ಕಾಂಗ್ರೆಸ್ ಸೇರುವರೇ? ಬಿಜೆಪಿಯಲ್ಲೇ ಮುಂದುವರಿಯುವರೇ?-ಇಂದು ಪತ್ರಿಕಾಗೋಷ್ಠಿ ಸಾಧ್ಯತೆ
2 ದಿನವೂ ನಡೆಯದ ಸುದ್ದಿಗೋಷ್ಠಿ ಡಿ.ವಿ.ಎಸ್ ನಡೆ ನಿಗೂಢ
ಒಟ್ಟು ರಾಜಕೀಯ ಬೆಳವಣಿಗೆಯಲ್ಲಿ ಡಿ.ವಿ.ಸದಾನಂದ ಗೌಡರ ಮುಂದಿನ ರಾಜಕೀಯ ನಡೆ ನಿಗೂಢವಾಗಿಯೇ ಉಳಿದಿದೆ.ಕಾಂಗ್ರೆಸ್‌ಗೆ ಸೇರುವುದು ಇಲ್ಲವೇ ಬಿಜೆಪಿಯಲ್ಲೇ ಮುಂದುವರಿಯುವ ತಮ್ಮ ಮುಂದಿನ ರಾಜಕೀಯ ನಡೆಯ ಕುರಿತು ಮಾ.೧೯ರಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸುವುದಾಗಿ ಡಿ.ವಿ.ಎಸ್ ಹೇಳಿದ್ದರು.ಮಾ.೧೯ರಂದು ಅವರು ರಾಜ್ಯ ಒಕ್ಕಲಿಗ ಸಂಘದ ಪದಾಧಿಕಾರಿಗಳೊಂದಿಗೆ ಸಭೆ ನಡೆಸಿ ಚರ್ಚಿಸಿದ್ದರು.ಡಿ.ವಿ.ಯವರ ನಿರ್ಧಾರಕ್ಕೆ ಸಂಘ ಬೆಂಬಲ ವ್ಯಕ್ತಪಡಿಸಿತ್ತು.ಈ ಮಧ್ಯೆ ಬಿಜೆಪಿ ನಾಯಕರು ಕರೆ ಮಾಡಿ, ಪಕ್ಷ ಬಿಡದಂತೆ ಡಿ.ವಿ.ಯವರ ಮನವೊಲಿಕೆ ಮಾಡಿದ್ದರು.ಈ ಎಲ್ಲ ಬೆಳವಣಿಗೆಗಳಿಂದಾಗಿ ಮಾ.೧೯ರಂದು ಪತ್ರಿಕಾಗೋಷ್ಠಿ ನಡೆಸದ ಡಿ.ವಿ.ಯವರು ಮಾ.೨೦ರಂದು ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡುವುದಾಗಿ ಹೇಳಿದ್ದರು.ಆದರೆ,ಮಾ.೨೦ರಂದೂ ಅವರು ಪತ್ರಿಕಾಗೋಷ್ಠಿ ನಡೆಸದೇ ಇರುವುದು ಮತ್ತು ಆರ್‌ಎಸ್‌ಎಸ್‌ನ ವರಿಷ್ಠರಿಬ್ಬರು ಅವರನ್ನು ಭೇಟಿಯಾಗಿ ಪಕ್ಷ ಬಿಡದಂತೆ ಮನವೊಲಿಕೆ ಮಾಡಿರುವುದರಿಂದ ಡಿ.ವಿ.ಯವರ ನಡೆ ಮತ್ತಷ್ಟು ನಿಗೂಢವಾಗಿದೆ.ಆರ್‌ಎಸ್‌ಎಸ್ ನಾಯಕರು ಭರವಸೆ ನೀಡಿರುವ ಹಿನ್ನೆಲೆಯಲ್ಲಿ, ಡಿವಿಯವರು ಬಿಜೆಪಿ ತೊರೆಯದಿರಲು ತೀರ್ಮಾನಿಸಿದ್ದಾರೆ.ಮಾತ್ರವಲ್ಲದೆ ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಈ ಬಾರಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದಾರೆ ಎಂದು ಹೇಳಲಾಗುತ್ತಿದೆಯಾದರೂ, ಡಿ.ವಿ.ಯವರು ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಿ ಮೈಸೂರು-ಕೊಡಗು ಇಲ್ಲವೇ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡುವುದು ಖಚಿತ ಎಂದೂ ಮೂಲಗಳು ಹೇಳಿವೆ.ಒಟ್ಟಾರೆ ಡಿ.ವಿ.ಯವರ ರಾಜಕೀಯ ನಡೆ ಮತ್ತಷ್ಟು ನಿಗೂಢವಾಗಿದೆ.
ಬೆಂಗಳೂರು:ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ಕೈತಪ್ಪಿದ್ದರಿಂದ ಅಸಮಾಧಾನಗೊಂಡಿರುವ ಬಿಜೆಪಿ ಹಿರಿಯ ನಾಯಕ, ಮಾಜಿ ಮುಖ್ಯಮಂತ್ರಿ, ಕೇಂದ್ರದ ಮಾಜಿ ಸಚಿವರೂ ಆಗಿರುವ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಸದಸ್ಯ ಡಿ.ವಿ.ಸದಾನಂದ ಗೌಡರು ಬಿಜೆಪಿ ತೊರೆದು ಕಾಂಗ್ರೆಸ್ ಸೇರುತ್ತಾರೆನ್ನುವ ಸುದ್ದಿಗಳ ಹಿನ್ನೆಲೆಯಲ್ಲಿ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳ ಬೆನ್ನಲ್ಲೇ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಮುಖ ನಾಯಕರಿಬ್ಬರು ಡಿ.ವಿ.ಯವರನ್ನು ಭೇಟಿಯಾಗಿ, ಱನಿಮ್ಮ ರಾಜಕೀಯ ಭವಿಷ್ಯಕ್ಕೆ ತೊಂದರೆಯಾಗದಂತೆ ಸಂಘ ನೋಡಿಕೊಳ್ಳಲಿದೆೞ ಎಂದು ಭರವಸೆ ನೀಡಿ, ಬಿಜೆಪಿ ತೊರೆಯದಂತೆ ಅವರ ಮನವೊಲಿಸಿದ್ದಾರೆ ಎಂದು ವರದಿಯಾಗಿದೆ.
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಹಕಾರ‍್ಯವಾಹ ದತ್ತಾತ್ರೇಯ ಹೊಸಬಾಳೆ ಮತ್ತು ಮುಖಂಡ ಸಿ.ಆರ್.ಮುಕುಂದ್ ಅವರು ಡಿ.ವಿ.ಸದಾನಂದ ಗೌಡರನ್ನು ಭೇಟಿಯಾಗಿ ಸುದೀರ್ಘ ಚರ್ಚೆ ನಡೆಸಿದ್ದಾರೆ.
ಸಂಘದ ಮೂಲಕವೇ ಬೆಳೆದು ಬಂದಿರುವ ತನಗೆ ಬಿಜೆಪಿಯಿಂದ ಆಗಿರುವ ನೋವಿನ ಕುರಿತು ಡಿ.ವಿ.ಯವರು ಈ ಸಂದರ್ಭ ಆರ್‌ಎಸ್‌ಎಸ್ ನಾಯಕರ ಗಮನಕ್ಕೆ ತಂದರು.ಡಿ.ವಿ.ಸದಾನಂದರ ನೋವು,ಅಸಮಾಧಾನ ಎಲ್ಲವನ್ನೂ ಆಲಿಸಿದ ಆರ್‌ಎಸ್‌ಎಸ್ ನಾಯಕರು, ನಿಮ್ಮ ರಾಜಕೀಯ ಭವಿಷ್ಯಕ್ಕೆ ಯಾವುದೇ ತೊಂದರೆಯಾಗದಂತೆ ಸಂಘ ನೋಡಿಕೊಳ್ಳಲಿದೆ ಎಂದು ಭರವಸೆ ನೀಡಿ, ಯಾವುದೇ ಕಾರಣಕ್ಕೂ ಬಿಜೆಪಿಯಿಂದ ಹೊರ ಹೋಗಿ ರಾಜಕೀಯ ಭವಿಷ್ಯ ಹಾಳು ಮಾಡಿಕೊಳ್ಳದಂತೆ ಮನವಿ ಮಾಡಿದರು.ಇದಕ್ಕೆ ಡಿ.ವಿ.ಯವರಿಂದಲೂ ಪೂರಕವಾಗಿ ಸ್ಪಂದನೆ ವ್ಯಕ್ತವಾಗಿದೆ ಎಂದು ವರದಿಯಾಗಿದೆ.ಈ ಮಧ್ಯೆ ಬಿಜೆಪಿ ವರಿಷ್ಠರೂ ಡಿ.ವಿ.ಸದಾನಂದ ಗೌಡರಿಗೆ ಕರೆ ಮಾಡಿ ಪಕ್ಷ ತ್ಯಜಿಸದಂತೆ ಮನವಿ ಮಾಡಿದ್ದಾರೆ.ಸದಾನಂದ ಗೌಡರು ಬಿಜೆಪಿಯ ಹಿರಿಯ ನಾಯಕರಾಗಿದ್ದು ಅವರು ಪಕ್ಷವನ್ನು ಬಿಡದೆ ಪಕ್ಷದಲ್ಲಿಯೇ ಇರುತ್ತಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರೂ ಹೇಳಿದ್ದರು.
ಕಾಂಗ್ರೆಸ್‌ಗೆ ಸೇರಿಸಿಕೊಳ್ಳಲು ಸಿಎಂ ನಿರಾಸಕ್ತಿ?: ಬಿಜೆಪಿ ನಾಯಕರ ನಿರ್ಧಾರದಿಂದ ಅಸಮಾಧಾನಗೊಂಡಿರುವ ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಅವರನ್ನು ಕಾಂಗ್ರೆಸ್‌ಗೆ ಸೇರಿಸಿಕೊಳ್ಳುವ ವಿಷಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನಡುವೆಯೇ ಭಿನ್ನಾಭಿಪ್ರಾಯ ವ್ಯಕ್ತವಾಗಿದೆ.ಡಿ.ವಿ.ಯವರನ್ನು ಕಾಂಗ್ರೆಸ್‌ಗೆ ಸೇರಿಸಿಕೊಳ್ಳಲು ಡಿ.ಕೆ.ಶಿವಕುಮಾರ್ ಉತ್ಸುಕರಾಗಿದ್ದರೂ ಸಿ.ಎಂ ಸಿದ್ಧರಾಮಯ್ಯ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.ಮಾ.೧೯ರಂದು ಹೊಸದಿಲ್ಲಿಯಲ್ಲಿ ಕಾಂಗ್ರೆಸ್‌ನ ಕೇಂದ್ರ ಚುನಾವಣಾ ಸಮಿತಿ ಸಭೆಯಲ್ಲಿಯೂ, ಡಿ.ವಿ.ಎಸ್.ಕಾಂಗ್ರೆಸ್ ಸೇರ್ಪಡೆ ವಿಷಯವನ್ನು ಪ್ರಸ್ತಾಪಿಸಲು ಡಿಕೆ ಶಿವಕುಮಾರ್ ಉತ್ಸುಕರಾಗಿದ್ದರು.ಆದರೆ, ಜಗದೀಶ್ ಶೆಟ್ಟರ್ ಅವರ ಪ್ರಕರಣವನ್ನು ಪ್ರಸ್ತಾಪಿಸಿದ ಸಿಎಂ ಸಿದ್ಧರಾಮಯ್ಯ, ಡಿ.ವಿ.ಸದಾನಂದ ಗೌಡರನ್ನು ಪಕ್ಷಕ್ಕೆ ಕರೆತರುವ ಡಿಕೆಶಿ ಅವರ ನಿರ್ಧಾರಕ್ಕೆ ತಣ್ಣೀರೆರಚಿದ್ದು, ಯಾವುದೇ ಕಾರಣಕ್ಕೂ ಡಿವಿಯವರನ್ನು ಕಾಂಗ್ರೆಸ್ ಪಕ್ಷಕ್ಕೆ ಕರೆತರುವುದು ಬೇಡ ಎನ್ನುವ ರೀತಿಯಲ್ಲಿ ಮಾತನಾಡಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.
ಇದು ಹಿನ್ನೆಲೆ: ಒಂದೊಮ್ಮೆ ಚುನಾವಣಾ ಸಕ್ರಿಯ ರಾಜಕಾರಣದಿಂದ ನಿವೃತ್ತಿ ಘೋಷಿಸಿ, ಬಳಿಕ ವಿಪಕ್ಷ ನಾಯಕ ಆರ್.ಅಶೋಕ್ ಸಹಿತ ರಾಜ್ಯ ಬಿಜೆಪಿಯ ಕೆಲವು ನಾಯಕರ ಒತ್ತಡಕ್ಕೆ ಮಣಿದು ಚುನಾವಣಾ ರಾಜಕೀಯ ನಿವೃತ್ತಿ ಘೋಷಣೆ ಹಿಂಪಡೆದಿದ್ದ ಡಿ.ವಿ.ಸದಾನಂದ ಗೌಡರು, ಈ ಬಾರಿಯ ಚುನಾವಣೆಯಲ್ಲಿ ತಾನು ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿ ಎಂದು ಹೇಳಿದ್ದರಲ್ಲದೆ, ತನಗೆ ಟಿಕೆಟ್ ದೊರೆಯದೇ ಇದ್ದಲ್ಲಿ ಮನಸ್ಸಿಗೆ ನೋವಾಗಲಿದೆ ಎಂದು ಹೇಳಿದ್ದರು.ಆದರೂ, ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರಕ್ಕೆ ಡಿ.ವಿ.ಯವರನ್ನು ಕೈಬಿಟ್ಟು ಪುತ್ತೂರಿನವರೇ ಆಗಿರುವ ಕೇಂದ್ರ ಸಚಿವೆ, ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಅವರನ್ನು ಬಿಜೆಪಿ ಅಭ್ಯರ್ಥಿಯಾಗಿ ಪಕ್ಷ ಆಯ್ಕೆ ಮಾಡಿತ್ತು.ಶೋಭಾ ಅವರು ಪ್ರತಿನಿಧಿಸುತ್ತಿರುವ ಉಡುಪಿ-ಚಿಕ್ಕಮಗಳೂರು ಕ್ಷೇತ್ರಕ್ಕೆ ರಾಜ್ಯ ವಿಧಾನಪರಿಷತ್ ಪ್ರತಿಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ ಅವರನ್ನು ಅಭ್ಯರ್ಥಿಯಾಗಿ ಆಯ್ಕೆ ಮಾಡಿದೆ.ತಾನು ಪ್ರತಿನಿಧಿಸುತ್ತಿರುವ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಿಂದ ಈ ಬಾರಿಯೂ ಸ್ಪರ್ಧಿಸಲು ಪಕ್ಷ ತನಗೆ ಟಿಕೆಟ್ ನೀಡದೇ ಇದ್ದುದರಿಂದ ಡಿ.ವಿ.ಸದಾನಂದ ಗೌಡರು ಅಸಮಾಧಾನಗೊಂಡಿದ್ದರು.ನಂತರದ ಬೆಳವಣಿಗೆಯಲ್ಲಿ ಅವರು, ಬಿಜೆಪಿ ತೊರೆದು ಕಾಂಗ್ರೆಸ್‌ಗೆ ಸೇರ್ಪಡೆಯಾಗಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಲಿದ್ದಾರೆ ಎಂದು ಹೇಳಲಾಗುತ್ತಿತ್ತು.