ಕಣಚೂರು ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿನಿ ಡಾ. ಮಧುರಾ ಕೆ.ಐ ರಾಜ್ಯಕ್ಕೆ ಪ್ರಥಮ ರ‍್ಯಾಂಕ್

0

ಏ. 20: ಕಣಚೂರ್ ಇನ್ ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ನ ಮೂರನೇಯ ಪದವಿ ಪ್ರದಾನ ಸಮಾರಂಭ – ಡಾ. ಹಾಜಿ ಯು.ಕೆ. ಮೋನು ದತ್ತಿನಿಧಿ ಪ್ರಶಸ್ತಿ ವಿತರಣೆ
ಪತ್ರಿಕಾಗೋಷ್ಠಿಯಲ್ಲಿ ಸಂಸ್ಥೆಯ ನಿರ್ದೇಶಕ ಅಬ್ದುಲ್ ರಹಿಮಾನ್ ರಿಂದ ಮಾಹಿತಿ

ವಿಟ್ಲ: ಬೆಂಗಳೂರಿನ ರಾಜೀವ್ ಗಾಂಧೀ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ಅಧೀನದ 50 ವೈದ್ಯಕೀಯ ಕಾಲೇಜುಗಳ ಪೈಕಿ 2018ರ ಬ್ಯಾಚಿನಲ್ಲಿ ಕಣಚೂರು ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿನಿ ಡಾ. ಮಧುರಾ ಕೆ.ಐ ರಾಜ್ಯಕ್ಕೆ ಪ್ರಥಮ ರ‍್ಯಾಂಕ್ ಪಡೆದುಕೊಂಡಿದ್ದು, ಕಾಲೇಜು ಆರಂಭದ ಮೂರು ವರ್ಷದ ಸಣ್ಣ ಅವಧಿಯಲ್ಲಿ ವಿದ್ಯಾರ್ಥಿನಿಯ ಮಹತ್ತರ ಸಾಧನೆಯಾಗಿದೆ. ಈ ನಿಟ್ಟಿನಲ್ಲಿ ಏ.20 ರಂದು ನಾಟೆಕಲ್ ಕಣಚೂರು ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಇಲ್ಲಿ ನಡೆಯಲಿರುವ 3ನೇ ಘಟಿಕೋತ್ಸವ ಸಮಾರಂಭದಲ್ಲಿ ಡಾ. ಹಾಜಿ ಯು.ಕೆ. ಮೋನು ದತ್ತಿನಿಧಿ ಪ್ರಶಸ್ತಿ ಹೆಸರಿನಲ್ಲಿ ಎಂಟು ಗ್ರಾಂ ತೂಕವುಳ್ಳ ನಿಜವಾದ ಚಿನ್ನದ ಪದಕ ನೀಡುವ ಸಂಪ್ರದಾಯಕ್ಕೆ ನಾಂದಿ ಹಾಡಲಿದ್ದೇವೆ ಎಂದು ಕಣಚೂರು ಆರೋಗ್ಯ ಮತ್ತು ವೈದ್ಯಕೀಯ ವಿಜ್ಞಾನ ಸಂಸ್ಥೆಗಳ ನಿರ್ದೇಶಕ ಅಬ್ದುಲ್ ರಹಿಮಾನ್ ಹೇಳಿದರು.

ದೇರಳಕಟ್ಟೆಯ ಕಣಚೂರು ಮೆಡಿಕಲ್ ಕಾಲೇಜಿನಲ್ಲಿ ಎ.18ರಂದಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಏ. 20ರಂದು ಕಣಚೂರು ಇನ್ ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ನ ಪದವಿ ಪ್ರದಾನ ಸಮಾರಂಭ ಸಂಸ್ಥೆಯ ಕ್ರೀಡಾಂಗಣದಲ್ಲಿ ನಡೆಯಲಿದ್ದು ಮಾಹೆಯ ಸಹ ಕುಲಾಧಿಪತಿ ಪ್ರೊ. ಡಾ.ಎಚ್.ಎಸ್. ಬಲ್ಲಾಳ್ ಅವರು ಪದವೀಧರರಿಗೆ ಪದವಿ ಪ್ರದಾನಗೈದು, ರ‍್ಯಾಂಕ್ ವಿಜೇತ ವಿದ್ಯಾರ್ಥಿಗಳನ್ನು ಅಭಿನಂದಿಸಿ ಪದವಿ ಪ್ರದಾನ ಭಾಷಣ ಮಾಡಲಿರುವರು. ಸಂಸ್ಥೆಯ ಚೇರ್ ಮೆನ್ ಡಾ. ಹಾಜಿ ಯು.ಕೆ. ಮೋನು ಅವರು ಅಧ್ಯಕ್ಷತೆ ವಹಿಸಲಿದ್ದು ರಾಜೀವ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವದ್ಯಾಲಯದ ಸಿಂಡಿಕೇಟ್ ಸದಸ್ಯ ಡಾ. ಯು.ಟಿ. ಇಫ್ತಿಕರ್ ಆಲಿ, ಡೀನ್ ಡಾ. ರತ್ನಾಕರ್, ಸಂಸ್ಥೆಯ ನಿರ್ದೇಶಕರುಗಳು, ಟ್ರಸ್ಟಿಗಳು ಭಾಗವಹಿಸಲಿದ್ದಾರೆ ಎಂದರು.


ಕಣಚೂರು ಇನ್ ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ನ ಡೀನ್ ಡಾ. ಯು.ಪಿ. ರತ್ನಾಕರ್ ಮಾತನಾಡಿ ಇದೊಂದು ಅತ್ಯಂತ ಅಪರೂಪದ ಸಾಧನೆಯಾಗಿದ್ದು 2018ರ ಬ್ಯಾಚಿನ ವಿದ್ಯಾರ್ಥಿಗಳು ಅಮೋಘ ಸಾಧನೆ 99.25ಶೇ. ಫಲಿತಾಂಶದ ಜೊತೆಗೆ 7 ವಿದ್ಯಾರ್ಥಿಗಳು 18 ರ‍್ಯಾಂಕ್ ಗಳನ್ನು ವಿವಿಧ ವಿಭಾಗಗಳಲ್ಲಿ ಪಡೆದುಕೊಂಡಿದ್ದಾರೆ. ಡಾ. ಮಧುರಾ ಕೆ.ಐ ಒಟ್ಟು 10 ರ‍್ಯಾಂಕ್ ಪಡೆದಿದ್ದು ಚಿನ್ನದ ಪದಕಕ್ಕೆ ಪ್ರಾಪ್ತರಾಗಿದ್ದಾರೆ. ಈ ಸಾಲಿನಲ್ಲಿ 100ಶೇ. ಫಲಿತಾಂಶ ದಾಖಲಾಗಿದೆ ಎಂದರು.


ಕಣಚೂರು ಇನ್ಸ್ಟಿಟ್ಯೂಟ್ ಆಫ್ ಅಲೈಡ್ ಹೆಲ್ತ್ ಸೈಯನ್ಸ್ ಪ್ರಾಂಶುಪಾಲೆ ಡಾ.ಶಮಿಮಾ, ಫಿಸಿಯೋಥೆರಪಿ ವಿಭಾಗದ ಪ್ರಾಂಶುಪಾಲ ಪ್ರೊ.ಮಹಮ್ಮದ್ ಸುಹೈಲ್, ನರ್ಸಿಂಗ್ ವಿಭಾಗದ ಪ್ರಾಂಶುಪಾಲೆ ಡಾ.ಮೋನಿ ಸಲ್ದಾನ, ಮುಖ್ಯ ವೈದ್ಯಕೀಯ ಅಧೀಕ್ಷಕ ಡಾ.ರೋಹನ್ ಮೋನಿಸ್, ವೈದ್ಯಕೀಯ ಅಧೀಕ್ಷಕ ಡಾ.ಹರೀಶ್ ಶೆಟ್ಟಿ,
ಚೀಫ್ ಮೆಡಿಕಲ್ ಸುಪರಿಂಡೆಂಟ್ ಡಾ. ರೋಹನ್ ಮೋನಿಸ್ ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here