ರಾಜ್ಯದ ಪಂಚ ಗ್ಯಾರಂಟಿಯಂತೆ ಕೇಂದ್ರದಲ್ಲಿಯೂ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನೂರಕ್ಕೆ ನೂರು ನ್ಯಾಯ ಪತ್ರ ಜಾರಿ – ಅಮಳ ರಾಮಚಂದ್ರ
ಪುತ್ತೂರು: 2024 ಲೋಕಸಭಾ ಚುನಾವಣೆಗೆ ಬಿಜೆಪಿ ವಿವಿಧ ಸಮುದಾಯಗಳ ಮಧ್ಯೆ ಬೆಂಕಿ ಹಚ್ಚಿ, ಅದರ ಕಾವಿನಿಂದ ಚುನಾವಣೆಗಳನ್ನು ಗೆಲ್ಲುವ ಕೋಮು ಧ್ರುವೀಕರಣ ರಾಜಕಾರಣ ಮಾಡುತ್ತಿದೆ. ಕಾಂಗ್ರೆಸ್ ದೇಶದ ಜನರ ಅಭಿವೃದ್ದಿಯನ್ನೇ ಮುಂದಿರಿಸಿ ’ ನ್ಯಾಯ ಪತ್ರ’ ಅನ್ನುವ ಪ್ರಣಾಳಿಕೆ ಬಿಡುಗಡೆ ಮಾಡಿದೆ. ಕೇಂದ್ರದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಈ 5 ಗ್ಯಾರೆಂಟಿಗಳನ್ನು ಜಾರಿಗೊಳಿಸಲಾಗುವುದು ಎಂದು ಕೆಪಿಸಿಸಿ ವಕ್ತಾರ ಅಮಳ ರಾಮಚಂದ್ರ ಅವರು ಪತ್ರಿಕಾಗೋಷ್ಟಿಯಲ್ಲಿ ಹೇಳಿದ್ದಾರೆ.
ಪ್ರಧಾನ ಮಂತ್ರಿ ಮೋದಿ ನೇತೃತ್ವದ ಎನ್ ಡಿ ಎ ಆಡಳಿತಾವಧಿಯಲ್ಲಿ ದೇಶದ ಕೆಲವೇ ಕೆಲವು ಕೈಗಾರಿಕೋದ್ಯಮಿಗಳನ್ನು ಬಿಟ್ಟು ಉಳಿದ ಈ ದೇಶದ ಎಲ್ಲಾ ಜನಸಾಮಾನ್ಯರನ್ನು ನಿರ್ಲಕ್ಷಿಸಿ, ದೇಶದ ಜನ ಸಾಮಾಜಿಕವಾಗಿ, ಆರ್ಥಿಕವಾಗಿ ಮತ್ತು ಔದ್ಯೋಗಿಕವಾಗಿ ತೊಂದರೆಗಳನ್ನು ಅನುಭವಿಸಿದ್ದರಿಂದ ಆ ತೊಂದರೆಗಳನ್ನು ನಿವಾರಿಸುವ ದೃಷ್ಟಿಯಿಂದ ಈ ಪ್ರಣಾಳಿಕೆಯನ್ನು ಬಿಡುಗಡೆಗೊಳಿಸಲಾಗಿದೆ. ಸರ್ವೇ ಜನಾಃ ಸುಖಿನೋ ಭವಂತು ಎಂಬ ಹಿಂದೂ ಧರ್ಮದ ಜಾತ್ಯತೀತ ಪರಿಕಲ್ಪನೆಯನ್ನು ತಿರುಚಿ, ಹಿಂದುತ್ವವನ್ನು ಒಂದು ಕೋಮುವಾದದ ಅಸ್ತ್ರವಾಗಿ ಬಳಸಿಕೊಂಡು, ಈ ದೇಶದ ವಿವಿಧ ಸಮುದಾಯಗಳ ಮಧ್ಯೆ ಬೆಂಕಿ ಹಚ್ಚಿ, ಅದರ ಕಾವಿನಿಂದ ಚುನಾವಣೆಗಳು ಗೆಲ್ಲುವ ಕೋಮು ಧ್ರುವೀಕರಣದ ವಿನಾಶಕಾರಿ ರಾಜಕಾರಣವನ್ನು ಬದಿಗಿ ಸರಿಸಿ, ಇಡೀ ದೇಶವನ್ನು ಒಂದು ಸರ್ವ ಜನಾಂಗದ ಶಾಂತಿಯ ತೋಟವನ್ನಾಗಿ ಪುನರ್ನಿರ್ಮಿಸುವ ಉದ್ದೇಶದಿಂದ ಈ ಚುನಾವಣೆಯನ್ನು ಎದುರಿಸಲಾಗುತ್ತಿದೆ.
ಈ ಸರಕಾದ ಅವಧಿಯಲ್ಲಿ ನಿರುದ್ಯೋಗ, ಬೆಲೆಯೇರಿಕೆ, ಹಣದುಬ್ಬರ, ಜನಾಂಗೀಯತೆ, ಕೋಮು ಹಿಂಸಾಚಾರ, ಸಂಪತ್ತಿನ ಅಸಮಾನಿತ ಹಂಚಿಕೆ, ಭ್ರಷ್ಟಾಚಾರ, ಪ್ರಜಾಪ್ರಭುತ್ವದ ಕತ್ತು ಹಿಚುಕಿದ ಆಪರೇಶನ್ ಕಮಲ, ವಿಪಕ್ಷಗಳ ಖರೀದಿ, ಪತ್ರಿಕಾ ಸ್ವಾತಂತ್ರ್ಯದ ಹರಣ, ಸಂವಿಧಾನ ವಿರೋಧೀ ನಡೆ, ಚೈನಾ ಆಕ್ರಮಣ, ಕೈಗಾರಿಕೋಧ್ಯಮಿಗಳ ವಿಜ್ರಂಭಣೆ, ಸರಕಾರೀ ಸೊತ್ತುಗಳ ಮಾರಾಟ, ಧ್ವೇಷರಾಜಕಾರಣ ಮೊದಲಾದ ಜನ ವಿರೋಧೀ, ವಿನಾಶಕಾರೀ ರಾಜಕಾರಣ ಎಲ್ಲೆ ಮೀರಿದ್ದು, ಹಳಿತಪ್ಪಿದ ದೇಶದ ಸಾಮಾಜಿಕ, ಆರ್ಥಿಕ, ರಾಜಕೀಯ ಮತ್ತು ಧಾರ್ಮಿಕ ವ್ಯವಸ್ಥೆಯನ್ನು ಸರಿಪಡಿಸುವ ಉದ್ದೇಶದಿಂದಲೇ ಈ ಪ್ರಣಾಳಿಕೆನ್ನು ನೀಡಲಾಗಿದೆ. ಈ “ನ್ಯಾಯ ಪತ್ರ” ದಲ್ಲಿ ನ್ಯಾಯಸೌಧದ ಪಂಚಸ್ಥಂಭಗಳೆಂದು ಪರಿಗಣಿಸಲಾದ ಐದು ಗ್ಯಾರಂಟಿಗಳನ್ನು ಈ ಪ್ರಣಾಳಿಕೆಯಲ್ಲಿ ಕಟಿಬದ್ಧತೆಯಿಂದ ಸೇರಿಸಲಾಗಿದೆ. ಕರ್ನಾಟಕದಲ್ಲಿ ಕಳೆದ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷ ನೀಡಿ ಯಶಸ್ವಿಯಾಗಿ ಜಾರಿಗೊಳಿಸಿದ 5 ಗ್ಯಾರೆಂಟಿಗಳ ಮಾದರಿಯಲ್ಲಿ, ಇಡೀ ದೇಶಕ್ಕೆ ಅನ್ವಯವಾಗುವಂತೆ ಮತ್ತೆ 5 ಗ್ಯಾರಂಟಿಗಳನ್ನು ಪ್ರಕಟಿಸಿ, ಅವುಗಳ ಅನುಷ್ಠಾನಕ್ಕೆ ಬದ್ಧತೆಯನ್ನು ಪ್ರಕಟಿಸಲಾಗಿದೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ದೇಶದ ಮತದಾರರು ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಿ ಅಧಿಕಾರಕ್ಕೆ ತಂದರೆ, ಕರ್ನಾಟಕದ ಕಾಂಗ್ರೆಸ್ ಸರಕಾರದ ಮಾದರಿಯಲ್ಲಿ ಇಡೀ ದೇಶದಲ್ಲಿ ಈ ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಕ್ಕೆ ತರಲಾಗುವುದು ಎಂದರು.
ಕಾಂಗ್ರೆಸ್ಸಿನ ಐದು ನ್ಯಾಯದ ಗ್ಯಾರೆಂಟೀ ಯೋಜನೆಗಳು :
ನಾರಿ ನ್ಯಾಯ, ಯುವ ನ್ಯಾಯ, ಕಿಸಾನ್ ನ್ಯಾಯ, ಶ್ರಮಿಕ್ ನ್ಯಾಯ, ಹಿಸ್ಸೇದಾರೀ ನ್ಯಾಯಗಳೆಂಬ ಐದು ಗ್ಯಾರಂಟಿಗಳನ್ನು ಕಾಂಗ್ರೆಸ್ ಪಕ್ಷ ದೇಶದ ಜನರಿಗೆ ನೀಡುತ್ತಿದೆ. ನಾರೀ ನ್ಯಾಯದ ಮೂಲಕ ದೇಶದ ಎಲ್ಲಾ ಸ್ತ್ರೀಯರಿಗೆ ನ್ಯಾಯವನ್ನು ನೀಡುವುದು, ಯುವ ನ್ಯಾಯದ ಮೂಲಕ ಯುವ ಜನಾಂಗಕ್ಕೆ ನ್ಯಾಯವನ್ನು ಒದಗಿಸುವುದು, ಕಿಸಾನ್ ನ್ಯಾಯದ ಮೂಲಕ ದೇಶದ ರೈತರಿಗೆ ನ್ಯಾಯವನ್ನು ನೀಡುವುದು, ಶ್ರಮಿಕ್ ನ್ಯಾಯದ ಮೂಲಕ ದೇಶದ ಎಲ್ಲಾ ಕಾರ್ಮಿಕರಿಗೆ ನ್ಯಾಯವನ್ನು ನೀಡುವುದು ಮತ್ತು ಹಿಸ್ಸೇದಾರೀ ನ್ಯಾಯದ ಮೂಲಕ ದೇಶದ ಎಲ್ಲಾ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಹಿಂದುಳಿದ ವರ್ಗಗಳಿಗೆ ನ್ಯಾಯವನ್ನು ಒದಗಿಸುವುದು ಈ ಐದು ಗ್ಯಾರಂಟಿ ಯೋಜನೆಗಳ ಉದ್ದೇಶವಾಗಿದೆ ಎಂದರು.
ಅಗ್ನಿಪತ್ ಯೋಜನೆ ರದ್ದು:
ಸೇನೆಯನ್ನು ಸೇರಿ ದೇಶ ಸೇವೆಯನ್ನು ಮಾಡಲು ಇಚ್ಚಿಸುವ ಯುವಕರನ್ನು ವಂಚಿಸುತ್ತಿರುವ ಅಗ್ನಿಪತ್ ಯೋಜನೆಯನ್ನು ರದ್ದುಗೊಳಿಸಿ ಸೇನೆ ನೇಮಕಾತಿಗಳನ್ನು ಈ ಹಿಂದಿನಂತೆಯೇ ಮಾಮೂಲಿ ಕ್ರಮದಲ್ಲಿ ನಡೆಸಲಾಗುವುದು. ಅಗ್ನಿಪತ್ ಯೋಜನೆಯಲ್ಲಿ ಆಯ್ಕೆಯಾದ ಸೈನಿಕರಿಗೆ ಕೇವಲ ನಾಲ್ಕು ವರ್ಷ ಮಾತ್ರ ಸೈನ್ಯದಲ್ಲಿ ಸೇವೆ ಸಲ್ಲಿಸುವ ಅವಕಾಶವಿದ್ದು ನಾಲ್ಕು ವರ್ಷದ ನಂತರ ಇವರು ಸೇನೆಯಿಂದ ನಿವೃತ್ತರಾಗಿ, ಮತ್ತೆ ಪುನಃ ನಿರುದ್ಯೋಗಿಗಳಾಗುವ ಪದ್ಧತಿಯನ್ನು ಕೈ ಬಿಟ್ಟು ಯುವಕರನ್ನು ಸಶಕ್ತಿಕರಣ ಗೊಳಿಸಲಾಗುವುದು ಎಂದು ಅಮಳ ರಾಮಚಂದ್ರ ಹೇಳಿದರು. ದೇಶದ ಜನ ಈ ಚುನಾವಣೆಯಲ್ಲಿ ಇಂಡಿಯಾ ಒಕ್ಕೂಟವನ್ನು ಬೆಂಬಲಿಸಿ, ಮೋದಿ ನೇತೃತ್ವದ ಎನ್‌ಡಿಎ ಸರಕಾರವನ್ನು ತಿರಸ್ಕರಿಸಿ, ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತಂದು, ಈ ಐದು ಗ್ಯಾರಂಟಿಗಳ ಅನುಷ್ಠಾನಕ್ಕೆ ಅವಕಾಶವನ್ನು ನೀಡಬೇಕೆಂದು ತಮ್ಮ ಮೂಲಕ ವಿನಂತಿ ಮಾಡುತ್ತಿದ್ದೇವೆ ಎಂದು ಅಮಳ ರಾಮಚಂದ್ರ ಹೇಳಿದರು. ಪತ್ರಿಕಾಗೋಷ್ಟಿಯಲ್ಲಿ ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ರೋಶನ್ ರೈ ಬನ್ನೂರು, ನಗರ ಕಾಂಗ್ರೆಸ್ ಕಾರ್ಯದರ್ಶಿ ವಾಲ್ಟರ್ ಸಿಕ್ವೇರಾ, ಕಾಂಗ್ರೆಸ್ ಸಾಮಾಜಿಕ ಜಾಲತಾಣದ ಸಂಯೋಜಕ ಸಿದ್ದಿಕ್ ಸುಲ್ತಾನ್ ಉಪಸ್ಥಿತರಿದ್ದರು.