ಉಪ್ಪಿನಂಗಡಿ:ಶ್ರೀ ಗುರು ರಾಘವೇಂದ್ರ ಮಠದಲ್ಲಿ ಅಭಿನಂದನಾ ಸಭೆ

0

ಉಪ್ಪಿನಂಗಡಿ: ಯಾವುದೇ ಪ್ರಬಲ ಮೂಲಧನವಿಲ್ಲದಿದ್ದರೂ, ನೆಕ್ಕಿಲಾಡಿಯ ಶ್ರೀ ಗುರು ರಾಯರ ಮಠವನ್ನು ಪುನರ್ ನಿರ್ಮಿಸಲು ಮುಂದಾದ ವೇಳೆ ವ್ಯಕ್ತಗೊಂಡ ಗುರುರಾಯರ ಕೃಪೆ, ತನ್ಮೂಲಕ ಹರಿದು ಬಂದ ಭಕ್ತ ಜನತೆಯ ಸಹಕಾರ , ಸ್ವಯಂಸೇವಕರಾಗಿ ನೂರಾರು ಮಂದಿ ಐದು ದಿನಗಳ ಕಾಲ ಶ್ರಮಿಸಿದ ಫಲವಾಗಿ ಬ್ರಹ್ಮಕಲಶೋತ್ಸವವು ಅತ್ಯುತ್ತಮವಾಗಿ ನಡೆಯುವಂತಾಯಿತು ಎಂದು ಮಠದ ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ಕೆ ರಾಧಾಕೃಷ್ಣ ನಾಯ್ಕ್ ಹರ್ಷ ವ್ಯಕ್ತಪಡಿಸಿದರು.ಅವರು ಶನಿವಾರ ರಾತ್ರಿ ಶ್ರೀ ಮಠದಲ್ಲಿ ನಡೆದ ಅಭಿನಂದನಾ ಸಭೆಯಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.


ಬ್ರಹ್ಮಕಲಶೋತ್ಸವ ಸಮಿತಿಯ ಇನ್ನೋರ್ವ ಅಧ್ಯಕ್ಷ ಧನ್ಯಕುಮಾರ್ ರೈ ಮಾತನಾಡಿ, ಕನಿಷ್ಠ ಸ್ಥಳಾವಕಾಶವನ್ನು ಹೊಂದಿದ್ದ ಇಲ್ಲಿನ ಗುರು ರಾಯರ ಮಠದಲ್ಲಿ ಗರಿಷ್ಠ ಸೌಲಭ್ಯವನ್ನು ಒದಗಿಸಲು ಸಾಧ್ಯವಾಗಿದೆ ಎಂದರೆ ಅದಕ್ಕೆ ಭಕ್ತಾದಿಗಳ ಪ್ರೀತಿ ಭರಿತ ಸೇವೆಯೇ ಕಾರಣವೆಂದು ವಿಶ್ಲೇಷಿಸಿದರು.


ಬ್ರಹ್ಮಕಲಶೋತ್ಸವದ ಮತ್ತೋರ್ವ ಅಧ್ಯಕ್ಷ ವೇದಮೂರ್ತಿ ಹರೀಶ್ ಉಪಾಧ್ಯಾಯ ರವರು ಮಾತನಾಡಿ, ಗುರುರಾಯರ ಕೃಪೆ ಲಭಿಸಿರುವುದೇ ಯಶಸ್ವಿ ಬ್ರಹ್ಮಕಲಶೋತ್ಸವಕ್ಕೆ ಸಾಕ್ಷಿಯಾಗಿದೆ. ವೈಧಿಕ, ಆತಿಥ್ಯ ಸೇರಿ ಎಲ್ಲಾ ವಿಭಾಗಗಳಲ್ಲಿಯೂ ಭಕ್ತಾದಿಗಳು ಸಂತಸವನ್ನು ಅನುಭವಿಸಿ ಸಂತೃಪ್ತಿಯನ್ನು ವ್ಯಕ್ತಪಡಿಸಿದ್ದಾರೆ ಎಂದರು.


ಶ್ರೀ ಮಠದ ಕಾರ್ಯದರ್ಶಿ ಎನ್ ಗೋಪಾಲ ಹೆಗ್ಡೆ ಮಾತನಾಡಿ, ಏನು ಸಾಧಿಸಲ್ಪಟ್ಟಿದೆಯೋ ಅದು ಶ್ರೀ ಗುರುಗಳ ಕೃಪೆಯಿಂದ ಆಗಿದೆ. ಇನ್ನು ಮುಂದಕ್ಕೆ ಈ ಪರಿಸರದ ಭಕ್ತರೆಲ್ಲರೂ ಶ್ರೀ ಗುರು ಮಠದಲ್ಲಿ ನಿತ್ಯ ನಿರಂತರ ಸಂಪರ್ಕವನ್ನು ಉಳಿಸಿಕೊಂಡು ಮಠದ ಬೆಳವಣಿಗೆಯಲ್ಲಿ ಕೈ ಜೋಡಿಸಬೇಕು. ಶ್ರೀ ಮಠದಲ್ಲಿ ನಡೆಯುವ ನಿತ್ಯ ಪೂಜಾ ಕೈಂಕರ್ಯದಲ್ಲಿ ಎಲ್ಲರೂ ಭಾಗಿಗಳಾಗಬೇಕೆಂದು ವಿನಂತಿಸಿದರು.


ಮಠದ ಅಧ್ಯಕ್ಷ ಕೆ ಉದಯ ಕುಮಾರ್ ಬ್ರಹ್ಮಕಲಶೋತ್ಸವದಲ್ಲಿ ಭಾಗಿಗಳಾಗಿ ಶ್ರಮಿಸಿದ ಎಲ್ಲರನ್ನೂ ಶಾಲು ಹೊದಿಸಿ , ಸ್ಮರಣಿಕೆಯನ್ನಿತ್ತು ಅಭಿನಂದಿಸಿದರು.
ಕಾರ್ಯಕ್ರಮದಲ್ಲಿ ಕೈಲಾರ್ ರಾಜಗೋಪಾಲ ಭಟ್, ಕೆ ಗಣೇಶ್ ಭಟ್, ಕಂಗ್ವೆ ವಿಶ್ವನಾಥ ಶೆಟ್ಟಿ, ಜಯಂತ ಪುರೋಳಿ, ಐ ಚಿದಾನಂದ ನಾಯಕ್, ರವೀಂದ್ರ ದರ್ಬೆ, ಶಾಂತಾರಾಮ ಭಟ್, ಹರೀಶ್ ಭಂಡಾರಿ, ಗುಣಕರ ಅಗ್ನಾಡಿ, ದೇವಿಪ್ರಸಾದ್ ಶೆಟ್ಟಿ , ಹರೀಶ್ ಶೆಟ್ಟಿ, ವಾಮನ್ ಉಬಾರ್, ಶಶಿಧರ ಗೌಡ ಅಂಬೆಲ, ಕೆ ಜಗದೀಶ್ ಶೆಟ್ಟಿ, ಹರೀಶ್ ನಾಯಕ್, ಕೀರ್ತನ್ ಕುಮಾರ್, ಕಾಮಾಕ್ಷಿ ಜಿ ಹೆಗ್ಡೆ, ವಸುಧಾ ಭಟ್, ಹರಿಣಿ ಶೆಟ್ಟಿ, ಅನಿತಾ , ಸುಂದರ ಆದರ್ಶನಗರ, ಬಿಪಿನ್ , ಶ್ರೀನಿಧಿ ಉಪಾಧ್ಯಾಯ, ವಿನಯ್ ಕುಮಾರ್ ಮತ್ತಿತರರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here