ನಿಜ ಅರ್ಥದಲ್ಲಿ ಮತದಾರರು ರಾಜರುಗಳಾಗಬೇಕು ಜನಪ್ರತಿನಿಧಿಗಳು, ಅಧಿಕಾರಿಗಳು ಜನಸೇವಕರಾಗಬೇಕು

0

ಮೇ 6ರ ಪುತ್ತೂರು ಬಿಡುಗಡೆ ದಿನಪತ್ರಿಕೆ ನನ್ನ ಸಂಪಾದಕತ್ವದ ಕೊನೇಯ ಪತ್ರಿಕೆಯಾಗಿರುತ್ತದೆ. ಪುತ್ತೂರು ಸೇರಿದಂತೆ ಸುಳ್ಯ, ಬೆಳ್ತಂಗಡಿಗಳಲ್ಲಿ ಸಂಪಾದಕ ಸ್ಥಾನವನ್ನು, ಪ್ರಿಂಟಿಂಗ್ ಮತ್ತು ಪಬ್ಲಿಕೇಷನ್ ನ ಜವಾಬ್ದಾರಿಯನ್ನು ಸಮರ್ಥರಿಗೆ ವಹಿಸಿಕೊಟ್ಟಿದ್ದೇನೆ. ಪುತ್ತೂರು ಸುದ್ದಿ ಬಿಡುಗಡೆ ಪತ್ರಿಕೆಯ ಸಂಪಾದಕ ಸ್ಥಾನವನ್ನು ಕರುಣಾಕರ ರೈ ಸಿ.ಹೆಚ್ ಹಾಗೂ ಪ್ರಿಂಟಿಂಗ್ ಮತ್ತು ಪಬ್ಲಿಕೇಷನ್ ಜವಾಬ್ದಾರಿಯನ್ನು ಶಿವಕುಮಾರ್ ಬಿ. ಅವರಿಗೆ ವಹಿಸಿಕೊಟ್ಟಿದ್ದೇನೆ. ಮುಂದಕ್ಕೆ ನಾನು ಸಾಮಾಜಿಕ ಆಂದೋಲನಗಳಾದ ಮತದಾರರ ಜಾಗೃತಿ, ಲಂಚ, ಭ್ರಷ್ಟಾಚಾರದ ವಿರುದ್ದ ಹೋರಾಟ, ಮಳೆಕೊಯ್ಲು, ಸ್ವಚ್ಚತಾ ಜಾಗೃತಿ, ಶಿಕ್ಷಣ ಉದ್ಯೋಗದ ಮಾಹಿತಿಯ ಕಡೆ ಹೆಚ್ಚು ಗಮನ ಕೊಡಲಿದ್ದೇನೆ. ಅದಕ್ಕಿಂತ ಮುಖ್ಯವಾಗಿ ಜನಪ್ರತಿನಿಧಿಗಳು, ಅಧಿಕಾರಿಗಳು ಜನರ ಸೇವೆಗಾಗಿ ಇರುವವರು, ಜನರು ರಾಜರುಗಳಾಗಿ ತಮಗೆ ಬೇಕಾದಂತಹ ಆಡಳಿತ ನಡೆಸಬೇಕಾದವರು ಎಂಬ ವಿಷಯದ ಬಗ್ಗೆ ಜಾಗೃತಿ ಮಾಡುತ್ತಾ ಮಹಾತ್ಮಾ ಗಾಂಧಿಯವರ ಗ್ರಾಮ ಸ್ವರಾಜ್ಯದ ಆಶಯ ಈಡೇರಿಸುವ ಕಡೆ ಹೆಚ್ಚಿನ ಸಮಯ ಉಪಯೋಗಿಸಲಿದ್ದೇನೆ.

ಅದನ್ನು ಈ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಪ್ರಧಾನ ಮಂತ್ರಿ ಮೋದಿಯವರ, ಮತ್ತಿತರ ರಾಷ್ಟ್ರೀಯ ನಾಯಕರ ಹಾಗೂ ರಾಜ್ಯ ನಾಯಕರ ಗಮನಕ್ಕೆ ತಂದು ರಾಷ್ಟ್ರ ವ್ಯಾಪಿಯಾಗಿಸುವ, ಹಾಗೆಯೇ ಸುಳ್ಯ, ಪುತ್ತೂರು, ಬೆಳ್ತಂಗಡಿ ಹಾಗೂ ಶಿವಮೊಗ್ಗ ಜಿಲ್ಲೆಯಿಂದ ಪ್ರಾರಂಭ ಮಾಡಿ ರಾಜ್ಯಕ್ಕೆ ಹರಡುವ ಬಗ್ಗೆ ಚಿಂತನೆ ನಡೆಸುತ್ತಿದ್ದೇನೆ. ಅದನ್ನು ಕಾರ್ಯರೂಪಕ್ಕೆ ತರುವ ಬಗ್ಗೆ ಸಾರ್ವಜನಿಕರಲ್ಲಿ ಹಾಗೂ ಮಾಧ್ಯಮಗಳಲ್ಲಿ ಸಲಹೆಗಳನ್ನು ಪಡೆಯಲಿದ್ದೇನೆ. ಪ್ರತಿ ಗ್ರಾಮಗಳಲ್ಲಿ ಜನರನ್ನು ಸಂಘಟಿಸಿ ಪ್ರತೀ ತಾಲೂಕು ಮಟ್ಟದಲ್ಲಿ ವ್ಯವಸ್ಥಿತವಾಗಿ ಕಾರ್ಯರೂಪಕ್ಕೆ ತರುವ ಪ್ರಯತ್ನ ನಡೆಸಲಿದ್ದೇನೆ. ಪುತ್ತೂರಿನಲ್ಲಿ ಅಶೋಕ್ ರೈ ಶಾಸಕರಾಗುವ ಮೊದಲು ಚುನಾವಣೆಯ ಸಂದರ್ಭದಲ್ಲಿ ಲಂಚ, ಭ್ರಷ್ಟಾಚಾರಕ್ಕೆ ಬಹಿಷ್ಕಾರ ಉತ್ತಮ ಸೇವೆ ನೀಡುವವರಿಗೆ ಪುರಸ್ಕಾರ ಎಂಬ ಸುದ್ದಿಯ ಜನಾಂದೋಲನವನ್ನು ಸ್ವೀಕರಿಸಿದ್ದರು. ಅಧಿಕಾರಿಗಳು ಲಂಚವಾಗಿ ಪಡೆದ ಹಣವನ್ನು ಜನರಿಗೆ ಹಿಂತಿರುಗಿಸುತ್ತೇನೆ ಎಂಬ ಘೋಷಣೆಯನ್ನು ಮಾಡಿದ್ದರು. ಅದು ಪುತ್ತೂರಿನಲ್ಲಿ ಕಾರ್ಯರೂಪಕ್ಕೆ ಬರುತ್ತಿರುವುದು ಈಗ ನಾನು ಮುಂದುವರಿಸಲು ಬಯಸುತ್ತಿರುವ ಜನಾಂದೋಲನಕ್ಕೆ ಪ್ರೋತ್ಸಾಹವನ್ನು ನೀಡಿದೆ. ಈ ಕಾರ್ಯಕ್ಕಾಗಿ ನಾನು ಪತ್ರಿಕೋದ್ಯಮದ ಜವಾಬ್ದಾರಿಯಿಂದ ಹೊರ ಬರುತ್ತಿದ್ದೇನೆ ಎಂದು ತಿಳಿಸುತ್ತಾ ಸಾರ್ವಜನಿಕರ ಬೆಂಬಲ ಸದಾ ಇರಲಿ. ಹಾಗೆಯೇ ಸುದ್ದಿ ಬಳಗದ ಪತ್ರಿಕೆಗಳಿಗೆ, ಮಾಧ್ಯಮಕ್ಕೆ ಎಂದಿನಂತೆ ಬೆಂಬಲ ನೀಡಬೇಕಾಗಿ ವಿನಂತಿಸುತ್ತಿದ್ದೇನೆ.

LEAVE A REPLY

Please enter your comment!
Please enter your name here