ಉಪ್ಪಿನಂಗಡಿ: ಇಲ್ಲಿನ ರಾಷ್ಟ್ರೀಯ ಹೆದ್ದಾರಿಯಿಂದ ಉಪ್ಪಿನಂಗಡಿ- ಗುರುವಾಯನಕೆರೆ ರಾಜ್ಯ ಹೆದ್ದಾರಿಗೆ ತಿರುವು ಪಡೆಯುವಲ್ಲಿದ್ದ ಒಳ ಚರಂಡಿಯ ಕಾಮಗಾರಿ ನಡೆಯುತ್ತಿದ್ದು, ಶಾಸಕ ಅಶೋಕ್ ಕುಮಾರ್ ರೈಯವರು ಮೇ .21ರಂದು ಕಾಮಗಾರಿ ವೀಕ್ಷಣೆ ನಡೆಸಿದರು.
ಉಪ್ಪಿನಂಗಡಿ ಪೇಟೆಯ ರಾಜಕಾಲುವೆಯಾಗಿದ್ದ ಈ ಚರಂಡಿಗೆ ಹಲವಾರು ಕಡೆಗಳಿಂದ ತ್ಯಾಜ್ಯ ನೀರು ಹರಿದು ಬರುತ್ತಿದ್ದು, ಇದು ರಾಷ್ಟ್ರೀಯ ಹೆದ್ದಾರಿಗೆ ಸಂಪರ್ಕ ಕಲ್ಪಿಸುವ ಲೋಕೋಪಯೋಗಿ ರಸ್ತೆಯ ಅಡಿ ಭಾಗದಿಂದ ಹಾದು ಹೋಗುತ್ತದೆ. ಇದಕ್ಕೆ ಸಣ್ಣ ಮೋರಿ ಅಳವಡಿಸಿದ್ದರಿಂದ ಹಾಗೂ ಅದರಲ್ಲಿ ಹೂಳು ತುಂಬಿದ್ದರಿಂದ ಇದರಲ್ಲಿ ವರ್ಷವಿಡೀ ಕೊಳಚೆ ನೀರು ನಿಂತು ಪರಿಸರದ ದುರ್ವಾಸನೆಗೆ ಇದು ಕಾರಣವಾಗಿತ್ತು. ಅಲ್ಲದೇ ಪ್ರತಿ ಮಳೆಗಾಲದಲ್ಲಿ ಈ ಚರಂಡಿಯಲ್ಲಿ ತುಂಬುವ ನೀರು ಪರಿಸರದ ಮನೆ, ಅಂಗಡಿ, ಹೊಟೇಲ್‌ಗಳಿಗೆ ನುಗ್ಗುತ್ತಿದ್ದುದರಿಂದ ಸಂತ್ರಸ್ತರು ನರಕ ಯಾತನೆ ಅನುಭವಿಸುವಂತಾಗಿತ್ತು. ಸುಮಾರು 40 ವರ್ಷಗಳಿಂದ ಈ ಸಮಸ್ಯೆ ಸಮಸ್ಯೆಯಾಗಿಯೇ ಉಳಿದಿತ್ತು. ಅಶೋಕ್ ಕುಮಾರ್ ರೈಯವರು ಶಾಸಕರಾದ ಬಳಿಕ ಇಲ್ಲಿಗೆ ಭೇಟಿ ನೀಡಿ ಚತುಷ್ಪಥ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಸಂದರ್ಭ ಇದನ್ನು ಸರಿಪಡಿಸುವಂತೆ ಎಂಜಿನಿಯರ್‌ಗಳಿಗೆ ಸೂಚನೆ ನೀಡಿದ್ದರು. ಅಲ್ಲದೇ, ಕೆಲವು ದಿನಗಳ ಹಿಂದೆ ಪುತ್ತೂರು ಸಹಾಯಕ ಆಯುಕ್ತರು ಇಲ್ಲಿಗೆ ಭೇಟಿ ನೀಡಿ ರಾಷ್ಟ್ರೀಯ ಹೆದ್ದಾರಿ ಎಂಜಿನಿಯರ್‌ಗಳಿಗೆ ತಕ್ಷಣವೇ ಈ ಕಾಮಗಾರಿಯನ್ನು ಕೈಗೆತ್ತಿಕೊಳ್ಳುವಂತೆ ನಿರ್ದೇಶನ ನೀಡಿದ್ದರು. ಅದರಂತೆ ಈಗ ಭರದಿಂದ ಕಾಮಗಾರಿ ನಡೆಯುತ್ತಿದ್ದು, ಕೆಲವೇ ದಿನಗಳಲ್ಲಿ ಇದು ಪೂರ್ಣಗೊಳ್ಳಲಿದೆ. ಇದು ಪೂರ್ಣಗೊಂಡಾಗ ಸುಮಾರು ೪೦ ವರ್ಷಗಳ ಕಾಲದ ಇಲ್ಲಿನ ಚರಂಡಿ ಸಮಸ್ಯೆಯು ಬಗೆಹರಿಯಲಿದೆ.
ಕಳೆದ ಹಲವು ವರ್ಷಗಳಿಂದ ಈ ಚರಂಡಿಯಲ್ಲಿ ಮಲೀನ ನೀರು ಶೇಖರಗೊಂಡು ಪರಿಸರದ ಜನತೆ ಸಂಕಷ್ಟ ಎದುರಿಸುವಂತಾಗಿತ್ತು. ನಾನು ಶಾಸಕನಾದ ಪ್ರಾರಂಭದಲ್ಲೇ ಇಲ್ಲಿನ ಸಮಸ್ಯೆಯನ್ನು ಕೇಳಿ ಇಲ್ಲಿಗೆ ಭೇಟಿ ನೀಡಿ, ಇದನ್ನು ಬಗೆಹರಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೆ. ಇದೀಗ ಚತುಷ್ಪಥ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಸಂದರ್ಭ ಇದರ ಕಾಮಗಾರಿಯೂ ನಡೆಯುತ್ತಿದೆ. ರಸ್ತೆಯ ಅಡಿಭಾಗದಲ್ಲಿ ದೊಡ್ಡ ಬಾಕ್ಸ್‌ನಂತಹ ಮೋರಿ ಅಳವಡಿಸುವ ಕಾರ್ಯ ನಡೆಯುತ್ತಿದೆ. ಇನ್ನು ಕೆಲವೇ ದಿನಗಳಲ್ಲಿ ಇದು ಪೂರ್ಣಗೊಳ್ಳಲಿದ್ದು, ಆ ಬಳಿಕ ಇಲ್ಲಿನ ಬಹುಕಾಲದ ಸಮಸ್ಯೆ ಪರಿಹಾರವಾಗಲಿದೆ.
ಅಶೋಕ್ ಕುಮಾರ್ ರೈ
ಶಾಸಕರು, ಪುತ್ತೂರು ವಿಧಾನ ಸಭಾ ಕ್ಷೇತ್ರ