ನೆಕ್ಕಿಲಾಡಿ ಶ್ರೀ ಗುರು ರಾಘವೇಂದ್ರ ಮಠದಲ್ಲಿ ಮಾ.31ರಿಂದ ಎ.4ರವರೆಗೆ ಪ್ರತಿಷ್ಠೆ ಮತ್ತು ಬ್ರಹ್ಮಕಲಶಾಭಿಷೇಕ

0

ಉಪ್ಪಿನಂಗಡಿ: ಇಲ್ಲಿನ 34 ನೆಕ್ಕಿಲಾಡಿಯ ಶ್ರೀ ಗುರು ರಾಘವೇಂದ್ರ ಮಠವು ಪುನರ್ ನಿರ್ಮಾಣಗೊಂಡು ಮಾ.31ರಿಂದ ಎ.4ರವರೆಗೆ ಲಕ್ಷ್ಮಣ ಸಹಿತ ಸೀತಾರಾಮ ದೇವರು, ಮುಖ್ಯಪ್ರಾಣ ದೇವರು ಮತ್ತು ಶ್ರೀ ಗುರುರಾಘವೇಂದ್ರ ಸಾರ್ವಭೌಮರ ಬೃಂದಾವನ ಪ್ರತಿಷ್ಠೆ ಮತ್ತು ಬ್ರಹ್ಮಕಲಶಾಭಿಷೇಕ ಮಹೋತ್ಸವವು ವಿಜೃಂಭಣೆಯಿಂದ ನಡೆಯಲಿದೆ.


ರಾಷ್ಟ್ರೀಯ ಹೆದ್ದಾರಿ 75ರ ಪಾರ್ಶ್ವದಲ್ಲಿ ಪುನರ್ ನಿರ್ಮಾಣಗೊಳ್ಳುತ್ತಿರುವ ರಾಯರ ಮಠವು ಪ್ರಾರಂಭಿಕ ಕಲ್ಪನೆಗಿಂತ ಮಿಗಿಲಾಗಿ ರೂಪುಗೊಂಡಿದೆ. ಯಾವುದೇ ಆರ್ಥಿಕ ಲಭ್ಯತೆಯ ಬಲವಿಲ್ಲದೆ ಕೇವಲ ಗುರು ರಾಯರ ಕೃಪೆಯಿಂದಷ್ಟೇ ಪ್ರಾರಂಭಗೊಂಡ ಪುನರ್ ನಿರ್ಮಾಣ ಕಾರ್ಯದಲ್ಲಿ ರಾಯರ ಬೃಂದಾವನ ಹಾಗೂ ಗೋಪುರವನ್ನು ನಿರ್ಮಿಸಿ ಲೋಕಾರ್ಪಣೆಗೊಳಿಸುವ ಸಂಕಲ್ಪವನ್ನು ಕಳೆದ ವರ್ಷ ತಳೆಯಲಾಗಿತ್ತು. ಅದಕ್ಕಾಗಿ ತರಾತುರಿಯ ಕೆಲಸವನ್ನೂ ಮಾಡಲಾಗಿತ್ತು. ಆದರೆ ಕಳೆದ ವಿಧಾನ ಸಭಾ ಚುನಾವಣೆಯ ನೀತಿ ಸಂಹಿತಿಯ ಕಾರಣಕ್ಕೆ ಬ್ರಹ್ಮಕಲಶೋತ್ಸವನ್ನು ಮುಂದೂಡುವ ನಿರ್ಧಾರ ಕೈಗೊಳ್ಳಬೇಕಾಯಿತು. ಈ ವೇಳೆ ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ಕೆ. ರಾಧಾಕೃಷ್ಣ ನಾೖಕ್‌ ರವರು, ಪೂರ್ಣ ಪ್ರಮಾಣದ ಕಾಮಗಾರಿ ನಡೆಸದೆ ಬ್ರಹ್ಮಕಲಶೋತ್ಸವನ್ನು ಮಾಡಲಾಗುವುದಿಲ್ಲ ಎಂದು ಘೋಷಿಸಿದ್ದರು. ಆ ವೇಳೆಗೆ ಆರ್ಥಿಕ ಲಭ್ಯತೆಯ ಹರಿವು ಮಂದಗತಿಯಲ್ಲಿ ಇದ್ದು, ಪೂರ್ಣ ಪ್ರಮಾಣದ ಕಾಮಗಾರಿ ಕಾರ್ಯ ಸಾಧ್ಯವೇ ಎಂಬ ಪ್ರಶ್ನೆಯು ಸಹಜವಾಗಿ ಮೂಡಿತ್ತು. ಆದರೆ ಪವಾಡ ಎಂಬಂತೆ ಭಕ್ತ ಜನತೆ ಸ್ವಯಂಪ್ರೇರಿತರಾಗಿ ತಮ್ಮ ತಮ್ಮ ಶಕ್ತ್ಯಾನುಸಾರ ದೇಣಿಗೆಯನ್ನು ನೀಡಲು ಮುಂದೆ ಬಂದು ಪ್ರಸಕ್ತ ಸ್ವತಃ ಮಠದ ಆಡಳಿತ ಸಮಿತಿಯವರೇ ನಿರೀಕ್ಷಿಸದ ರೀತಿಯಲ್ಲಿ ಪುನರ್ ನಿರ್ಮಾಣ ಕಾರ್ಯ ಭರದಿಂದ ನಡೆಯುತ್ತಿದ್ದು, ಬೃಂದಾವನ ಪ್ರತಿಷ್ಠೆ ಮತ್ತು ಬ್ರಹ್ಮಕಲಶಾಭಿಷೇಕಕ್ಕೆ ಅಣಿಗೊಂಡಿದೆ.


ಎತ್ತರಿಸಲ್ಪಟ್ಟ ಮಠ, ನಿರ್ಮಾಣಗೊಂಡ ಸುಸಜ್ಜಿತ ಸಭಾಂಗಣ, ಭೋಜನಾಲಯ:
ರಾಷ್ಟ್ರೀಯ ಹೆದ್ದಾರಿ ಅಗಲೀಕರಣದ ಕಾಮಗಾರಿಯಿಂದಾಗಿ ಹೆದ್ದಾರಿಯು ಎತ್ತರಿಸಲ್ಪಟ್ಟು ಮಠವು ತಗ್ಗಿನಲ್ಲಿ ಇದ್ದಂತೆ ಭಾಸವಾಗುತ್ತಿತ್ತು. ಈ ಸೂಕ್ಷ್ಮತೆಯನ್ನು ಹೋಗಲಾಡಿಸಲು ಮಠವನ್ನು ಎತ್ತರಿಸುವ ಮೂಲಕ ಕನಿಷ್ಠ ಸ್ಥಳದಲ್ಲಿ ಗರಿಷ್ಠ ಅನುಕೂಲತೆಯನ್ನು ಸೃಷ್ಟಿಸುವ ಯೋಜನೆ ರೂಪಿಸಲಾಯಿತು. ಇದರಿಂದಾಗಿ ಭೂಮಿಯಿಂದಲೇ ರಾಯರ ಬೃಂದಾವನವನ್ನು ಶಿಲಾಮಯವಾಗಿ ನಿರ್ಮಿಸಿಕೊಂಡು ಬರಲಾಯಿತು. ಮಠದ ಬಲ ಪಾರ್ಶ್ವದಲ್ಲಿ ಪಶ್ಚಿಮದಿಂದ ಪೂರ್ವಾಭಿಮುಖವಾಗಿ ಸುಸಜ್ಜಿತ ಸಭಾಂಗಣವನ್ನು ನಿರ್ಮಿಸಲಾಗಿದೆ. ಅದರ ತಳಭಾಗದಲ್ಲಿ ಭೋಜನಾಲಯ, ಪಾಕಶಾಲೆಗಳನ್ನು ನಿರ್ಮಿಸಲಾಗಿದೆ. ಇದರಿಂದಾಗಿ ಏಕಕಾಲದಲ್ಲಿ 1000 ಕ್ಕೂ ಮಿಕ್ಕಿದ ಮಂದಿಯ ಉಪಸ್ಥಿತಿಯಲ್ಲಿ ಕಾರ್ಯಕ್ರಮವನ್ನು ನಡೆಸಲು ಅವಕಾಶ ಲಭಿಸಿದಂತಾಗಿದೆ.

ಅಂದು ಸಂಕಲ್ಪಿಸಿದ್ದು ಅಂಬಾಭವಾನಿಯ ಭಜನಾ ಮಂದಿರ:
ಸಮಾಜದ ಯುವ ಮನಸ್ಸುಗಳು ಧಾರ್ಮಿಕತೆಯ ನೆಲೆಗಟ್ಟಿನಲ್ಲಿ ಒಗ್ಗೂಡಿ ಇರಲೆಂದು ಅಂದಿನ ಸಾಮಾಜಿಕ ನೇತಾರರಾಗಿದ್ದ ಅಪ್ಪಯ್ಯ ನಾಯಕ್, ಲೋಕನಾಥ್, ಜಗನ್ನಾಥ್ ಕೋಟೆ, ವಾಸು ಆಚಾರ್ಯ, ಶಿವಾನಂದ ಶೃಂಗಾರ್ ಮತ್ತಿತರರು ಹುಟ್ಟು ಹಾಕಿದ ಸಂಸ್ಥೆಯೇ ಅಂಬಾ ಭವಾನಿ ಭಜನಾ ಮಂದಿರ. ಶಿವಾಜಿಗೆ ಪ್ರೇರಣೆ ನೀಡಿದ ಅಂಬಾ ಭವಾನಿಯು ನಮಗೂ ಪ್ರೇರಣೆ ನೀಡಲಿ ಎಂಬ ಆಶಯದೊಂದಿಗೆ ಅಂಬಾಭವಾನಿಯ ಹೆಸರಿನಲ್ಲಿಯೇ ಭಜನಾ ಮಂದಿರ ನಿರ್ಮಿಸಲು ಪ್ರಾರಂಭಿಸಲಾಯಿತು. ಭಜನಾ ಮಂದಿರ ನಿರ್ಮಾಣ ಪೂರ್ಣತೆಯನ್ನು ಪಡೆಯುವ ವೇಳೆ ಶ್ರೀ ಗುರು ರಾಯರ ಮಠದ ನಿರ್ಮಾಣದ ಸದಾವಕಾಶ ಲಭಿಸಿತ್ತು. ಇದರ ಪರಿಣಾಮ 2005 ರಲ್ಲಿ ಭಜನಾ ಮಂದಿರಕ್ಕೆಂದು ನಿರ್ಮಿಸಿದ ಕಟ್ಟಡದಲ್ಲಿ ರಾಯರ ಮಠವನ್ನು ಪ್ರಾರಂಭಿಸಲಾಯಿತು. ಸದ್ರಿ ಕಟ್ಟಡ ಶಿಥಿಲಗೊಂಡು ಸೋರಿಕೆಯುಂಟಾದ ಹಿನ್ನೆಲೆಯಲ್ಲಿ ಪುನರ್ ನಿರ್ಮಾಣದ ಬಗ್ಗೆ ಯೋಚಿಸಲಾಯಿತು. ಅದು ಇಂದಿನ ಸುವ್ಯವಸ್ಥಿತ ಕಾರ್ಯಗಳಿಗೆ ನಾಂದಿಯಾಯಿತು.

ಮತ್ತೆ ನೆಲೆಯಾಗುತ್ತಿದ್ದಾಳೆ ಅಂಬಾ ಭವಾನಿ
ಪ್ರಶ್ನಾ ಚಿಂತನೆಯಲ್ಲಿ ಕಾಣಿಸಿಕೊಂಡಿರುವಂತೆ ಕ್ಷೇತ್ರದಲ್ಲಿ ಅಂಬಾ ಭವಾನಿಯ ಸಾನಿಧ್ಯವೂ ಇರುವುದರಿಂದ ರಾಯರ ಮಠದಲ್ಲಿ ಅಂಬಾ ಭವಾನಿಗೂ ನಿತ್ಯ ಪೂಜೆ ಸಲ್ಲಿಸಲಾಗುವುದು. ಅದಕ್ಕಾಗಿ ರಾಯರ ಬೃಂದಾವನದ ಮುಂಭಾಗದಲ್ಲಿ ಅಂಬಾ ಭವಾನಿಗೆ ಮಂಟಪ ಸ್ವರೂಪದ ಗುಡಿಯನ್ನು ನಿರ್ಮಿಸಲಾಗುತ್ತಿದ್ದು, ಅಲ್ಲಿ ಅಂಬಾ ಭವಾನಿಯ ಬೆಳ್ಳಿ ಮೂರ್ತಿಯನ್ನು ಪ್ರತಿಷ್ಟಾಪಿಸಿ ಪೂಜೆ ಸಲ್ಲಿಸಲಾಗುವುದು.

ಗರ್ಭಗುಡಿಯಲ್ಲಿ ಲಕ್ಷ್ಮಣ ಸಹಿತ ಸೀತಾರಾಮ ದೇವರು, ಮುಖ್ಯಪ್ರಾಣ ದೇವರು ಹಾಗೂ ಶ್ರೀ ಗುರು ರಾಯರ ಬೃಂದಾವನವು ಪ್ರತಿಷ್ಠೆಗೊಳ್ಳಲಿದೆ. ಬ್ರಹ್ಮಕಲಶೋತ್ಸವ ಕಾರ್ಯಕ್ರಮದಲ್ಲಿ ಪೇಜಾವರ ಮಠಾಧೀಶರಾದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ಮಂತ್ರಾಲಯ ಮಠದ ಶ್ರೀ ಸುಬುಧೇಂದ್ರ ತೀರ್ಥ ಶ್ರೀಪಾದರು ಸೇರಿದಂತೆ ಹಲವಾರು ಮಠಾಧೀಶರು, ಗಣ್ಯ ಮಹನೀಯರು ಭಾಗವಹಿಸಲಿದ್ದಾರೆ ಎಂದು ಮಠದ ಟ್ರಸ್ಟಿನ ಅಧ್ಯಕ್ಷ ಕೆ ಉದಯ ಕುಮಾರ್, ಕಾರ್ಯದರ್ಶಿ ಗೋಪಾಲ ಹೆಗ್ಡೆ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here