ಪುತ್ತೂರು: ಈಗಾಗಲೇ ತುಳು ಚಿತ್ರರಂಗದಲ್ಲಿ ಬಹಳಷ್ಟು ಕುತೂಹಲ ಮೂಡಿಸಿರುವ ತುಳು ಚಲನಚಿತ್ರ” ತುಡರ್, ದ ಫೈರ್ ವಿಥ್ ಇನ್ ಇದರ ಪ್ರೀಮಿಯರ್ ದುಬೈ, ಅಬುಧಾಬಿ, ಕತಾರ್ ನಲ್ಲಿ ಯಶಸ್ವಿಯಾಗಿ ನೆರವೇರಿಸಿ ಇದೇ ಜೂನ್ ತಿಂಗಳ 7ರಂದು ಪುತ್ತೂರಿನ ಭಾರತ್ ಸಿನಿಮಾಸ್ ನಲ್ಲಿ ತುಳುನಾಡಿನ ಚೊಚ್ಚಲ ಪ್ರೀಮಿಯರ್ ಶೋ ನಡೆಯಲಿದೆ. ಜೂನ್ 14ರಂದು ಕರುನಾಡಿನಾದ್ಯಂತ ತೆರೆ ಕಾಣಲಿದ್ದು ಪ್ರೇಕ್ಷಕರು ಚಿತ್ರ ವೀಕ್ಷಿಸಿ ಚಿತ್ರತಂಡವನ್ನು ಹರಸಬೇಕಾಗಿದೆ ಎಂದು ಚಿತ್ರದ ನಿರ್ದೇಶಕ ಎಲ್ಟನ್ ಮಸ್ಕರೇನ್ಹಸ್ ರವರು ಹೇಳಿದರು.
ಅವರು ಪುತ್ತೂರು-ಬಪ್ಪಳಿಗೆ ಆಶ್ಮಿ ಕಂಫರ್ಟ್ ನಲ್ಲಿ ಏರ್ಪಡಿಸಿದ ತುಡರ್ ಚಿತ್ರದ ಪ್ರಚಾರ ಸಭೆಯಲ್ಲಿ ಮಾತನಾಡಿದರು. ತೆರೆ ಕಾಣಲಿರುವ ಈ ಚಿತ್ರದ ತಾರಾಗಣದಲ್ಲಿ ನಾಯಕನಟನಾಗಿ ಸಿದ್ಧಾರ್ಥ ಶೆಟ್ಟಿ, ನಾಯಕನಟಿಯಾಗಿ ದೀಕ್ಷಾ ಭೀಷೆ, ತುಳುನಾಡ ಮಾಣಿಕ್ಯ ಅರವಿಂದ್ ಬೋಳಾರ್, ಪ್ರಜ್ವಲ್ ಬಂಬ್ರಾಣ, ಹರ್ಷಿತಾ ಶೆಟ್ಟಿ, ಅನ್ವಿತ ಸಾಗರ್, ಸದಾಶಿವ ಅಮೀನ್, ರೂಪಾ ವರ್ಕಾಡಿ, ನಮಿತಾ ಕೂಳೂರು, ಉಮೇಶ್ ಮಿಜಾರ್, ಅಶೋಕ್ ಬಿ ಇದ್ದಾರೆ. ಮೋಹನ್ ರಾಜ್ ಕಥೆ, ಚಿತ್ರಕಥೆ, ಸಾಹಿತ್ಯ, ಸಂಭಾಷಣೆ ಬರೆದಿರುವ ಈ ಚಿತ್ರಕ್ಕೆ ಎಲ್ಟನ್ ಮಸ್ಕರೇನಸ್ ಹಾಗೂ ತೇಜೇಶ್ ಪೂಜಾರಿಯವರ ನಿರ್ದೇಶನವಿದ್ದು, ವಿಲ್ಸನ್ ರೆಬೆಲೋ ನಿರ್ಮಾಪಕರಾಗಿ, ಹರೀಶ್ ಶೆಟ್ಟಿ, ವಿದ್ಯಾ ಸಂಪತ್ ಸಹ ನಿರ್ಮಾಪಕರಾಗಿ ನಿರ್ಮಾಣದ ಹೊಣೆ ಹೊತ್ತಿದ್ದಾರೆ. ಸುಮುಖ ಪ್ರೊಡಕ್ಷನ್ ರವರ ಚೊಚ್ಚಲ ಚಿತ್ರ ಇದಾಗಿದ್ದು ಎಲ್ಲರ ಮನದಲ್ಲಿ ಮನೆಮಾಡುವ ಎಲ್ಲಾ ಲಕ್ಷಣ ತುಡರ್ ಚಿತ್ರದಲ್ಲಿದೆ ಎಂದು ಸಿನಿ ರಸಿಕರು ಹೇಳಿಕೊಳ್ಳುತ್ತಿದ್ದಾರೆ.
ಈ ಸಂದರ್ಭದಲ್ಲಿ ಚಿತ್ರದ ನಾಯಕನಟ ಸಿದ್ಧಾರ್ಥ್ ಶೆಟ್ಟಿ, ನಿರ್ಮಾಪಕ ವಿಲ್ಸನ್ ರೆಬೆಲ್ಲೋರವರೊಂದಿಗೆ ಚಿತ್ರತಂಡ ಉಪಸ್ಥಿತರಿದ್ದು ರೋಟರಿ ಕ್ಲಬ್ ಪುತ್ತೂರು ಸಿಟಿ ಮಾಜಿ ಅಧ್ಯಕ್ಷ ಜೆರೋಮಿಯಸ್ ಪಾಯಿಸ್, ಜ್ಯೋ ಡಿ’ಸೋಜ, ಪದ್ಮನಾಭ ಶೆಟ್ಟಿ, ರೋಟರಿ ಸೆಂಟ್ರಲ್ ಅಧ್ಯಕ್ಷ ಡಾ.ರಾಜೇಶ್ ಬೆಜ್ಜಂಗಳ, ಸ್ಥಾಪಕಾಧ್ಯಕ್ಷ ಸಂತೋಷ್ ಶೆಟ್ಟಿ, ರೋಟರಿ ಯುವದ ಮಾಜಿ ಅಧ್ಯಕ್ಷ ಪುತ್ತೂರು ಉಮೇಶ್ ನಾಯಕ್, ಡಾ.ಹರ್ಷಕುಮಾರ್ ರೈ ಮಾಡಾವು, ಲಯನ್ಸ್ ಕ್ಲಬ್ ಪುತ್ತೂರ್ದ ಮುತ್ತು ಸ್ಥಾಪಕಾಧ್ಯಕ್ಷ ಲ್ಯಾನ್ಸಿ ಮಸ್ಕರೇನ್ಹಸ್, ಪ್ಯಾಟ್ರಿಕ್ ಸಿಪ್ರಿಯನ್ ಮಸ್ಕರೇನ್ಹಸ್, ನ್ಯಾಯವಾದಿ ಹರಿಣಾಕ್ಷಿ ಜೆ.ಶೆಟ್ಟಿರವರು ಉಪಸ್ಥಿತರಿದ್ದು ಚಿತ್ರತಂಡದ ಯಶಸ್ವಿಗೆ ದುಡಿಯಲಿದ್ದೇವೆ ಎಂದರು.