ಪುತ್ತೂರು: ವಿವೇಕಾನಂದ ಸೆಂಟ್ರಲ್ ಸ್ಕೂಲ್ ನ 2025 – 26ನೇ ಶೈಕ್ಷಣಿಕ ವರ್ಷದ ಶಾಲಾ ವಾರ್ಷಿಕೋತ್ಸವ ನ. 28ರಂದು ನೆಹರು ನಗರದಲ್ಲಿರುವ ವಿವೇಕಾನಂದ ಸೆಂಟ್ರಲ್ ಸ್ಕೂಲಿನಲ್ಲಿ ಆಚರಿಸಲಾಯಿತು.

ಧಾರ್ಮಿಕ ಶಿಕ್ಷಣ ತರಬೇತುದಾರರಾದ ಶಂಕರಿ ಶರ್ಮ ಮತ್ತು ಕೃಷ್ಣವೇಣಿ ಮುಳಿಯ ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ವಿದ್ಯಾರ್ಥಿಗಳಿಂದ ಧಾರ್ಮಿಕ ಶಿಕ್ಷಣ ಕಾರ್ಯಕ್ರಮವು ನಡೆಯಿತು.
ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿವೇಕಾನಂದ ವಿದ್ಯಾವರ್ಧಕ ಸಂಘದ ಸಹ ಕಾರ್ಯದರ್ಶಿ ರೂಪಲೇಖಾ ವಹಿಸಿ ಮಾತನಾಡುತ್ತಾ, ಮುಂದೆ ವಿದ್ಯಾಭ್ಯಾಸವನ್ನು ಮುಗಿಸಿ ತೆರಳಿದಾಗ ಸಮಾಜದ ಮತ್ತು ಶಾಲೆಯ ರಾಯಭಾರಿಗಳಾಗಿ ಕಾರ್ಯ ನಿರ್ವಹಿಸಬೇಕು ಎಂದು ಮಕ್ಕಳಿಗೆ ಕಿವಿಮಾತುಗಳನ್ನು ಹೇಳಿದರು. ವಿದ್ಯಾರ್ಥಿಗಳಿಗೆ ಸ್ವಾಭಿಮಾನದ ಬಗ್ಗೆ ತಿಳಿಸುತ್ತಾ, ಇಂದಿನ ಶಿಕ್ಷಣದಲ್ಲಿ ಮಕ್ಕಳಿಗೆ ದೇಶದ ಸಂಸ್ಕೃತಿ ಮತ್ತು ಪರಂಪರೆಯನ್ನು ತಿಳಿಸುವ ಸಂಸ್ಕಾರಯುತ ಶಿಕ್ಷಣದ ಅಗತ್ಯವಿದೆ. ಈ ನಿಟ್ಟಿನಲ್ಲಿ, ವಿವೇಕಾನಂದ ವಿದ್ಯಾವರ್ಧಕ ಸಂಘದ ಆಶ್ರಯದಲ್ಲಿರುವ ಎಲ್ಲಾ ಶಿಕ್ಷಣ ಸಂಸ್ಥೆಗಳೂ, ಪಂಚ ಪರಿವರ್ತನೆಯ ಪಥದಲ್ಲಿ ಸಾಗುವ ಉನ್ನತ ಧ್ಯೇಯದೊಂದಿಗೆ ಕಾರ್ಯ ನಿರ್ವಹಿಸುತ್ತಿವೆ ಎಂದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ, ಬೆಟ್ಟಂಪಾಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಡಾ. ವರದರಾಜ್ ಚಂದ್ರಗಿರಿ ಇವರು ಸಭೆಯನ್ನುದ್ದೇಶಿಸಿ ಮಾತನಾಡುತ್ತಾ; 21ನೇ ಶತಮಾನದಲ್ಲಿ ಬರುವಂತಹ ಸವಾಲುಗಳನ್ನು ಅವಕಾಶಗಳನ್ನಾಗಿ ಪರಿವರ್ತಿಸಿ ಮುನ್ನಡೆಯಬೇಕೆಂದು ತಿಳಿಹೇಳಿದರು. ವಿದ್ಯಾರ್ಥಿಗಳಿಗೆ ಶಿಕ್ಷಕರೇ ದಾರಿದೀಪ. ಮಕ್ಕಳ ಗೆಲುವನ್ನು ಪ್ರೋತ್ಸಾಹಿಸುವುದರ ಜೊತೆಗೆ, ಸೋಲನ್ನು ಎದುರಿಸುವ ಮನೋಸ್ಥೈರ್ಯವನ್ನು ಅವರಲ್ಲಿ ತುಂಬಬೇಕು ಎಂದು ಪೋಷಕರಲ್ಲಿ ಮನವಿ ಮಾಡಿದರು.
ಶಾಲಾ ಸಂಚಾಲಕರಾದ ಭರತ್ ಪೈ, ಇವರು, ವಿದ್ಯಾಸಂಸ್ಥೆಯಲ್ಲಿ ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಕೈಗೊಂಡ ಹಲವು ಸೂಕ್ತಕ್ರ ಮಗಳ ಕುರಿತು ವಿವರಿಸಿದರು.
ಶಾಲಾ ಪ್ರಾಂಶುಪಾಲರಾದ ಸಿಂಧು ವಿ.ಜಿ ಇವರು, ಶೈಕ್ಷಣಿಕ ವರ್ಷದ ವರದಿ ವಾಚಿಸಿದರು. ಶಾಲೆಗೆ ಉದಾರ ದೇಣಿಗೆಯನ್ನಿತ್ತು ಸಹಕರಿಸಿದ ದಾನಿಗಳನ್ನು ಗೌರವಿಸಲಾಯಿತು. ಈ ಶೈಕ್ಷಣಿಕ ವರ್ಷದಲ್ಲಿ; ರಾಷ್ಟಮಟ್ಟದ ಸಾಧಕರನ್ನು, ಕಲಿಕೆಯಲ್ಲಿ ಪ್ರತಿಭಾವಂತರಾದ ವಿದ್ಯಾರ್ಥಿಗಳನ್ನು, ವಿಜ್ಞಾನ ಮತ್ತು ಕ್ರೀಡೆಯಲ್ಲಿ ಉತ್ತಮ ಸಾಧನೆಗೈದ ವಿದ್ಯಾರ್ಥಿಗಳನ್ನು ಅಭಿನಂದಿಸಿ ಗೌರವಿಸಲಾಯಿತು.
ವೇದಿಕೆಯಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘದ ಉಪಾಧ್ಯಕ್ಷರಾದ ಸತೀಶ್ ರಾವ್, ಶಾಲಾ ಆಡಳಿತ ಮಂಡಳಿ ಅಧ್ಯಕ್ಷರಾದ ವಸಂತಿ ಕೆ. ಪೋಷಕ ಸಂಘದ ಅಧ್ಯಕ್ಷರಾದ ಸಂಪತ್ ಕುಮಾರ್, ಶೈಕ್ಷಣಿಕ ಸಲಹೆಗಾರರಾದ ಅನುರಾಧ ಶಿವರಾಮ್ ಉಪ ಪ್ರಾಂಶುಪಾಲರಾದ ಶ್ರೀದೇವಿ ಹೆಗ್ಡೆ, ಶಾಲಾ ವಿದ್ಯಾರ್ಥಿ ನಾಯಕ ನಿಹಾಲ್ ಸಿ. ರೈ ಮತ್ತು ವಿದ್ಯಾರ್ಥಿ ನಾಯಕಿ ಆಪ್ತ ಚಂದ್ರಮತಿ ಮುಳಿಯ ಉಪಸ್ಥಿತರಿದ್ದರು.
ಕಿಂಡರ್ ಗಾರ್ಟನ್ ವಿಭಾಗದ ಸಂಯೋಜಕಿ ವಿನಯ ಪ್ರಭು ಸ್ವಾಗತಿಸಿ, ಶಾಲಾ ವಿದ್ಯಾರ್ಥಿ ನಾಯಕಿ ಆಪ್ತ ಚಂದ್ರಮತಿ ಮುಳಿಯ ವಂದಿಸಿದರು. 10ನೇ ತರಗತಿಯ ವಿದ್ಯಾರ್ಥಿಗಳಾದ ಧನ್ಯಶ್ರೀ , ಸ್ಪಂದನ್ ಹಾಗೂ 9ನೇ ತರಗತಿಯ ವಿದ್ಯಾರ್ಥಿಗಳಾದ ಆರುಷಿ ಎಸ್ ಪುತ್ತೂರಾಯ, ಶಾರ್ವರಿ .ಪಿ, ತನಿಷ್ ಎಂ ಭಟ್, ಶ್ರಾವಣಿ, ಶ್ರಾವ್ಯ ಪಿ ನಾಯಕ್ ಮತ್ತು ಶಿಕ್ಷಕಿಯಾದ ಮಲ್ಲಿಕಾ ಕೆ ಇವರು ಕಾರ್ಯಕ್ರಮವನ್ನು ನಿರ್ವಹಿಸಿದರು. ವಿದ್ಯಾರ್ಥಿಗಳು ಪ್ರದರ್ಶಿಸಿದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಸಭಿಕರನ್ನು ರಂಜಿಸಿದವು.