ಸಮಾಜಕ್ಕೆ ಅನುಗ್ರಹ ಸಿಗಲಿ: ಬಿಷಪ್ ಗೀವರ್ಗೀಸ್ ಮಾರ್ ಮಕಾರಿಯೋಸ್
ಇಷ್ಟಾರ್ಥ ಸಿದ್ಧಿಗೆ ಸಹಕಾರವಾಗಲಿ: ಬಿಷಪ್ ಮಾರ್ ಲಾರೆನ್ಸ್ ಮುಕ್ಕುಯಿ
ನೆಲ್ಯಾಡಿ: ದೇವಾಲಯ ದೇವರ ದರ್ಶನ ಪಡೆಯಲು ಇರುವ ಆಲಯವಾಗಿದೆ. ಇಲ್ಲಿಂದ ಸಮಾಜಕ್ಕೆ ಪ್ರೀತಿಯ ಸಂದೇಶ ಸಾರಬೇಕು. ನವೀಕರಣಗೊಂಡ ಸಂತ ತೋಮಸರ ಫೊರೋನಾ ದೇವಾಲಯದ ಮೂಲಕ ಸಮಾಜಕ್ಕೆ ಅನುಗ್ರಹ ಸಿಗಲಿ ಎಂದು ಪುತ್ತೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಪರಮಪೂಜ್ಯ ಗೀವರ್ಗೀಸ್ ಮಾರ್ ಮಕ್ಕಾರಿಯೋಸ್ ಹೇಳಿದರು.
ಅವರು ನವೀಕೃತಗೊಂಡಿರುವ ಬೆಳ್ತಂಗಡಿ ಧರ್ಮಪ್ರಾಂತ್ಯಕ್ಕೆ ಒಳಪಟ್ಟ ಉದನೆ ಸಂತ ತೋಮಸರ ಫೊರೋನಾ ದೇವಾಲಯದ ಪವಿತ್ರೀಕರಣ ವಿಧಿ ಮತ್ತು ದೇವಾಲಯದ ಪ್ರತಿಷ್ಠಾ ವಿಧಿಗಳ ಬಳಿಕ ನಡೆದ ಸಭಾ ಕಾರ್ಯಕ್ರಮ ಉದ್ಘಾಟಿಸಿ ಆಶೀರ್ವಚನ ನೀಡಿದರು. ಬೆಳ್ತಂಗಡಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಪರಮಪೂಜ್ಯ ಮಾರ್ ಲಾರೆನ್ಸ್ ಮುಕ್ಕುಯಿ ಅವರು ಆಶೀರ್ವಚನ ನೀಡಿ, ಕಠಿನ ಪರಿಶ್ರಮದಿಂದ ದೇವಾಲಯ ನವೀಕರಣಗೊಂಡಿದೆ. ಕಳೆದ 25 ವರ್ಷಗಳಿಂದ ಈ ಚರ್ಚ್‌ನ ಬೆಳವಣಿಗೆಗಾಗಿ ಊರ, ಪರವೂರ ದಾನಿಗಳು ಸಹಕಾರ ನೀಡಿದ್ದಾರೆ. ಈ ಚರ್ಚ್ ಎಲ್ಲರ ಇಷ್ಟಾರ್ಥ ಸಿದ್ಧಿಗೆ ಸಹಕಾರಿಯಾಗಲಿ ಎಂದರು. ಅತಿಥಿಯಾಗಿದ್ದ ಕ್ರೈಸ್ತ ಅಭಿವೃದ್ಧಿ ನಿಗಮದ ಅಧ್ಯಕ್ಷ ಜಾನ್ ರಿಚರ್ಡ್ ಲೋಬೋ ಅವರು ಮಾತನಾಡಿ, ಕ್ರೈಸ್ತ ಧರ್ಮದವರಿಗೆ ಕೇಂದ್ರ ಬಿಂದು ಚರ್ಚ್ ಆಗಿದೆ. ನಾವು ಯಾವುದೇ ಒಳ್ಳೆಯ ಕೆಲಸ ಆರಂಭಿಸುವ ಮೊದಲು ದೇವಾಲಯಕ್ಕೆ ಬಂದು ಪ್ರಾರ್ಥಿಸುತ್ತೇವೆ. ದೇವಾಲಯಗಳು ಯಾವಾಗಲೂ ಸಮಾಜಮುಖಿಯಾಗಿರುತ್ತವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಚರ್ಚ್‌ನ ಸ್ಮರಣ ಸಂಚಿಕೆಯನ್ನು ಬಿಡುಗಡೆಗೊಳಿಸಲಾಯಿತು. ಕುಟ್ರುಪ್ಪಾಡಿ ಚರ್ಚ್‌ನ ಧರ್ಮಗುರು ವೆ|ರೆ| ಫಾ.ವರ್ಗೀಸ್ ಪುದಿಯಿಡತ್ತ್, ಧರ್ಮಗುರುಗಳಾದ ರೆ.ಫಾ.ಮೋನ್ಸಿಂಜೋರ್ ಜೋಸೆಫ್ ವಲಿಯಪರಂಬಿಲ್, ರೆ.ಫಾ.ತೋಮಸ್ ಕರಿಂಗಡಿಯಿಲ್, ರೆ.ಫಾ.ತೋಮಸ್ ಕಣ್ಣಾಂಗಲ್, ರೆ.ಸಿ.ಲಿಸ್ಸ್ ಮ್ಯಾಥ್ಯು, ಶಿರಾಡಿ ಗ್ರಾ.ಪಂ.ಅಧ್ಯಕ್ಷ ಕಾರ್ತಿಕೇಯನ್, ಬೆಳ್ತಂಗಡಿ ಧರ್ಮಕ್ಷೇತ್ರದ ಕೆಎಸ್‌ಎಮ್‌ಸಿಎ ಅಧ್ಯಕ್ಷ ಬಿಟ್ಟಿ ಬಿ.ನೆಡುನಿಲಂ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸನ್ಮಾನ:
ಬೆಳ್ತಂಗಡಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಬಿಷಪ್ ಮಾರ್ ಲಾರೆನ್ಸ್ ಮುಕ್ಕುಯಿ ಹಾಗೂ ಉದನೆ ಸೈಂಟ್ ತೋಮಸ್ ಪೊರೋನಾ ಚರ್ಚ್‌ನ ಧರ್ಮಗುರು ರೆ.ಫಾ.ಸಿಬಿ ತೋಮಸ್ ಪನಚ್ಚಿಕ್ಕಲ್‌ರವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಚರ್ಚ್‌ನ ಧರ್ಮಗುರು ರೆ.ಫಾ.ಸಿಬಿ ತೋಮಸ್ ಪನಚ್ಚಿಕ್ಕಲ್ ಸ್ವಾಗತಿಸಿದರು. ಶಿಕ್ಷಕ ತೋಮಸ್ ಮತ್ತು ಶಿಕ್ಷಕಿ ತ್ರೇಸಿಯಮ್ಮ ಕಾರ್ಯಕ್ರಮ ನಿರೂಪಿಸಿದರು. ರೆ.ಫಾ.ಅಖಿಲ್ ಒಂಡುಕಾಟ್ಟಿಲ್ ವಂದಿಸಿದರು. ಸಭಾ ಕಾರ್ಯಕ್ರಮದ ಬಳಿಕ ಸಹಭೋಜನ, ಅಭಿಜಿತ್ ಕೊಲ್ಲಂ ಮತ್ತು ಟೀಮ್ ಅವರಿಂದ ಗಾನ ಮೇಳ ನಡೆಯಿತು.