ಉಪ್ಪಿನಂಗಡಿ: 38ನೇ ವರ್ಷದ ವಿಜಯ- ವಿಕ್ರಮ ಕಂಬಳವನ್ನು ಈ ಬಾರಿ ಉಬಾರ್ ಕಂಬಳೋತ್ಸವನ್ನಾಗಿ ಆಚರಿಸಲು ಸಿದ್ಧತೆ ನಡೆಸಲಾಗಿದ್ದು, ಎರಡು ದಿನಗಳ ಕಾಲ ಕಂಬಳ ನಡೆದರೆ, ಮೂರು ದಿನಗಳ ಕಾಲ ಸಸ್ಯ ಮೇಳ, ಆಹಾರ ಮೇಳ, ಕೃಷಿ ಯಂತ್ರೋಪಕರಣಗಳ ಮೇಳ ಸೇರಿದಂತೆ ಸಾಂಸ್ಕೃತಿಕ ವೈಭವ ನಡೆಯಲಿದೆ ಎಂದು ಉಪ್ಪಿನಂಗಡಿ ವಿಜಯ- ವಿಕ್ರಮ ಕಂಬಳ ಸಮಿತಿಯ ಅಧ್ಯಕ್ಷ, ಶಾಸಕರು ಆದ ಅಶೋಕ್ ಕುಮಾರ್ ರೈ ಕೋಡಿಂಬಾಡಿ ತಿಳಿಸಿದ್ದಾರೆ.
ಕೂಟೇಲು ಬಳಿಯ ನೇತ್ರಾವತಿ ನದಿ ಕಿನಾರೆಯ ಬಳಿಯಿರುವ ವಿಜಯ- ವಿಕ್ರಮ ಕಂಬಳ ಕರೆಯ ಬಳಿ ಮಾ.24ರಂದು ಕಂಬಳ ಸಮಿತಿಯ ಸಭೆ ನಡೆಸಿ ಮಾತನಾಡಿದ ಅವರು, ಬೆಂಗಳೂರಿನಲ್ಲಿ ಯಶಸ್ವಿಯಾಗಿ ಕಂಬಳ ನಡೆದ ಬಳಿಕ ಕಂಬಳವನ್ನು ಇನ್ನಷ್ಟು ಆಕರ್ಷನೀಯವಾಗಿ ನಡೆಯಬೇಕು ಎಂಬ ನಿರೀಕ್ಷೆ ಎಲ್ಲರಲ್ಲಿದೆ. ಮಕ್ಕಳು, ಪುರುಷರು, ಮಹಿಳೆಯರಾದಿಯಾಗಿ ಎಲ್ಲರೂ ಭಾಗವಹಿಸಿ ಈ ಜನಪದ ಕ್ರೀಡೆಯ ಸವಿ ಸವಿಯುವುದರೊಂದಿಗೆ ಇನ್ನಿತರ ಮನೋರಂಜನಾ ಕಾರ್ಯಕ್ರಮಗಳನ್ನು ಇದರಲ್ಲಿ ಅಳವಡಿಸಿಕೊಳ್ಳಬೇಕು ಎಂದು ನಾವಿಲ್ಲಿ ಚಿಂತನೆ ನಡೆಸಿದ್ದು, ಆದ್ದರಿಂದ ಮಾ.29ರಿಂದ ಮಾ.31ರವರೆಗೆ ಇಲ್ಲಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಮಾ.29ರ ಪೂರ್ವಾಹ್ನ 11:30ಕ್ಕೆ ಆಹಾರ ಮೇಳ, ಸಸ್ಯಮೇಳಗಳ ಉದ್ಘಾಟನೆ ನಡೆಯಲಿದೆ. ಮಾ.30 ಮತ್ತು 31ರಂದು ಕಂಬಳ ನಡೆದರೆ, ಈ ಮೂರು ದಿನಗಳಲ್ಲಿಯೂ ಕೃಷಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸಸ್ಯ ಮೇಳ, ಯಂತ್ರೋಪಕರಣ ಮೇಳಗಳು ನಡೆಯಲಿವೆ. ಆಹಾರ ಮೇಳದಲ್ಲಿ ದಕ್ಷಿಣ ಭಾರತ ಶೈಲಿಯ ವಿವಿಧ ಖಾದ್ಯಗಳನ್ನು ಸವಿಯಬಹುದಾಗಿದೆ. ಮೂರು ದಿನಗಳ ಕಾಲವೂ ಪ್ರತ್ಯೇಕ ವೇದಿಕೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಇದರೊಂದಿಗೆ ಮಕ್ಕಳಿಗಾಗಿ ಜಾಯಿಂಟ್ ವ್ಹೀಲ್, ಬಲೂನ್ ಗೇಮ್ಸ್ ಮುಂತಾದ ಮನೋರಂಜನಾ ಆಟಗಳು, ನೇತ್ರಾವತಿ ನದಿಯ ಹಿನ್ನೀರಿನಲ್ಲಿ ಬೋಟಿಂಗ್ ರೈಡ್ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಸರ್ವ ಧರ್ಮೀಯರಿಗೂ ಭಾಗವಹಿಸಲು ಅವಕಾಶವಾಗುವ ಹಾಗೆ ನದಿ ಕಿನಾರೆಯಲ್ಲಿ ಇಂತದ್ದೊಂದು ಉತ್ಸವ ನಡೆಯುವುದು ಇದೇ ಮೊದಲ ಬಾರಿಯಾಗಿದೆ ಎಂದರು.
ಸುರಕ್ಷತೆ, ಸ್ವಚ್ಛತೆಗೆ ಆದ್ಯತೆ: ನೇತ್ರಾವತಿ ನದಿಯಲ್ಲಿ ಈ ಬಾರಿ ಹಿನ್ನೀರು ಇರುವುದರಿಂದ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಲಾಗಿದ್ದು, ಸೇಫ್ ಗಾರ್ಡ್ ಹಾಗೂ ಈಜುಗಾರರನ್ನು ನೇತ್ರಾವತಿ ನದಿ ಕಿನಾರೆಯಲ್ಲಿ ನಿಯೋಜಿಸಲಾಗುವುದು. ಹಾಗೂ ನದಿ ಕಿನಾರೆಯಲ್ಲಿ ಅಲ್ಲಲ್ಲಿ ನದಿಗಿಳಿಯದಂತೆ ಸೂಚನಾ ಫಲಕಗಳನ್ನು ಅಳವಡಿಸಲಾಗುವುದು. ಕಂಬಳ ವೀಕ್ಷಣೆಗೆ ಮಹಿಳೆಯರಿಗೆ ಪ್ರತ್ಯೇಕ ಗ್ಯಾಲರಿ ಮಾಡಲಾಗುವುದು. ಪ್ರತಿ ವರ್ಷವೂ ಉಪ್ಪಿನಂಗಡಿ ಕಂಬಳ ಸಮಿತಿಯು ಸ್ವಚ್ಛತೆಗೆ ಪ್ರಮುಖ ಆದ್ಯತೆ ನೀಡುತ್ತಿದ್ದು, ಕಂಬಳ ಮುಗಿದ ಬಳಿಕ ಸಮಿತಿಯ ಎಲ್ಲರೂ ಸೇರಿ ಶ್ರಮದಾನದ ಮೂಲಕ ಇಲ್ಲಿ ಸ್ವಚ್ಛತೆ ನಡೆಸುತ್ತಿದ್ದೆವು. ಇದರೊಂದಿಗೆ ನದಿಯೂ ಮಲೀನವಾಗದಂತೆಯೂ ಎಚ್ಚರವಹಿಸಲಾಗುತ್ತಿದ್ದು, ಮಹಿಳೆಯರಿಗೆ ಮತ್ತು ಪುರುಷರಿಗೆ ಪ್ರತ್ಯೇಕವಾಗಿ ಒಟ್ಟು 10 ತಾತ್ಕಾಲಿಕ ಶೌಚಾಲಯಗಳನ್ನು ನಿರ್ಮಿಸಲಾಗುವುದು. ಆಹಾರ ಮೇಳ, ಸಸ್ಯಮೇಳ, ಬೋಟಿಂಗ್, ಮನೋರಂಜನಾ ಆಟಗಳು ಕಂಬಳದ ಮುಖ್ಯ ವೇದಿಕೆಯ ಹಿಂಬದಿ ನಡೆಯಲಿದ್ದು, ಅಲ್ಲಿಯೂ ಶೌಚಾಲಯಗಳನ್ನು ನಿರ್ಮಿಸಲಾಗುವುದು. ಒಟ್ಟಿನಲ್ಲಿ ಈ ಬಾರಿ ಎಲ್ಲರೂ ಕುಟುಂಬ ಸಮೇತರಾಗಿ ಬಂದು ಕಂಬಳವನ್ನು ವೀಕ್ಷಿಸಿ, ಇತರ ಕಾರ್ಯಕ್ರಮಗಳ ಸವಿಯನ್ನು ಆಸ್ವಾದಿಸಬೇಕು. ಅದಕ್ಕೆ ಬೇಕಾದ ಎಲ್ಲಾ ಮೂಲಭೂತ ವ್ಯವಸ್ಥೆಗಳನ್ನು ಮಾಡಲಾಗಿದೆ ಎಂದರು.
ಸಭೆಯಲ್ಲಿ ವಿಜಯ-ವಿಕ್ರಮ ಜೋಡುಕರೆ ಕಂಬಳ ಸಮಿತಿಯ ಗೌರವಾಧ್ಯಕ್ಷ ಉಮೇಶ್ ಶೆಣೈ ನಂದಾವರ, ಕಾರ್ಯಾಧ್ಯಕ್ಷ ಅಶೋಕ್ ಕುಮಾರ್ ರೈ ಅರ್ಪಿಣಿಗುತ್ತು, ಪ್ರಧಾನ ಕಾರ್ಯದರ್ಶಿ ಕೇಶವ ಭಂಡಾರಿ ಬೆಳ್ಳಿಪ್ಪಾಡಿ ಕೈಪ, ಕೋಶಾಧಿಕಾರಿ ಸೀತಾರಾಮ ಶೆಟ್ಟಿ ಹೆಗ್ಡೆಹಿತ್ಲು, ಉಪಾಧ್ಯಕ್ಷರಾದ ರಾಮಚಂದ್ರ ಮಣಿಯಾಣಿ, ವಿಠಲ ಶೆಟ್ಟಿ ಕೊಲ್ಲೊಟ್ಟು, ಶಿವಪ್ರಸಾದ್ ರೈ ಮಠಂತಬೆಟ್ಟು, ಮುರಳೀಧರ ರೈ ಮಠಂತಬೆಟ್ಟು, ಸುದೇಶ್ ಶೆಟ್ಟಿ ಶಾಂತಿನಗರ, ರಾಜೀವ್ ಶೆಟ್ಟಿ ಕೇದಗೆ, ಕಾರ್ಯದರ್ಶಿ ಶಿವರಾಮ ಶೆಟ್ಟಿ ಗೋಳ್ತಮಜಲು, ಗೌರವ ಸಲಹೆಗಾರರಾದ ನಿರಂಜನ್ ರೈ ಮಠಂತಬೆಟ್ಟು, ಸಂಘಟನಾ ಕಾರ್ಯದರ್ಶಿಗಳಾದ ಯೊಗೀಶ್ ಸಾಮಾನಿ ಮಠಂತಬೆಟ್ಟು, ಕೃಷ್ಣಪ್ರಸಾದ್ ಬೊಳ್ಳಾವು, ದಿಲೀಪ್ ಶೆಟ್ಟಿ ಕರಾಯ, ಸಹ ಸಂಚಾಲಕರಾದ ಜಯಪ್ರಕಾಶ್ ಬದಿನಾರು, ರಾಜೇಶ್ ರೈ, ಪದಾಧಿಕಾರಿಗಳಾದ ಸತೀಶ್ ಶೆಟ್ಟಿ ಹೆನ್ನಾಳ, ರಾಘವೇಂದ್ರ ನಾಯಕ್ ನಟ್ಟಿಬೈಲು, ಮಹಾಲಿಂಗ ಕಜೆಕ್ಕಾರು, ಜಯಾನಂದ ಪಿಲಿಗುಂಡ, ರಾಕೇಶ್ ಶೆಟ್ಟಿ ಕೆಮ್ಮಾರ, ಜಗದೀಶ್ ಪೂಜಾರಿ ಪರಕಜೆ, ಸತೀಶ್ ಮಡಿವಾಳ ಸೇಡಿಯಾಪು, ಮುನೀರ್ ದಾವೂದ್ ನಿನ್ನಿಕಲ್ಲು, ಹರೀಶ್ಚಂದ್ರ ಬರಕೆರೆ, ಕೃಷ್ಣಪ್ಪ ಪೂಜಾರಿ, ಕಬೀರ್ ಕರುವೇಲು, ಪ್ರತೀಶ್ ಶೆಟ್ಟಿ ಪೆರ್ನೆ, ರಾಜೇಶ್ ಶೆಟ್ಟಿ ಎಂ., ಯತೀಶ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.