ವಿನಯ ವಿಲ್ಲದಿದ್ದರೆ ವಿದ್ಯೆಗದು ಭೂಷಣವೇ…? ಖಂಡಿತಾ ಇಲ್ಲ. ಸಂಸ್ಕಾರಯುತ, ಮೌಲ್ಯಯುತ ಗುಣಾತ್ಮಕ ಶಿಕ್ಷಣವು ಗ್ರಾಮೀಣ ಪ್ರದೇಶದ ಮಕ್ಕಳಿಗೂ ಪ್ರಾಪ್ತವಾಗಬೇಕೆಂಬ ಸದುದ್ದೇಶವನ್ನು ಇಟ್ಟುಕೊಂಡು 23 ವರ್ಷಗಳ ಹಿಂದೆ ಪ್ರಶಾಂತ ಪರಿಸರ, ನಿಸರ್ಗ ರಮಣೀಯತೆಯಿಂದ ಕೂಡಿದ ಶ್ರೀ ಮಹಾಲಿಂಗೇಶ್ವರನ ಸಾನ್ನಿಧ್ಯವಿರುವ ಬೆಟ್ಟಂಪಾಡಿಯ ತಪ್ಪಲಲ್ಲಿ ಶಿಕ್ಷಣ ಪ್ರೇಮಿ ಬೈಲಾಡಿ ಬಾಬು ಗೌಡರು ಹುಟ್ಟು ಹಾಕಿದ ಪ್ರಿಯದರ್ಶಿನಿ ವಿದ್ಯಾಸಂಸ್ಥೆಯು ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಭರವಸೆಯ ಬೆಳಕಾಗಿದೆ. 2013 ರಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘಕ್ಕೆ ಈ ಸಂಸ್ಥೆಯು ಹಸ್ತಾಂತರಗೊಂಡು ಇದೀಗ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಂಗ ಸಂಸ್ಥೆಯಾಗಿ ಪ್ರಿಯದರ್ಶಿನಿ ವಿದ್ಯಾಸಂಸ್ಥೆಯು ಅದರ ಧ್ಯೇಯಾದರ್ಶಗಳೊಂದಿಗೆ ಶಿಕ್ಷಣ ಕ್ಷೇತ್ರದಲ್ಲಿ ದಾಪುಗಾಲಿಡುತ್ತಿದೆ.
ಸಂಸ್ಕಾರ ಭರಿತ ಶಿಕ್ಷಣ – ಉತ್ತಮ ಫಲಿತಾಂಶ
ಸರಸ್ವತಿ ವಂದನೆಯಿಂದ ಶಾಲಾ ಅವಧಿಗಳು ಆರಂಭಗೊಂಡು ಶ್ಲೋಕ, ಭಜನೆ, ಯೋಗ ಪ್ರಾಣಾಯಾಮ, ಆಟೋಟಗಳು ನಿರಂತರವಾಗಿ ಇಲ್ಲಿ ನಡೆಯುತ್ತಿವೆ. ಕೇವಲ ಪಠ್ಯದೊಳಗಿನ ವಸ್ತುಗಳಲ್ಲದೇ ವಿದ್ಯಾರ್ಥಿಯು ಸಮಾಜದಲ್ಲಿ ಬೆಳೆಯುವಾಗ ಸಂಸ್ಕಾರ, ಸಂಸ್ಕೃತಿ, ಸನ್ನಡತೆಯನ್ನು ರೂಢಿಸಿಕೊಳ್ಳಬೇಕೆಂಬ ನಿಟ್ಟಿನಲ್ಲಿ ಸಂಸ್ಕಾರ ಭರಿತವಾದ ಅನೇಕ ಚಟುವಟಿಕೆಗಳು ನಡೆಯುತ್ತಿವೆ. ಸುಮಾರು 24 ಗ್ರಾಮಗಳಿಂದ ಜ್ಞಾನಾರ್ಜನೆಗೆಂದು ಬರುವ ಪ್ರಿಕೆಜಿ ಯಿಂದ ಹಿಡಿದು 10ನೇ ತರಗತಿವರೆಗಿನ ಭಿನ್ನಮನಸ್ಸಿನ, ವಿಭಿನ್ನ ಸ್ತರಗಳ ವಿದ್ಯಾರ್ಥಿಗಳಿಗೆ ಆಂಗ್ಲ ಭಾಷೆಯಲ್ಲಿ ಗುಣಾತ್ಮಕ ಶಿಕ್ಷಣ ನೀಡುತ್ತಿರುವ ಈ ಸಂಸ್ಥೆಯಲ್ಲಿ 550ಕ್ಕೂ ಮಿಕ್ಕಿ ವಿದ್ಯಾರ್ಥಿಗಳು ಜ್ಞಾನದಾಹ ನೀಗಿಸುತ್ತಿದ್ದಾರೆ. ವಿವಿಧ ಪದವಿಗಳನ್ನು ಪಡೆದ ನುರಿತ ಬೋಧಕ ಸಿಬ್ಬಂದಿಗಳಿಂದ ಶಿಕ್ಷಣ ಪಡೆದ ವಿದ್ಯಾರ್ಥಿಗಳು ಸತತ ಎಂಟು ವರ್ಷಗಳಿಂದ ಶಾಲೆಗೆ 100% ಫಲಿತಾಂಶ ತಂದು ಕೊಡುತ್ತಿದ್ದಾರೆ. 2021 -22ನೇ ಶೈಕ್ಷಣಿಕ ಸಾಲಿನ ಎಸ್ಎಸ್ಎಲ್‌ಸಿ ಪರೀಕ್ಷೆಯಲ್ಲಿ ಅಚಿಂತ್ಯ ಶಾಸ್ತ್ರಿ ಕೆ. 625ರಲ್ಲಿ 622 ಅಂಕಗಳನ್ನು ಪಡೆದು ರಾಜ್ಯ ಮಟ್ಟದಲ್ಲಿ ಶಾಲೆಯ ಕೀರ್ತಿ ಹರಡಿಸಿರುವುದು ಸಂಸ್ಥೆಯ ಶ್ರೇಯಸ್ಸಿಗೆ ಹಿಡಿದ ಕೈಗನ್ನಡಿಯಾಗಿದೆ. ಪ್ರತಿವರ್ಷದ ಗುಣಾತ್ಮಕ ಫಲಿತಾಂಶ ನಿರೀಕ್ಷೆ ಮೀರಿ 90 ಕ್ಕಿಂತಲೂ ಅಧಿಕ ಬರುತ್ತಿರುವುದು ಸಂಸ್ಥೆಯ ಹೆಗ್ಗಳಿಕೆಯಾಗಿದೆ.
ಆಧುನಿಕ ತರಗತಿಗಳು – ಸ್ಮಾರ್ಟ್ ಕ್ಲಾಸ್
ಆಧುನಿಕ ಶಿಕ್ಷಣ ವ್ಯವಸ್ಥೆ ಹಾಗೂ ವಿದ್ಯಾರ್ಥಿಗಳ ಮಾನಸಿಕ ಸಾಮರ್ಥ್ಯಕ್ಕೆ ಅನುಗುಣವಾಗಿ ಸೆಲ್ಕೋ ಸೋಲಾರ್ ಸಹಯೋಗದೊಂದಿಗೆ ಟೀಚ್ ನೆಕ್ಸ್ಟ್ ಸ್ಮಾರ್ಟ್ ಕ್ಲಾಸ್ ನಡೆಯುತ್ತಿದ್ದು ವಿದ್ಯಾರ್ಥಿಗಳಿಗೆ ಸಂತಸದ ಕಲಿಕೆಯ ಜೊತೆಗೆ ಪ್ರಯೋಗಾತ್ಮಕವಾಗಿ ನಡೆಯುತ್ತಿದೆ. ಪ್ರತಿಯೊಬ್ಬ ವಿದ್ಯಾರ್ಥಿಯೂ ಸ್ವತಃ ಆಪರೇಟ್ ಮಾಡಿ ತನ್ನ ಸಂದೇಹವನ್ನು ಬಗೆಹರಿಸುವ ಗುಣಾತ್ಮಕ ವ್ಯವಸ್ಥೆ ಎಲ್ಲರೂ ಮೆಚ್ಚುವಂತದ್ದಾಗಿದೆ.
ಸಹಪಠ್ಯ ಚಟುವಟಿಕೆಗಳು
ಶಿಕ್ಷಣ ಇಲಾಖೆ ಏರ್ಪಡಿಸುವ ಪ್ರತಿಭಾ ಕಾರಂಜಿಯ ಕ್ಲಸ್ಟರ್ ಮಟ್ಟದ ಸಮಗ್ರ ಪ್ರಶಸ್ತಿಯನ್ನು ಪ್ರತಿ ವರ್ಷವೂ ತಮ್ಮದಾಗಿಸಿಕೊಳ್ಳುವ ಈ ವಿದ್ಯಾಸಂಸ್ಥೆಯ ಪ್ರತಿಭೆಗಳು ತಾಲೂಕು, ಜಿಲ್ಲೆ, ರಾಜ್ಯ ಮಟ್ಟದಲ್ಲಿಯೂ ತಮ್ಮ ಕಲಾಪ್ರದರ್ಶನವನ್ನು ನೀಡುತ್ತಾ ಬಂದಿರುತ್ತಾರೆ. ತಾಲೂಕಿನ ವಿವಿಧ ಕಾರ್ಯಕ್ರಮಗಳಲ್ಲಿ ಕಲಾದರ್ಶಿನಿ ನೃತ್ಯ ವೈಭವವನ್ನು ನೀಡುವ ಈ ವಿದ್ಯಾರ್ಥಿಗಳು ನಗರ ಪ್ರದೇಶದ ವಿದ್ಯಾಸಂಸ್ಥೆಗೂ ಪೈಪೋಟಿ ನೀಡುತ್ತಿದ್ದಾರೆ. ಯಕ್ಷಗಾನ, ಕರಾಟೆ, ಸಂಗೀತ, ಭರತನಾಟ್ಯ, ಸೆಮಿ ಕ್ಲಾಸಿಕಲ್, ಭಗವದ್ಗೀತೆ ಪಠಣ, ಡ್ರಾಯಿಂಗ್, ಬಾಲಗೋಕುಲ ತರಗತಿ, ಭಜನೆ, ಮುಂತಾದ ಸಹಪಠ್ಯ ಚಟುವಟಿಕೆಗಳು ಶಾಲಾ ಅವಧಿಯಲ್ಲಿ ನಡೆಯುತ್ತಿದ್ದು ವಿದ್ಯಾರ್ಥಿಗಳಿಗೆ ಉತ್ತಮ ರೀತಿಯಲ್ಲಿ ಸದ್ಬಳಕೆಯಾಗುತ್ತಿದೆ. ಶ್ರೀ ಕೃಷ್ಣ ಜನ್ಮಾಷ್ಟಮಿ ಅದ್ದೂರಿ ಆಚರಣೆ, ವಾರ್ಷಿಕೋತ್ಸವ, ಮತ್ತು ಕಲಾದರ್ಶಿನಿ ಕಲಾಸಂಜೆ, ಶಾಲಾ ಹೊರ ಸಂಚಾರ ಶೈಕ್ಷಣಿಕ ಪ್ರವಾಸಗಳಲ್ಲಿ ವಿದ್ಯಾರ್ಥಿಗಳು ಪಾಲ್ಗೊಂಡು ನೈಜಕಲಿಕೆಯ ಸವಿಯುಣ್ಣುತ್ತಿದ್ದಾರೆ.
ಕ್ರೀಡಾ ಶಕ್ತಿ
ಆಟೋಟಗಳಲ್ಲಿ ಆಸಕ್ತರಾದ ವಿದ್ಯಾರ್ಥಿಗಳಿಗೆ ಪೂರಕವಾಗಿ ಪ್ರತಿನಿತ್ಯವೂ ಮುಂಜಾನೆ ಹಾಗೂ ಸಂಜೆಯ ಹೊತ್ತಿನಲ್ಲಿ ದೈಹಿಕ ಶಿಕ್ಷಣ ಶಿಕ್ಷಕರಿಂದ ಕ್ರೀಡಾ ಅಭ್ಯಾಸ ನಡೆಯುತ್ತಿದ್ದು ಕಳೆದ ಶೈಕ್ಷಣಿಕ ವರ್ಷಗಳಲ್ಲಿ ವಿದ್ಯಾರ್ಥಿಗಳು ರಾಜ್ಯ ರಾಷ್ಟ್ರಮಟ್ಟಗಳಲ್ಲಿ ತಮ್ಮ ಸಾಧನೆಯ ಮೆಟ್ಟಿಲೇರಿದ್ದಾರೆ.
ವಾಹನ ಸೌಲಭ್ಯ – ದಾಖಲಾತಿ
24 ಗ್ರಾಮಗಳಲ್ಲಿಯೂ ಸಂಸ್ಥೆಯ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಶಾಲಾ ವಾಹನ ಸೌಲಭ್ಯವಿದ್ದು ಮಕ್ಕಳು ಸುರಕ್ಷಿತವಾಗಿ ಮನೆ ಸೇರುವರು. ಇಷ್ಟು ಮಾತ್ರವಲ್ಲದೆ ಒಂದರಿಂದ ಹತ್ತನೇ ತರಗತಿಯವರೆಗೆ ಗ್ರಾಮೀಣ ಪರಿಸರದಲ್ಲಿ ವ್ಯಾಸಂಗ NEET, CET ಮೊದಲಾದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಗ್ರಾಮೀಣ ವ್ಯಾಸಂಗ ಪ್ರಮಾಣ ಪತ್ರದ ಮೀಸಲಾತಿ ಅನುಕೂಲವು ಈ ವಿದ್ಯಾಸಂಸ್ಥೆಯಲ್ಲಿ ಲಭ್ಯವಾಗುತ್ತಿದ್ದು ಇದು ಗ್ರಾಮೀಣ ಭಾಗದ ಜನರಿಗೆ ಆಶಾಕಿರಣವಾಗಿದೆ.
ಕೇವಲ ಎಂಟು ವಿದ್ಯಾರ್ಥಿಗಳಿಂದ ಆರಂಭಗೊಂಡ ಈ ವಿದ್ಯಾಸಂಸ್ಥೆಯಲ್ಲಿ ವರ್ಷದಿಂದ ವರ್ಷಕ್ಕೆ ವಿದ್ಯಾರ್ಥಿಗಳ ಸಂಖ್ಯೆ ಗಣನೀಯ ಏರಿಕೆಯಾಗುತ್ತಿದೆ. ಪ್ರಸ್ತುತ 550 ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಪಡೆಯುತ್ತಿದ್ದು ಪ್ರಸಕ್ತ ಸಾಲಿನ ದಾಖಲಾತಿ ಆರಂಭಗೊಂಡಿರುತ್ತದೆ.