ಪುತ್ತೂರು: ಕಸ್ವಿ ಹಸಿರು ದಿಬ್ಬಣ ರಾಮಕುಂಜ ಇದರ ವತಿಯಿಂದ ಕಾರ್ಮಿಕರಿಗೆ ಗೌರವ ಸಮರ್ಪಣೆ ಕಾರ್ಯಕ್ರಮ ಮಂಗಳೂರಿನ ಎಕ್ಕೂರಿನಲ್ಲಿ ನಡೆಯಿತು. ಎಕ್ಕೂರು ಪರಿಸರದಲ್ಲಿ ಕಳೆದ ಹಲವು ವರುಷದಿಂದ ಪೌರ ಕಾರ್ಮಿಕರಾಗಿ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ಯಮುನಾ ಹಾಗೂ ಎಕ್ಕೂರು ಪರಿಸರಕ್ಕೆ ಕಳೆದ 46 ವರುಷದಿಂದ ಮಳೆ ಬಿಸಿಲೆನ್ನದೆ ಪ್ರತಿ ದಿನ ಬೆಳಿಗ್ಗೆ ಮನೆ ಮನೆಗೆ ಪೇಪರ್ ಹಾಕುತ್ತಿರುವ ಹಿರಿಯರಾದ ತಿಮ್ಮಪ್ಪ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮವನ್ನು ಚಲನಚಿತ್ರ ನಟ ಅರವಿಂದ ಬೋಳಾರ್ ಉದ್ಘಾಟಿಸಿ ಮಾತನಾಡಿ, ಸನ್ಮಾನಿತರು ತಮ್ಮ ಜೀವನ ಪೂರ್ತಿ ನೆನಪಿಟ್ಟುಕೊಳ್ಳುವ ವಿಶೇಷ ಕಾರ್ಯಕ್ರಮ. ಇಂತಹ ಒಂದು ವಿಶೇಷ ಕಾರ್ಯಕ್ರಮದಲ್ಲಿ ಉದ್ಘಾಟಕರಾಗಿ ಭಾಗವಹಿಸಲು ಅವಕಾಶ ಸಿಕ್ಕಿರುವುದು ನನ್ನ ಸೌಭಾಗ್ಯ ಎಂದರು. ಮಂಗಳೂರು ಮಹಾನಗರ ಪಾಲಿಕೆ ಸದಸ್ಯರಾದ ಪ್ರವೀಣ್ ಚಂದ್ರ ಆಳ್ವ ಮಾತನಾಡಿ, ಶಿಕ್ಷಣದಿಂದ ಬದಲಾವಣೆ ಸಾಧ್ಯ. ಹುಟ್ಟುಹಬ್ಬಕ್ಕೆ ಗಿಡ ನೆಡುವವರಿಗೆ ಪ್ರೋತ್ಸಾಹಕವಾಗಿ ಪ್ರಮಾಣ ಪತ್ರ ನೀಡುತ್ತಾ ಬರುತ್ತಿರುವ ಕಸ್ವಿ ಹಸಿರು ದಿಬ್ಬಣದ ಕಾರ್ಯವನ್ನು ಶ್ಲಾಗಿಸುತ್ತಾ ಇಂತಹ ಪರಿಸರ ಕಾಳಜಿ ಜಾಗೃತಿಯಿಂದ ಮುಂದೆ ಬಹುದೊಡ್ಡ ಪ್ರಕೃತಿಯಲ್ಲಿನ ಹಸಿರಿನ ಬದಲಾವಣೆ ಸಾದ್ಯ ಎಂದರು. ಪ್ರೊಫೆಸರ್ ಡಾ.ಶಿವಕುಮಾರ್ ಮಗದ ಅವರು ಮಾತನಾಡಿ, ಔದಾಸಿನ್ಯದಿಂದ ಕಡೆಗಣಿಸುವ ಉದ್ಯೋಗ ಯಾವುದು ಇಲ್ಲ. ಯಾವುದು ಮೇಲಲ್ಲ ಯಾವುದು ಕೀಳಲ್ಲ ನೀನು ಮಾಡುತ್ತಿರುವ ಕೆಲಸ ಓಣಿ ಗುಡಿಸುವುದೇ ಆಗಿರಬಹುದು. ಆದರೆ ನೀನು ಗುಡಿಸಿದ ಓಣಿ ಪ್ರಪಂಚದಲ್ಲೇ ಅಚ್ಚುಕಟ್ಟಾದ ಓಣಿಯಾಗಿರಬೇಕು ಎಂದು ಸಂದೇಶ ನೀಡಿದರು.
ಕಾರ್ಯಕ್ರಮದಲ್ಲಿ ಕಲ್ಜಿಗ ಚಲನಚಿತ್ರ ನಿರ್ದೇಶಕ ಸುಮನ್ ಸುವರ್ಣ, ನಿವೃತ್ತ ವಿಜಯ ಬ್ಯಾಂಕ್ ಮ್ಯಾನೇಜರ್ ಶಶಿಧರ್ ಶೆಟ್ಟಿ, ಕಸ್ವಿ ಹಸಿರು ದಿಬ್ಬಣದ ಅಧ್ಯಕ್ಷೆ ಶ್ರದ್ಧಾ ರಾಮಕುಂಜ, ಹರೀಶ್ ಅಡ್ಯಾರ್ ಹಾಗೂ ಇನ್ನಿತರ ಗಣ್ಯರು ಉಪಸ್ಥಿತರಿದ್ದರು. ಕಸ್ವಿ ಹಸಿರು ದಿಬ್ಬಣದ ಕೇಶವ ರಾಮಕುಂಜ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಪತ್ ಶೆಟ್ಟಿ ವಂದಿಸಿದರು.