ಮಾಣಿ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಿಕ್ಷಕರಿಗೆ ತರಬೇತಿ ಕಾರ್ಯಾಗಾರ

0

*ಶಿಕ್ಷಕರು ಮಕ್ಕಳ ಮನಸ್ಸನ್ನು ಗೆದ್ದಾಗ ಕಲಿಕೆಯು ಸುಂದರ, ಸರಳ ಪ್ರಕ್ರಿಯೆಯಾಗುತ್ತದೆ – ಡಾ. ನಂದೀಶ್ ವೈ. ಡಿ.

*ಶಿಕ್ಷಕರು ವೈಯಕ್ತಿಕವಾಗಿ, ಔದ್ಯೋಗಿಕವಾಗಿ ಬೆಳವಣಿಗೆ ಹೊಂದಲು ತರಬೇತಿಗಳು ಪ್ರಯೋಜನಕಾರಿ: ಮಹೇಶ್ ಶೆಟ್ಟಿ ಜೆ.

ವಿಟ್ಲ: ಮಾಣಿ ಪೆರಾಜೆ ವಿದ್ಯಾನಗರದ ಬಾಲವಿಕಾಸ ಆಂಗ್ಲಮಾಧ್ಯಮ ಶಾಲೆಯಲ್ಲಿ ಮೇ. 7 ರಂದು ಸಂಸ್ಥೆಯ ಎಲ್ಲಾ ಶಿಕ್ಷಕ ವೃಂದದವರಿಗೆ, ಶಿಕ್ಷಕರು ಮತ್ತು ವಿದ್ಯಾರ್ಥಿಗಳ ನಡುವಿನ ಆರೋಗ್ಯಕರ ಬಾಂಧವ್ಯ ಹೇಗಿರಬೇಕು ಎಂಬ ವಿಚಾರದ ಕುರಿತಾಗಿ ತರಬೇತಿ ಕಾರ್ಯಾಗಾರ ನಡೆಯಿತು.

ಉಪ್ಪಿನಂಗಡಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕರು ಹಾಗೂ ಸಮಾಜ ಕಾರ್ಯ ವಿಭಾಗದ ಮುಖ್ಯಸ್ಥರಾದ ಡಾ. ನಂದೀಶ್ ವೈ. ಡಿ. ರವರು ತರಬೇತುದಾರರಾಗಿ ಆಗಮಿಸಿ ಮಕ್ಕಳ ಮನಸ್ಸನ್ನು ಶಿಕ್ಷಕರು ಗೆಲ್ಲುವುದು ಹೇಗೆ? ಭಾವನಾತ್ಮಕವಾಗಿ ಅವರೊಂದಿಗೆ ಸ್ಪಂದಿಸುವುದು ಹೇಗೆ? ಮಕ್ಕಳ ಬಾಲ್ಯಾವಸ್ಥೆಯಲ್ಲಿ ಹಾಗೂ ಹದಿಹರೆಯದಲ್ಲಿ ಶಿಕ್ಷಕರು ಅವರಿಗೆ ತೋರಿಸಬೇಕಾದ ಆತ್ಮೀಯತೆಯ ಪ್ರೀತಿ, ಕಾಳಜಿಯ ಕುರಿತಾಗಿ ಕಾರ್ಯಾಗಾರವನ್ನು ನಡೆಸಿಕೊಟ್ಟರು.
ಬಾಲವಿಕಾಸ ಟ್ರಸ್ಟಿನ ಕಾರ್ಯದರ್ಶಿ ಮಹೇಶ್ ಶೆಟ್ಟಿ ಜೆ. ರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಕಲಿಕೆ ಅನ್ನುವುದು ನಿರಂತರ ಪ್ರಕ್ರಿಯೆ. ಶಿಕ್ಷಕರು ವೈಯಕ್ತಿಕವಾಗಿ ಹಾಗೂ ಔದ್ಯೋಗಿಕವಾಗಿ ಬೆಳವಣಿಗೆ ಹೊಂದಲು ತರಬೇತಿಗಳು ಪ್ರಯೋಜನಕಾರಿ. ಅದೆಷ್ಟೋ ವಿಧದ ತರಬೇತಿಗಳಿಂದ ಅನುಭವಗಳನ್ನು ಪಡೆದುಕೊಂಡು, ತರಬೇತುದಾರರು ನಡೆಸಿಕೊಡುವ ಇಂತಹ ತರಬೇತಿಗಳನ್ನು ಶಿಕ್ಷಕರು ಸಂಪೂರ್ಣವಾಗಿ ಸದ್ವಿನಿಯೋಗಿಸಿಕೊಳ್ಳಬೇಕು ಎಂದರು.
ಶಿಕ್ಷಕಿಯರಾದ ಐಡಾ ಲೋಬೋ ಹಾಗೂ ಜಯಶೀಲ ತಮ್ಮ ಅನಿಸಿಕೆ – ಅನುಭವವನ್ನು ಹಂಚಿಕೊಂಡರು. ಶಾಲೆಯ ಆಡಳಿತಾಧಿಕಾರಿ ರವೀಂದ್ರ ದರ್ಬೆ ಸ್ವಾಗತಿಸಿ, ವಂದಿಸಿದರು. ಶಿಕ್ಷಕಿ ರಶ್ಮಿ ಕೆ. ಫೆರ್ನಾಂಡೀಸ್ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here