ಕುಡಿಯುವ ನೀರಿನ ಸಮಸ್ಯೆ ನೀಗಿಸಲು ಗ್ರಾ.ಪಂ ನಿಂದ ಕೊಳವೆ ಬಾವಿ ನಿರ್ಮಾಣ-ಸ್ಥಳೀಯರ ಆಕ್ಷೇಪ: ಕೃಷಿ ನೀರಿಗೆ ಸಮಸ್ಯೆ ಆತಂಕ- ಮನವೊಲಿಸಿದ ಅಧಿಕಾರಿಗಳು-ಆರ್ಯಾಪು ಗ್ರಾ.ಪಂ.ವ್ಯಾಪ್ತಿಯ ಕಂಬಳದಡ್ಕದಲ್ಲಿ ಘಟನೆ

0

ಪುತ್ತೂರು:ಸಾರ್ವಜನಿಕರಿಗೆ ಕುಡಿಯುವ ನೀರಿಗಾಗಿ ಗ್ರಾಮ ಪಂಚಾಯತ್‌ ನಿಂದ ಕೊಳವೆ ಬಾವಿ ಕೊರೆಯಲು ಮುಂದಾದ ವೇಳೆ, ತಮ್ಮ ಕೃಷಿ ಜಮೀನಿನ ಬಳಿ ಬೋರ್‌ವೆಲ್ ತೆಗೆಯುವುದರಿಂದ ತಮಗೆ ತೊಂದರೆಯಾಗಬಹುದೆಂಬ ಆತಂಕದಿಂದ ಸ್ಥಳೀಯರು ಆಕ್ಷೇಪ ವ್ಯಕ್ತಪಡಿಸಿದ ಮತ್ತು ಅಧಿಕಾರಿಗಳು ಸ್ಥಳಕ್ಕಾಗಮಿಸಿ ಸ್ಥಳೀಯರ ಮನವೊಲಿಸಿ ಕೊಳವೆ ಬಾವಿ ತೆಗೆಸಿದ ಘಟನೆ ಮೇ 6ರಂದು ಆರ್ಯಾಪು ಗ್ರಾಮದ ಕಂಬಳತ್ತಡ್ಡ ಎಂಬಲ್ಲಿ ನಡೆದಿದೆ.

ಕುಡಿಯುವ ನೀರಿನ ಸಮಸ್ಯೆಯಿರುವ ಆರ್ಯಾಪು ಗ್ರಾ.ಪಂ ವ್ಯಾಪ್ತಿಯ ಕೊಲ್ಯ ಎಂಬಲ್ಲಿ 80 ಮನೆಗಳಿರುವ ಕಾಲೋನಿಗಳಿಗೆ ಕುಡಿಯುವ ನೀರು ಸರಬರಾಜಿಗಾಗಿ ಗ್ರಾ.ಪಂ.ನಿಂದ ಕಂಬಳತ್ತಡ್ಕ ಎಂಬಲ್ಲಿ ರಸ್ತೆ ಬದಿ ಕೊಳವೆ ಬಾವಿ ಕೊರೆಯಲು ಪಾಯಿಂಟ್ ಮಾಡಲಾಗಿತ್ತು.ಮೇ.6ರಂದು ಬಾವಿ ಕೊರೆಯಲು ಲಾರಿಯೂ ಬಂದಿತ್ತು. ಈ ಸಂದರ್ಭದಲ್ಲಿ ಸ್ಥಳೀಯ ನಿವಾಸಿಗಳು, ತಮ್ಮ ಕೃಷಿ ಜಮೀನಿನ ಬಳಿಯಲ್ಲಿ ಕೊಳವೆ ಬಾವಿ ಕೊರೆಯುವುದರಿಂದ ನಮ್ಮಲ್ಲಿರುವ ಅಲ್ಪ ಸ್ವಲ್ಪ ಕೃಷಿಗೆ ತೊಂದರೆಯಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿ, ಕೊಳವೆ ಬಾವಿ ಕೊರೆಯಲು ಆಕ್ಷೇಪ ವ್ಯಕ್ತಪಡಿಸಿದರು.ಬೇರೆ ಕಡೆ ಸರಕಾರಿ ಜಮೀನಿನಲ್ಲಿ ಬೋರ್ ವೆಲ್ ತೆಗೆಯುವಂತೆ ವಿನಂತಿಸಿದರು.

ತಾ.ಪಂ.ಇಒ, ತಹಶೀಲ್ದಾರ್, ಇನ್ಸ್ ಪೆಕ್ಟರ್ ಸಹಿತ ಅಧಿಕಾರಿಗಳ ಭೇಟಿ:
ಘಟನೆಯ ಬಗ್ಗೆ ಮಾಹಿತಿ ಪಡೆದು ತಾ.ಪಂ ಕಾರ್ಯನಿರ್ವಾಹಕಾಧಿಕಾರಿ ಹನುದು ರೆಡ್ಡಿ, ತಹಸಿಲ್ದಾರ್ ಕುಂಞ ಅಹಮ್ಮದ್, ಸಂಪ್ಯ ಠಾಣಾ ಇನ್ಸ್ ಪೆಕ್ಟರ್ ರಂಗಸಾಮಯ್ಯ, ಎಸ್‌.ಐ ಜಂಬೂರಾಜ್ ಮಹಾಜನ್, ಆರ್ಯಾಪು ಗ್ರಾ.ಪಂ.ಪಿಡಿಓ ನಾಗೇಶ್ ಸ್ಥಳಕ್ಕೆ ಭೇಟಿ ನೀಡಿ ಸ್ಥಳೀಯರನ್ನು ಮನವೊಲಿಸಲು ಪ್ರಯತ್ನಿಸಿದರು.ನಮಗೆ ಅಲ್ಪ-ಸ್ವಲ್ಪ ಕೃಷಿಯಿದೆ.ನಾವು ಇದನ್ನೇ ನಂಬಿ ಜೀವನ ನಡೆಸುತ್ತಿದ್ದೇವೆ. ನಮ್ಮ ಕೃಷಿಗೆ ಅಲ್ಪ ನೀರಿರುವುದು.ನಮ್ಮ ಜಮೀನಿನ ಬಳಿಯಲ್ಲಿಯೇ ಇನ್ನೊಂದು ಕೊಳವೆ ಬಾವಿ ಕೊರೆದರೆ ನಮಗೆ ತೊಂದರೆಯಾಗಬಹುದು ಎಂದು ಸ್ಥಳೀಯ ಕೃಷಿಕರು ಆತಂಕ ವ್ಯಕ್ತಪಡಿಸಿದರು.ಜನರಿಗೆ ಕುಡಿಯುವ ನೀರಿಗೆ ಮೊದಲ ಆದ್ಯತೆ ನೀಡಬೇಕು.ನಂತರ ಕೃಷಿ.ಹೀಗಾಗಿ ನೀವು ಅಡ್ಡಿ ಪಡಿಸಬಾರದು.ಸಾರ್ವಜನಿಕ ಸ್ಥಳದಲ್ಲಿ ಕೊಳವೆ ಬಾವಿ ಕೊರೆಯಲು ಯಾರ ಅನುಮತಿಯೂ ಬೇಕಾಗಿಲ್ಲ.ಕುಡಿಯುವ ನೀರಿಗೆ ಅಡ್ಡಿಪಡಿಸುವುದು ಸರಿಯಲ್ಲ. ಹಾಗಾಗಿ ಕುಡಿಯಲು ನೀರಿಗಾಗಿ ಬೋರ್ ವೆಲ್ ತೆಗೆಯಲು ಅವಕಾಶ ನೀಡಿ ಎಂದು ಇನ್ಸ್‌ಪೆಕ್ಟ‌ರ್ ರಂಗಸಾಮಯ್ಯ ಹಾಗೂ ತಹಶೀಲ್ದಾರ್ ಕುಂಞ ಅಹಮ್ಮದ್ ಸ್ಥಳೀಯರಿಗೆ ತಿಳಿಸಿದರು.

ನಮ್ಮ ಕೊಳವೆ ಬಾವಿಯಿಂದಲೇ ನೀರು ಕೊಡುತ್ತೇವೆ
ಕೊಳವೆ ಬಾವಿಗೆ ಪಾಯಿಂಟ್ ಮಾಡಿದಾಗಲೇ ನಾವು ಆಕ್ಷೇಪಣೆ ಸಲ್ಲಿಸಿದ್ದೇವೆ. ಅಲ್ಲದೆ ಇಲ್ಲಿ ಕೊರೆದರೆ ಎಲ್ಲರಿಗೂ ನೀರಿನ ಸಮಸ್ಯೆ ಉಂಟಾಗಲಿದೆ.ಬೇರೆ ಸರಕಾರಿ ಜಾಗದಲ್ಲಿ ತೆಗೆಯಬಹುದು. ಅಲ್ಲದೆ ಮೇ ತಿಂಗಳ ತನಕ ನಮ್ಮ ಕೊಳವೆ ಬಾವಿಯಿಂದ ಕುಡಿಯಲು ನೀರು ಕೊಡುತ್ತೇವೆ. ನಮ್ಮ ಕೊಳವೆ ಬಾವಿಯಿಂದ ಪೈಪ್ ಅಳವಡಿಸಿ ಅಥವಾ ಟ್ಯಾಂಕರ್ ಮೂಲಕ ನೀರು ಕೊಡುವುದಾಗಿ ಸ್ಥಳೀಯರು ಅಧಿಕಾರಿಗಳಲ್ಲಿ ತಿಳಿಸಿದರು. ಅಲ್ಲದೆ, ಪಕ್ಕದ ಲೇ ಔಟ್‌ನ ಕೊಳವೆ ಬಾವಿಯಿಂದಲೂ ನೀರು ಕೊಡಲು ಸಿದ್ಧರಿರುವುದಾಗಿ ತಿಳಿಸಿದರು.24 ಗಂಟೆ ನೀರು ನೀಡುವುದು ಅಸಾಧ್ಯ.ತುರ್ತು ಸಂದರ್ಭ ನೀಡಬಹುದು.ಏನಿದ್ದರೂ, ಕುಡಿಯುವ ನೀರಿಗೆ ಪ್ರಾಮುಖ್ಯತೆ ನೀಡಬೇಕು. ಕುಡಿಯುವ ನೀರಿಗೆ ಬಿಟ್ಟು ಇತರ ಉದ್ದೇಶಗಳಿಗಾದರೆ ನಾವೂ ಅವಕಾಶ ಕೊಡುವುದಿಲ್ಲ. ಬೇಸಿಗೆಯಲ್ಲಿ ಜನರಿಗೆ ಕುಡಿಯುವ ನೀರಿಗೆ ಪ್ರಥಮ ಆದ್ಯತೆ ನೀಡಬೇಕು ಎಂದು ಹೇಳಿ ಅಧಿಕಾರಿಗಳು ಸ್ಥಳೀಯರ ಮನವೊಲಿಸಿದರು.

ನಿಮಗೇ ಕುಡಿಯುವ ನೀರಿನ ಸಮಸ್ಯೆಯಾದರೂ ನಾವೇ ನೀರು ಕೊಡಬೇಕು-ಕೊಡಬೇಕು-ಪಿಡಿಒ:
ಕೊಳವೆ ಬಾವಿ ಕೊರೆಯಲು ಕೃಷಿಕರಿಗೆ ನಾವು ಅಡ್ಡಿಪಡಿಸುವುದಿಲ್ಲ. ಈಗ ಕೊಲ್ಯದಲ್ಲಿ 80 ಮನೆಗಳಿಗೆ ನೀರಿಲ್ಲ.ಅಲ್ಲಿ ಕೊಳವೆ ಬಾವಿಯೂ ಇಲ್ಲ.ನಮಗೆ ಕೃಷಿ ಭೂಮಿಯೂ ಉಳಿಯಬೇಕು. ಕುಡಿಯಲು ನೀರೂ ಬೇಕು. ಆದರೆ ಪ್ರಥಮ ಆದ್ಯತೆ ಕುಡಿಯುವ ನೀರಿಗೆ ನೀಡಬೇಕು. ನಿಮಗೇ ಕುಡಿಯುವ ನೀರಿನ ಸಮಸ್ಯೆಯಾದರೂ ನಾವೇ ನೀರು ಕೊಡಬೇಕು.ಕೃಷಿಗಾಗಿ ಕೊಳವೆ ಬಾವಿ ಕೊರೆಯಲು ಈತನಕ ನಾವು ಅಡ್ಡಿಪಡಿಸಿಲ್ಲ. ಇನ್ನು ಮುಂದೆಯೂ ಕೃಷಿಗೆ ಕೊಳವೆ ಬಾವಿ ಕೊರೆಯಲು ನಿಮಗೂ ಅನುಮತಿ ನೀಡುತ್ತೇವೆ.ನಮ್ಮ ಪಂಪ್ ಸೀಮಿತ ಅವಧಿಯಲ್ಲಿ ಮಾತ್ರ ಚಲಾವಣೆಯಲ್ಲಿರುತ್ತದೆ ಎಂದು ಆರ್ಯಾಪು ಗ್ರಾ.ಪಂ ಪಿಡಿಓ ನಾಗೇಶ್ ತಿಳಿಸಿದರು.ಕೊನೆಗೂ ಒಪ್ಪಿಕೊಂಡ ಸ್ಥಳೀಯರು ಕೊಳವೆ ಬಾವಿ ಕೊರೆಯಲು ಅವಕಾಶ ಮಾಡಿಕೊಟ್ಟರು.ನಂತರ ಕೊಳವೆ ಬಾವಿ ಕೊರೆಯಲಾಯಿತು.ಸುಮಾರು 3.5 ಇಂಚು ನೀರು ಲಭಿಸಿದೆ ಎಂದು ತಿಳಿದು ಬಂದಿದೆ.

ಪಂಚಾಯತ್‌ ಸದಸ್ಯರಿಬ್ಬರ ವಿರುದ್ದ ಆಕ್ರೋಶ:
ಕೊಳವೆ ಬಾವಿ ಕೊರೆಯಲು ಲಾರಿ ಬರುವ ತನಕ ಈ ಭಾಗದ ಪಂಚಾಯತ್ ಸದಸ್ಯರಿಬ್ಬರೂ ಇದೇ ಸ್ಥಳದಲ್ಲಿದ್ದರು. ಆದರೆ ಲಾರಿ ಬಂದ ಮೇಲೆ ಅವರಿಬ್ಬರೂ ಇಲ್ಲಿಂದ ನಾಪತ್ತೆಯಾಗಿದ್ದಾರೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

144 ಸೆಕ್ಷನ್ ಹಾಕಿಸಿ:
ಸಾರ್ವಜನಿಕರಿಗೆ ಕುಡಿಯುವ ನೀರು ಪೂರೈಕೆ ಮಾಡಲು ಕೊಳವೆ ಬಾವಿ ಕೊರೆಯಲು ಅಡ್ಡಿ ಪಡಿಸಿ ಜನ ಸೇರಿರುವುದಕ್ಕೆ 144 ಸೆಕ್ಷನ್ ಹಾಕುವಂತೆ ತಹಶೀಲ್ದಾರ್ ಕುಂಞ ಅಹಮ್ಮದ್ ಇನ್ಸ್ ಪೆಕ್ಟರ್ ರಂಗ ಸಾಮಯ್ಯರವರಿಗೆ ಸೂಚಿಸಿದರು.

ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕಾಗಿರುವುದು ನಮ್ಮ ಧರ್ಮ ಮತ್ತು ಕರ್ತವ್ಯವೂ ಆಗಿದೆ
ಆರ್ಯಾಪು ಗ್ರಾಮದ ಕೊಲ್ಯದ ಸುಮಾರು 87 ಮನೆಗಳಿಗೆ ಕುಡಿಯಲು ನೀರಿಲ್ಲದೆ ಗಂಭೀರ ಸಮಸ್ಯೆಯಾಗಿತ್ತು.ಈ ಪ್ರದೇಶಕ್ಕೆ ನೀರು ಪೂರೈಕೆಗೆ ಬೋರ್‌ ವೆಲ್ ಕೊರೆಯಲಾಗಿದೆ. ನೀರು ಸಿಕ್ಕಿದೆ. ಮುಂದಿನ ಮೂರು ನಾಲ್ಕು ತಿಂಗಳವರೆಗೆ ಇಲ್ಲಿಗೆ ಬೋರ್ ವೆಲ್ ನೀರು ಪೂರೈಕೆಯಾಗಲಿದೆ. ಆ ಬಳಿಕ ಬಹುಗ್ರಾಮ ಕುಡಿಯುವ ನೀರು ಯೋಜನೆಯ ಮೂಲಕ ನೇರವಾಗಿ ನೀರು ಪೂರೈಕೆಯಾಗಲಿದೆ.ಬೋರ್ ವೆಲ್ ಕೊರೆಯುವ ವೇಳೆ ಕೃಷಿಕರಿಗೆ ತೊಂದರೆಯಾಗಿದೆ ಎಂಬ ವಿಚಾರಗೊತ್ತಾಗಿದೆ. ಆದರೆ ಕೃಷಿಕರು ಯಾವುದೇ ಆತಂಕ ಪಡಬೇಕಾಗಿಲ್ಲ.ಬಹುಗ್ರಾಮ ಕುಡಿಯುವ ನೀರು ಯೋಜನೆಯ ನೀರು ಪ್ರತೀ ಮನೆ ಮನೆಗೆ ಬಂದ ಬಳಿಕ ಕೊಳವೆ ಬಾವಿಯ ನೀರನ್ನು ಬಳಸದೇ ಇರುವ ಕಾರಣ ಕೃಷಿಕರಿಗೆ ತೊಂದರೆಯಾಗುವುದಿಲ್ಲ.ಕುಡಿಯುವ ನೀರಿನ ಗಂಭೀರ ಸಮಸ್ಯೆಯಾಗಿರುವ ಕಾರಣ ಅನಿವಾರ್ಯವಾಗಿ ಕಂಬಳದಡ್ಡದಲ್ಲಿ ಕೊಳವೆ ಬಾವಿ ಕೊರೆಯಲಾಗಿದೆ.ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕಾಗಿರುವುದು ನಮ್ಮಧರ್ಮ ಮತ್ತು ಕರ್ತವ್ಯವೂ ಆಗಿದೆ


ಅಶೋಕ್‌ ಕುಮಾರ್‌ ರೈ
ಶಾಸಕರು ಪುತ್ತೂರು

LEAVE A REPLY

Please enter your comment!
Please enter your name here