ಮೇ.1 ನೆಲ್ಲಿಗುಡ್ಡೆಯಲ್ಲಿ ಪಿಂಗಾರ ತೋಟಗಾರಿಕಾ ರೈತ ಉತ್ಪಾದಕರ ಕಂಪೆನಿ ನಿಯಮಿತದ ಆಡಳಿತ ಕಚೇರಿಯ ನೂತನ ಕಟ್ಟಡದ ಉದ್ಘಾಟನೆ

0

ವಿಟ್ಲ: ಪಿಂಗಾರ ತೋಟಗಾರಿಕಾ ರೈತ ಉತ್ಪಾದಕರ ಕಂಪೆನಿ ನಿಯಮಿತ ಇದರ ಆಡಳಿತ ಕಚೇರಿ ನೂತನ ಕಟ್ಟಡದ ಉದ್ಘಾಟನೆಯು ಮೇ.1ರಂದು ಬೆಳಗ್ಗೆ 10 ಗಂಟೆಗೆ ನೆಲ್ಲಿಗುಡ್ಡೆಯಲ್ಲಿನ ಕಂಪೆನಿಯ ಜಾಗದಲ್ಲಿ ನಡೆಯಲಿದೆ ಎಂದು ಪಿಂಗಾರ ತೋಟಗಾರಿಕಾ ರೈತ ಉತ್ಪಾದಕರ ಕಂಪೆನಿ ನಿಯಮಿತ ಇದರ ಅಧ್ಯಕ್ಷರಾದ ರಾಮಕಿಶೋ‌ರ್ ಮಂಚಿ ಹೇಳಿದರು.

ಅವರು ವಿಟ್ಲದ ಚಂದಳಿಗೆಯಲ್ಲಿರುವ ಸಂಸ್ಥೆಯ ಕಚೇರಿಯಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.

ಬೆಳಗ್ಗೆ ಉದ್ಘಾಟನಾ ಸಮಾರಂಭ ನಡೆದು ಬಳಿಕ ಮಧ್ಯಾಹ್ನ ವಿಚಾರ ಸಂಕೀರ್ಣ ನಡೆಯಲಿದ್ದು, ಹಲಸು ಮೌಲ್ಯ ವರ್ಧನೆ, ಕೊಕ್ಕೊ ಬೆಳೆ ಕೃಷಿಯಲ್ಲಿ ಕಂಪ್ಯೂಟರೀಕರಣದ ಲಾಭ, ಅಡಿಕೆಗೆ ಪರ್ಯಾಯ ಕಾಳುಮೆಣಸು ಬೆಳೆ, ಮುಂತಾದ ವಿಷಯಗಳ ಬಗೆಗೆ ತಜ್ಞರು ಮಾಹಿತಿ ನೀಡಲಿದ್ದಾರೆ. ಪಿಂಗಾರದ ಕ್ಯಾಂಪಸ್‌ನಲ್ಲಿ ಹಲಸು ಮೇಳ ನಡೆಯಲಿದೆ. ಕಾರ್ಯಕ್ರಮದಲ್ಲಿ ಹಲವು ಗಣ್ಯರು ಭಾಗವಹಿಸಲಿದ್ದಾರೆ.

ಪಿಂಗಾರ ತೋಟಗಾರಿಕಾ ರೈತ ಉತ್ಪಾದಕರ ಕಂಪೆನಿಯು 2016 ರಲ್ಲಿ ಕಾರ್ಯಾರಂಭಗೊಂಡು ಪ್ರತೀವರ್ಷ ಹೊಸ ಹೆಜ್ಜೆಗಳನ್ನಿಡುತ್ತಾ ಹೊಸ ಯೋಜನೆಗಳನ್ನು ರೂಪಿಸುತ್ತಾ, ಉತ್ತಮವಾಗಿ ಕಾರ್ಯನಿರ್ವಹಿಸುತ್ತಾ, ಎಲ್ಲರ ಪ್ರಶಂಸೆಗೆ ಪಾತ್ರವಾಗಿದೆ. 2017 ರಲ್ಲಿ ರೈತರಿಗೆ ಬಾಡಿಗೆಗೆ ಯಂತ್ರ ಕೊಡುವ ಕಾರ್ಯ ಪ್ರಾರಂಭಿಸುದರ ಜೊತೆಗೆ 2018 ರಲ್ಲಿ ಹಲಸು ಹಾಗೂ ಬಾಳೆಕಾಯಿ ಖರೀದಿಯನ್ನು ಪ್ರಾರಂಭಿಸಿತು. ಮತ್ತು ಇವುಗಳ ಮೌಲ್ಯವರ್ಧಿತ ಉತ್ಪನ್ನಗಳನ್ನು ತಯಾರಿಸಿ ಮಾರಾಟ ಮಾಡುತ್ತಾ ಬಂದಿದೆ. 2023 ರಲ್ಲಿ ಮಣ್ಣು ಪರೀಕ್ಷಾ ಕೇಂದ್ರವನ್ನು ಸ್ಥಾಪಸಿ ರೈತರ ಮಣ್ಣು ಹಾಗೂ ನೀರಿನ ಪರೀಕ್ಷೆಯನ್ನು ಅತೀ ಕಡಿಮೆ ದರದಲ್ಲಿ ಮಾಡಿಕೊಡಲಾಗುತ್ತಿದೆ. ಅದಲ್ಲದೆ ನಮ್ಮಲ್ಲಿ ಮೀನಿನ ಗೊಬ್ಬರ, ಹರಳು ರೂಪದ ಮಿನ್ ಶಕ್ತಿ ಸುಣ್ಯ ಮೈಲಿತುತ್ತು, ಸುಣ್ಣ ಪಿಂಗಾರಕ್ಕೆ ಬಿಡುವ ಕಷಾಯ, ಸೋಲಾ‌ರ್ ಪ್ಲಾಸ್ಟಿಕ್ ಶೀಟ್, ವೀಡ್‌ ಮ್ಯಾಟ್, ಶೇಟ್ ನೆಟ್ ಹಾಗೂ ಇನ್ನಿತರ ವಸ್ತುಗಳು ಲಭ್ಯವಿದೆ.
2023ರಲ್ಲಿ ವಿಟ್ಲ ಪಟ್ಟಣ ಪಂಚಾಯತ್ ವ್ಯಾಪ್ತಿಯ ನೆಲ್ಲಿಗುಡ್ಡೆ ಎಂಬಲ್ಲಿ 3.32 ಎಕ್ರೆ ಜಾಗವನ್ನು 2.50 ಕೋಟಿ ರೂ.ಗಳಿಗೆ ಖರೀದಿಸಿದೆ. ಈ ಜಾಗದಲ್ಲಿ 2 ಎಕ್ರೆ ಅಡಿಕೆ ತೋಟ, 70 ತೆಂಗಿನ ಮರ, 2 ಮನೆ, 2 ಕೊಳವೆಬಾವಿ, ಪಂಪ್, ಪೈಪ್, 1.10 ಎಕ್ರೆ ವಾಣಿಜ್ಯ ಭೂ ಪರಿವರ್ತಿತ ಜಾಗ ಹಾಗೂ 30-40 ಲಕ್ಷ ಮೌಲ್ಯದ ವಿಸ್ತಾರವಾದ ಕಟ್ಟಡವಿದೆ. ಈ ಕಟ್ಟಡವನ್ನು ಅಡಿಕೆ ದಾಸ್ತಾನು ಮಾಡಲು ಸುಸಜ್ಜಿತವಾದ ನೈಟ್ರೋಜನ್ ಚೇಂಬರ್ ದಾಸ್ತಾನು ಕೊಠಡಿಗಳನ್ನಾಗಿ ಪರಿವರ್ತಿಸುವ ಮುನ್ನಡೆಯಲಿದೆ.
2019 ರಲ್ಲಿ ಅಡಿಕೆ ಖರೀದಿ ಪ್ರಾರಂಭಿಸಿ ಅಡಿಕೆ ಬೆಳೆಗಾರರಿಂದ ಉತ್ತಮ ದರದಲ್ಲಿ ಅವರ ಮನೆ ಬಾಗಿಲಿನಿಂದಲೇ ಅಡಿಕೆ ಖರೀದಿಸಿ, ಅವರವರ ಬ್ಯಾಂಕ್‌ ಖಾತೆಗೆ ಹಣ ವರ್ಗಾವಣೆ ಮಾಡುತ್ತಿದೆ. ರೈತರಿಗೆ ಉತ್ತಮ ಧಾರಣೆ ಸಿಗಲು ವಿವಿಧ ಯೋಜನೆಗಳನ್ನು ರೂಪಿಸಿದೆ.

2021 ಅಡಿಕೆ ಮರಗಳಿಗೆ ಔಷಧಿ ಸಿಂಪಡನೆ ಹಾಗೂ ಅಡಿಕೆ ಕೊಯಿಲು ಮಾಡಲು ಅಡಿಕೆ ಕೌಶಲ್ಯ ಪಡೆಯನ್ನು ಪ್ರಾರಂಭಿಸಿದೆ. 3 ದೋಟಿಯಲ್ಲಿ ಪ್ರಾರಂಭಿಸಿ 30 ದೋಟಿಯವರೆಗೆ ತಲುಪಿದ್ದೇವೆ. ಅದೇ ರೀತಿ ತೆಂಗು ಕೊಯಿಲು ತಂಡವು ಪ್ರಾರಂಭಗೊಂಡು 7 ಜನ ಕೆಲಸಗಾರರೊಂದಿಗೆ ಕಾರ್ಯ ನಿರ್ವಹಿಸುತ್ತಿದೆ. ಕಂಪೆನಿಯ ಆಡಳಿತ ಕಚೇರಿಗಾಗಿ ಸುಸಜ್ಜಿತ ಕಟ್ಟಡ ನಿರ್ಮಾಣವಾಗಿದೆ. ಮೌಲ್ಯವರ್ಧಿತ ಉತ್ಪನ್ನಗಳನ್ನು ತಯಾರಿಸಲು ಯೋಗ್ಯವಾದ ಸುಸಜ್ಜಿತ ಕಟ್ಟಡ ನಿರ್ಮಾಣವಾಗಿದೆ. ಇದಕ್ಕಾಗಿ ನೂತನ ಯಂತ್ರಗಳನ್ನು ವ್ಯವಸ್ಥೆ ಗೊಳಿಸಲಾಗುತ್ತಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ನಿರ್ದೇಶಕರುಗಳಾದ ಪ್ರದೀಪ್ ಎಸ್‌, ರಾಜರಾಮ್ ಭಟ್ ಸಿ.ಜಿ, ಚಂದ್ರಶೇಖರ ಕೆ.ಜಿ, ಶ್ಯಾಮ್ ಸುಂದರ್ ಎನ್, ರಜತ್ ಕುಮಾರ್ ಎಂ, ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here