ಮೋಡರ್ನ್ ಸೆಲೂನ್ ಮಾಲಕ ಸುರೇಂದ್ರ ಭಂಡಾರಿ ನೀರ್ತಾಜೆರವರ ಶ್ರದ್ಧಾಂಜಲಿ ಸಭೆ

0

ಪುತ್ತೂರು: ಹಲವಾರು ವರ್ಷಗಳಿಂದ ಮುಖ್ಯರಸ್ತೆಯ ದಿನೇಶ ಭವನ ಕಟ್ಟಡದಲ್ಲಿ ಮೋಡರ್ನ್ ಸೆಲೂನ್ ವೃತ್ತಿಯನ್ನು ನಡೆಸಿಕೊಂಡು ಬಂದಿದ್ದು ಇತ್ತೀಚೆಗೆ ಅಗಲಿದ ಸುರೇಂದ್ರ ಭಂಡಾರಿ ನೀರ್ತಾಜೆರವರ ಶ್ರದ್ಧಾಂಜಲಿ ಸಭೆಯು ಮಾ.28 ರಂದು ಶ್ರೀ ವೆಂಕಟ್ರಮಣ ದೇವಸ್ಥಾನದ ಸುಕೃತಂದ್ರ ಸಭಾಭವನದಲ್ಲಿ ಜರಗಿತು.

ಸವಿತ ಸಮಾಜದ ಉತ್ತುಂಗತೆಯಲ್ಲಿ ಅವರ ಕೊಡುಗೆ ಅಪಾರ-ಆನಂದ ಭಂಡಾರಿ:
ಸವಿತಾ ಸಮಾಜದ ಜಿಲ್ಲಾಧ್ಯಕ್ಷ ಆನಂದ ಭಂಡಾರಿ ಮಾತನಾಡಿ, ಸವಿತ ಸಮಾಜ ಜಿಲ್ಲೆಯಲ್ಲಿ ಆಗಬೇಕಾದರೆ ಪ್ರಮುಖ ಪಾತ್ರ ವಹಿಸಿದ ವ್ಯಕ್ತಿ ಸುರೇಂದ್ರ ಭಂಡಾರಿರವರು ಮಾತ್ರವಲ್ಲ ಸವಿತ ಸಮಾಜದ ಉತ್ತುಂಗತೆಯಲ್ಲಿ ಅವರು ಕೊಡುಗೆಯೂ ಅಪಾರ. ಸವಿತಾ ಸೌಹಾರ್ದ ಸಹಕಾರಿ ಸಂಘದ ರೂವಾರಿಯೂ ಸುರೇಂದ್ರ ಭಂಡಾರಿರವರಾಗಿದ್ದು ಅವರ ಅಗಲಿಕೆ ನಮಗೆ ಬಹಳ ನೋವುಂಟು ಮಾಡಿದೆ. ಅವರ ಸಂಸಾರಕ್ಕೆ ಸುರೇಂದ್ರರವರ ಅಗಲಿಕೆಯ ನೋವನ್ನು ಭರಿಸುವ ಶಕ್ತಿ ಭಗವಂತನು ಕರುಣಿಸಲೆಂದು ಹೇಳಿ ಶ್ರದ್ಧಾಂಜಲಿ ಅರ್ಪಿಸಿದರು.

ಅವರ ವ್ಯಕ್ತಿತ್ವ ಎಂತಹುದು ಎಂದರೆ ಅವರ ನಿಧನದ ಕಾರ್ಯಕ್ರಮಕ್ಕೆ ಆಗಮಿಸಿದ ಹಿತೈಷಿಗಳೇ ಸಾಕ್ಷಿಯಾಗಿದೆ-ವಿನಯ ಭಂಡಾರಿ:
ಪುತ್ತೂರು ನಗರಸಭೆ ಮಾಜಿ ಸದಸ್ಯ ವಿನಯ ಭಂಡಾರಿ ಮಾತನಾಡಿ, ಅಂದಿನಿಂದ ಇಂದಿನವರೆಗೂ ಪುತ್ತೂರಿನ ಭಂಡಾರಿ ಸಮುದಾಯ ಸಂಘದ ಬೆಳವಣಿಗೆಗೆ ಸುರೇಂದ್ರ ಭಂಡಾರಿರವರು ಬಹಳಷ್ಟು ದುಡಿದಿದ್ದಾರೆ. ದಾನ ಮಾಡು ಆದರೆ ಬಡವನಾಗದಿರು ಎಂಬಂತೆ ಸುರೇಂದ್ರರವರು ಯಾವುದೇ ವ್ಯಕ್ತಿ ತೊಂದರೆಗೊಳಗಾದಲ್ಲಿ ನೆರವಿನ ಹಸ್ತ ಚಾಚುವ ವ್ಯಕ್ತಿತ್ವ ಅವರದಾಗಿತ್ತು. ಕುಟುಂಬದ ಹಿರಿಯ ಮಗನಾಗಿದ್ದು ತನ್ನ ಸಹೋದರರನ್ನು, ಸಹೋದರಿಯರನ್ನು ಒಟ್ಟಾಗಿ ಸೇರಿಸಿಕೊಂಡು ಕಾಯಕವನ್ನು ನಿರ್ವಹಿಸಿದವರು. ಅವರ ವ್ಯಕ್ತಿತ್ವ ಎಂತಹುದು ಎಂದರೆ ಅವರ ನಿಧನದ ಕಾರ್ಯಕ್ರಮಕ್ಕೆ ಆಗಮಿಸಿದ ಹಿತೈಷಿಗಳೇ ಸಾಕ್ಷಿಯಾಗಿದೆ ಎಂದು ಹೇಳಿ ನುಡಿನಮನ ಸಲ್ಲಿಸಿದರು.

ಭಂಡಾರಿ ಸಮುದಾಯದ ಸಂಪೂರ್ಣ ಮಾಹಿತಿಯನ್ನು ಅರಿತವರು ಸುರೇಂದ್ರ ಭಂಡಾರಿರವರು-ಗಿರೀಶ್ ಕುಮಾರ್:
ಪುತ್ತೂರು ಭಂಡಾರಿ ಸಮಾಜ ಸಂಘದ ನಿಕಟಪೂರ್ವ ಅಧ್ಯಕ್ಷ ಗಿರೀಶ್ ಕುಮಾರ್ ಮಾತನಾಡಿ, ಭಂಡಾರಿ ಸಮುದಾಯದ ಏಳಿಗೆಗೆ ಇಡೀ ಜೀವನವನ್ನು ಸಮರ್ಪಿಸಿದವರು ಸುರೇಂದ್ರ ಭಂಡಾರಿರವರು. ಸಮುದಾಯದಲ್ಲಿ ಯಾರಿಗಾದರೂ ತೊಂದರೆ ಆದಾಗ ಮೊದಲು ಬರುವುದು ಸುರೇಂದ್ರ ಭಂಡಾರಿರವರಲ್ಲಿ. ಭಂಡಾರಿ ಸಮುದಾಯದ ಸಂಪೂರ್ಣ ಮಾಹಿತಿಯನ್ನು ಅರಿತವರು ಸುರೇಂದ್ರ ಭಂಡಾರಿರವರು ಎಂದು ಹೇಳಿ ಶ್ರದ್ಧಾಂಜಲಿ ಅರ್ಪಿಸಿದರು.

ಭಂಡಾರಿ ಸಮುದಾಯದ ಪ್ರೀತಿಯ ವ್ಯಕ್ತಿಯನ್ನು ನಾವಿಂದು ಕಳೆದುಕೊಂಡಿದ್ದೇವೆ-ವಿಜಯಕುಮಾರ್ ಹೆಬ್ಬಾರ್ ಬೈಲ್:
ಪೂವರಿ ತುಳು ಪತ್ರಿಕೆಯ ಸಂಪಾದಕ ವಿಜಯಕುಮಾರ್ ಹೆಬ್ಬಾರ್ ಬೈಲು ಮಾತನಾಡಿ, ಭಂಡಾರಿ ಸಮುದಾಯದ ಅತ್ಯಂತ ಪ್ರೀತಿಯ ವ್ಯಕ್ತಿಯನ್ನು ನಾವಿಂದು ಕಳೆದುಕೊಂಡಿದ್ದೇವೆ. ತನ್ನ ವೃತ್ತಿ ಜೀವನದಲ್ಲಿ ಮೂರು ಕಡೆ ಮೋಡರ್ನ್ ಸೆಲೂನ್ ಹೆಸರಿನಲ್ಲಿ ಕಾಯಕವನ್ನು ಮುಂದುವರೆಸಿದ್ದರು. ಭಂಡಾರಿ ಸಮುದಾಯದ ಸಕ್ರಿಯ ಸಂಘಟಕ, ಸಮುದಾಯದ ಏಳಿಗೆಗೆ ಶ್ರಮಿಸಿದ ಸುರೇಂದ್ರ ಭಂಡಾರಿರವರದ್ದು ಇನ್ನು ಹೆಸರು ಮಾತ್ರ ಆದರೆ ಅವರ ಕಾರ್ಯಗಳು ಇನ್ನೂ ಜೀವಂತಿಕೆಯಲ್ಲಿರುತ್ತದೆ ಎಂದು ಹೇಳಿ ನುಡಿನಮನ ಸಲ್ಲಿಸಿದರು.

ಕೊಡುಗೈ ದಾನಿ, ಮತ್ತೊಬ್ಬರ ನೋವಿಗೆ ನೆರವಿನ ಹಸ್ತ ಚಾಚುವವರು-ಜಗದೀಶ್ ಭಂಡಾರಿ:
ಪುತ್ತೂರು ಭಂಡಾರಿ ಸಮಾಜ ಸಂಘದ ಮಾಜಿ ಕಾರ್ಯದರ್ಶಿ ಜಗದೀಶ್ ಭಂಡಾರಿ ಕಾರ್ಯಕ್ರಮ ನಿರೂಪಿಸಿ ಮಾತನಾಡಿ, ಕೊಡುಗೈ ದಾನಿ, ಮತ್ತೊಬ್ಬರ ನೋವಿಗೆ ನೆರವಿನ ಹಸ್ತ ಚಾಚುವವರು ಸುರೇಂದ್ರ ಭಂಡಾರಿರವರು. ಸಮಾಜದಲ್ಲಿ ವೃತ್ತಿ ಜೀವನದಲ್ಲಿ  48 ವರ್ಷ ಜನಾನುರಾಗಿಯಾಗಿ ಸೇವೆ ನೀಡಿರುತ್ತಾರೆ. ನಿಜಕ್ಕೂ ಅವರು ಭಂಡಾರಿ ಸಮಾಜದ ಆಸ್ತಿಯಾಗಿದ್ದಾರೆ ಎಂದು ಹೇಳಿ ಶ್ರದ್ಧಾಂಜಲಿ ಅರ್ಪಿಸಿದರು.

ಕುಟುಂಬದ ಎಲ್ಲಾ ಜವಾಬ್ದಾರಿಗಳನ್ನು ಯಶಸ್ವಿಯಾಗಿ ನಿರ್ವಹಿಸಿದವರು-ಗಂಗಾಧರ್ ಭಂಡಾರಿ:
ಅಗಲಿದ ಸುರೇಂದ್ರ ಭಂಡಾರಿರವರ ಭಾವ ಗಂಗಾಧರ್ ಭಂಡಾರಿ ಮಾತನಾಡಿ, ಓರ್ವ ತಂದೆಯಾಗಿ, ಸಹೋದರನಾಗಿ, ಗಂಡನಾಗಿ, ಮಗನಾಗಿ ಉತ್ತಮ ಜೀವನವನ್ನು ನಿರ್ವಹಿಸಿದವರು ಸುರೇಂದ್ರ ಭಂಡಾರಿರವರು. ಜೊತೆಗೆ ಸಮಾಜ ಸೇವೆಯಲ್ಲೂ ಅವರು ಸಕ್ರಿಯರಾಗಿದ್ದರು. ತನ್ನ ತಂದೆ ತೀರಿ ಹೋದ ಬಳಿಕ ಕುಟುಂಬದ ಎಲ್ಲಾ ಜವಾಬ್ದಾರಿಗಳನ್ನು ಯಶಸ್ವಿಯಾಗಿ ನಿರ್ವಹಿಸಿದವರು. ಈಗ ಅವರ ಅಗಲಿಕೆಯ ಬಳಿಕ ಅವರ ಕುಟುಂಬಕ್ಕೆ ನಾವೆಲ್ಲರೂ ಆಧಾರವಾಗಿರಬೇಕು ಎಂದು ಹೇಳಿ ಶ್ರದ್ಧಾಂಜಲಿ ಅರ್ಪಿಸಿದರು.

ಈ ಸಂದರ್ಭದಲ್ಲಿ ಅಗಲಿದ ಸುರೇಂದ್ರ ಭಂಡಾರಿರವರ ತಾಯಿ ಮೋಹಿನಿ, ಪತ್ನಿ ಸುಮಲತಾ, ಪುತ್ರ ಲತೇಶ್, ಪುತ್ರಿ ಶೃತಿಕ್, ಸಹೋದರರು, ಸಹೋದರಿಯರು, ಬಂಧುಮಿತ್ರರು, ಹಿತೈಷಿಗಳು, ಭಂಡಾರಿ ಸಮಾಜದ ಬಾಂಧವರು ಉಪಸ್ಥಿತರಿದ್ದರು.

ಮೌನ ಪ್ರಾರ್ಥನೆ..ಪುಷ್ಪಾರ್ಚನೆ..
ಅಗಲಿದ ಸುರೇಂದ್ರ ಭಂಡಾರಿರವರ ಆತ್ಮಕ್ಕೆ ಚಿರಶಾಂತಿಯನ್ನು ಕೋರಲೆಂದು ಭಗವಂತನಲ್ಲಿ ಒಂದು ನಿಮಿಷದ ಮೌನ ಪ್ರಾರ್ಥನೆಯನ್ನು ಈ ಸಂದರ್ಭದಲ್ಲಿ ಸಲ್ಲಿಸಲಾಯಿತು. ಬಳಿಕ ಆಗಮಿಸಿದ ಬಂಧುಮಿತ್ರರು, ಹಿತೈಷಿಗಳು ಅಗಲಿದ ಸುರೇಂದ್ರ ಭಂಡಾರಿರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಶ್ರದ್ಧಾಂಜಲಿ ಅರ್ಪಿಸಿದರು.

LEAVE A REPLY

Please enter your comment!
Please enter your name here