ಉಬಾರ್ ಕಂಬಳಕ್ಕೆ ಉತ್ಸವದ ಮೆರುಗು-3 ದಿನಗಳ ಕಾಲ ಬೋಟ್ ರೈಡಿಂಗ್, ಆಹಾರ, ಕೃಷಿ ಮೇಳ-ಕಲಾವಿದರಿಂದ ಸಾಂಸ್ಕೃತಿಕ ವೈಭವ

0

ಉಪ್ಪಿನಂಗಡಿ: ತುಳುನಾಡ ಜನಪದ ಕ್ರೀಡೆಯಾದ ಕಂಬಳವೆನ್ನುವುದು ಸರ್ವ ಧರ್ಮೀಯರನ್ನು ಒಗ್ಗೂಡಿಸುವ ಕ್ರೀಡೆಯಾಗಿದ್ದು, ವಿಜಯ- ವಿಕ್ರಮ ಜೋಡುಕರೆ ಕಂಬಳ ಸಮಿತಿಯ ಆಶ್ರಯದಲ್ಲಿ ಹಳೆಗೇಟು ಬಳಿಯ ದಡ್ಡು ಎಂಬಲ್ಲಿರುವ ನೇತ್ರಾವತಿ ನದಿ ತಟದಲ್ಲಿ ನಡೆಯುವ ಉಬಾರ್ ಕಂಬಳ ಉತ್ಸವದಲ್ಲಿ ಈ ಬಾರಿ ಬೋಟಿಂಗ್ ರೈಡ್, ಮಕ್ಕಳ ಮನೋರಂಜನಾ ಆಟಗಳು, ಸ್ವಾದಿಷ್ಟ ಆಹಾರ ಮೇಳ, ಕೃಷಿ ಮೇಳ, ವ್ಯವಹಾರ ಮೇಳ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಇದರ ಸಂಯೋಜಕರಾದ ವೇಣುಗೋಪಾಲ್ ಅವರು ತಿಳಿಸಿದರು.


ವಿಜಯ- ವಿಕ್ರಮ ಜೋಡುಕರೆ ಕಂಬಳ ಕರೆಯ ಬಳಿ ಪತ್ರಿಕಾಗೋಷ್ಟಿಯನ್ನುದ್ದೇಶಿಸಿ ಮಾತನಾಡಿದ ಅವರು, ಮಾ.೨೯ರಿಂದ ಮಾ. ೩೧ರ ರಾತ್ರಿಯವರೆಗೆ ಮೂರು ದಿನಗಳ ಕಾಲ ಈ ಉತ್ಸವ ನಡೆಯಲಿದ್ದು, ಸಾಂಸ್ಕೃತಿಕ ಕಾರ್ಯಕ್ರಮಕ್ಕೆಂದು ಪ್ರತ್ಯೇಕ ವೇದಿಕೆಯನ್ನು ಸಿದ್ಧಪಡಿಸಲಾಗುತ್ತಿದೆ. ಇಲ್ಲಿ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಖ್ಯಾತ ಸಂಗೀತ ನಿರ್ದೇಶಕ ಗುರುಕಿರಣ್ ಅವರು ಕೂಡಾ ಕಾರ್ಯಕ್ರಮಕ್ಕೆ ಆಗಮಿಸುವ ಭರವಸೆಯನ್ನು ನೀಡಿದ್ದಾರೆ. ಇದರೊಂದಿಗೆ ಸ್ಥಳೀಯರ ಪ್ರತಿಭಾನ್ವಿತ ಸಾಂಸ್ಕೃತಿಕ ತಂಡಗಳಿಗೆ ಇಲ್ಲಿ ನಾವು ಮೊದಲ ಆದ್ಯತೆ ನೀಡಲಿದ್ದೇವೆ. ಇನ್ನು ನೇತ್ರಾವತಿ ನದಿಯ ಹಿನ್ನೀರಿನಲ್ಲಿ ಮಂಗಳೂರಿನ ನುರಿತ ತಂಡದಿಂದ ಬೋಟಿಂಗ್ ರೈಡ್ ಅನ್ನು ಆಯೋಜಿಸಿದ್ದೇವೆ. ಇದರಲ್ಲಿ ಒಬ್ಬರಿಗೆ, ಇಬ್ಬರಿಗೆ ಹಾಗೂ ತಂಡಕ್ಕೆ ಒಟ್ಟಿಗೆ ಕೂತು ಬೋಟ್ ರೈಡ್ ಮಾಡುವಂತಹ ಅವಕಾಶ ಇದೆ. ಇಲ್ಲಿ ಪ್ರಮುಖವಾಗಿ ನಾವು ಭದ್ರತೆ ಹಾಗೂ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಲಿದ್ದೇವೆ. ಸ್ವಾದಿಷ್ಟ ಆಹಾರ ಮೇಳವೂ ಇಲ್ಲಿ ನಡೆಯಲಿದ್ದು, ಸಸ್ಯಹಾರ ಮತ್ತು ಮಾಂಸಹಾರಗಳ ಮೇಳಗಳಿಗೆ ಪ್ರತ್ಯೇಕ ಸ್ಥಳವನ್ನು ಕಲ್ಪಿಸಲಾಗಿದೆ. ಕೃಷಿ ಮೇಳ, ಯಂತ್ರೋಪಕರಣಗಳ ಮೇಳ ಮತ್ತು ವ್ಯವಹಾರ ಮೇಳವೂ ಇಲ್ಲಿ ನಡೆಯಲಿದ್ದು, ಇಲ್ಲಿ ಕೂಡಾ ಸ್ಥಳೀಯರಿಗೆ ಮೊದಲ ಆದ್ಯತೆಯನ್ನು ನೀಡಲಿದ್ದೇವೆ. ಇದರೊಂದಿಗೆ ಮನೋರಂಜನಾ ಆಟಗಳಾದ ಜಾಯಿಂಟ್ ವ್ಹೀಲ್, ಬಲೂನ್ ಗೇಮ್ಸ್ ಮುಂತಾದ ಆಟಗಳು ಇಲ್ಲಿ ಇರಲಿವೆ. ಕಂಬಳ ಕರೆಯ ಬಳಿಯೇ ಇವೆಲ್ಲಾ ನಡೆಯಲಿದ್ದು, ಸರ್ವ ಧರ್ಮೀಯರಿಗೂ ಭಾಗವಹಿಸಲು ಅವಕಾಶವಾಗುವ ಹಾಗೆ ನದಿ ಕಿನಾರೆಯಲ್ಲಿ ಇಂತದ್ದೊಂದು ಉತ್ಸವ ನಡೆಯುವುದು ಇದೇ ಮೊದಲ ಬಾರಿಯಾಗಿದೆ. ಇಲ್ಲಿ ಒಂದು ಬದಿ ರಾಷ್ಟ್ರೀಯ ಹೆದ್ದಾರಿಯಿದ್ದರೆ, ಇನ್ನೊಂದು ಕಡೆ ನೇತ್ರಾವತಿ ನದಿಯಿದೆ. ಆದ್ದರಿಂದ ಇಲ್ಲಿಗೆ ಬಂದವರು ಉತ್ಸವದ ಎಲ್ಲಾ ಕಡೆಗೂ ಸರಾಗವಾಗಿ ಓಡಾಡಲು ಅನುಕೂಲವಾಗುವಂತೆ ಪಥವನ್ನು ನಿರ್ಮಿಸಲು ಯೋಜನೆ ಹಾಕಿಕೊಳ್ಳಲಾಗಿದೆ.

ಇಲ್ಲಿ ಇತರ ಕಾರ್ಯಕ್ರಮಗಳನ್ನು ವೀಕ್ಷಿಸಿಕೊಂಡು ಕಂಬಳವನ್ನು ವೀಕ್ಷಿಸುವ ಹಾಗೆ ಎಲ್‌ಇಡಿ ಪರದೆಯನ್ನು ಕೂಡಾ ಅಳವಡಿಸಲಾಗುತ್ತದೆ. ನಮ್ಮ ತಂಡದಲ್ಲಿರುವ ಸೈಫ್ ದರ್ಬೆ ಅವರು ಸುಮಾರು 8ರಿಂದ 10 ಲಕ್ಷ ಜನರು ಭಾಗವಹಿಸಿದ ಬೆಂಗಳೂರು ಕಂಬಳದಲ್ಲಿ ಆಹಾರ ಮೇಳ ಹಾಗೂ ವ್ಯವಹಾರ ಮೇಳವನ್ನು ಯಶಸ್ವಿಯಾಗಿ ಆಯೋಜನೆ ಮಾಡಿದವರು. ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಈ ಮೊ.ಸಂ.ಗಳನ್ನು (ಸೈಫ್ ದರ್ಬೆ- 9980158333, ನಿಹಾಲ್- 9945177281, ರಾಜೇಶ್- 8884110695, ಪ್ರಜ್ವಲ್- 8861999179
,ವೇಣು- 9731244378) ಸಂಪರ್ಕಿಸಬಹುದು ಎಂದರು.

ಕಾರ್ಯಕ್ರಮ ಸಂಯೋಜಕರಾದ ಸೈಫ್ ದರ್ಬೆ ಮಾತನಾಡಿ, ಪುತ್ತೂರು ಶಾಸಕರಾದ ಅಶೋಕ್ ಕುಮಾರ್ ರೈಯವರ ನಾಯಕತ್ವದಲ್ಲಿ ಇಲ್ಲಿ 38 ನೇ ವರ್ಷದ ಕಂಬಳ ಈ ಬಾರಿ ನಡೆಯಲಿದ್ದು, ಕಂಬಳದೊಂದಿಗೆ ಜನರಿಗೆ ವಿಶಿಷ್ಟವಾದ ಮನೋರಂಜನೆಯನ್ನೂ ನೀಡಬೇಕು ಎಂಬ ಉದ್ದೇಶದಿಂದ ಈ ಕಾರ್ಯಕ್ರಮಗಳನ್ನೆಲ್ಲಾ ಆಯೋಜಿಸಲಾಗಿದೆ ಎಂದರು.


ಬೆಂಗಳೂರು ಕಂಬಳ ಸಮಿತಿಯ ಕಾರ್ಯಾಧ್ಯಕ್ಷರಾಗಿದ್ದ ಮುರಳೀಧರ ರೈ ಮಠಂತಬೆಟ್ಟು ಮಾತನಾಡಿ, ಬೆಂಗಳೂರು ಕಂಬಳವು ನಿರೀಕ್ಷೆಗಿಂತಲೂ ಅದ್ಭುತವಾಗಿ ಮೂಡಿ ಬಂದಿದೆ. ಶಾಸಕ ಅಶೋಕ್ ಕುಮಾರ್ ರೈ ಕೋಡಿಂಬಾಡಿಯವರ ನೇತೃತ್ವದಲ್ಲಿ ನಡೆಯುವ ಉಪ್ಪಿನಂಗಡಿಯ ವಿಜಯ- ವಿಕ್ರಮ ಜೋಡುಕರೆ ಕಂಬಳವನ್ನು ಕೂಡಾ ಇನ್ನಷ್ಟು ಆಕರ್ಷನೀಯಗೊಳಿಸಬೇಕು ಎಂಬ ಉದ್ದೇಶದಿಂದ ಇಲ್ಲಿ ಕಂಬಳದೊಟ್ಟಿಗೆ ಹತ್ತು ಹಲವು ಕಾರ್ಯಕ್ರಮಗಳನ್ನು ಆಯೋಜಿಸಬೇಕೆನ್ನುವ ಯೋಜನೆ ರೂಪಿಸಲಾಗಿದೆ. ಈಗಾಗಲೇ ಇದಕ್ಕೆಲ್ಲಾ ಸಿದ್ಧತೆ ನಡೆದಿದೆ ಎಂದರು. ಪತ್ರಿಕಾಗೋಷ್ಟಿಯಲ್ಲಿ ರಾಜೇಶ್ ಶೆಟ್ಟಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here