ಸೋಷಿಯಲ್ ಮೀಡಿಯಾದಲ್ಲಿ ದೂಷಿಸುವ ಹಕ್ಕು ಯಾರಿಗೂ ಇಲ್ಲ
ಪುತ್ತೂರು: ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುವ ಹಕ್ಕು ಎಲ್ಲರಿಗೂ ಇದೆ. ಆದರೆ ದೂಷಿಸುವ ಹಕ್ಕಿಲ್ಲ. ಒಬ್ಬರಿಗೆ ಅನಾವಶ್ಯಕವಾಗಿ ನೋವು ತರುವ ಸಂಸ್ಕೃತಿ ಯಾರಿಗೂ ಒಳ್ಳೆಯದಲ್ಲ. ಕಾನೂನನ್ನು ಯಾರೇ ಕೈಗೆತ್ತಿಕೊಂಡರೂ ಅವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಹೇಳಿದ್ದಾರೆ.
ಪುತ್ತೂರು ಶಾಸಕರು ತಂದಿರುವ ಅನುದಾನದ ಬಗ್ಗೆ ವ್ಯಂಗ್ಯವಾಗಿ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುತ್ತಿದ್ದ ಆರೋಪಕ್ಕೆ ಸಂಬಂಧಿಸಿದಂತೆ ವಾರಿಯರ್ಸ್ ತಂಡವು ಚೆಂಡೆ, ವಾದ್ಯದೊಂದಿಗೆ ಶಾಸಕರು ತಂದಿರುವ ಅನುದಾನದಲ್ಲಿನ ಕಾಮಗಾರಿಗಳ ಮಾಹಿತಿಯ ಬ್ಯಾನರನ್ನು ಹಿಡಿದು ಬಿಜೆಪಿ ಸಾಮಾಜಿಕ ಜಾಲತಾಣದ ಜಿಲ್ಲಾ ಪ್ರಕೋಷ್ಟದ ಸದಸ್ಯ ತಾರಿಗುಡ್ಡೆಯ ಜಯಾನಂದ ಕೆ.ಎಂಬವರ ಮನೆಗೆ ತೆರಳಿದ್ದ ವಿಚಾರಕ್ಕೆ ಸಂಬಂಽಸಿದಂತೆ ಶಾಸಕರು ಪ್ರತಿಕ್ರಿಯೆ ನೀಡಿದರು.
ಸುಮಾರು ಒಂದು ವಾರದಿಂದ ಸೋಷಿಯಲ್ ಮೀಡಿಯಾದಲ್ಲಿ ನಾವು ತಂದಿರುವ ಅನುದಾನದ ಬಗ್ಗೆ ಕೆಟ್ಟ ರೀತಿಯಲ್ಲಿ ಬಿಂಬಿಸುವಂತೆ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ಗಳನ್ನು ಹಾಕುತ್ತಿದ್ದರು. ಈ ಬಗ್ಗೆ ಪಕ್ಷದ ಗ್ರೂಪ್ಗಳಲ್ಲಿ ಚರ್ಚೆಯಾಗಿದೆ ಎನ್ನುವುದು ಗಮನಕ್ಕೆ ಬಂದಿದೆ. ಇದನ್ನು ರಿಪೀಟ್ ಮಾಡಿಕೊಂಡು ಸೋಷಿಯಲ್ ಮೀಡಿಯಾದಲ್ಲಿ ಹಾಕುತ್ತಿದ್ದರು. ಅವರಿಗೆ ಯಾವುದೇ ಮಾಹಿತಿ ಬೇಕಿದ್ದರೂ ನಮ್ಮನ್ನು ಕೇಳಬಹುದು. ನಾವು ಮಾಹಿತಿ ನೀಡಿದ್ದೇವೆ, ಮಾಧ್ಯಮಗಳಲ್ಲೂ ಬಂದಿದೆ. ಸೋಷಿಯಲ್ ಮೀಡಿಯಾದಲ್ಲಿ ಹಾಕುವ ಹಕ್ಕು ಅವರಿಗೆ ಇರುತ್ತದೆ, ಆದರೆ ದೂಷಿಸುವ ಹಕ್ಕು ಯಾರಿಗೂ ಇಲ್ಲ. ನಮ್ಮ ಅಭಿಮಾನಿಗಳು, ಪಕ್ಷದ ಕಾರ್ಯಕರ್ತರು ಅಲ್ಲಿಗೆ ಹೋಗಿದ್ದಾರೆ. ನನಗೆ ಪೊಲೀಸ್ ಮಾಹಿತಿ ಪ್ರಕಾರ ಅಲ್ಲಿ ಯಾವುದೇ ಗಲಾಟೆ ನಡೆದಿಲ್ಲ. ಇವರು ಬ್ಯಾನರ್ ತೋರಿಸಿ, ಇಷ್ಟಿಷ್ಟು ಅನುದಾನ ಬಂದಿದೆ ಎಂದು ಹೇಳಿಬಂದಿದ್ದಾರೆ. ಯಾರ ಪಕ್ಷದವರೇ ಆಗಲಿ, ಯಾರೇ ಆಗಲಿ ಕಾನೂನು ಕೈಗೆತ್ತಿಕೊಂಡರೆ ಅವರ ಮೇಲೆ ಕೇಸ್ ದಾಖಲಾಗಬೇಕು ಎಂದು ಪೊಲೀಸ್ ಇಲಾಖೆಗೆ ಹೇಳಿದ್ದೇನೆ. ಎರಡೂ ಕಡೆಯವರು ಕೇಸ್ ಕೊಟ್ಟಿದ್ದಾರೆ, ಕೇಸ್ ದಾಖಲಾಗಿದೆ. ಪೊಲೀಸ್ ತನಿಖೆ ನಡೆಯುತ್ತದೆ, ಯಾರು ತಪ್ಪಿತಸ್ಥರಿದ್ದಾರೋ ತಪ್ಪಿತಸ್ಥರ ವಿರುದ್ಧ ಕೇಸ್ ದಾಖಲಾಗುತ್ತದೆ ಎಂದು ಶಾಸಕರು ಹೇಳಿದರು.
ನಾನು ಸಾರ್ವಜನಿಕರಲ್ಲಿ ವಿನಂತಿ ಮಾಡಿಕೊಳ್ಳುವುದೇನೆಂದರೆ ಯಾವ ಪಕ್ಷದವರೇ ಆಗಲಿ, ಯಾವ ಜನಪ್ರತಿನಿಧಿಯೇ ಆಗಲಿ, ಅನಾವಶ್ಯಕವಾಗಿ ಒಬ್ಬರನ್ನು ಮನೆಯಲ್ಲಿ ಕುಳಿತು ಬೇಡದ ರೀತಿಯಲ್ಲಿ ಬಿಂಬಿಸುವುದು ಸರಿಯಲ್ಲ. ಯಾರ ಬಗ್ಗೆಯೂ ಮಾಹಿತಿ ಇಲ್ಲದೆ ಕೆಟ್ಟ ರೀತಿಯಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಹಾಕುವುದು ಸರಿಯಲ್ಲ, ವಿಚಾರ ಮಾಡಿ ಹಾಕುವುದು ಒಳ್ಳೆಯದು. ಒಬ್ಬರಿಗೆ ಅನಾವಶ್ಯಕವಾಗಿ ನೋವು ತರುವ ಈ ಸಂಸ್ಕೃತಿ ಯಾರಿಗೂ ಒಳ್ಳೆಯದಲ್ಲ. ಕಾನೂನನ್ನು ಯಾರೇ ಕೈಗೆತ್ತಿಕೊಂಡರೂ ಅವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುತ್ತೇವೆ.
-ಅಶೋಕ್ ಕುಮಾರ್ ರೈ ಶಾಸಕರು, ಪುತ್ತೂರು