ಉಪ್ಪಿನಂಗಡಿ: ಇಲ್ಲಿನ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಕ್ರೀಡಾಂಗಣದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಇತಿಹಾಸದಲ್ಲೇ ಪ್ರಥಮ ಬಾರಿ ಆಯೋಜಿಸಲಾದ ಅಂತರ್ ಕಾಲೇಜು ಪುರುಷರ ತ್ರೋ ಬಾಲ್ ಪಂದ್ಯಾಟವು ಬುಧವಾರದಂದು ಉದ್ಘಾಟನೆಗೊಂಡಿತು.
ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಮಂಗಳೂರು ವಿಶ್ವ ವಿದ್ಯಾನಿಲಯದ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಡಾ. ಜೆರಾಲ್ಡ್ ಡಿಸೋಜಾ ಮಾತನಾಡಿ, ವಿಶ್ವವಿದ್ಯಾನಿಲಯ ಮಟ್ಟದಲ್ಲಿ ಪುರುಷರಿಗೆ ತ್ರೋಬಾಲ್ ಪಂದ್ಯಾಟವು ಈ ವರೆಗೆ ನಡೆದಿರಲಿಲ್ಲ. ಈ ಬಾರಿ ಉಪ್ಪಿನಂಗಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಪ್ರವೀಣ್ ಕೂಡಮರ ರವರ ಒತ್ತಾಸೆಯಂತೆ ಪಂದ್ಯಾಟವು ನಡೆಯುತ್ತಿದೆ ಹಾಗೂ ಈ ಪಂದ್ಯಾಟಕ್ಕೆ ಉಪ್ಪಿನಂಗಡಿಯಂತಹ ಗ್ರಾಮೀಣ ಕಾಲೇಜಿನ ಕ್ರೀಡಾಂಗಣವನ್ನು ಸನ್ನದ್ಧಗೊಳಿಸಿ ಪ್ರೋತ್ಸಾಹ ನೀಡಿರುವುದು ಸಂತಸದಾಯಕ ವಿದ್ಯಾಮಾನವೆಂದರು.
ಸಭಾಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಅಭಿವೃದ್ಧಿ ಸಮಿತಿಯ ಕಾರ್ಯಾಧ್ಯಕ್ಷ ಚಂದ್ರಹಾಸ ಶೆಟ್ಟಿ ಮಾತನಾಡಿ, ಸುಡುವ ಬಿಸಿಲನ್ನು ಲೆಕ್ಕಿಸದೆ ಪಂದ್ಯಾಟಕ್ಕೆ ಆಗಮಿಸಿದ ಕ್ರೀಡಾಪಟುಗಳ ಉತ್ಸಾಹವನ್ನು ಕೊಂಡಾಡಿದರಲ್ಲದೆ, ತಾನೂ ಕೂಡಾ ಕಾಲೇಜು ದಿನಗಳಲ್ಲಿ ವಾಲಿಬಾಲ್ , ಕಬಡ್ಡಿ ಪಂದ್ಯಾಟದಲ್ಲಿ ಭಾಗವಹಿಸಿ ಸಾಧಕನಾಗಿದ್ದ ಹಿನ್ನೆಲೆಯಲ್ಲಿ ತನಗೆ ಬ್ಯಾಂಕ್ ಉದ್ಯೋಗ ಅನಾಯಾಸವಾಗಿ ದೊರೆಯಿತು. ಕ್ರೀಡೆಗೆ ಮತ್ತು ಕ್ರೀಡಾಪಟುಗಳಿಗೆ ಸರ್ವತ್ರ ಪ್ರೋತ್ಸಾಹವಿರುವುದರಿಂದ ಕ್ರೀಡಾಪಟುಗಳು ಇದರ ಪ್ರಯೋಜನ ಪಡೆಯಬೇಕು. ಉಪ್ಪಿನಂಗಡಿಯಲ್ಲಿ ರಾಷ್ಟ್ರ ಮಟ್ಟದ ಕಬಡ್ಡಿ ಪಂದ್ಯಾಟ ನಡೆಸಲು ಮುಂದಾದರೆ ತಾನು ಪೂರ್ಣ ಸಹಕಾರ ನೀಡುವುದಾಗಿ ಅವರು ಭರವಸೆ ನೀಡಿದರು.
ವೇದಿಕೆಯಲ್ಲಿ ಕಾಲೇಜಿನ ಪ್ರಭಾರ ಪ್ರಾಂಶುಪಾಲ ರವಿರಾಜ್, ದೈಹಿಕ ಶಿಕ್ಷಣ ನಿರ್ದೇಶಕ ಸೇಸಪ್ಪ ಗೌಡ, ದಯಾನಂದ್ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಕಾಲೇಜು ಅಭಿವೃದ್ಧಿ ಸಮಿತಿಯ ಸದಸ್ಯರಾದ ಅಶ್ರಫ್ ಬಸ್ತಿಕಾರ್, ಡಾ. ರಾಜಾರಾಮ ಕೆ.ಬಿ., ಕೃಷ್ಣ ರಾವ್ ಆರ್ತಿಲ, ಶಾಂಭವಿ ರೈ, ಪೋಷಕರ ಸಂಘದ ಅಧ್ಯಕ್ಷೆ ಸವಿತಾ ಹರೀಶ್ , ಕಾಲೇಜಿನ ಉಪನ್ಯಾಸಕರಾದ ನಂದೀಶ್ ವೈ.ಡಿ., ಪ್ರೊ. ಹುಚ್ಚೇಗೌಡ, ದಶರಥ್, ಬಾಲಾಜಿ, ದೈಹಿಕ ಶಿಕ್ಷಣ ಶಿಕ್ಷಕ ವಿಜೇತ್ ಜೈನ್ ಮತ್ತಿತರರು ಭಾಗವಹಿಸಿದ್ದರು.
ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಪ್ರವೀಣ್ ಕೂಡಮರ ಸ್ವಾಗತಿಸಿದರು. ಅಂತಿಮ ಬಿ.ಕಾಂ. ವಿದ್ಯಾರ್ಥಿನಿ ಅನುಷಾ ಕಾರ್ಯಕ್ರಮ ನಿರೂಪಿಸಿದರು.