ಅದಷ್ಟು ಸೇವೆ ಮಾಡಲು ಅವಕಾಶ ಕೊಡಿ- ಡಾ. ಗೌರಿ ಪೈ
ಸೌರ ಶಕ್ತಿಯ ಉಪಯೋಗ ಎಲ್ಲಾ ಸಂಸ್ಥೆಗಳಲ್ಲೂ ಆಗಬೇಕು – ಎನ್.ಸುಬ್ರಹ್ಮಣ್ಯಂ ಕೊಳತ್ತಾಯ
ಡಾ. ಗೌರಿ ಪೈ ಅವರ ಜೀವನ ಖುಷಿ ಪಡುವ ಜೀವನ – ಸೀತಾರಾಮ ಕೇವಳ
ಪುತ್ತೂರು: ನೆಲ್ಲಿಕಟ್ಟೆಯಲ್ಲಿರುವ ಶ್ರೀ ರಾಮಕೃಷ್ಣ ಸೇವಾ ಸಮಾಜದಲ್ಲಿ ಸೌರಶಕ್ತಿ ವಿದ್ಯುತ್ ವ್ಯವಸ್ಥೆಯ ಉದ್ಘಾಟನಾ ಸಮಾರಂಭವು ಮಾ.17 ರಂದು ನಡೆಯಿತು. ಸೌರಶಕ್ತಿಯ ಘಟಕದ ದಾನಿಯಾಗಿರುವ ಆನಂದಾಶ್ರಮ ಸೇವಾ ಟ್ರಸ್ಟ್‌ನ ಅಧ್ಯಕ್ಷೆ ಡಾ. ಪಿ ಗೌರಿ ಪೈ ಅವರು ಸೌರಶಕ್ತಿ ವಿದ್ಯುತ್ ವ್ಯವಸ್ಥೆಯ ಉದ್ಘಾಟನೆ ಮಾಡಿ, ಸಂಸ್ಥೆಯೊಳಗಡೆ ನಾಮ ಫಲಕ ಅನಾವರಣ ಮಾಡಿದರು.
ಅದಷ್ಟು ಸೇವೆ ಮಾಡಲು ಅವಕಾಶ ಕೊಡಿ:
ಆನಂದಾಶ್ರಮ ಸೇವಾ ಟ್ರಸ್ಟ್‌ನ ಅಧ್ಯಕ್ಷೆ ಡಾ. ಪಿ ಗೌರಿ ಪೈ ಅವರು ಮಾತನಾಡಿ ನಾನು ಇನ್ನು ಕೆಲಸ ಜಾಸ್ತಿ ಮಾಡಬೇಕಾಗಿದೆ. ಏನು ಬೇಕು ಕೇಳಿ. ಇನ್ನೊಮ್ಮೆ ಅವಕಾಶ ಕೊಟ್ಟರೆ ಇನ್ನೂ ಕೆಲಸ ಮಾಡುತ್ತೇನೆ. ನಂಗಂತು ಇನ್ನು ಸಮಯವಿಲ್ಲ. ಆನಂದಾಶ್ರಮ ಮತ್ತು ರಾಮಕೃಷ್ಣ ಸೇವಾ ಸಮಾಜ ನನ್ನ ಎರಡು ಕಣ್ಣುಗಳಿದ್ದಂತೆ. ಹಾಗಾಗಿ ಇಲ್ಲಿ ನನಗೆ ಆದಷ್ಟು ಸೇವೆ ಮಾಡುವ ಹಂಬಲವಿದೆ. ಸೇವೆ ಮಾಡುವ ಅವಕಾಶ ಕೊಡಿ ಎಂದರು.
ಸೌರ ಶಕ್ತಿಯ ಉಪಯೋಗ ಎಲ್ಲಾ ಸಂಸ್ಥೆಗಳಲ್ಲೂ ಆಗಬೇಕು:
ಶ್ರೀ ರಾಮಕೃಷ್ಣ ಸೇವಾ ಸಮಾಜ ಇದರ ಅಧ್ಯಕ್ಷ ಎನ್.ಸುಬ್ರಹ್ಮಣ್ಯಂ ಕೊಳತ್ತಾಯ ಅಧ್ಯಕ್ಷತೆ ವಹಿಸಿ ಮಾತನಾಡಿ ಇವತ್ತು ಸಂತೋಷದ ಕಾರ್ಯ ಆಗಿದೆ. ಸಮಾಜಕ್ಕೆ ಕೊಟ್ಟಂತಹ ಕೊಡುಗೆ ಉತ್ತಮ ಸದುಪಯೋಗ ಆಗಲಿದೆ. ಡಾ. ಗೌರಿ ಪೈ ಅವರು ಆರ್ಥಿಕವಾಗಿ ತುಂಬಾ ಸಹಾಯ ಮಾಡಿದ್ದಾರೆ. ಅದರಲ್ಲಿ ಇದೂ ದೊಡ್ಡ ಕೊಡುಗೆಯಾಗಿದೆ. ಇಂತಹ ಸೌರಶಕ್ತಿಯ ಉಪಯೋಗ ಎಲ್ಲಾ ಸಂಸ್ಥೆಗಳಲ್ಲೂ ಆಗಬೇಕು. ಅದಾಯದ ಲೆಕ್ಕಾಚಾರದಲ್ಲಿ ಪ್ರಕಾರ ಆರ್ಥಿಕವಾಗಿ ಸಂಸ್ಥೆಗೆ ಉಳಿತಾಯ ಆಗಲಿದೆ ಎಂದರು.
ಡಾ. ಗೌರಿ ಪೈ ಅವರ ಜೀವನ ಖುಷಿ ಪಡುವ ಜೀವನ:
ವಿದ್ಯಾರಶ್ಮಿ ವಿದ್ಯಾರಶ್ಮಿ ವಿದ್ಯಾಲಯದ ಪ್ರಾಂಶುಪಾಲ ಸೀತಾರಾಮ ಕೇವಳ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ಡಾ. ಗೌರಿ ಪೈ ಅವರ ಸಮಗ್ರ ಜೀವನವೇ ಖುಷಿ ಪಡುವ ಜೀವನವಾಗಿದೆ. ಕೊಡುವುದಲ್ಲಿ ಇರುವ ಸುಖ ಪಡೆಯುವುದಲ್ಲಿ ಇಲ್ಲ ಎಂಬುದನ್ನು ಪಾಲಿಸಿಕೊಂಡು ಬಂದವರಲ್ಲಿ ಗೌರಿ ಪೈ ಒಬ್ಬರಾಗಿದ್ದಾರೆ. ಅದರಂತೆ ಈ ಸಂಸ್ಥೆಯನ್ನು ಒಟ್ಟು ವ್ಯವಸ್ಥೆಯ ದೃಷ್ಟಿಯಿಂದ ಅತ್ಯಂತ ಚೆಂದವಾಗಿ ದಕ್ಷತೆಯಿಂದ ನಡೆಸಿಕೊಂಡು ಹೋಗುತ್ತಿರುವ ಗುಣಪಾಲ್ ಜೈನ್ ಮತ್ತು ಸಂಸ್ಥೆಯ ಅಧ್ಯಕ್ಷರಾಗಿರುವ ಸುಬ್ರಹ್ಮಣ್ಯ ಕೊಳತ್ತಾಯ ಅವರು ಸಂಸ್ಥೆಯ ಅಭಿವೃದ್ಧಿಗೆ ಹಲವು ಶ್ರಮ ಪಡುತ್ತಿದ್ದಾರೆ. ಇಂತಹ ಸಂಸ್ಥೆಯ ಬಗ್ಗೆ ಎಲ್ಲರಲ್ಲೂ ಅರಿವು ಇರಲಿ ಎಂದರು.
ಸನ್ಮಾನ:
ಸಂಸ್ಥೆಗೆ ಸುಮಾರು ರೂ. 10 ಲಕ್ಷ ವೆಚ್ಚದಲ್ಲಿ ಸೋಲಾರ್ ವಿದ್ಯುತ್ ವ್ಯವಸ್ಥೆಯನ್ನು ಕೊಡುಗೆಯಾಗಿ ನೀಡಿದ ಡಾ. ಗೌರಿ ಪೈ ಅವರನ್ನು ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು. ಸಂಸ್ಥೆಯ ಕಾರ್ಯದರ್ಶಿ ಗುಣಪಾಲ್ ಜೈನ್, ಕೋಶಾಧಿಕಾರಿ ಶಶಿಕಲಾ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಂಸ್ಥೆಯ ವಿದ್ಯಾರ್ಥಿನಿ ಸನ್ಮತಿ ಪ್ರಾರ್ಥಿಸಿದರು. ಸಂಸ್ಥೆಯ ಜೊತೆ ಕಾರ್ಯದರ್ಶಿ ವತ್ಸಲರಾಜ್ಞಿ ಸ್ವಾಗತಿಸಿದರು. ಸಂಸ್ಥೆಯ ಸಿಬ್ಬಂದಿ ಮೂಕಾಂಬಿಕಾ ವಂದಿಸಿದರು. ಅಶ್ವಿನಿಕಾರ್ಯಕ್ರಮ ನಿರೂಪಿಸಿದರು. ಸಂಸ್ಥೆಯ ನಿರ್ದೇಶಕರಾದ ವಸಂತ ಕುಮಾರ್ ರೈ, ಎಮ್‌ಎನ್ ಚೆಟ್ಟಿಯಾರ್, ರಾಜೇಶ್ ಪವರ ಪ್ರೇಸ್‌ನ ಮಾಲಕ ರಘುನಾಥ್ ರಾವ್, ವಾಟೆಡ್ಕ ಕೃಷ್ಣ ಭಟ್, ವೇಣುಗೋಪಾಲ್, ಅರಿಯಡ್ಕ ಚಿಕ್ಕಪ್ಪ ನಾಕ್, ಸೌರ ಶಕ್ತಿ ಘಟಕದ ಅಳವಡಿಕೆ ಕಾರ್ಯ ನಡೆಸಿದ ಸುಧಾ ಎಲೆಕ್ಡ್ರಿಕಲ್ಸ್‌ನ ಮಾಲಕ ಬಾಲಕೃಷ್ಣ ಕೊಳತ್ತಾಯ, ರೋಟರಿ ಬ್ಲಡ್ ಬ್ಯಾಂಕ್‌ನ ವೈದ್ಯಾಧಿಕಾರಿ ಡಾ ರಾಮಚಂದ್ರ ಭಟ್, ವಿದುಷಿ ನಯನ ರೈ, ವಿಶ್ವಪ್ರಸಾದ್ ಸೇಡಿಯಾಪು, ರವಿ ಮುಂಗ್ಲಿಮನೆ ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು.
ಕಟ್ಟಡ ಪೂರ್ಣ ಸೌರಶಕ್ತಿಯಲ್ಲಿ ಬೆಳಗಲಿದೆ
ಶ್ರೀ ರಾಮಕೃಷ್ಣ ಸೇವಾ ಸಮಾಜಕ್ಕೆ ತಿಂಗಳಿಗೆ ಸುಮಾರು ರೂ. 50ಸಾವಿರ ವಿದ್ಯುತ್ ಬಿಲ್ ಬರುತ್ತಿತ್ತು. ವಿದ್ಯುತ್ ಖರ್ಚನ್ನು ಉಳಿಸುವ ನಿಟ್ಟಿನಲ್ಲಿ ಸೌರಶಕ್ತಿಯನ್ನು ಅಳವಡಿಸಲಾಗಿದೆ. ಸುಮಾರು ರೂ. 10 ಲಕ್ಷ ವೆಚ್ಚದಲ್ಲಿ ಸೌರಶಕ್ತಿಯ ವಿದ್ಯುತ್ ಸೇವಾ ಸಮಾಜದ ಕಟ್ಟಡವನ್ನು ಬೆಳಗಲಿದೆ.
-ಕೆ ಗುಣಪಾಲ್ ಜೈನ್ ಕಾರ್ಯದರ್ಶಿ, ಶ್ರೀ ರಾಮಕೃಷ್ಣ ಸೇವಾ ಸಮಾಜ ಪುತ್ತೂರು