ಉಪ್ಪಿನಂಗಡಿ: ವಿದ್ಯಾರ್ಥಿಗಳಿಗೆ ಅಂಕಗಳ ಅವಶ್ಯಕತೆ ಇದೆ. ಆದರೆ ಅದುವೇ ಮಾನದಂಡವಾಗಿರಬಾರದು. ಸಂಸ್ಕಾರಯುತವಾದ, ಮೌಲ್ಯಧಾರಿತವಾದ ಶಿಕ್ಷಣವು ನಮ್ಮ ಬದುಕಿಗೆ ಪೂರಕವಾಗಿದೆ ಎಂದು ರೋಟರಿ ಜಿಲ್ಲಾ 3181ರ ಗವರ್ನರ್ ಎಚ್. ಆರ್. ಕೇಶವ್ ತಿಳಿಸಿದರು.
ಉಪ್ಪಿನಂಗಡಿ ರೋಟರಿ ಕ್ಲಬ್ ವತಿಯಿಂದ ಇಲ್ಲಿನ ನಟ್ಟಿಬೈಲ್ನ ಶ್ರೀರಾಮ ಶಾಲೆಯಲ್ಲಿ 2.50ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾದ ಕೊಠಡಿ ‘ರೋಟರಿ ಕುಟೀರ’ವನ್ನು ಎ.30ರಂದು ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯೆ ಯಾವುತ್ತು ಕರಗದ ಸಂಪತ್ತು. ವ್ಯಕ್ತಿತ್ವದ ವಿಕಸನಕ್ಕೆ ವಿದ್ಯೆಯ ಅಗತ್ಯವಿದೆ. ಆದ್ದರಿಂದ ವಿದ್ಯಾರ್ಥಿಗಳು ಅಂಕದ ಹಿಂದೆಯೇ ಓಡಬಾರದು. ಇಂದು ನೀವು ಪಡೆಯುವ ಅಂಕಗಳು ಮೂವತ್ತು ವರ್ಷಗಳ ಬಳಿಕ ನಿಮ್ಮ ಬದುಕಿನಲ್ಲಿ ನಗಣ್ಯವಾಗಲಿದೆ. ಆದ್ದರಿಂದ ಸಂಸ್ಕಾರಯುವ ಶಿಕ್ಷಣವನ್ನು ಪಡೆದು ಮೊದಲು ಉತ್ತಮ ನಾಗರಿಕರಾಗಬೇಕು ಎಂದರು.
ರೋಟರಿಯ ಜಿಲ್ಲಾ ಸಹಾಯಕ ಗವರ್ನರ್ ಲಾರೆನ್ಸ್ ಗೋನ್ಸಾಲಿಸ್ ಮಾತನಾಡಿ, ವಿದ್ಯಾರ್ಥಿಗಳು ಈ ಹಂತದಲ್ಲಿ ದೊರೆಯುವ ಎಲ್ಲಾ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಂಡು ಸಾಧನೆಯತ್ತ ಮುನ್ನುಗಬೇಕು ಎಂದರು.
ಶ್ರೀ ರಾಮ ಶಾಲಾ ಸಂಚಾಲಕ ಯು.ಜಿ. ರಾಧಾ ಮಾತನಾಡಿ, ಎಲ್ಲಾ ಸವಾಲುಗಳನ್ನು ಮೆಟ್ಟಿ ನಿಂತು ಶ್ರೀ ರಾಮ ಶಾಲೆಯು ಕನ್ನಡ ಮಾಧ್ಯಮದಲ್ಲಿ ಸಂಸ್ಕಾರಯುತ ಶಿಕ್ಷಣವನ್ನು ನೀಡುತ್ತಾ, ಉತ್ತಮ ದಾಖಲಾತಿ, ಸಾಧನೆಯೊಂದಿಗೆ ಸಾಗ್ತಾ ಇದೆ. ಇದು ಕೇವಲ ಮಕ್ಕಳ ವಿದ್ಯಾಭ್ಯಾಸಕ್ಕಷ್ಟೇ ಒತ್ತು ನೀಡದೇ, ಮಕ್ಕಳ ಪೋಷಕರೊಂದಿಗೂ ಬೆರೆತು, ಅವರ ಕಷ್ಟಗಳಿಗೆ ಸ್ಪಂದಿಸುವ ಕೆಲಸ ಮಾಡಿದೆ. ಇಲ್ಲಿನ ರೋಟರಿ ಕ್ಲಬ್ನವರು ಇದೀಗ ಕೊಠಡಿ ನಿರ್ಮಾಣವೊಂದನ್ನು ಮಾಡಿಕೊಟ್ಟಿದ್ದು, ಅವರಿಗೆ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು.
ಉಪ್ಪಿನಂಗಡಿ ರೋಟರಿ ಕ್ಲಬ್ ಅಧ್ಯಕ್ಷೆ ಅನುರಾಧ ಆರ್. ಶೆಟ್ಟಿ ಮಾತನಾಡಿ, ಜಿಲ್ಲಾ ಗವರ್ನರ್ ಅವರ ಭೇಟಿ ಅಂದರೆ ಅದು ರೋಟರಿ ಹಬ್ಬವಿದ್ದಂತೆ. ನನ್ನ ಬೆಳವಣಿಗೆಗೆ ಅಡಿಪಾಯ ಹಾಕಿದ್ದು ಶ್ರೀ ರಾಮ ಶಾಲೆ. ಆದ್ದರಿಂದ ನನ್ನ ರೋಟರಿ ಕ್ಲಬ್ನ ಅಧ್ಯಕ್ಷೀಯ ಅವಧಿಯಲ್ಲಿ ಆ ಶಾಲೆಗೆ ಕೊಠಡಿಯೊಂದನ್ನು ನಿರ್ಮಿಸಿ ಕೊಡುವ ಭಾಗ್ಯ ಎಲ್ಲರ ಸಹಕಾರದಿಂದ ನನ್ನದಾಗಿದೆ ಎಂದರು.
ವೇದಿಕೆಯಲ್ಲಿ ರೋಟರಿಯ ವಲಯ ಲೆಫ್ಟಿನೆಂಟ್ ರವೀಂದ್ರ ದರ್ಬೆ, ಕಾರ್ಯದರ್ಶಿ ಆಶಾಲತಾ ಜೆ. ನಾಯಕ್, ನಿಕಟಪೂರ್ವಾಧ್ಯಕ್ಷ ಜಗದೀಶ್ ನಾಯಕ್, ಶ್ರೀ ರಾಮ ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ಸುನೀಲ್ ಅನಾವು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ನ ಡಾ. ರಾಜಾರಾಮ್ ಕೆ.ಬಿ., ಅಬ್ದುರ್ರಹ್ಮಾನ್ ಯುನಿಕ್, ಇಸ್ಮಾಯೀಲ್ ಇಕ್ಬಾಲ್ ಪಾಂಡೇಲು, ಅಝೀಝ್ ಬಸ್ತಿಕ್ಕಾರ್, ಅಬೂಬಕ್ಕರ್ ಪುತ್ತು, ಅಬ್ದುಲ್ ಖಾದರ್, ಸ್ವಣೇಶ್ ಗಾಣಿಗ, ಸ್ವರ್ಣ ಪೊಸವಳಿಕೆ, ಶ್ರೀಕಾಂತ್ ಪಟೇಲ್, ಚಂದಪ್ಪ ಮೂಲ್ಯ, ಕೇಶವ ಪಿ.ಎಂ., ವಿಶ್ರುತ್ ಕುಮಾರ್, ವಿಜಯಕುಮಾರ್ ಕಲ್ಲಳಿಕೆ, ರಾಜೇಶ್ ದಿಂಡಿಗಲ್, ಶ್ರೀಮತಿ ವಂದನಾ, ಶ್ರೀ ರಾಮ ಶಾಲೆಯ ಹಿತೈಷಿಗಳಾದ ಜಯಂತ ಪೊರೋಳಿ, ಗುಣಕರ ಅಗ್ನಾಡಿ ಮತ್ತಿತರರು ಉಪಸ್ಥಿತರಿದ್ದರು.
ಪ್ರೌಢಶಾಲಾ ವಿಭಾಗದ ಮುಖ್ಯಶಿಕ್ಷಕ ರಘುರಾಮ ಭಟ್ ಸ್ವಾಗತಿಸಿದರು. ಪವಿತ್ರಾ ಮಾತಾಜಿ ವಂದಿಸಿದರು. ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ವಿಮಲಾ ಮಾತಾಜಿ ಕಾರ್ಯಕ್ರಮ ನಿರೂಪಿಸಿದರು.