ಎರಡು ತಿಂಗಳಿನಿಂದ ಬಂದಿಲ್ಲ ಗೌರವಧನ-ಅಂಗನವಾಡಿ ಕಾರ್ಯಕರ್ತೆಯರು ಸಂಕಷ್ಟದಲ್ಲಿ

0

ಪುತ್ತೂರು:ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಆರೋಗ್ಯ ಇಲಾಖೆ ಸೇರಿದಂತೆ ನಾನಾ ಇಲಾಖೆಗಳ ಸಮನ್ವಯತೆಯಲ್ಲಿ ಸರಕಾರದ ಮಹತ್ವಪೂರ್ಣ ಯೋಜನೆಗಳನ್ನು ತಳಮಟ್ಟದಲ್ಲಿ ತಲುಪಿಸುವ ಜವಾಬ್ದಾರಿ ನಿಭಾಯಿಸುತ್ತಿರುವ ಅಂಗನವಾಡಿ ಕಾರ್ಯಕರ್ತೆಯರ ಬದುಕು ಮಾತ್ರ ಡೋಲಾಯಮಾನವಾಗಿದೆ.ಕಳೆದ ಎರಡು ತಿಂಗಳಿಂದ ಗೌರವಧನವಿಲ್ಲದೆ ಕುಟುಂಬ ನಿರ್ವಹಣೆಗೆ ಆರ್ಥಿಕ ಸಂಕಷ್ಟ ಎದುರಾಗಿದೆ ಎಂದು ತಮ್ಮ ಸಂಕಟವನ್ನು ಹೇಳಿಕೊಂಡಿದ್ದಾರೆ.


ಅಂಗನವಾಡಿ ಸಹಾಯಕಿಯರಿಗೆ ಮಾರ್ಚ್ ತಿಂಗಳ ತನಕ ಗೌರವ ಧನ ಪಾವತಿಯಾಗಿದೆ.ಎಪ್ರೀಲ್ ನಂತರದ ಗೌರವ ಧನ ಪಾವತಿಯಾಗಿಲ್ಲ.ಆದರೆ ಕಾರ್ಯಕರ್ತೆಯರಿಗೆ ಕಳೆದ ಫೆಬ್ರವರಿ ತಿಂಗಳ ತನಕ ಮಾತ್ರ ಗೌರವಧನ ಪಾವತಿಯಾಗಿದೆ.ಮಾರ್ಚ್ ಹಾಗೂ ಎಪ್ರೀಲ್ ತಿಂಗಳ ಗೌರವಧನ ಇನ್ನೂ ಪಾವತಿಯಾಗಿಲ್ಲ.ಇನ್ನೇನು ಮೇ ತಿಂಗಳು ಕೂಡಾ ಅಂತ್ಯವಾಗುತ್ತಾ ಬಂದಿದೆ.ಈ ರೀತಿ ಎರಡು ಮೂರು ತಿಂಗಳು ಗೌರವಧನ ದೊರೆಯದೇ ಇದ್ದರೆ ತಾವು ಜೀವನ ನಿರ್ವಹಿಸುವುದಾದರೂ ಹೇಗೆ ಎನ್ನುತ್ತಾರೆ ಅಂಗನವಾಡಿ ಕಾರ್ಯಕರ್ತೆಯರು.
ನಮಗೆ ಗೌರವ ಧನ ಪಾವತಿಯಾಗದೇ ಮೂರು ತಿಂಗಳಾಗುತ್ತಾ ಬಂದಿದೆ.ಸಕಾಲಕ್ಕೆ ಗೌರವ ಧನ ಪಾವತಿಸುವಂತೆ ಶಾಸಕರು ಹಾಗೂ ಇಲಾಖೆಯ ನಿರ್ದೇಶಕರು, ಉಪನಿರ್ದೇಶಕರಿಗೆ ಮನವಿ ಸಲ್ಲಿಸಲಾಗಿದೆ.ಶಾಸಕರಿಗೆ ಮನವಿ ಸಲ್ಲಿಸಿದ ಸಂದರ್ಭದಲ್ಲಿ ಇಲಾಖೆಯ ನಿರ್ದೇಶಕರು, ಉಪ ನಿರ್ದೇಶಕರಿಗೆ ಶಾಸಕರೇ ಖುದ್ದು ದೂರವಾಣಿ ಕರೆ ಮಾಡಿ ವಿಚಾರಿಸಿದ್ದು ಎರಡು ದಿನದಲ್ಲಿ ಗೌರವಧನ ಪಾವತಿಸುವುದಾಗಿ ಅವರು ಶಾಸಕರಲ್ಲಿ ತಿಳಿಸಿದ್ದರು.ಆದರೆ ಅಧಿಕಾರಿಗಳು ಶಾಸಕರಲ್ಲಿ ಹೇಳಿ ಎರಡು ವಾರಗಳು ಕಳೆದರೂ ಗೌರವಧನ ಮಾತ್ರ ಪಾವತಿಯಾಗಿಲ್ಲ.


ಆಲ್‌ರೌಂಡರ್ ಕೆಲಸ:
ಅಂಗನವಾಡಿ ಕಾರ್ಯಕರ್ತೆಯರು ಮಕ್ಕಳಿಗೆ ಶಾಲಾ ಪೂರ್ವ ಶಿಕ್ಷಣ ಕಲಿಸುವುದು ಮಾತ್ರವಲ್ಲದೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಆರೋಗ್ಯ ಇಲಾಖೆ ಸೇರಿದಂತೆ ನಾನಾ ಇಲಾಖೆಗಳ ಸಮನ್ವಯತೆಯಲ್ಲಿ ಸರಕಾರದ ಮಹತ್ವಪೂರ್ಣ ಯೋಜನೆಗಳನ್ನು ತಲುಪಿಸುವ ಹೊಣೆಯನ್ನೂ ನಿಭಾಯಿಸುತ್ತಾರೆ.ಶಾಲಾ ಪೂರ್ವ ಶಿಕ್ಷಣ, ಆರೋಗ್ಯ ತಪಾಸಣೆ, ಪೌಷ್ಠಿಕ ಆಹಾರ ವಿತರಣೆ, ಚುನಾವಣಾ ಸಮಯದಲ್ಲಿ ಬಿಎಲ್‌ಓ ಆಗಿ ಕರ್ತವ್ಯ ನಿರ್ವಹಣೆ, ನಾನಾ ಜಾಗೃತಿ ಕಾರ್ಯಕ್ರಮಗಳ ಹೊಣೆಗಾರಿಕೆ ತಮಗಿದ್ದರೂ, ತಮಗೆ ಬರಬೇಕಾದ ಅಲ್ಪ ಗೌರವ ಧನಕ್ಕಾಗಿ ಚಾತಕ ಪಕ್ಷಿಯಂತೆ ಕಾಯಬೇಕಾದ ಪರಿಸ್ಥಿತಿ ನಮ್ಮದಾಗಿದೆ ಎನ್ನುವ ನೋವು ಅಂಗನವಾಡಿ ಕಾರ್ಯಕರ್ತೆಯರದ್ದು.


ಮಕ್ಕಳಿಗೆ ಮಾತ್ರ ರಜೆ:
ಅಂಗನವಾಡಿ ಕೇಂದ್ರಗಳಿಗೆ ವರ್ಷದಲ್ಲಿ 15 ದಿನ ಮಾತ್ರ ರಜೆಯಿರುವುದು.ಅದರಲ್ಲಿ ಎರಡು ಆದಿತ್ಯವಾರಗಳು.ರಜೆ ಮಕ್ಕಳಿಗೆ ಮಾತ್ರ.ನಮಗೆ ರಜೆಯಲ್ಲಿಯೂ ಕೆಲಸವಿದೆ.ರಜೆಯ ಅವಧಿಯಲ್ಲಿ ಮೇ 12ರ ತನಕ ನಾವು ಕರ್ತವ್ಯ ನಿರ್ವಹಿಸಿದ್ದೇವೆ.ಅಂಗನವಾಡಿಗಳಿಗೆ ಆಹಾರಗಳನ್ನು ಸರಬರಾಜು ಮಾಡುವುದು ರಜಾ ದಿನಗಳಲ್ಲಿಯೇ.ಹೀಗಾಗಿ ರಜೆಯಿದ್ದರೂ ಕರ್ತವ್ಯ ನಿರ್ವಹಿಸಲೇಬೇಕಾದ ಅನಿವಾರ್ಯತೆ.ವರ್ಷದ ರಜಾ ಸಮಯದಲ್ಲಿ ಆಹಾರ ಪೂರೈಕೆ ಮಾಡದಂತೆ ಮನವಿ ಮಾಡಿದ್ದರೂ ಯಾವುದೇ ಸ್ಪಂದನೆಯಿಲ್ಲ.ಮತ್ತೆ ರಜೆಯ ಸಮಯದಲ್ಲಿಯೇ ಆಹಾರ ಪೂರೈಕೆ ಮಾಡುತ್ತಿದ್ದಾರೆ ಎಂದು ಕಾರ್ಯಕರ್ತೆಯರು ಅಳಲನ್ನು ತೋಡಿಕೊಂಡಿದ್ದಾರೆ.


ಕುಟುಂಬ ನಿರ್ವಹಣೆ ಹೇಗೆ?:
ಅಂಗನವಾಡಿಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಹೆಚ್ಚಿನ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ಬಡ ಮತ್ತು ಮಧ್ಯಮ ವರ್ಗದ ಕುಟುಂಬದವರು.ಸಕಾಲಕ್ಕೆ ಗೌರವಧನ ಸಿಗದ ಕಾರಣ ನಮಗೆ ಕುಟುಂಬ ನಿರ್ವಹಣೆ ಕಷ್ಟಸಾಧ್ಯವಾಗಿದೆ.ನಮ್ಮ ಕುಟುಂಬಗಳು ಇದನ್ನೇ ನಂಬಿಕೊಂಡು ಜೀವನ ನಡೆಸುತ್ತಿದ್ದೇವೆ.ಇನ್ನು ಶಾಲೆಗಳು ಪುನರಾರಂಭವಾಗಲಿದೆ.ಮಕ್ಕಳ ದಾಖಲಾತಿ, ಶುಲ್ಕ, ಸಮವಸ, ಪುಸ್ತಕಗಳ ಖರೀದಿ ಮೊದಲಾದ ಖರ್ಚುಗಳಿಗೆ ಹಣ ಭರಿಸುವುದು ಹೇಗೆ ಎಂದು ದಿಕ್ಕು ತೋಚದಾಗಿದೆ ಎನ್ನುವುದು ಕಾರ್ಯಕರ್ತೆಯರ ಅಳಲು.


370 ಅಂಗನವಾಡಿ ಕೇಂದ್ರಗಳು:
ಪುತ್ತೂರು ಹಾಗೂ ಕಡಬ ತಾಲೂಕು ಸೇರಿದಂತೆ ಉಭಯ ತಾಲೂಕುಗಳಲ್ಲಿ 370 ಅಂಗನವಾಡಿ ಕೇಂದ್ರಗಳಿವೆ.ಇದರಲ್ಲಿ 370 ಕಾರ್ಯಕರ್ತೆಯರು ಹಾಗೂ 370 ಸಹಾಯಕಿಯರು ಕರ್ತವ್ಯ ನಿರ್ವಹಿಸುತ್ತಿದ್ದಾರೆ.ಮಾಸಿಕವಾಗಿ ಕಾರ್ಯಕರ್ತೆಯರಿಗೆ ರೂ.11,000 ಹಾಗೂ ಸಹಾಯಕಿಯರಿಗೆ ರೂ.5,500ಗೌರವಧನ ಪಾವತಿಯಾಗುತ್ತಿದೆ.
ಮೊಟ್ಟೆ, ತರಕಾರಿ ಹಣವೂ ಪೆಂಡಿಂಗ್: ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳು, ಗರ್ಭಿಣಿ, ಬಾಣಂತಿಯರಿಗೆ ವಿತರಿಸುವ ಮೊಟ್ಟೆ ಹಾಗೂ ತರಕಾರಿಯ ಮೊತ್ತವೂ ಕಳೆದ ಎರಡು ತಿಂಗಳುಗಳಿಂದ ಪಾವತಿಯಾಗಿಲ್ಲ.ಇದು ಕಾರ್ಯಕರ್ತೆಯರಿಗೆ ಮತ್ತೊಂದು ಹೊರೆಯಾಗಿದೆ.ಒಂದು ಮೊಟ್ಟೆಗೆ ರೂ.6ರಂತೆ ಹಾಗೂ ತಲಾ ಒಂದು ಮಗುವಿಗೆ ತರಕಾರಿಗಳಿಗೆ ತಿಂಗಳಿಗೆ ರೂ.50ರಂತೆ ಇಲಾಖೆ ದರ ನಿಗದಿಪಡಿಸಿದ್ದರೂ ಕಾರ್ಯಕರ್ತೆಯರು ಎರಡು ತಿಂಗಳಲ್ಲಿ ತಮ್ಮ ಕೈಯಿಂದಲೇ ಪಾವತಿಸುವಂತಾಗಿದೆ.ಗೌರವ ಧನ ಬಾಕಿಯಿರುವುದರ ಜೊತೆಗೆ ಮೊಟ್ಟೆ, ತರಕಾರಿ ಹಣವೂ ಬಾಕಿಯಾಗಿರುವುದರಿಂದ ಕಾರ್ಯಕರ್ತೆಯರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.

ಅಂಗನವಾಡಿ ಕಾರ್ಯಕರ್ತೆ,ಸಹಾಯಕಿಯರಲ್ಲಿ ಬಹುತೇಕ ಮಂದಿ ಗೌರವ ಧನದಲ್ಲೇ ಕುಟುಂಬ ನಿರ್ವಹಣೆ ಮಾಡುತ್ತಿದ್ದು ಆರ್ಥಿಕ ಸಂಕಷ್ಟವಿದೆ.ಕಳೆದ ಎರಡು ತಿಂಗಳಿಂದ ಗೌರವಧನ ನೀಡಿಲ್ಲ.ಕುಟುಂಬ ನಿರ್ವಹಣೆ, ಮಕ್ಕಳ ಶಾಲಾ ದಾಖಲಾತಿಗೆ ಸಮಸ್ಯೆಯಾಗುತ್ತಿದೆ.ಹೀಗಾಗಿ ಪ್ರತಿ ತಿಂಗಳ 5ನೇ ತಾರೀಕಿನ ಒಳಗಡೆ ಗೌರವಧನ ಪಾವತಿಯಾಗಬೇಕು ಎಂಬ ಆಗ್ರಹ ನಮ್ಮದು. ಮೇ 27ಕ್ಕೆ ಅಂಗನವಾಡಿ ಪುನರಾರಂಭವಾಗುತ್ತದೆ.ಆ ಬಳಿಕ ಕಾರ್ಯಕರ್ತೆಯರು, ಸಹಾಯಕಿಯರ ಸಭೆ ನಡೆಸಿ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು.ಮೇ 30ರ ಒಳಗಾಗಿ ಗೌರವ ಧನ ಪಾವತಿಯಾಗದಿದ್ದಲ್ಲಿ ಜಿಲ್ಲೆಯ ಎಲ್ಲಾ ತಾಲೂಕುಗಳ ಅಂಗನವಾಡಿ ಕಾರ್ಯಕರ್ತೆಯರು ಒಟ್ಟು ಸೇರಿ ಮಂಗಳೂರು ಉಪನಿರ್ದೇಶಕರ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಲಾಗುವುದು

-ಕಮಲ, ಅಧ್ಯಕ್ಷರು ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರ ಸಂಘ

ಒಂದೆರಡು ದಿನಗಳಲ್ಲಿ ಕ್ಲಿಯರ್ ಆಗುತ್ತೆ
ಅಂಗನವಾಡಿ ಕಾರ್ಯಕರ್ತೆಯರಿಗೆ ಎರಡು ತಿಂಗಳ ಗೌರವ ಧನ ಬಾಕಿ ವಿಚಾರ ತನ್ನ ಗಮನದಲ್ಲಿದೆ.ಕೆಲ ದಿನಗಳ ಹಿಂದೆ ಸಂಘದ ಪ್ರಮುಖರು ನನ್ನ ಬಳಿ ಈ ಕುರಿತು ಮನವಿ ಮಾಡಿದ್ದರು.ಇಲಾಖೆಯ ನಿರ್ದೇಶಕರ ಜೊತೆ ಮಾತನಾಡಿದ್ದೆ.ವೇತನ ಶೀಘ್ರ ಬಿಡುಗಡೆ ಮಾಡುವುದಾಗಿ ಅವರು ತಿಳಿಸಿದ್ದರು.ಇವತ್ತು ಸರಕಾರದ ಹಣಕಾಸು ಇಲಾಖೆಯ ಅಽಕಾರಿ ಜೊತೆಗೂ ಮಾತನಾಡಿದ್ದೇನೆ.ವಾರದೊಳಗೆ ವೇತನ ಬಿಡುಗಡೆ ಮಾಡುವುದಾಗಿ ತಿಳಿಸಿದ್ದು ಶೀಘ್ರದಲ್ಲೇ ವೇತನ ದೊರೆಯಲಿದೆ.ವಿಚಾರವನ್ನು ಸರಕಾರದ ಗಮನಕ್ಕೂ ತಂದಿದ್ದೇನೆ.ಕನಿಷ್ಟ ವೇತನದಲ್ಲಿ ದುಡಿಯುವ ಕಾರ್ಯಕರ್ತೆಯರಿಗೆ ಯಾವುದೇ ತೊಂದರೆಯಾಗಬಾರದು.ಅಽಕಾರಿಗಳು ಚುನಾವಣೆ ಕಾರ್ಯಕ್ಕಾಗಿ ಹೋಗಿದ್ದರಿಂದಾಗಿಯೂ ಸ್ವಲ್ಪ ಸಮಸ್ಯೆಯಾಗಿದೆ.ಒಂದೆರಡು ದಿನಗಳಲ್ಲಿ ಗೌರವ ಧನ ಪಾವತಿಗೆ ವ್ಯವಸ್ಥೆಯಾಗಲಿದೆ
ಅಶೋಕ್ ಕುಮಾರ್ ರೈ, ಶಾಸಕರು, ಪುತ್ತೂರು

ಬರಹ: ಯತೀಶ್‌ ಉಪ್ಪಳಿಗೆ

LEAVE A REPLY

Please enter your comment!
Please enter your name here