ಮೋದಿ ಗ್ಯಾರಂಟಿ, ಕಾಂಗ್ರೆಸ್ ಗ್ಯಾರಂಟಿಯೊಂದಿಗೆ ಲಂಚ, ಭ್ರಷ್ಟಾಚಾರ ಮುಕ್ತದ ಗ್ಯಾರಂಟಿ ಬೇಕು

0

ಮಹಾತ್ಮ ಗಾಂಧಿಯವರು ಭಾರತ ಸ್ವತಂತ್ರವಾದ ಮೇಲೆ ಪ್ರತಿಯೊಂದು ಹಳ್ಳಿಯಲ್ಲಿ ಗ್ರಾಮಸ್ವರಾಜ್ಯದ ಆಡಳಿತ ಬರಬೇಕು, ಸ್ವಸಾಮರ್ಥ್ಯದ ನಾಯಕರು ಸೃಷ್ಠಿಯಾಗಬೇಕು. ಹಳ್ಳಿಯಿಂದ ಡೆಲ್ಲಿಗೆ ಆಡಳಿತವಾಗಬೇಕು. ಸುಭದ್ರ ಸಾಮರ್ಥ್ಯವಿರುವ ಸ್ವಾವಲಂಬಿ ಹಳ್ಳಿಗಳಿದ್ದರೆ ದೇಶವೂ ಸುಭದ್ರವಾಗುತ್ತದೆ. ಎಂದಿದ್ದಾರೆ.


ನಮ್ಮದು ಪಾರ್ಲಿಮೆಂಟ್ ಚುನಾವಣೆ. ನಾವು ಆರಿಸುವ ಪ್ರತಿನಿಧಿ ನಮ್ಮನ್ನು ರಾಜ್ಯದಲ್ಲಿ ಮತ್ತು ದೇಶದಲ್ಲಿ ಪ್ರತಿನಿಧಿಸುತ್ತಾ ಆತ ನಮ್ಮ ಹಿತಕ್ಕಾಗಿ ರಾಜ್ಯದಲ್ಲಿ ಮತ್ತು ದೇಶದಲ್ಲಿ ಸಮರ್ಥ ನಾಯಕರನ್ನು ಆರಿಸುತ್ತಾನೆ. ಆ ಮೂಲಕ ದೇಶವನ್ನು ರಕ್ಷಿಸುವ ಬದ್ಧತೆ ಹೊಂದಿರುತ್ತಾನೆ. ನಮ್ಮ ಪ್ರತಿನಿಧಿ ಸಮರ್ಥನಿದ್ದರೆ ದೇಶ ಹೆಚ್ಚು ಸಮರ್ಥವಾಗುತ್ತದೆ. ನಮ್ಮ ಪ್ರತಿನಿಧಿ ದುರ್ಬಲನಾದರೆ ಏನಾದೀತು?. ಹಳ್ಳಿಗಳು ದುರ್ಬಲವಾದವು. ದೇಶವೂ ದುರ್ಬಲವಾದೀತು ಅಲ್ಲವೇ?. ದೇಶದ ನಾಯಕ ಎಷ್ಟೇ ಪ್ರಬಲನಾಗಿದ್ದರೂ ದುರ್ಬಲ ಪ್ರತಿನಿಧಿಗಳಿಂದ ಕೂಡಿದ್ದರೆ ದೇಶ ಪ್ರಬಲವಾಗಲು ಸಾಧ್ಯವೇ?.


ಪ್ರಜಾಪ್ರಭುತ್ವ ಬಂದ ಮೇಲೆ ಚುನಾವಣೆಗಳು ಬಂದವು. ಬ್ರಿಟಿಷರು ಬಿಟ್ಟು ಹೋದ ಸ್ಥಾನಗಳಿಗೆ, ಅಧಿಕಾರಕ್ಕೆ ನಮ್ಮ ನಾಯಕರುಗಳು ಕುಳಿತರು. ಇಲ್ಲಿ ಮಹಾತ್ಮಗಾಂಧಿಯವರ ಗ್ರಾಮ ಸ್ವರಾಜ್ಯದ ಆಶಯಕ್ಕೆ ಮೊಳೆ ಹೊಡೆಯಲಾಯಿತು. ಡೆಲ್ಲಿಯಿಂದಲೇ ಹಳ್ಳಿಗಳಿಗೆ ಆಡಳಿತ ಪ್ರಾರಂಭವಾಯಿತು. ದೇಶಕ್ಕೂ, ರಾಜ್ಯಕ್ಕೂ, ಜಿಲ್ಲೆಗೂ ಕೊನೆ ಕೊನೆಗೆ ಗ್ರಾಮ ಪಂಚಾಯತ್‌ಗಳಿಗೂ ಡೆಲ್ಲಿಯಿಂದ,ಬೆಂಗಳೂರಿನಿಂದ ಪ್ರತಿನಿಧಿ ಆಯ್ಕೆ ಪ್ರಾರಂಭವಾಯಿತು. ಶ್ರೀಮತಿ ಇಂದಿರಾ ಗಾಂಧಿ ಕಾಲದಲ್ಲಿ ಅದು ಪರಾಕಷ್ಟೆಗೆ ಬಂತು. ಇಂದಿರಾ ಗಾಂಧಿ ಎಷ್ಟು ಜನಪ್ರಿಯತೆ ಪಡೆದಿದ್ದರು ಎಂದರೆ ಅವರ ಹೆಸರಿನಲ್ಲಿ ಲೈಟ್ ಕಂಬ, ಕತ್ತೆ ನಿಂತರೂ ಗೆದ್ದು ಬರುತ್ತಾರೆ ಎಂಬ ಮಾತು ಚಾಲ್ತಿಯಲ್ಲಿತ್ತು. ಜನರ ಪರಿಚಯವಿಲ್ಲದವರು, ಸ್ವಂತ ಸಾಮರ್ಥ್ಯವಿಲ್ಲದ ಕೆಲವರು ಗೆದ್ದು ಬಂದದ್ದು ಅದಕ್ಕೆ ಉದಾಹರಣೆ ಆಗಿತ್ತು. ಇದೀಗ ಅಂತಹುದೇ ಪರಿಸ್ಥಿತಿ ಬಿಜೆಪಿಯಲ್ಲಿ ಬಂದಿದೆ. ಪ್ರಧಾನಿ ಮೋದೀಜಿ ಎಷ್ಟು ಜನಪ್ರಿಯತೆ ಪಡೆದಿದ್ದಾರೆ ಎಂದರೆ ಅವರ ಹೆಸರಿನಲ್ಲಿ ಯಾರೇ ನಿಂತರೂ ಗೆಲ್ಲುತ್ತಾರೆ. ಯಾಕೆಂದರೆ ಜನ ಅಭ್ಯರ್ಥಿಯನ್ನು ನೋಡದೆ ಮೋದೀ ಜಿಯವರಿಗೆಂದೇ ಓಟು ಹಾಕಲು ನಿರ್ಧರಿಸಿದ್ದಾರೆ.
ಇಂದು ಓಟು ಕೇಳುವವರು ಮೋದಿ ಗ್ಯಾರಂಟಿಗೆ ಓಟು ಕೊಡಿ, ಕಾಂಗ್ರೆಸ್ ಗ್ಯಾರಂಟಿಗೆ ಓಟು ಕೊಡಿ ಎಂದು ಹೇಳುತ್ತಿದ್ದಾರೆ. ಅದರೊಂದಿಗೆ ಲಂಚ, ಭ್ರಷ್ಟಾಚಾರ ಮುಕ್ತ ಗ್ಯಾರಂಟಿ ಕೊಡುವುದು ಜನತೆಗೂ, ದೇಶಕ್ಕೂ ಒಳಿತಲ್ಲವೇ?. ಭ್ರಷ್ಟಾಚಾರ ಗೆದ್ದಲು ಹುಳ, ಅದು ಇದ್ದರೆ ದೇಶ ಅಭಿವೃದ್ಧಿಯಾಗಲಾರದು ಎಂದು ಮೋದೀಜಿ ಹೇಳಿದ ಮಾತನ್ನು ಇಲ್ಲಿ ನೆನಪಿಸಬೇಕಲ್ಲವೇ?. ನಮ್ಮ ಓಟಿನಿಂದ ಗೆಲ್ಲುವ ಪ್ರತಿನಿಧಿ ನಮಗೆ ಗ್ಯಾರಂಟಿಯಾಗಬೇಕೇ?, ನಮ್ಮ ಪ್ರತಿನಿಽಯಾಗಿ ಕೆಲಸ ಮಾಡಬೇಕೇ? ಅಥವಾ ರಾಜ್ಯದ, ಕೇಂದ್ರ ನಾಯಕರ ಪ್ರತಿನಿಧಿಯಾಗಿ ಕೆಲಸ ಮಾಡಬೇಕೇ?. ಅವನು ಸ್ವಸಾಮರ್ಥ್ಯದಲ್ಲಿ ಗೆಲ್ಲುವವನಾಗಬೇಕೇ? ಅಥವಾ ನಾಯಕರ ಹೆಸರಲ್ಲಿ ಗೆಲ್ಲುವನು ಆಗಬೇಕೇ?. ಅದು ಎರಡೂ ಆಗಬೇಕೇ? ಮತದಾರರೇ ಉತ್ತರಿಸಬೇಕು.


ನೀವು ಯಾವುದೇ ವ್ಯಕ್ತಿಗಾಗಿ, ಪಕ್ಷಕ್ಕಾಗಿ ಓಟು ಹಾಕಿ ಆದರೆ ಓಟು ಹಾಕಿ ಗೆಲ್ಲಿಸುವ ವ್ಯಕ್ತಿ ನಮ್ಮ ಆಶಯಗಳನ್ನು ಕಾಪಾಡುವವನಾಗಿರಲಿ, ಸ್ವಾಭಿಮಾನದ ಸಂಕೇತವಾಗಿ ನಮ್ಮನ್ನು ಪ್ರತಿನಿಧಿಸಲಿ, ನಮ್ಮ ಪ್ರತಿನಿಧಿಯಾಗಿ ನಮ್ಮ ಆಶಯಗಳನ್ನು ಈಡೇರಿಸುವ ಧ್ವನಿಯಾಗಲಿ, ಎಂದೂ ಕೂಡ ನಾಯಕರ ಮುಂದೆ ಜೀ ಹುಜೂರು ಸಂಸ್ಕೃತಿಯವನಾಗಿ ಹಿಸ್ ಮಾಸ್ಟರ‍್ಸ್ ವಾಯ್ಸ್ ಎಂದಾಗದಿರಲಿ.

LEAVE A REPLY

Please enter your comment!
Please enter your name here