ವಿಟ್ಲ: ಪ.ಪಂ 2ನೇ ವಾರ್ಡ್ ನಲ್ಲಿ ನೀರಿಗಾಗಿ ಪರದಾಟ-ಕೊಳವೆ ಇದ್ದರೂ ಪಂಪ್ ಅಳವಡಿಸದ ಪಂಚಾಯತ್-ಮತದಾನ ಬಹಿಷ್ಕಾರಕ್ಕೆ ಸಿದ್ಧತೆ

0

ವಿಟ್ಲ: ವಿಟ್ಲ ಪಟ್ಟಣ ಪಂಚಾಯಿತಿ ವ್ಯಾಪ್ತಿಯ 2ನೇ ವಾರ್ಡ್ ಪೊನ್ನೋಟ್ಟು ಪರಿಸರದಲ್ಲಿ ಕುಡಿಯುವ ನೀರಿಗಾಗಿ ಜನರು ಪರದಾಟ ನಡೆಸುತ್ತಿದ್ದು, ಸಂತೆ ರಸ್ತೆಯಲ್ಲಿ ಕೊಳವೆ ಬಾವಿ ಇದ್ದರೂ ಇದುವರೆಗೂ ಪಂಚಾಯತ್ ಪಂಪ್ ಅಳವಡಿಸದೇ ನಿರ್ಲಕ್ಷ್ಯ ವಹಿಸಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

2ನೇ ವಾರ್ಡ್ ಪೊನ್ನೋಟ್ಟು ಪರಿಸರದಲ್ಲಿ ನೂರಕ್ಕೂ ಅಧಿಕ ಮನೆಗಳಿವೆ. ಈ ಭಾಗಕ್ಕೆ ಕಲ್ಲಕಟ್ಟದಲ್ಲಿರುವ ಬಾವಿಯಿಂದ ನೀರು ಸರಬರಾಜು ಮಾಡಲಾಗುತ್ತಿತ್ತು. ಇದೀಗ ಬಾವಿ ಬತ್ತಿ ಹೋಗಿದೆ. ಜನರು ನೀರಿಗಾಗಿ ಪರದಾಟ ನಡೆಸುವಂತಾಗಿದೆ.

ಸಾರ್ವಜನಿಕರ ಮನವಿ ಮೇರೆಗೆ ವಿಟ್ಲ ಸಂತೆ ರಸ್ತೆಯಲ್ಲಿ ಹಳೆಯ ಐಟಿಐ ಬಳಿ ಇರುವ ಹಳೆಯ ಕೊಳವೆ ಬಾವಿಯನ್ನು ದುರಸ್ತಿಗೊಳಿಸುವಂತೆ ಮನವಿ ಮಾಡಿದ ಬಳಿಕ ಅದನ್ನು ದುರಸ್ತಿಗೊಳಿಸಲಾಗಿತ್ತು. ಆದರೆ ಇದುವರೆಗೂ ಅದಕ್ಕೆ ಪಂಪ್ ಅಳವಡಿಸಿಲ್ಲ. ಈ ಬಗ್ಗೆ ಹಲವು ಬಾರಿ ಗ್ರಾಮಸ್ಥರು ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಪಟ್ಟಣ ಪಂಚಾಯಿತಿ ಈ ಭಾಗದ ಸದಸ್ಯರಲ್ಲಿ ವಿಚಾರಿಸಿದಾಗ ನಮ್ಮಲ್ಲಿ ಆಡಳಿತವಿಲ್ಲ ಎಂದು ಹೇಳುತ್ತಿದ್ದಾರೆ. ಮುಖ್ಯಾಧಿಕಾರಿಗಳ ಗಮನಕ್ಕೆ ತಂದರೂ ಅವರು ಸ್ಥಳಕ್ಕೆ ಬಂದು ವೀಕ್ಷಿಸಿ ಹೋಗಿದ್ದಾರೆ ಹೊರತು ಯಾವುದೇ ಕ್ರಮ ಕೈಗೊಂಡಿಲ್ಲ. ಇದೀಗ ಈ ಭಾಗದ ಜನರು ಮತದಾನ ಬಹಿಷ್ಕಾರಿಸಲಾಗುವುದು ಎಂದು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here