ಶೈಕ್ಷಣಿಕವಾಗಿ ಕೆಲಸ ಮಾಡಿ ತನ್ನ ಛಾಪನ್ನು ಮೂಡಿಸಿದವರು – ಸಂಜೀವ ಮಠಂದೂರು
ಪುತ್ತೂರು: ಪುತ್ತೂರು ನಗರ ಬಿಜೆಪಿ ಮಾಜಿ ಅಧ್ಯಕ್ಷರಾಗಿದ್ದ ಶಿವಾನಂದ ರಾವ್ ಅವರು ತನ್ನದೆ ಆದ ವ್ಯಕ್ತಿತ್ವವನ್ನು ಬೆಳೆಸಿಕೊಂಡು ಸಂಘಟನೆಯನ್ನು ಬೆಳೆಸಿದ ವ್ಯಕ್ತಿ. ಅವರು ರಾಜಕೀಯ, ಧಾರ್ಮಿಕ ಮತ್ತು ಶೈಕ್ಷಣಿಕವಾಗಿಯೂ ಸೇವೆ ನೀಡಿದವರು ಎಂದು ಮಾಜಿ ಶಾಸಕ ಸಂಜೀವ ಮಠಂದೂರು ಹೇಳಿದರು.
ಪುತ್ತೂರು ಬಿಜೆಪಿ ಕಚೇರಿಯಲ್ಲಿ ನಟ್ಟೋಜ ಫೌಂಡೇಷನ್ ಟ್ರಸ್ಟ್ನ ಅಧ್ಯಕ್ಷರಾಗಿದ್ದ ಸಂಘಪರಿವಾರದಿಂದಲೇ ಸಕ್ರೀಯರಾಗಿದ್ದ ಶಿವಾನಂದ ರಾವ್ ಅವರಿಗೆ ಏರ್ಪಡಿಸಿದ ಶ್ರದ್ಧಾಂಜಲಿ ಸಭೆಯಲ್ಲಿ ಅವರು ನುಡಿನಮನ ಸಲ್ಲಿಸಿದರು. ಶಿವಾನಂದ ರಾವ್ ತನ್ನದೆ ಆದ ವ್ಯಕ್ತಿತ್ವವನ್ನು ಬೆಳೆಸಿಕೊಂಡು ಸಂಘಟನೆಯನ್ನು ಬೆಳೆಸಿದ ವ್ಯಕ್ತಿ. ರಾಜಕೀಯವಾಗಿ, ಧಾರ್ಮಿಕವಾಗಿ ಶೈಕ್ಷಣಿಕವಾಗಿಯೂ ಭಾರತೀಯ ಶೈಕ್ಷಣಿಕ ಮೌಲ್ಯಗಳನ್ನು ಒಳಗೊಂಡ ತಮ್ಮದೆ ಆದ ಅಂಬಿಕಾ ಮಹಾವಿದ್ಯಾಲಯವನ್ನು ಹುಟ್ಟು ಹಾಕುವ ಮೂಲಕ ಶೈಕ್ಷಣಿಕವಾಗಿ ಕೆಲಸ ಮಾಡಿ ತನ್ನ ಛಾಪನ್ನು ಮೂಡಿಸಿದ್ದಾರೆ ಎಂದರು. ಮಾಜಿ ಶಾಸಕ ರಾಮ್ ಭಟ್ ಅವರು ಯಾವ ಆದರ್ಶ ಇಟ್ಟುಕೊಂಡಿದ್ದರೋ ಅದೇ ಆದರ್ಶ ತತ್ವ ಸಿದ್ದಾಂತಗಳನ್ನು ಅಳವಡಿಸಿಕೊಂಡು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮೂಲಕ ಸಂಘಟನೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡವರು ಎಂದರು. ಬಿಜೆಪಿ ಮಂಡಲದ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಮುಂಗ್ಲಿಮನೆ ಸಹಿತ ಪಕ್ಷದ ಪ್ರಮುಖರು ಈ ಸಂದರ್ಭ ಉಪಸ್ಥಿತರಿದ್ದರು. ರಾಜೇಶ್ ಬನ್ನೂರು ಕಾರ್ಯಕ್ರಮ ನಿರ್ವಹಿಸಿದರು.