ಪುತ್ತೂರು: ಜೂನ್ 14ಕ್ಕೆ ಕರುನಾಡಿನಾದ್ಯಂತ ಬಿಡುಗಡೆಯಾಗಲಿರುವ ತುಳು ಚಿತ್ರರಂಗದ ಬಹು ನಿರೀಕ್ಷೆಯ, ಸಾಮಾಜಿಕ, ಸಾಂಸಾರಿಕ, ಸಸ್ಪೆನ್ಸ್ ಹಾಗೂ ಅದ್ದೂರಿ ತಾರಾಗಣದ ಮಾಸ್ ಸಿನೆಮಾ “ತುಡರ್” ಚಿತ್ರದ ಪೋಸ್ಟರ್ ಹಾಗೂ ಟ್ರೈಲರ್ ಬಿಡುಗಡೆ ಮೇ.21ರಂದು ರೋಟರಿ ಮನೀಷಾ ಸಭಾಂಗಣದಲ್ಲಿ ನೆರವೇರಿತು.
ರೋಟರಿ ಕ್ಲಬ್ ಪುತ್ತೂರು ಸಿಟಿಯ ಆತಿಥ್ಯದಲ್ಲಿ ನಡೆದ ಚಿತ್ರದ ಪೋಸ್ಟರ್ ಹಾಗೂ ಟ್ರೈಲರ್ ಬಿಡುಗಡೆ ಸಮಾರಂಭದಲ್ಲಿ ಹೊಟೇಲ್ ಅಶ್ವಿನಿಯ ಮಾಲಕ ಹಾಗೂ ಪುತ್ತೂರು ಯಕ್ಷಧ್ರುವ ಪಟ್ಲ ಫೌಂಡೇಶನ್‌ನ ಅಧ್ಯಕ್ಷ ಕರುಣಾಕರ್ ರೈ ದೇರ್ಲರವರು ಚಿತ್ರದ ಪೋಸ್ಟರ್ ಬಿಡುಗಡೆಗೊಳಿಸಿ ಮಾತನಾಡಿ, ತುಳು ಭಾಷೆ ಎಂಬುವುದು ನಮಗೆ ಹೆಮ್ಮೆಯ ಭಾಷೆ. ಈಗಾಗಲೇ ತುಳು ಭಾಷೆಯಲ್ಲಿ ಅನೇಕ ಚಿತ್ರಗಳು ಬಂದಿವೆ. ಇದೀಗ ತುಡರ್ ಚಿತ್ರ ಹೊಸ ಸೇರ್ಪಡೆಯಾಗಿದ್ದು ಈ ಚಿತ್ರವು ಜೂನ್‌ನಲ್ಲಿ ಬಿಡುಗಡೆಯಾಗುತ್ತಿದೆ. ಸಿನೆಮಾ ಪ್ರೇಕ್ಷಕರು ಈ ತುಳು ಚಿತ್ರವನ್ನು ವೀಕ್ಷಿಸುವ ಮೂಲಕ ಚಿತ್ರವು ಯಶಸ್ವಿಯಾಗಲಿ, ಚಿತ್ರ ತಂಡಕ್ಕೆ ಲಾಭವಾಗಲಿ ಎಂದು ಹೇಳಿ ಶುಭ ಹಾರೈಸಿದರು.
ಚಿತ್ರದ ಕಥೆ, ಸಂಭಾಷಣೆ ಬರೆದ ಮೋಹನ್ ರಾಜ್ ಮಾತನಾಡಿ, ಪುತ್ತೂರಿನಲ್ಲಿ ನನಗೆ ಯಾರೂ ಸಂಬಂಧಿಕರಿಲ್ಲ, ಆದರೆ ಈ ತುಡರ್ ಚಿತ್ರ ಪುತ್ತೂರಿನಲ್ಲಿ ಬಿಡುಗಡೆಯಾಗುತ್ತಿದ್ದ ಸಂದರ್ಭದಲ್ಲಿ ನನ್ನೊಂದಿಗೆ ಎಲ್ಲರೂ ಇದ್ದಾರೆ.2023, ಮೇಯಲ್ಲಿ ಚಿತ್ರದ ಮುಹೂರ್ತ ಕಟೀಲು ದೇವಸ್ಥಾನದಲ್ಲಿ ನಡೆದಿತ್ತು. ದೇವರು ನಮಗೆ ಯೋಗ ಕರುಣಿಸಿದರು. ಒಂದೇ ವರ್ಷದಲ್ಲಿ ಚಿತ್ರ ತಯಾರಾಯಿತು. ಸಾಮಾಜಿಕ, ಸಾಂಸಾರಿಕ, ಸಸ್ಪೆನ್ಸ್ ಚಿತ್ರ ನಿರ್ಮಾಣವಾಗಿದ್ದು, ತುಳು ಪ್ರೇಕ್ಷಕರು ನಮ್ಮನ್ನು ಹರಸಬೇಕಾಗಿದೆ ಎಂದರು.
ರೋಟರಿ ಅಸಿಸ್ಟೆಂಟ್ ಗವರ್ನರ್ ಲಾರೆನ್ಸ್ ಗೊನ್ಸಾಲ್ವಿಸ್ ಮಾತನಾಡಿ, ತುಳು ಸಂಸ್ಕೃತಿ ನಶಿಸುವ ಕಾಲದಲ್ಲಿ ನಾವು ಇದನ್ನು ಉಳಿಸಿ ಬೆಳೆಸಲು ನಾವು ಸನ್ನದ್ಧರಾದಾಗ ಮುಂದಿನ ಪೀಳಿಗೆಗೆ ನೆರವು ಆದೀತು. ಪ್ರತಿಯೋರ್ವರೂ ಈ ಸಿನೆಮಾದ ಟಿಕೆಟ್ ತೆಗೊಂಡು ಚಿತ್ರ ವೀಕ್ಷಿಸಿ ಚಿತ್ರತಂಡಕ್ಕೆ ಶುಭ ಹಾರೈಸಬೇಕಾಗಿದೆ ಎಂದರು.
ಲೀನಾ ಪಾಯಿಸ್ ಪ್ರಾರ್ಥಿಸಿದರು. ವೇದಿಕೆಯಲ್ಲಿ ನಿಕಟಪೂರ್ವ ಅಧ್ಯಕ್ಷ ಪ್ರಶಾಂತ್ ಶೆಣೈ, ನಿಯೋಜಿತ ಅಧ್ಯಕ್ಷ ಮೊಹಮದ್ ಸಾಬ್ ಉಪಸ್ಥಿತರಿದ್ದರು. ಕ್ಲಬ್ ಅಧ್ಯಕ್ಷೆ ಗ್ರೇಸಿ ಗೊನ್ಸಾಲ್ವಿಸ್ ಸ್ವಾಗತಿಸಿದರು. ಕಾರ್ಯದರ್ಶಿ ಶ್ಯಾಮಲಾ ಪಿ.ಶೆಟ್ಟಿ ವರದಿ ಮಂಡಿಸಿದರು.ಪುತ್ತೂರು ತುಳು ಕೂಟ ಅಧ್ಯಕ್ಷ ಪ್ಯಾಟ್ರಿಕ್ ಸಿಪ್ರಿಯನ್ ಮಸ್ಕರೇನ್ಹಸ್, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಉಮೇಶ್ ನಾಯಕ್, ರೋಟರಿ ಈಸ್ಟ್ ಮಾಜಿ ಅಧ್ಯಕ್ಷ ಜಯಂತ್ ನಡುಬೈಲು, ಪೂವರಿ ತುಳು ಪತ್ರಿಕೆ ಸಂಪಾದಕ ವಿಜಯಕುಮಾರ್ ಹೆಬ್ಬಾರ್‌ಬೈಲು, ಲಯನ್ ರೀಜನ್ ಚೇರ್‌ಪರ್ಸನ್ ಲ್ಯಾನ್ಸಿ ಮಸ್ಕರೇನ್ಹಸ್, ರಸ್ತೆ ಸುರಕ್ಷತಾ ಜಾಗೃತಿ ಚೇರ್‌ಮ್ಯಾನ್ ಡಾ.ಹರ್ಷಕುಮಾರ್ ರೈ ಮಾಡಾವು, ರೋಟರಿ ಎಲೈಟ್ ಮಾಜಿ ಕಾರ್ಯದರ್ಶಿ ಆಸ್ಕರ್ ಆನಂದ್ ಸಹಿತ ರೋಟರಿ ಸಿಟಿ ಸದಸ್ಯರು, ತುಡರ್ ಚಿತ್ರತಂಡದ ಸದಸ್ಯರು ಉಪಸ್ಥಿತರಿದ್ದರು. ರೋಟರಿ ಸಿಟಿ ಮಾಜಿ ಅಧ್ಯಕ್ಷ ಜೆರೋಮಿಯಸ್ ಪಾಯಿಸ್ ಕಾರ್ಯಕ್ರಮ ನಿರೂಪಿಸಿದರು.
ಚಿತ್ರ ವೀಕ್ಷಿಸಿ, ಯಶಸ್ವಿಗೆ ಸಹಕರಿಸಿ..
ತುಡರ್ ಎಂಬುದು ನಮ್ಮ ಕುಟುಂಬ, ತಂಡ ಅಲ್ಲ. ಹಿರಿಯ ಕಲಾವಿದರಿಂದ ಹಿಡಿದು ಹೊಸ ಕಲಾವಿದರು, ತಂತ್ರಜ್ಞರು ಈ ಚಿತ್ರದಲ್ಲಿ ಹಗಲಿರುಳು ದುಡಿದಿದ್ದಾರೆ. ಒಂದು ವರ್ಷದ ಶ್ರಮ ಈ ತಂಡಕ್ಕಿದೆ. ಪ್ರೇಕ್ಷಕರ ಮನಗೆಲ್ಲುವಲ್ಲಿ ಈ ತುಡರ್ ಚಿತ್ರತಂಡ ಯಶಸ್ವಿಯಾಗುತ್ತದೆ ಎಂಬುದು ನಮ್ಮ ಚಿಂತನೆಯಾಗಿದ್ದು, ಇದರ ಪ್ರೀಮಿಯರ್ ಶೋ ಪ್ರಥಮ ಬಾರಿಗೆ ಪುತ್ತೂರಿನಲ್ಲಿ ಆಗಬೇಕು ಎನ್ನುವ ಆಶಯ ನಮ್ಮದು. ಪ್ರತಿಯೋರ್ವರು ಚಿತ್ರ ವೀಕ್ಷಿಸಿ, ಚಿತ್ರದ ಯಶಸ್ವಿಗೆ ಸಹಕರಿರಬೇಕು.
-ಸಿದ್ಧಾರ್ಥ್ ಶೆಟ್ಟಿ, ನಾಯಕ ನಟ, ತುಡರ್ ಚಿತ್ರ
ಜೂ.7:ಪ್ರೀಮಿಯರ್ ಶೋ..
ಸುಮುಖ ಪ್ರೊಡಕ್ಷನ್‌ರವರ ಚೊಚ್ಚಲ ಚಿತ್ರ ಇದಾಗಿದ್ದು ‘ದ ಫೈರ್ ವಿಥ್ ಇನ್’ ಟ್ಯಾಗ್‌ಲೈನ್‌ನೊಂದಿಗೆ ತುಳು ಚಿತ್ರರಂಗದಲ್ಲಿ ಬಹಳಷ್ಟು ಕುತೂಹಲ ಮೂಡಿಸಿರುವ ತುಳು ಚಿತ್ರ “ತುಡರ್” ಇದರ ಪ್ರೀಮಿಯರ್ ದುಬೈ, ಅಬುಧಾಬಿ, ಕತಾರ್‌ನಲ್ಲಿ ಯಶಸ್ವಿಯಾಗಿ ನೆರವೇರಿಸಿ ಇದೇ ಜೂನ್ 7ರಂದು ಪುತ್ತೂರಿನ ಭಾರತ್ ಸಿನಿಮಾಸ್‌ನಲ್ಲಿ ತುಳುನಾಡಿನ ಚೊಚ್ಚಲ ಪ್ರೀಮಿಯರ್ ಶೋ ನಡೆಯಲಿದೆ. ಜೂನ್ 14ರಂದು ಕರುನಾಡಿನಾದ್ಯಂತ ತೆರೆ ಕಾಣಲಿರುವ ಈ ಚಿತ್ರದ ತಾರಾಗಣದಲ್ಲಿ ಸಿದ್ಧಾರ್ಥ ಶೆಟ್ಟಿ, ದೀಕ್ಷಾ ಭೀಷೆ, ತುಳುನಾಡಿನ ಮಾಣಿಕ್ಯ ಅರವಿಂದ್ ಬೋಳಾರ್, ಪ್ರಜ್ವಲ್ ಬಂಬ್ರಾಣ, ಹರ್ಷಿತಾ ಶೆಟ್ಟಿ, ಅನ್ವಿತ ಸಾಗರ್, ಸದಾಶಿವ ಅಮೀನ್, ಮೈತಿದಿ ಖ್ಯಾತಿಯ ರೂಪಾ ವರ್ಕಾಡಿ, ನಮಿತಾ ಕೂಳೂರು, ಉಮೇಶ್ ಮಿಜಾರ್, ಅಶೋಕ್ ಬಿ ಇದ್ದಾರೆ. ಮೋಹನ್‌ರಾಜ್ ಕಥೆ, ಚಿತ್ರಕಥೆ, ಸಾಹಿತ್ಯ, ಸಂಭಾಷಣೆ ಬರೆದಿರುವ ಈ ಚಿತ್ರಕ್ಕೆ ಎಲ್ಟನ್ ಮಸ್ಕರೇನಸ್ ಹಾಗು ತೇಜೇಶ್ ಪೂಜಾರಿಯವರ ನಿರ್ದೇಶನವಿದ್ದು, ವಿಲ್ಸನ್ ರೆಬೆಲ್ಲೋ ನಿರ್ಮಾಪಕ, ಹರೀಶ್ ಶೆಟ್ಟಿ, ವಿದ್ಯಾ ಸಂಪತ್ ಸಹನಿರ್ಮಾಪಕರಾಗಿ ನಿರ್ಮಾಣದ ಹೊಣೆ ಹೊತ್ತಿದ್ದಾರೆ.
ಚಾಲನೆ..
ಚಿತ್ರದ ಪ್ರಥಮ ಟಿಕೆಟ್ ಅನ್ನು ರೋಟರಿ ಸಿಟಿ ಮಾಜಿ ಅಧ್ಯಕ್ಷರಾದ ಜ್ಯೋ ಡಿ’ಸೋಜ ಹಾಗೂ ನಟೇಶ್ ಉಡುಪರವರು ಖರೀದಿಸಿ ಚಾಲನೆ ನೀಡಿದರು.