲ್ಲೇಖಿಸಿ, ಸುಜಾತ ರೈಯವರು ಸರಕಾರದ ಅನುದಾನವನ್ನು ದುರುಪಯೋಗ ಪಡಿಸಿಕೊಂಡಿರುವ ಆರೋಪದ ಕುರಿತಾಗಿ ಪರಿಶೀಲಿಸಿ ಈ ಬಗ್ಗೆ ವರದಿಯನ್ನು ಏಳು ದಿನಗಳೊಳಗೆ ಕಳುಹಿಸಿಕೊಡಲು ಆದೇಶಿಸಿದ್ದರು. ಈ ಪತ್ರದ ಬಗ್ಗೆ ಸಾಮಾನ್ಯ ಸಭೆಯಲ್ಲಿ ಪ್ರಸ್ತಾಪವಾಯಿತ್ತಲ್ಲದೆ, ಇವರ ಮೇಲಿರುವ ಆರೋಪ ನಿಖರವಾಗಿ ಕಂಡು ಬಾರದಿರುವುದರಿಂದ ಸರಕಾರದ ವತಿಯಿಂದ ಸಮಿತಿ ರಚನೆ ಮಾಡಿ ಪರಿಶೀಲನೆ ನಡೆಸಿ, ಸದಸ್ಯತ್ವದ ಬಗ್ಗೆ ತೀರ್ಮಾನ ಕೈಗೊಳ್ಳಲು ತಾ.ಪಂ. ಕಾರ್ಯನಿರ್ವಹಣಾಧಿಕಾರಿಯವರಿಗೆ ಪತ್ರ ಬರೆಯಲು ನಿರ್ಧರಿಸಲಾಯಿತು.
34 ನೆಕ್ಕಿಲಾಡಿ ಗ್ರಾ.ಪಂ. ವ್ಯಾಪ್ತಿಯಲ್ಲಿ ತ್ಯಾಜ್ಯ ಸಂಗ್ರಹದ ಶುಲ್ಕ ಪಾವತಿ ಸರಿಯಾದ ರೀತಿಯಲ್ಲಿ ನಡೆಯುತ್ತಿಲ್ಲ. ಆದ್ದರಿಂದ ಕಮಿಷನ್ ಆಧಾರದಲ್ಲಿ ತಕ್ಷಣವೇ ಸಿಬ್ಬಂದಿಯನ್ನು ನೇಮಕ ಮಾಡಿ ಅವರಿಗೆ ತ್ಯಾಜ್ಯ ಸಂಗ್ರಹದ ಶುಲ್ಕ ಸಂಗ್ರಹಿಸುವ ಹೊಣೆಯನ್ನು ನೀಡಬೇಕು ಎಂದು ಸಭೆಯಲ್ಲಿ ತೀರ್ಮಾನಿಸಲಾಯಿತು. ಉತ್ತರ ಭಾರತ ಮೂಲದ ಕಾರ್ಮಿಕರಿಂದ 34 ನೆಕ್ಕಿಲಾಡಿ ಗ್ರಾಮದಲ್ಲಿ ತೊಂದರೆಯಾಗುತ್ತಿದ್ದು, 2 ಗಂಟೆ ರಾತ್ರಿಗೂ ಅವರು ರಸ್ತೆಯಲ್ಲಿ ಗುಂಪುಕಟ್ಟಿಕೊಂಡು ನಿಂತು ಬೊಬ್ಬೆ ಹೊಡೆಯುತ್ತಾ ಇರುತ್ತಾರೆ. ಅಲ್ಲದೇ, ಕೆಲವರು ಬೊಳಂತಿಲ, ಮೈಂದಡ್ಕ, ದರ್ಬೆ ರಸ್ತೆ ಬದಿಗಳಲ್ಲಿ ರಾತ್ರಿ ಮದ್ಯಪಾನ ನಡೆಸಿ, ಬಾಟಲಿಗಳನ್ನು ಅಲ್ಲಿಯೇ ಎಸೆದು ಹೋಗುತ್ತಾರೆ. ಸಂತೆಕಟ್ಟೆಯಲ್ಲೂ ಕೆಲವರು ರಾತ್ರಿ ಗುಂಪು ಕೂಡಿಕೊಂಡು ಧೂಮಪಾನ ಸೇವನೆ, ಮದ್ಯಪಾನ ಸೇವನೆ ನಡೆಸುತ್ತಿದ್ದಾರೆ. ಆದ್ದರಿಂದ ಇಲ್ಲಿ ಕಟ್ಟುನಿಟ್ಟಾಗಿ ಪೊಲೀಸ್ ಗಸ್ತು ನಡೆಸಿ, ಇಂತಹ ಕೃತ್ಯಗಳಿಗೆ ಕಡಿವಾಣ ಹಾಕಬೇಕೆಂದು ಸಭೆಯಲ್ಲಿ ತೀರ್ಮಾನಿಸಿ, ಈ ಬಗ್ಗೆ ಪೊಲೀಸ್ ವರಿಷ್ಠಾಧಿಕಾರಿಯವರಿಗೆ ಪತ್ರ ಬರೆಯಲು ನಿರ್ಧರಿಸಲಾಯಿತು. ಬೊಳುವಾರು- 34 ನೆಕ್ಕಿಲಾಡಿ ರಾಜ್ಯ ಹೆದ್ದಾರಿಯಲ್ಲಿ ಬೊಳಂತಿಲ- ಬೇರಿಕೆ ಚತುಷ್ಪಥ ಕಾಮಗಾರಿಯು ನಿಧಾನ ಗತಿಯಲ್ಲಿ ಸಾಗುತ್ತಿದ್ದು, ಅದಕ್ಕೆ ವೇಗ ನೀಡಬೇಕೆಂದು ಪಿಡಬ್ಲ್ಯೂಡಿ ಇಲಾಖೆಗೆ ಪತ್ರ ಬರೆಯಲು ನಿರ್ಣಯಿಸಲಾಯಿತು. ಕೆಲವರು ಕುಡಿಯುವ ನೀರಿನ ಕಳ್ಳತನ ಮಾಡುತ್ತಿದ್ದು, ಅಂತವರಿಗೆ ನೊಟೀಸ್ ನೀಡಲು ಹಾಗೂ ರಸ್ತೆ ಬದಿಯಲ್ಲಿ ತ್ಯಾಜ್ಯ ಬಿಸಾಡುವವರ ಮೇಲೆ ಕಾನೂನು ಕ್ರಮ ಕೈಗೊಳ್ಳಲು ತೀರ್ಮಾನಿಸಲಾಯಿತು.
ಸಭೆಯಲ್ಲಿ ಗ್ರಾ.ಪಂ. ಉಪಾಧ್ಯಕ್ಷ ಹರೀಶ್ ಡಿ., ಸದಸ್ಯರಾದ ಪ್ರಶಾಂತ್ ಎನ್., ಸ್ವಪ್ನ, ವಿಜಯಕುಮಾರ್, ವೇದಾವತಿ, ತುಳಸಿ, ಹರೀಶ್ ಕೆ., ಕೆ. ರಮೇಶ ನಾಯ್ಕ, ಎ. ರತ್ನಾವತಿ, ಗೀತಾ ಉಪಸ್ಥಿತರಿದ್ದು, ಸಲಹೆ- ಸೂಚನೆಗಳನ್ನು ನೀಡಿದರು. ಗ್ರಾ.ಪಂ. ಪಿಡಿಒ ಸತೀಶ್ ಡಿ. ಬಂಗೇರ ಸ್ವಾಗತಿಸಿ, ಅರ್ಜಿಗಳ ವಿಲೇ ಮಾಡಿದರು. ಗ್ರಾ.ಪಂ. ಲೆಕ್ಕ ಸಹಾಯಕ ದೇವಪ್ಪ ನಾಯ್ಕ ವಂದಿಸಿದರು.


ಏನಿದು ಅನುದಾನ ದುರುಪಯೋಗದ ಪ್ರಕರಣ?


2013-14ನೇ ಸಾಲಿನ ಬಸವ ವಸತಿ ಯೋಜನೆಯಡಿಯಲ್ಲಿ ಶ್ರೀಮತಿ ಸುಜಾತ ಆರ್. ರೈ (ಫ. ಕೋಡ್ 78118) 34 ನೆಕ್ಕಿಲಾಡಿ ಗ್ರಾಮ ಪಂಚಾಯತ್ ರವರಿಗೆ ಮನೆ ಮಂಜೂರಾತಿಯಾಗಿರುತ್ತದೆ. ಮತ್ತು ಸರಕಾರಕ್ಕೆ 34 ನೆಕ್ಕಿಲಾಡಿ ಗ್ರಾಮದ ಸ.ನಂ. 89/17(ಪಿ2)ರಲ್ಲಿ 0.04 ಎಕರೆ ಜಮೀನನ್ನು ಉಪನೋಂದಣಾಧಿಕಾರಿಯವರ ಕಚೇರಿಯಲ್ಲಿ ಅಡಮಾನ ಮಾಡಿಕೊಟ್ಟಿದ್ದು, ವಸತಿ ನಿಗಮದಿಂದ ಅನುದಾನ ಪಡೆದುಕೊಂಡಿರುತ್ತಾರೆ. ಆದರೆ ಇವರು ಸರಕಾರಕ್ಕೆ ಅಡಮಾನ ಮಾಡಿಕೊಟ್ಟ ಜಮೀನಿನಲ್ಲಿ ಸರಕಾರದಿಂದ ಅನುದಾನ ಪಡೆದ ಮನೆಯನ್ನು ನಿರ್ಮಿಸದೆ ಸರಕಾರಕ್ಕೆ ಸುಳ್ಳು ಮಾಹಿತಿಯನ್ನು ನೀಡಿ ಇತರ ಸ.ನಂ.ನ ಜಮೀನಿನಲ್ಲಿ ಮನೆ ರಚನೆ ಮಾಡಿರುವುದಾಗಿ ಆರೋಪಿಸಿ 34 ನೆಕ್ಕಿಲಾಡಿ ನಿವಾಸಿ ಚಂದ್ರಹಾಸ ಶೆಟ್ಟಿಯವರು ಲೋಕಾಯುಕ್ತಕ್ಕೆ ದೂರು ನೀಡಿದ್ದರು. ಈ ದೂರಿನ ಮೇರೆಗೆ ಸುಜಾತ ಆರ್ ರೈ ಅವರು ಮನೆ ನಿರ್ಮಾಣಕ್ಕೆ ಪಡೆದುಕೊಂಡ ಅನುದಾನವನ್ನು ನಿಯಮಾನುಸಾರ ಬಡ್ಡಿ ಸಮೇತ ವಸೂಲಿ ಮಾಡಿ ನಿಗಮಕ್ಕೆ ಪಾವತಿಸಲು ಸೂಕ್ತ ಕ್ರಮ ವಹಿಸಲು ದ.ಕ. ಜಿ.ಪಂ. ಮುಖ್ಯಕಾರ್ಯನಿರ್ವಹಣಾಧಿಕಾರಿಯವರು ತಾ.ಪಂ. ಕಾರ್ಯನಿರ್ವಹಣಾಧಿಕಾರಿಯವರಿಗೆ ಆದೇಶಿಸಿದ್ದರು. ತಾ.ಪಂ. ಕಾರ್ಯನಿರ್ವಹಣಾಧಿಕಾರಿಯವರು ಈ ಬಗ್ಗೆ 34 ನೆಕ್ಕಿಲಾಡಿ ಗ್ರಾ.ಪಂ. ಪಿಡಿಒ ಅವರಿಗೆ ಆದೇಶಿಸಿದ್ದರು. ಅದರಂತೆ 34 ನೆಕ್ಕಿಲಾಡಿ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿಯವರು ಸುಜಾತ ರೈಯವರಿಗೆ ನೊಟೀಸ್ ನೀಡಿ, 2013-14ರ ಸಾಲಿನಲ್ಲಿ ಬಸವ ವಸತಿ ಕೋಡ್ ಸಂ: 78118 ಯೋಜನೆಯಡಿ ಸರಕಾರದ ಅನುದಾನವನ್ನು ಪಡೆದುಕೊಂಡು ಸರ್ವೆ ನಂ. 89/17(ಪಿ2)ರಲ್ಲಿ ವಾಸದ ವಸತಿ ಮನೆಯನ್ನು ನಿರ್ಮಿಸದೆ ಸುಳ್ಳು ಮಾಹಿತಿಯನ್ನು ನೀಡಿ ಇತರೆ ಸ.ನಂ.ನಲ್ಲಿ ವಸತಿಯನ್ನು ನಿರ್ಮಿಸಿರುವ ಕಾರಣ ದ.ಕ. ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿಯವರ ಹಾಗೂ ಪುತ್ತೂರು ತಾ.ಪಂ. ಕಾರ್ಯನಿರ್ವಹಣಾಧಿಕಾರಿಯವರ ಆದೇಶದಂತೆ ರಾಜೀವ್ ಗಾಂಧಿ ವಸತಿ ನಿಗಮದ ಆಡಳಿತ ನಿರ್ದೇಶಕರ ಹೆಸರಿಗೆ 2,20,428.91 ರೂಪಾಯಿಯ ಡಿ.ಡಿ. ತೆಗೆದು, ದಿನಾಂಕ: 06-04-2023ರಂದು ಗ್ರಾ.ಪಂ.ಗೆ ನೀಡಬೇಕು. ತಪ್ಪಿದ್ದಲ್ಲಿ ಮುಂದಿನ ಹಾಗು ಹೋಗುಗಳಿಗೆ ತಾವೇ ಜವಾಬ್ದಾರಿಯಾಗಿರುತ್ತೀರಿ ಎಂದು ನೊಟೀಸ್‌ನಲ್ಲಿ ಉಲ್ಲೇಖಿಸಿದ್ದರು. ಆದರೆ ಆ ಅವಧಿಗೆ ಸುಜಾತ ರೈಯವರು ಹಣವನ್ನು ಪಾವತಿಸಿರಲಿಲ್ಲ. ಆದ್ದರಿಂದ ಸಾಮಾಜಿಕ ಹೋರಾಟಗಾರ ಜತೀಂದ್ರ ಶೆಟ್ಟಿಯವರು ಈ ಎಲ್ಲಾ ಪ್ರಕರಣವನ್ನು ಉಲ್ಲೇಖಿಸಿ ಸುಜಾತ ಆರ್. ರೈಯವರು ಸರಕಾರದ ಅನುದಾನವನ್ನು ದುರುಪಯೋಗ ಮಾಡಿಕೊಂಡಿರುವುದರಿಂದ ಅವರ ಗ್ರಾ.ಪಂ. ಸದಸ್ಯತ್ವವನ್ನು ರದ್ದುಗೊಳಿಸಬೇಕೆಂದು ದಾಖಲೆಗಳ ಸಮೇತ ದ.ಕ. ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಈ ಬಗ್ಗೆ ವರದಿ ನೀಡಲು ಗ್ರಾ.ಪಂ. ಪಿಡಿಒ ಅವರಿಗೆ ತಾ.ಪಂ. ಕಾರ್ಯನಿರ್ವಹಣಾಧಿಕಾರಿಯವರು ಆದೇಶಿಸಿದ್ದರು.

LEAVE A REPLY

Please enter your comment!
Please enter your name here