ಪುತ್ತೂರು :ಮಿತ್ರವೃಂದಾ ವಾಲಿಬಾಲ್ ಅಕಾಡೆಮಿ ಮತ್ತು ರೋಟರಿ ಕ್ಲಬ್ ಬೀರಮಲೆ ಹಿಲ್ಸ್ ಹಾಗೂ ದರ್ಬೆ ಲಿಟಲ್ ಫ್ಲವರ್ ಶಾಲೆ ಇವುಗಳ ಜಂಟಿ ಆಶ್ರಯದಲ್ಲಿ 30 ದಿನಗಳ ಕಾಲ ನಡೆಯಲಿರುವ ಉಚಿತ ಬೇಸಿಗೆ ವಾಲಿಬಾಲ್ ಶಿಬಿರ ಉದ್ಘಾಟನೆಯು ಮೇ.3ರಂದು ಲಿಟಲ್ ಫ್ಲವರ್ ಕ್ರೀಡಾಂಗಣದಲ್ಲಿ ನಡೆಯಿತು.
ಶಿಬಿರವನ್ನು ಉದ್ಘಾಟಿಸಿದ ತಾಲೂಕು ಆರೋಗ್ಯಾಧಿಕಾರಿ ಡಾ. ದೀಪಕ್ ರೈ ಮಾತನಾಡಿ, 10 ವರ್ಷದಿಂದ 18 ವರ್ಷದ ಗಂಡು ಮತ್ತು ಹೆಣ್ಣು ಮಕ್ಕಳಿಗೆ ಉಚಿತವಾಗಿ ವಾಲಿಬಾಲ್ ತರಬೇತಿಯನ್ನ ನೀಡುವುದನ್ನು ಶ್ಲಾಘಿಸಿದರು. ಇಲ್ಲಿ ತರಬೇತಿ ಪಡೆದ ವಿದ್ಯಾರ್ಥಿಗಳ ಸಾಧನೆ ರಾಜ್ಯ, ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳೆಯಲಿ ಎಂದರು.
ರೋಟರಿ ಕ್ಲಬ್ ಅಸಿಸ್ಟೆಂಟ್ ಗವರ್ನರ್ ಪುರಂದರ ರೈ ಮಾತನಾಡಿ, ಪುತ್ತೂರಿಗೆ 1984ರಲ್ಲಿ ವಾಲಿಬಾಲನ್ನು ಪರಿಚಯಿಸಿದ ವ್ಯಕ್ತಿ ಕೋಟೆಕಲ್ ದಿ. ಕುನ್ನಿ ಕಣ್ಣನ್ ವೈದ್ಯರಿಗೆ ಸಲ್ಲುತ್ತದೆ. ಇಂದು ಅವರ ಕುಟುಂಬವು ನಿರಂತರವಾಗಿ ವಾಲಿಬಾಲನ್ನು ಬೆಳೆಸುತ್ತಾ ಬರುತ್ತಿದೆ. ರಾಷ್ಟ್ರ ಮಟ್ಟದ ತರಬೇತುದಾರರಿಂದ ಮಕ್ಕಳಿಗೆ ಉತ್ತಮವಾದ ತರಬೇತಿ ನೀಡುತ್ತಿರುವುದನ್ನು ಅಭಿನಂದಿಸಿದರು.
ಪುತ್ತೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ವಾಮನ್ ಪೈ ಮಾತನಾಡಿ, ಉತ್ತಮ ಮಟ್ಟದ ಕ್ರೀಡಾಂಗಣದಲ್ಲಿ ಮಕ್ಕಳ ದೇಹಕ್ಕೆ ಯಾವುದೇ ಹಾನಿಕರವಾಗದ ರೀತಿಯಲ್ಲಿ ಫೈಬರ್ ಶೀಟ್ ಅನ್ನು ಅಭಿವೃದ್ಧಿ ಪಡಿಸಿ ಶಿಸ್ತುಬದ್ಧವಾದ ತರಬೇತಿಯನ್ನು ನೀಡಲು ಈ ಜಂಟಿ ಸಂಸ್ಥೆ ತಯಾರಿ ನಡೆಸುತ್ತಿರುವುದನ್ನು ಶ್ಲಾಘಿಸಿದರು.
ಲಿಟಲ್ ಫ್ಲವರ್ ಶಾಲಾ ಮುಖ್ಯೋಪಾಧ್ಯಾಯಿನಿ ಭಗಿನಿ ವೇಣಿಷಾ ಬಿ.ಎಸ್. ಮಾತನಾಡಿ, ಕಳೆದ ಕೆಲವು ವರ್ಷಗಳಿಂದ ನಮ್ಮ ಶಾಲೆಯಲ್ಲಿ ಇಂತ ಶಿಸ್ತುಬದ್ಧವಾದ ವಾಲಿಬಾಲ್ ತರಬೇತಿ ಶಿಬಿರವನ್ನು ಈ ಮಿತ್ರವೃಂದ ಅಕಾಡೆಮಿ ನಡೆಸುತ್ತಾ ಬರುತ್ತಿರುವುದು ನಮಗೆ ಬಹಳ ಸಂತೋಷವಾಗಿದೆ. ನಿರಂತರವಾಗಿ ನಮ್ಮ ಸಹಕಾರವಿದೆ ಎಂದರು.
ರೋಟರಿ ಕ್ಲಬ್ ಪುತ್ತೂರು ಬಿರುಮಲೆ ಹಿಲ್ಸ್ ಅಧ್ಯಕ್ಷ ಕೃಷ್ಣ ಪ್ರಸಾದ್ ಆಳ್ವ ಮಾತನಾಡಿ, ವಾಲಿಬಾಲ್ ಬಹಳಷ್ಟು ಕುತೂಹಲ ಆಟವಾಗಿದೆ. ಇಂದು ಒಂಟಿಯಾಗಿ ಮಕ್ಕಳಿಗೆ ವಾಲಿಬಾಲ್ ತರಬೇತಿಯನ್ನು ಪ್ರಾರಂಭಿಸಿದ್ದು ಅನೇಕ ಮಕ್ಕಳಿಗೆ ತಮ್ಮ ಪ್ರತಿಭೆಯನ್ನು ಗುರುತಿಸಲು ಅವಕಾಶ ಸಿಗುವಂತಾಗುತ್ತಿದೆ ಎಂದರು.
ಸಮಾಜ ಸೇವಕ, ಕ್ರೀಡಾಪಟು ಮಿತ್ರವೃಂದ ಅಕಾಡೆಮಿ ಸಲಹೆಗಾರ ಇಬ್ರಾಹಿಂ ಗೋಳಿಕಟ್ಟೆ ಮಾತನಾಡಿ, ಪುತ್ತೂರಿನ ಪಿವಿ ನಾರಾಯಣ್ ಅವರು ಕೋಚ್ ಗಿ ತರಬೇತಿ ನೀಡಿರುವುದಲ್ಲದೇ 1984ರಲ್ಲಿ ಬೀಚ್ ವಾಲಿಬಾಲ್ ಕರ್ನಾಟಕದಲ್ಲಿ ಪರಿಚಯಿಸಿದ ಮೊದಲ ವ್ಯಕ್ತಿ ಯೂ ಪಿ.ವಿ ನಾರಾಯಣನ್ ಆಗಿರುತ್ತಾರೆ. ಮಿತ್ರವೃಂದ ಅಕಾಡೆಮಿಯಿಂದ ಮುಂದಿನ ದಿನಗಳಲ್ಲಿ ಮಕ್ಕಳ ಭವಿಷ್ಯಕ್ಕಾಗಿ ಪುತ್ತೂರು ನಗರ ಸಭೆಯ ಒಳಗಡೆ ಒಂದು ಉತ್ತಮವಾದ ಒಳ ಕ್ರೀಡಾಂಗಣ ನಿರ್ಮಿಸಲು ಮಿತ್ರವೃಂದ ಸಿದ್ದತೆ ನಡೆಸುತ್ತಿದೆ ನಿಮ್ಮೆಲ್ಲರ ಸಹಕಾರ ಈ ಮಿತ್ರವೃಂದ ಅಕಾಡೆಮಿ ಸಂಸ್ಥೆಗೆ ಇರಲಿ ಎಂದು ವಿನಂತಿಸಿದರು.
ರಾಷ್ಟ್ರ ಬೀಚ್ ವಾಲಿಬಾಲ್ ಕೋಚ್ ಹಮೀದ್ ಸಾಜ, ಅಕಾಡೆಮಿ ಅಧ್ಯಕ್ಷ ಪಿವಿ ಕೃಷ್ಣನ್, ಟ್ರಸ್ಟಿ ಪಿ.ವಿ ರಾಘವನ್, ಪಿವಿ ರಕ್ಷ , ಖಜಾಂಜಿ ರಾಮಚಂದ್ರ ಮಾಡವ್, ಡಾ.ವಿಖ್ಯಾತ್, ಸ್ಪೋರ್ಟ್ಸ್ ವರ್ಲ್ಡ್ ನ ಮಾಲಕ ರಜಾಕ್ ಬಪ್ಪಳಿಗೆ, ಮಕ್ಕಳ ಪೋಷಕರಾದ ಸುಧಾನ ಶಾಲೆ ದೈಹಿಕ ಶಿಕ್ಷಕರಾದ ಪುಷ್ಪರಾಜ್, ನೇಮಿರಾಜ್ ಕುಂಬ್ರ,ದಯಾವತಿ ಸಕಲೇಶಪುರ ಮೊದಲಾದವರು ಉಪಸ್ಥಿತರಿದ್ದರು.
ಮಿತ್ರವೃಂದ ಅಕಾಡೆಮಿಯ ಮಹಾ ಪ್ರಧಾನ ಕಾರ್ಯದರ್ಶಿ ಬಾಲಚಂದ್ರ ಕೆ. ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಅಕಾಡೆಮಿಯ ಸದಸ್ಯರು ಹೂ ಸಾಲು ಹಾಕಿ ಅತಿಥಿಗಳನ್ನು ಸ್ವಾಗತಿಸಿದರು. ಲಿಟ್ಲ್ ಫ್ಲವರ್ ಶಾಲಾ ಶಿಕ್ಷಕ ಬಾಲಕೃಷ್ಣ ಪೋದಲ್ ಕಾರ್ಯಕ್ರಮ ನಿರೂಪಿಸಿದರು. ಅಕಾಡೆಮಿ ಕಾರ್ಯದರ್ಶಿ ಪ್ರಸನ್ನ ಕುಮಾರ್ ವಂದಿಸಿದರು.