ಲೋಕಸಭಾ ಚುನಾವಣೆಗೆ ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 2,16,675 ಮತದಾರರು-ಸಹಾಯಕ ಚುನಾವಣಾಧಿಕಾರಿ ಜುಬಿನ್ ಮೊಹಪಾತ್ರ

0

ಪುತ್ತೂರು: ಲೋಕಸಭೆ ಚುನಾವಣೆ 2024ಕ್ಕೆ ಸಂಬಂಧಿಸಿ ಎ.5ರ ಅಂತ್ಯಕ್ಕೆ ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ 2,776 ಪೋಸ್ಟಲ್ ಓಟರ‍್ಸ್ ಸೇರಿದಂತೆ 2,16,675 ಮತದಾರರಿದ್ದಾರೆ. ಅದರಲ್ಲಿ ಪುರುಷರು 1,06,418 ಮತ್ತು ಮಹಿಳೆಯರು 1,10,257 ಮತದಾರರಿದ್ದಾರೆ. ಎ.26ರಂದು ಮತದಾನ ನಡೆಯಲಿದೆ. ಕಾನೂನು ಸುವ್ಯವಸ್ಥೆ ಕಾಪಾಡುವ ಹಾಗೂ ಮುಕ್ತ ಮತ್ತು ನ್ಯಾಯೋಜಿತ ಮತದಾನಕ್ಕೆ ಅವಕಾಶ ಕಲ್ಪಿಸುವ ಸಲುವಾಗಿ ಏ.24ರ ಸಂಜೆ 6 ಗಂಟೆಯಿಂದ ಏ.26ರ ರಾತ್ರಿ 10 ಗಂಟೆಯವರೆಗೆ ಪ್ರತಿಬಂಧಕಾಜ್ಞೆಯನ್ನು ಜಾರಿಗೊಳಿಸಲಾಗಿದೆ ಎಂದು ಸಹಾಯಕ ಚುನಾವಣಾಧಿಕಾರಿ ಜುಬಿನ್ ಮೊಹಪಾತ್ರ ಅವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.

ವಿಧಾನಸಭಾ ಕ್ಷೇತ್ರದ ಎಲ್ಲಾ ಮತಗಟ್ಟೆಗಳಲ್ಲಿ ಮೂಲ ಸೌಕರ್ಯ ಒದಗಿಸಲಾಗಿದೆ. ಮತಗಟ್ಟೆಗಳಲ್ಲಿ ಮತದಾರರ ಸಹಾಯ ಕೇಂದ್ರ ಸೌಲಭ್ಯಕ್ಕಾಗಿ ಪ್ರತಿ ಮತಗಟ್ಟೆಗಳಲ್ಲಿ ಮತದಾರರ ಕ್ರಮ ಸಂಖ್ಯೆ ಮತ್ತು ಮತಗಟ್ಟೆಗಳನ್ನು ಗುರುತಿಸಲು ಸಹಾಯವಾಗುವಂತೆ ಬಿ ಎಲ್ ಓ ಅವರನ್ನು ಒಳಗೊಂಡ ಮತದಾರರ ಸಹಾಯ ಕೇಂದ್ರ ತೆರೆಯಲಾಗಿದೆ. ಬಿಸಿಲಿನ ತಾಪ ಇರುವ ಹಿನ್ನೆಲೆಯಲ್ಲಿ ಮತಗಟ್ಟೆಯಲ್ಲಿ ಕುಡಿಯುವ ನೀರಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. 20 ಲೀಟರ್‌ನ 2 ಕ್ಯಾನ್ ಮತಗಟ್ಟೆಯಲ್ಲಿ ಇರಿಸಲಾಗಿದೆ. ಮತಗಟ್ಟೆಗೆ ತೆರಳುವ ತಂಡಕ್ಕೆ 12 ಲೀಟರ್ ವಾಟರ್ ಬಾಟಲ್ ಜಿಲ್ಲಾ ಚುನಾವಣಾ ಆಯೋಗದಿಂದ ನೀಡಲಾಗುತ್ತಿದೆ. ಮೆಡಿಕಲ್ ಕಿಟ್ ಮತ್ತು ವಿಶ್ರಾಂತಿ ಕೊಠಡಿ ನೀಡಲಾಗಿದೆ ಎಂದು ಅವರು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ತಹಸೀಲ್ದಾರ್ ಕುಂಞ ಅಹಮ್ಮದ್, ಸ್ವೀಪ್ ಸಮಿತಿ ಅಧ್ಯಕ್ಷ ಹನಮ ರೆಡ್ಡಿ ಇಬ್ರಾಹಿಂಪುರ, ಉಪತಹಸೀಲ್ದಾರ್ ಸುಲೋಚನಾ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here