ಬೆಟ್ಟಂಪಾಡಿ ಗ್ರಾ.ಪಂ.ನಲ್ಲಿ ಗ್ರಾಮೀಣ ಮಕ್ಕಳ ಬೇಸಿಗೆ ಶಿಬಿರ

0

ಪುತ್ತೂರು: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಪುತ್ತೂರು ತಾಲೂಕು ಪಂಚಾಯತ್, ಬೆಟ್ಟಂಪಾಡಿ ಗ್ರಾಮ ಪಂಚಾಯತ್, ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರ ಬೆಟ್ಟಂಪಾಡಿ ಇವುಗಳ ಆಶ್ರಯದಲ್ಲಿ 2024ನೇ ಸಾಲಿನ ಗ್ರಾಮೀಣ ಮಕ್ಕಳ ಬೇಸಿಗೆ ಶಿಬಿರ ಆಯೋಜಿಸಲಾಯಿತು. ಗ್ರಾಮ ಪಂಚಾಯತ್ ಅಧ್ಯಕ್ಷೆ ವಿದ್ಯಾಶ್ರೀ ಸರಳಿಕಾನರವರು ದೀಪ ಬೆಳಗಿಸಿ ಶಿಬಿರ ಉದ್ಘಾಟಿಸಿ ಮಕ್ಕಳಿಗೆ ಬೇಸಿಗೆ ಶಿಬಿರದ ಉದ್ದೇಶ ಮತ್ತು ಪ್ರಯೋಜನಗಳ ಬಗ್ಗೆ ವಿವರಿಸಿದರು.

ವೇದಿಕೆಯಲ್ಲಿ ಆನಂದ ರೈ ಅಡ್ಕಸ್ಥಳ, ಚಂದ್ರಮೌಳಿ ಕಡಂದೇಲು, ಗ್ರಾ.ಪಂ. ಸದಸ್ಯ ಪ್ರಕಾಶ್ ರೈ ಬೈಲಾಡಿ, ಪಿಡಿಒ ಸೌಮ್ಯ ಎಂ.ಎಸ್ ಹಾಗೂ ಗ್ರಂಥಾಲಯ ಮೇಲ್ವಿಚಾರಕಿ ಪ್ರೇಮಲತಾ ಉಪಸ್ಥಿತರಿದ್ದರು. ಪುತ್ತೂರು ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಹನಮ ರೆಡ್ಡಿ ಭೇಟಿ ನೀಡಿ ಶಿಬಿರದ ಪ್ರಯೋಜನವನ್ನು ಪಡೆದುಕೊಳ್ಳುವಂತೆ ತಿಳಿಸಿದರು.

ಶಿಬಿರದ ಮೊದಲನೇ ದಿನದಲ್ಲಿ ನಾಟಕ ತರಬೇತುದಾರ ಹಾಗೂ ಶಿಬಿರ ಸಂಯೋಜಕ ಚಂದ್ರಮೌಳಿ ಕಡಂದೇಲು ವಿವಿಧ ರೀತಿಯ ಚಪ್ಪಾಳೆಗಳು, ಸ್ಮರಣ ಶಕ್ತಿ ಹೆಚ್ಚಿಸುವ ವಿವಿಧ ಆಟಗಳನ್ನು ಆಡಿಸಿದರು. ಸಾಹಿತಿ ಆನಂದ ರೈ ಅಡ್ಕಸ್ಥಳರವರು ಒಂದು ವಿಷಯದ ಮೇಲೆ ಕಥೆ ಕಟ್ಟುವ ರೀತಿಯನ್ನು ತಿಳಿಸಿಕೊಟ್ಟರು. ಸಂಪನ್ಮೂಲ ವ್ಯಕ್ತಿ ಸುಜಯ ಸ್ವರ್ಗರವರು ತಾವು ರಚಿಸಿದ ಜನಪದ ಗೀತೆಗಳು ಹಾಗೂ ಸಣ್ಣ ಸಣ್ಣ ಕವನಗಳನ್ನು ಮಕ್ಕಳಲ್ಲಿ ಹಾಡಿಸಿ ಯಾವ ರೀತಿಯಾಗಿ ಕವಿತೆಗಳನ್ನು ರಚಿಸುವುದು ಎಂಬುದನ್ನು ತಿಳಿಸಿದರು.

ಎರಡನೇ ದಿನದ ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ವಿಶ್ರಾಂತ ಮುಖ್ಯ ಗುರುಗಳು ಹಾಗೂ ಮಕ್ಕಳ ಲೋಕ ಸಂಘದ ಸಕ್ರಿಯ ಸದಸ್ಯರಾದ ಭಾಸ್ಕರ ಅಡ್ವಾಳ ರವರು ಚುಟುಕುಗಳ ರಚನೆ ಹಾಗೂ ಸಣ್ಣ ಕಥೆಗಳ ರಚನೆಗಳ ಬಗ್ಗೆ ಶಿಬಿರಾರ್ಥಿಗಳಿಗೆ ತರಬೇತಿ ನೀಡಿದರು. ಟಿವಿ ಕಾರ್ಯಕ್ರಮ ನಿರೂಪಕಿ ಹಾಗೂ ಕವಯತ್ರಿ ಅಪೂರ್ವ ಕಾರಂತರವರು ಉತ್ತಮ ನಾಯಕತ್ವ ಹಾಗೂ ಸಂವಹನ ಸಾಮರ್ಥ್ಯವನ್ನು ಬೆಳೆಸಿಕೊಳ್ಳುವುದರ ಬಗ್ಗೆ ತರಬೇತಿ ನೀಡಿದರು. ಆನಂದ ರೈ ಹಾಗೂ ಗ್ರಂಥಾಲಯ ಮೇಲ್ವಿಚಾರಕಿ ಪ್ರೇಮಲತಾ ರವರು ಪೇಪರ್ ನಲ್ಲಿ ವಿವಿಧ ಟೋಪಿಗಳು, ರಾಕೆಟ್, ದೋಣಿ ತಯಾರಿಸುವುದು ಹಾಗೂ ಒಳಾಂಗಣ ಆಟಗಳನ್ನು ಆಡಿಸಿದರು. ಮೂರನೇ ದಿನದ ಶಿಬಿರದಲ್ಲಿ ಚಂದ್ರಮೌಳಿಯವರು ಮಾನಸಿಕ ಸಾಮರ್ಥ್ಯ ಅಭಿನಯ ಗೀತೆ ಆಶುಭಾಷಣ ಆಶುನಟನೆ ಇತ್ಯಾದಿ ಚಟುವಟಿಕೆಗಳನ್ನು ಮಾಡಿಸಿದರು. ನಂತರದ ಅವಧಿಯಲ್ಲಿ ಆನಂದ ರೈ ಮತ್ತು ಮೇಲ್ವಿಚಾರಕಿ ಪ್ರೇಮಲತಾರವರು ಕ್ರೋಟನ್ ಎಲೆಗಳಿಂದ ವಿವಿಧ ಹಕ್ಕಿಗಳ ಮಾದರಿ ಹಾಗೂ ಮಕ್ಕಳ ಭಾವನೆಗಳಿಗೆ ತಕ್ಕಂತೆ ಆಕೃತಿಗಳನ್ನು ರಚಿಸಲು ಹೇಳಿಕೊಟ್ಟರು. ಶಿಬಿರದ ಕೊನೆಯ ದಿನ ಪ್ರಮುಖ ವ್ಯಂಗ್ಯ ಚಿತ್ರಕಾರರಾದ ವೆಂಕಟ ಭಟ್ ಎಡನೂರುರವರು ಮಕ್ಕಳಲ್ಲಿ ವ್ಯಂಗ್ಯಚಿತ್ರಗಳನ್ನು ಮಾಡಿಸಿದರು.


ಸಮಾರೋಪ ಸಮಾರಂಭದಲ್ಲಿ ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರಗಳನ್ನು ಹಾಗೂ ಸಂಪನ್ಮೂಲ ವ್ಯಕ್ತಿಗಳಿಗೆ ಸ್ಮರಣೆಕೆಗಳನ್ನ ನೀಡಿ ಗೌರವಿಸಲಾಯಿತು. ಗ್ರಂಥಾಲಯ ಮೇಲ್ವಿಚಾರಕಿ ಪ್ರೇಮಲತಾ ಕಾರ್ಯಕ್ರಮ ನಿರೂಪಿಸಿದರು. ಸಿಬ್ಬಂದಿ ಸವಿತಾ ಸ್ವಾಗತಿಸಿ ಸಂಜೀವಿನಿ ಸಂಘದ ಎಲ್‌ಸಿಆರ್‌ಪಿ ಶಕುಂತಲಾ ವಂದಿಸಿದರು. ಗ್ರಾಮ ಪಂಚಾಯತ್ ಸಿಬ್ಬಂದಿ ವರ್ಗ, ಸಂಜೀವಿನಿ ಸಂಘದ ಸದಸ್ಯರು, ಮಕ್ಕಳ ಪೋಷಕರು, ಬೆಟ್ಟಂಪಾಡಿ ಪ್ರಥಮ ದರ್ಜೆ ಕಾಲೇಜಿನ ಸಮಾಜಕಾರ್ಯ ವಿಭಾಗದ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

LEAVE A REPLY

Please enter your comment!
Please enter your name here