ಉಪ್ಪಿನಂಗಡಿ: 38ನೇ ವರ್ಷದ ಉಪ್ಪಿನಂಗಡಿಯ ವಿಜಯ-ವಿಕ್ರಮ ಜೋಡುಕರೆ ಕಂಬಳಕ್ಕೆ ಈ ಬಾರಿ ಉತ್ಸವದ ಮೆರುಗು ನೀಡಿದ್ದು, ಉಬಾರ್ ಕಂಬಳೋತ್ಸವದಲ್ಲಿನ ಸಸ್ಯ ಮೇಳ, ಆಹಾರ ಮೇಳ, ಕೃಷಿ ಯಂತ್ರೋಪಕರಣ ಮೇಳ ಹಾಗೂ ಸಾಂಸ್ಕೃತಿಕ ವೈಭವ, ಬೋಟಿಂಗ್ ರೈಡ್ಗೆ ಹಳೆಗೇಟು ಬಳಿಯ ಕಂಬಳ ಕರೆಯ ಬಳಿ ವಿಜಯ-ವಿಕ್ರಮ ಜೋಡುಕರೆ ಕಂಬಳ ಸಮಿತಿಯ ಅಧ್ಯಕ್ಷ, ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಕೋಡಿಂಬಾಡಿ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು, ಬೆಂಗಳೂರಿನಲ್ಲಿ ಕಂಬಳವು ಯಶಸ್ವಿಯಾಗಿ ಆಯೋಜನೆಗೊಂಡ ಬಳಿಕ ಜನರಿಗೆ ಕಂಬಳದ ಮೇಲೆ ನಿರೀಕ್ಷೆಗಳು ಹೆಚ್ಚಾಗಿವೆ. ಬೆಂಗಳೂರಿನಲ್ಲಿ ನಡೆದ ಹಾಗೆ ಅಭೂತ ಪೂರ್ವವಾಗಿ ಇಲ್ಲಿ ಕಂಬಳ ನಡೆಸಲು ಸಾಧ್ಯವಿಲ್ಲದಿದ್ದರೂ, ಈ ಪರಿಸರಕ್ಕೆ ಪೂರಕವಾಗಿ ಬೋಟಿಂಗ್ ರೈಡ್, ಮಕ್ಕಳಿಗಾಗಿ ಮನೋರಂಜನಾ ಆಟಗಳನ್ನು ಆಯೋಜಿಸಲಾಗಿದೆ. ಕಂಬಳವೆನ್ನುವುದು ಕೃಷಿಗೆ ಪೂರಕವಾದ ಕ್ರೀಡೆ. ಆ ನಿಟ್ಟಿನಲ್ಲಿ ಸಸ್ಯ ಮೇಳ, ಕೃಷಿ ಯಂತ್ರೋಪಕರಣ ಮೇಳವನ್ನೂ ಆಯೋಜಿಸಲಾಗಿದೆ. ಪ್ರತಿಯೊಂದು ಮನೆಯವರು ಒಂದು ಗಿಡ ನೆಟ್ಟು ಸಾಕಿ ಬೆಳೆಸಲಿ. ಮರಗಳನ್ನು ಕಡಿಯುವುದನ್ನು ಬಿಟ್ಟು ಗಿಡಗಳನ್ನು ನೆಡುವುದನ್ನು ಮಾಡಬೇಕು. ಇದರೊಂದಿಗೆ ಮೂರು ದಿನಗಳ ಕಾಲ ಆಹಾರ ಮೇಳ, ಸಾಂಸ್ಕೃತಿಕ ವೈಭವಗಳು ನಡೆಯಲಿವೆ. ಬೋಟಿಂಗ್ ಸಂದರ್ಭ ಸುರಕ್ಷತೆಗೂ ಹೆಚ್ಚಿನ ಆದ್ಯತೆ ನೀಡಲಾಗಿದೆ. ಶೌಚಾಲಯ, ಕುಡಿಯುವ ನೀರು ಮುಂತಾದ ಮೂಲಭೂತ ಸೌಕರ್ಯಗಳ ವ್ಯವಸ್ಥೆಯನ್ನೂ ಮಾಡಲಾಗಿದೆ. ಮುಂದಿನ ಕಂಬಳದಲ್ಲಿ ಕೃಷಿ ಇಲಾಖೆಯ ಸಹಕಾರದೊಂದಿಗೆ ರೈತರಿಗೆ ಸರಕಾರದ ಸಬ್ಸಿಡಿಯಾಧಾರದಲ್ಲಿ ಕೃಷಿ ಯಂತ್ರಗಳನ್ನು ಸಿಗುವ ಹಾಗೆ ಜೋಡಣೆ ಮಾಡುವ ಕಾರ್ಯವೂ ನಡೆಯಲಿದೆ ಎಂದರು. ಕಂಬಳಕ್ಕೆ ಬರುವವರ ಸಂಖ್ಯೆ ಹೆಚ್ಚಳವಾದಾಗ ಈ ಕ್ರೀಡೆ ಇನ್ನಷ್ಟು ಬೆಳೆಯಲು ಸಾಧ್ಯ. ಆದ್ದರಿಂದ ಕಂಬಳಕ್ಕೆ ಸರ್ವ ಧರ್ಮೀಯರು ಕುಟುಂಬ ಸಮೇತರಾಗಿ ಬರಬೇಕು. ಕಂಬಳವನ್ನು ನೋಡುವುದರೊಂದಿಗೆ ಇತರ ಮನೋರಂಜನಾ ಕಾರ್ಯಕ್ರಮಗಳಲ್ಲೂ ಭಾಗವಹಿಸಬೇಕು ಎಂಬ ಚಿಂತನೆಯೊಂದಿಗೆ ಈ ಬಾರಿಯ ಕಂಬಳವನ್ನು ಉತ್ಸವವನ್ನಾಗಿ ಆಯೋಜನೆ ಮಾಡಲಾಗಿದೆ. ಎಲ್ಲಾ ಕಂಬಳಗಳಲ್ಲಿಯೂ ಕೇವಲ ಕಂಬಳ ಮಾತ್ರವಲ್ಲದೇ, ಇತರ ಕಾರ್ಯಕ್ರಮಗಳನ್ನು ಅಳವಡಿಸಿಕೊಳ್ಳಲು ಉಪ್ಪಿನಂಗಡಿಯ ಕಂಬಳ ದಾರಿದೀಪವಾಗಲಿದೆ ಎಂದರು.
ಉದ್ಘಾಟನೆಯ ಸಂದರ್ಭ ದಂಪತಿಯೊಬ್ಬರಿಗೆ ಹಲಸಿನ ಹಣ್ಣಿನ ಗಿಡವನ್ನು ನೀಡಲಾಯಿತು. ಬಳಿಕ ಕಂಬಳ ಸಮಿತಿಯ ಗೌರವ ಸಲಹೆಗಾರ ಕರುಣಾಕರ ಸುವರ್ಣ, ದಂತವೈದ್ಯ ಡಾ. ರಾಜಾರಾಮ್ ಕೆ.ಬಿ., ಸಾಮಾಜಿಕ ಕಾರ್ಯಕರ್ತ ಎಂ.ಬಿ. ವಿಶ್ವನಾಥ ರೈ, ಬೋಟಿಂಗ್ ಕೇಂದ್ರವನ್ನು ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ-ಮಹಾಕಾಳಿ ದೇವಾಲಯದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಕೆ. ರಾಧಾಕೃಷ್ಣ ನಾೖಕ್, ಬಿಎಸ್ಸೆಫ್ನ ನಿವೃತ ಡೆಪ್ಯುಟಿ ಕಮಾಂಡೆಂಟ್ ಡಿ. ಚಂದಪ್ಪ ಮೂಲ್ಯ, ಪುತ್ತೂರು ಕೋಟಿ-ಚೆನ್ನಯ್ಯ ಜೋಡುಕರೆ ಕಂಬಳ ಸಮಿತಿಯ ಅಧ್ಯಕ್ಷ ಚಂದ್ರಹಾಸ ಶೆಟ್ಟಿ, ಕರ್ನಾಟಕ ರಾಜ್ಯ ರೈತ ಸಂಘದ (ಹಸಿರು ಸೇನೆ) ದ.ಕ. ಜಿಲ್ಲಾಧ್ಯಕ್ಷ ರೂಪೇಶ್ ರೈ ಅಲಿಮಾರ್, ಉಪ್ಪಿನಂಗಡಿ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಪ್ರಧಾನ ಕಾರ್ಯದರ್ಶಿ ಅಬ್ದುರ್ರಹ್ಮಾನ್ ಯುನಿಕ್, ವಿಜಯ-ವಿಕ್ರಮ ಜೋಡುಕರೆ ಕಂಬಳ ಸಮಿತಿಯ ಗೌರವಾಧ್ಯಕ್ಷ ಎನ್. ಉಮೇಶ್ ಶೆಣೈ, ಕಾರ್ಯಾಧ್ಯಕ್ಷ ಅಶೋಕ್ ಕುಮಾರ್ ರೈ ಅರ್ಪಿಣಿಗುತ್ತು, ಪ್ರಧಾನ ಕಾರ್ಯದರ್ಶಿ ಕೇಶವ ಭಂಡಾರಿ ಬೆಳ್ಳಿಪ್ಪಾಡಿ ಕೈಪ, ಕೋಶಾಧಿಕಾರಿ ಸೀತಾರಾಮ ಶೆಟ್ಟಿ ಹೆಗ್ಡೆಹಿತ್ಲು, ಗೌರವ ಸಲಹೆಗಾರ ನಿರಂಜನ್ ರೈ ಮಠಂತಬೆಟ್ಟು, ಉಪಾಧ್ಯಕ್ಷರಾದ ವಿದ್ಯಾಧರ ಜೈನ್, ಜಯಂತ ಪೊರೋಳಿ, ಸುದೇಶ್ ಶೆಟ್ಟಿ ಶಾಂತಿನಗರ, ಉಮಾನಾಥ ಶೆಟ್ಟಿ ಪೆರ್ನೆ, ಶಿವಪ್ರಸಾದ್ ರೈ ಮಠಂತಬೆಟ್ಟು, ಸಂಘಟನಾ ಕಾರ್ಯದರ್ಶಿಗಳಾದ ಯೊಗೀಶ್ ಸಾಮಾನಿ ಸಂಪಿಗೆದಡಿ ಮಠಂತಬೆಟ್ಟು, ಕೃಷ್ಣಪ್ರಸಾದ್ ಬೊಳ್ಳಾವು, ಸಹ ಸಂಚಾಲಕರಾದ ಜಯಪ್ರಕಾಶ್ ಬದಿನಾರು, ಪ್ರಮುಖರಾದ ಅನಿ ಮಿನೇಜಸ್, ಗೀತಾ ದಾಸರಮೂಲೆ, ಸವಿತಾ ಹರೀಶ್, ಸತೀಶ್ ಶೆಟ್ಟಿ ಹೆನ್ನಾಳ, ಪಂಜಿಗುಡ್ಡೆ ಈಶ್ವರ ಭಟ್, ನಿಹಾಲ್ ಶೆಟ್ಟಿ, ವಿಕ್ರಂ ಶೆಟ್ಟಿ ಅಂತರ, ಅಶ್ರಫ್ ಬಸ್ತಿಕ್ಕಾರ್, ಕೃಷ್ಣ ರಾವ್ ಆರ್ತಿಲ, ಕೃಷ್ಣಪ್ರಸಾದ್ ಆಳ್ವ, ರಾಕೇಶ್ ಶೆಟ್ಟಿ ಕೆಮ್ಮಾರ, ಕಬೀರ್ ಕರುವೇಲು, ಆದಂ ಕೊಪ್ಪಳ, ಜೊಸೇಫ್, ಜೋಕಿಂ ವೇಗಸ್, ಪ್ರಸನ್ನ ಶೆಟ್ಟಿ, ರೋಶನ್ ರೈ ಬನ್ನೂರು, ಲೊಕೇಶ್ ಪೆಲತ್ತಡಿ, ಪ್ರಹ್ಲಾದ್ ಬೆಳ್ಳಿಪ್ಪಾಡಿ, ಕಾರ್ಯಕ್ರಮ ಸಂಯೋಜಕರಾದ ಸೈಫ್ ದರ್ಬೆ, ರಾಜೇಶ್ ಶೆಟ್ಟಿ, ಶ್ರೇಯಸ್, ಪ್ರಜ್ವಲ್ ಮತ್ತಿತರರು ಉಪಸ್ಥಿತರಿದ್ದರು.
ಕಂಬಳ ಸಮಿತಿಯ ಉಪಾಧ್ಯಕ್ಷ ಮುರಳೀಧರ ರೈ ಮಠಂತಬೆಟ್ಟು ಸ್ವಾಗತಿಸಿದರು. ಕಾರ್ಯಕ್ರಮ ಸಂಯೋಜಕ ವೇಣುಗೋಪಾಲ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕೋಡಿಂಬಾಡಿ ಗ್ರಾ.ಪಂ. ಸದಸ್ಯ ಜಗನ್ನಾಥ್ ಶೆಟ್ಟಿ ನಡುಮನೆ ವಂದಿಸಿ, ಕಾರ್ಯಕ್ರಮ ನಿರೂಪಿಸಿದರು.
170 ಜೊತೆ ಕೋಣಗಳ ನಿರೀಕ್ಷೆ
38ನೇ ವರ್ಷದ ವಿಜಯ-ವಿಕ್ರಮ ಜೋಡುಕರೆ ಕಂಬಳವು ಮಾ.30ರಂದು ನಡೆಯಲಿದ್ದು, ಬೆಳಗ್ಗೆ 8ಕ್ಕೆ ಉಪ್ಪಿನಂಗಡಿಯ ಶ್ರೀ ಸಹಸ್ರಲಿಂಗೇಶ್ವರ-ಮಹಾಕಾಳಿ ದೇವಾಲಯದ ವಠಾರದಿಂದ ಕೋಣಗಳ ಮೆರವಣಿಗೆ ನಡೆಯಲಿದೆ. ಬೆಳಗ್ಗೆ 8ರಿಂದ ಉಪ್ಪಿನಂಗಡಿಯ ಶ್ರೀ ಸಹಸ್ರಲಿಂಗೇಶ್ವರ-ಮಹಾಕಾಳಿ ದೇವಾಲಯದ ವಠಾರದಿಂದ ಕಂಬಳ ಕೋಣಗಳ ಭವ್ಯ ಮೆರವಣಿಗೆ ನಡೆಯಲಿದೆ. ಬೆಳಗ್ಗೆ 9.31ಕ್ಕೆ ಕಂಬಳ ಕರೆಯ ಬಳಿ ಉದ್ಘಾಟನೆ ನಡೆಯಲಿದ್ದು, 10.31ಕ್ಕೆ ನೇಗಿಲು ಕಿರಿಯ, 11.30ಕ್ಕೆ ಹಗ್ಗ ಕಿರಿಯ, ಮಧ್ಯಾಹ್ನ 12.30ಕ್ಕೆ ನೇಗಿಲು ಹಿರಿಯ, ಮಧ್ಯಾಹ್ನ 2ಕ್ಕೆ ಹಗ್ಗ ಹಿರಿಯ, ಹಗ್ಗ ಮತ್ತು ಕನೆ ಹಲಗೆ ವಿಭಾಗದ ಕೋಣಗಳು ಸಂಜೆ 4ಕ್ಕೆ ಕರೆಗೆ ಇಳಿಯಲಿವೆ. ಈ ಬಾರಿ 170 ಜೊತೆ ಕೋಣಗಳು ಭಾಗವಹಿಸುವ ನಿರೀಕ್ಷೆ ಇದೆ. ಸಂಜೆ 6 ಗಂಟೆಗೆ ಸಭಾ ಕಾರ್ಯಕ್ರಮ ನಡೆಯಲಿದ್ದು, ಗಣ್ಯಾತಿಗಣ್ಯ ವ್ಯಕ್ತಿಗಳು, ತುಳು, ಕನ್ನಡ ಸಿನಿಮಾ ನಟ-ನಟಿಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಮಾ.31ರಂದು ಬಹುಮಾನ ವಿತರಣೆ ನಡೆಯಲಿದೆ. ಮಾ.29ರಂದು ಆರಂಭಗೊಂಡ ಕಂಬಳ ಉತ್ಸವವು ಮಾ.31ರ ರಾತ್ರಿಯವರೆಗೆ ಇರಲಿದೆ.
ಕಂಬಳೋತ್ಸವಕ್ಕೆ ಚಾಲನೆ ನೀಡಿದ ಬಳಿಕ ಶಾಸಕ ಅಶೋಕ್ ಕುಮಾರ್ ರೈಯವರು ನೇತ್ರಾವತಿ ನದಿಯಲ್ಲಿ ಬೋಟ್ ರೈಡಿಂಗ್ ನಡೆಸಿದರು. ಬಳಿಕ ಸಸ್ಯ ಮೇಳ, ಆಹಾರ ಮೇಳಗಳನ್ನು ವೀಕ್ಷಿಸಿದರು.