ಮುಂಡೂರು:ಬೈಕ್‌ಗೆ ಜೀಪು ಡಿಕ್ಕಿಯಾಗಿ ಸವಾರ ಮೃತಪಟ್ಟ ಪ್ರಕರಣ-ಜೀಪು ಚಾಲಕನ ವಿರುದ್ಧ ಪ್ರಕರಣ ದಾಖಲು

0

ಪುತ್ತೂರು:ಮುಂಡೂರು ಗ್ರಾಮದ ಕಾಳಿಂಗಹಿತ್ಲು ಎಂಬಲ್ಲಿ ಏ.17ರಂದು ರಾತ್ರಿ ಜೀಪೊಂದು ಬೈಕ್‌ಗೆ ಡಿಕ್ಕಿಯಾಗಿ ಬೈಕ್ ಸವಾರ ಮೃತಪಟ್ಟು,ಮಕ್ಕಳಿಬ್ಬರು ತೀವ್ರ ಗಾಯಗೊಂಡ ಘಟನೆಗೆ ಸಂಬಂಧಿಸಿ ಜೀಪು ಚಾಲಕನ ವಿರುದ್ಧ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮುಂಡೂರು ಗ್ರಾಮದ ಕಡ್ಯ ದಿ.ಬಾಳಪ್ಪ ಗೌಡರ ಪುತ್ರ, ಮಂಗಳೂರಿನಲ್ಲಿ ಲಾರಿ ಚಾಲಕರಾಗಿದ್ದ ಲೋಕೇಶ್ ಗೌಡ(46ವ)ರವರು ಚಲಾಯಿಸುತ್ತಿದ್ದ ಬೈಕ್‌ಗೆ ವಿರುದ್ಧ ದಿಕ್ಕಿನಿಂದ ಕಿಶೋರ್ ಎಂಬವರು ಚಲಾಯಿಸುತ್ತಿದ್ದ ಜೀಪು ಡಿಕ್ಕಿಯಾಗಿತ್ತು.ಡಿಕ್ಕಿಯ ರಭಸಕ್ಕೆ ಲೋಕೇಶ್ ಗೌಡ ಸ್ಥಳದಲ್ಲೇ ಮೃತಪಟ್ಟಿದ್ದು ಅವರ ಇಬ್ಬರು ಮಕ್ಕಳಾದ ದೀಪ್ತಿ(8ವ) ಮತ್ತು ಗಗನ್(4ವ)ರವರು ಗಂಭೀರ ಗಾಯಗೊಂಡಿದ್ದರು.ಗಾಯಾಳು ಮಕ್ಕಳನ್ನು ಮಂಗಳೂರು ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿತ್ತು ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.ಈ ಘಟನೆಗೆ ಸಂಬಂಧಿಸಿ ಮುಂಡೂರು ಗ್ರಾಮದ ಕಡ್ಯ ವೀರಪ್ಪ ಗೌಡರ ಮಗ ಶಿವಪ್ಪ ಗೌಡ ಎಂಬವರು ಪೊಲೀಸರಿಗೆ ದೂರು ನೀಡಿದ್ದಾರೆ.

ಏ.17ರಂದು ಕಾಣಿಯೂರು-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯಲ್ಲಿ ಸುಬ್ರಹ್ಮಣ್ಯ ಕಡೆಯಿಂದ ಪುತ್ತೂರು ಕಡೆಗೆ ಜೀಪನ್ನು(ಕೆಎ 19-ವಿ:7478) ಅದರ ಚಾಲಕ ಕಿಶೋರ್‌ರವರು ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ತೀರಾ ಬಲಬದಿಗೆ ಚಲಾಯಿಸಿಕೊಂಡು ಬಂದು, ಪುತ್ತೂರು ಕಡೆಯಿಂದ ಸುಬ್ರಹ್ಮಣ್ಯ ಕಡೆಗೆ ಮಕ್ಕಳಾದ ದೀಪ್ತಿ ಮತ್ತು ಗಗನ್‌ರವರನ್ನು ಸಹ ಸವಾರರನ್ನಾಗಿ ಕುಳ್ಳಿರಿಸಿಕೊಂಡು ಲೋಕೇಶ್‌ರವರು ಸವಾರಿ ಮಾಡಿಕೊಂಡು ಹೋಗುತ್ತಿದ್ದ ಮೋಟಾರ್ ಸೈಕಲ್(ಕೆಎ 21-ಎಂ.1537)ಗೆ ರಭಸವಾಗಿ ಡಿಕ್ಕಿ ಹೊಡೆದು ಮೋಟಾರ್ ಸೈಕಲನ್ನು ದೂಡಿಕೊಂಡು ಹೋಗಿ ರಸ್ತೆಯ ಬದಿಯ ಚರಂಡಿಗೆ ಬೀಳಿಸಿ ಅಪಘಾತಪಡಿಸಿದ ಪರಿಣಾಮ ಮೋಟಾರ್ ಸೈಕಲ್ ಸವಾರ ಲೋಕೇಶ್ ಮತ್ತು ಸಹ ಸವಾರರಾದ ದೀಪ್ತಿ ಹಾಗೂ ಗಗನ್‌ರವರಿಗೆ ಗಂಭೀರ ಸ್ವರೂಪದ ಗಾಯ ನೋವುಗಳಾದವರನ್ನು ಸಾರ್ವಜನಿಕರು ಪುತ್ತೂರು ಸಾರ್ವಜನಿಕ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಅಲ್ಲಿನ ವೈದ್ಯರು ಮೋಟಾರ್ ಸೈಕಲ್ ಸವಾರ ಲೋಕೇಶ್ ರವರನ್ನು ಪರೀಕ್ಷಿಸಿ ಆಸ್ಪತ್ರೆಗೆ ಸಾಗಿಸುವಾಗಲೇ ಮೃತಪಟ್ಟಿರುವುದಾಗಿ ತಿಳಿಸಿದ್ದರು. ಮಕ್ಕಳಾದ ದೀಪ್ತಿ ಮತ್ತು ಗಗನ್‌ರವರನ್ನು ಮಂಗಳೂರು ಕೆಎಂಸಿ ಆಸ್ಪತ್ರೆಗೆ ಚಿಕಿತ್ಸೆ ಬಗ್ಗೆ ದಾಖಲಿಸಿರುವುದಾಗಿದೆ ಎಂದು ದೂರಿನಲ್ಲಿ ಶಿವಪ್ಪ ಗೌಡರು ತಿಳಿಸಿದ್ದು,ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ(ಅ.ಕ್ರ52/24)ಕಲಂ 279, 337, 304(ಎ) ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.ಗಾಯಾಳು ದೀಪ್ತಿ ಭಕ್ತಕೋಡಿ ಶಾಲೆಯ ಮೂರನೇ ತರಗತಿ ವಿದ್ಯಾರ್ಥಿನಿಯಾಗಿದ್ದು ಬಾಲಕ ಗಗನ್ ಸರಸ್ವತಿ ವಿದ್ಯಾಮಂದಿರದಲ್ಲಿ ಎಲ್‌ಕೆಜಿ ಓದುತ್ತಿದ್ದರೆಂದು ತಿಳಿದು ಬಂದಿದೆ.

LEAVE A REPLY

Please enter your comment!
Please enter your name here