*ನೇರ ಪ್ರಸಾರ – ಸುದ್ದಿ ಲೈವ್ ಪುತ್ತೂರು
ಬೆಟ್ಟಂಪಾಡಿ: ಬೆಟ್ಟಂಪಾಡಿ ಶ್ರೀ ಮಹಾಲಿಂಗೇಶ್ವರ ಯಕ್ಷಗಾನ ಕಲಾಸಂಘದ ವಾರ್ಷಿಕೋತ್ಸವ, ಸನ್ಮಾನ, ತಾಳಮದ್ದಳೆ ಹಾಗೂ ಯಕ್ಷಗಾನ ಬಯಲಾಟ ಕಾರ್ಯಕ್ರಮಗಳು ಮೇ.24 ಪತ್ತನಾಜೆ ಜಾತ್ರೆಯ ಶುಭದಿನದಂದು ಶ್ರೀ ಕ್ಷೇತ್ರ ಬೆಟ್ಟಂಪಾಡಿಯ ಬಿಲ್ವಶ್ರೀ ಸಭಾಂಗಣದಲ್ಲಿ ಜರಗಿತು.
ಬೆಳಿಗ್ಗೆ ಪುತ್ತೂರಿನ ಕಲ್ಲಾರೆ ಶಿವಬ್ರಾಹ್ಮಣ (ಸ್ಥಾನಿಕ) ಸಹಕಾರಿ ಸಂಘದ ನಿರ್ದೇಶಕ ಅಶೋಕ ಕುಮಾರ್ ರಾವ್ ದೀಪ ಬೆಳಗಿಸಿ ಉದ್ಘಾಟಿಸಿ ಶುಭ ಹಾರೈಸಿದರು. ಬಳಿಕ ʻಗುರು-ಶಿಷ್ಯʼ ಸಂವಾದ ತಾಳಮದ್ದಳೆ ಜರಗಿತು. ಡಾ. ಪ್ರಭಾಕರ ಜೋಷಿ ಮತ್ತು ಭಾಸ್ಕರ ರೈ ಕುಕ್ಕುವಳ್ಳಿ ಅರ್ಥಧಾರಿಗಳಾಗಿ, ಪ್ರಶಾಂತ್ ರೈ ಭಾಗವತಿಕೆಯಲ್ಲಿ ಸಹಕರಿಸಿದರು.
ನಂತರ ನಡೆದ ಸಭಾ ಕಾರ್ಯಕ್ರಮ ಮತ್ತು ಸನ್ಮಾನ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಯಕ್ಷಗಾನ ವಿದ್ವಾಂಸ ಡಾ. ಪ್ರಭಾಕರ ಜೋಷಿಯವರು ಮಾತನಾಡಿ ʻಬೆಟ್ಟಂಪಾಡಿ ಎಂಬುದು ಯಕ್ಷಗಾನ ಕಲಾವಿದರ ಅಪೂರ್ವ ಕ್ಷೇತ್ರವಾಗಿದೆ. ಅನೇಕ ಹಿರಿಯರೂ ಇಲ್ಲಿ ಯಕ್ಷಗಾನ ರಂಗದಲ್ಲಿ ಮಿಂಚಿ ಹೋಗಿದ್ದಾರೆ. ಹಾಗಾಗಿ ಇಲ್ಲಿನ ಯಕ್ಷಗಾನ, ಸನ್ಮಾನಕ್ಕೆ ತುಂಬಾ ಮೌಲ್ಯವಿದೆʼ ಎಂದ ಅವರು ಸನ್ಮಾನ ಸ್ವೀಕರಿಸಿದ ಭಾಸ್ಕರ ರೈ ಕುಕ್ಕುವಳ್ಳಿಯವರು ಜಿಲ್ಲೆ, ರಾಜ್ಯ, ದೇಶ ಮತ್ತು ವಿದೇಶಗಳಲ್ಲಿ ಸಾಹಿತ್ಯ ಮತ್ತು ಯಕ್ಷಗಾನದ ಬಗ್ಗೆ ಮಾಡಿರುವ ಕೆಲಸದ ಬಗ್ಗೆ ಮಾತನಾಡಿ ಶ್ಲಾಘಿಸಿದರು.
ಮುಖ್ಯ ಅತಿಥಿಯಾಗಿದ್ದ ಪರ್ಲಡ್ಕ ಎಸ್‌ಡಿಪಿ ರೆಮಿಡೀಸ್ & ರಿಸರ್ಚ್ ಸೆಂಟರ್‌ನ ಆಡಳಿತ ನಿರ್ದೇಶಕ, ಕಲಾಪೋಷಕ ಡಾ. ಹರಿಕೃಷ್ಣ ಪಾಣಾಜೆಯವರು ಮಾತನಾಡಿ ʻಯಕ್ಷಗಾನ ಎಂಬುದು ದೇವರನ್ನು ಸ್ಮರಿಸುವ ಕಲಾಪ್ರಕಾರವಾಗಿದೆ. ಕೆಲವೊಮ್ಮೆ ಯಕ್ಷಗಾನದ ಮೂಲ ಪರಂಪರೆಯ ಪ್ರಕಾರಗಳು ಮರೆಮಾಚಿ ಬದಲಾವಣೆಗಳಾಗುತ್ತಿರುವುದು ಖೇದಕರ. ಆಂಗ್ಲಮಾಧ್ಯಮದ ಪ್ರಭಾವದಿಂದಾಗಿ ಸಾಹಿತ್ಯದಲ್ಲಿ ಕೊರತೆಯುಂಟಾಗುತ್ತಿದೆ. ಮೂಲ ಪ್ರಕಾರದಲ್ಲಿ ಯಕ್ಷಗಾನದ ಮುಂದುವರಿಕೆ ಆಗಬೇಕು ಎಂಬುವುದು ನನ್ನ ಹಂಬಲವಾಗಿದೆʼ ಎಂದರು.
ಪ್ರಗತಿಪರ ಕೃಷಿಕ ಎಂ. ಮುತ್ತಣ್ಣ ಶೆಟ್ಟಿ ಚೆಲ್ಯಡ್ಕ, ನವೋದಯ ವಿದ್ಯಾಸಮಿತಿಯ ಅಧ್ಯಕ್ಷ ಡಿ.ಎಂ. ಬಾಲಕೃಷ್ಣ ಭಟ್ ಮಾತನಾಡಿ ಶುಭ ಹಾರೈಸಿದರು.
ಸನ್ಮಾನ
ಸಂಘದ ವತಿಯಿಂದ ಯಕ್ಷಗಾನ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆಗೈದ ಸಂಘದ ಸ್ಥಾಪಕ ಕಾರ್ಯದರ್ಶಿಯೂ ಆಗಿದ್ದ ಭಾಸ್ಕರ ರೈ ಕುಕ್ಕುವಳ್ಳಿ, ಸ್ಥಾಪಕ ಉಪಕಾರ್ಯದರ್ಶಿಯಾಗಿದ್ದ, ಯಕ್ಷಗಾನ ಅರ್ಥಧಾರಿ ನಾರಾಯಣ ಭಟ್ ಕುಂಚಿನಡ್ಕ ದಂಪತಿ ಹಾಗೂ ಕಲಾಪೋಷಕ ಜನಾರ್ದನ ರಾವ್ ದಂಪತಿಯನ್ನು ಸನ್ಮಾನಿಸಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿಯವರು ʻಹುಟ್ಟೂರಿನ ಸನ್ಮಾನ, ಪ್ರೀತಿ ಗೌರವ ವಿಶೇಷ ಅನುಭವ ನೀಡಿದೆ. ಬೆಟ್ಟಂಪಾಡಿ ಚಿಕ್ಕ ವಯಸ್ಸಿನಲ್ಲಿಯೇ ಯಕ್ಷಗಾನ ಸಾಹಿತ್ಯ ಕ್ಷೇತ್ರಗಳಲ್ಲಿ ಆಸಕ್ತಿ ಬೆಳೆಯಲು ನಮಗೆ ಪೂರಕ ಪರಿಸರವಾಗಿತ್ತು. ಅನೇಕ ಗುರುಗಳ, ಹಿರಿಯರ ಪ್ರೇರಣೆಯಿಂದ ಒಂದಷ್ಟು ಸಮಾಜದಲ್ಲಿ ಗುರುತಿಸುವಷ್ಟರಮಟ್ಟಿಗೆ ನಾವು ಬೆಳೆಯಲು ಸಾಧ್ಯವಾಯಿತುʼ ಎಂದರು.
ಸನ್ಮಾನಿತರಾದ ಭಾಸ್ಕರ ರೈ ಕುಕ್ಕುವಳ್ಳಿಯವರ ಬಗ್ಗೆ ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ, ಹಿರಿಯ ಯಕ್ಷಗಾನ ಕಲಾವಿದರಾದ ಎನ್. ಸಂಜೀವ ರೈಯವರು, ನಾರಾಯಣ ಭಟ್ ಕುಂಚಿನಡ್ಕರವರ ಬಗ್ಗೆ ಬಿ. ವಿಷ್ಣುರಾವ್ ರವರು ಹಾಗೂ ಜನಾರ್ದನ ರಾವ್ ರವರ ಬಗ್ಗೆ ಸಂಘದ ಗೌರವಾಧ್ಯಕ್ಷ ಎಂ. ಸುಂದರ ಶೆಟ್ಟಿ ಬೆಟ್ಟಂಪಾಡಿಯವರು ಅಭಿನಂದನಾ ಭಾಷಣ ಮಾಡಿದರು.
ಗೌರವಾರ್ಪಣೆ
ಇದೇ ವೇಳೆ ಕಳೆದ ವರ್ಷದ ವಾರ್ಷಿಕೋತ್ಸವ ಸಮಾರಂಭಕ್ಕೆ ಮಹಾಪೋಷಕರಾಗಿ ಸಹಕರಿಸಿದವರನ್ನು ಗೌರವಿಸಲಾಯಿತು.
ವೇದಿಕೆಯಲ್ಲಿ ದೇವಾಲಯದ ಅನುವಂಶಿಕ ಆಡಳಿತ ಮೊಕ್ತೇಸರ ವಿನೋದ್ ಕುಮಾರ್ ಬಲ್ಲಾಳ್, ಮೊಕ್ತೇಸರ ವಿನೋದ್ ರೈ ಗುತ್ತು, ಸಂಘದ ಹಿರಿಯ ಸದಸ್ಯರಾದ ಬಿ. ವೆಂಕಟ್ರಾವ್ ಉಪಸ್ಥಿತರಿದ್ದರು. ಸಂಘದ ಸದಸ್ಯರು ಅತಿಥಿಗಳನ್ನು ಶಾಲು ಸ್ಮರಣಿಕೆ ನೀಡಿ ಗೌರವಿಸಿದರು.
ಪ್ರಾಸ್ತಾವಿಕದೊಂದಿಗೆ ಸ್ವಾಗತಿಸಿದ ಸಂಘದ ಅಧ್ಯಕ್ಷ, ನಿವೃತ್ತ ಚಿತ್ರಕಲಾ ಶಿಕ್ಷಕ ಐ. ಗೋಪಾಲಕೃಷ್ಣ ರಾವ್ ರವರು ಸಂಘದ ಸ್ಥಾಪನೆ, ಬೆಳೆದು ಬಂದ ಹಾದಿಯ ಬಗ್ಗೆ ಮಾತನಾಡಿದರು. ಸಂಘದ ಕಾರ್ಯದರ್ಶಿ ಪ್ರದೀಪ ರೈ ಕೆ. ವರದಿ ಮಂಡಿಸಿದರು. ಸದಸ್ಯ ಉಮೇಶ್ ಮಿತ್ತಡ್ಕ ವಂದಿಸಿದರು. ಸಂಘದ ಭಾಗವತರಾದ ದಾಮೋದರ ಎಂ. ಮತ್ತು ಕೋಶಾಧಿಕಾರಿ ಶ್ಯಾಂಪ್ರಸಾದ್ ಎಂ. ಪ್ರಾರ್ಥಿಸಿದರು.
ಸಂಘದ ಸದಸ್ಯ, ದೈಹಿಕ ಶಿಕ್ಷಣ ಶಿಕ್ಷಕ ಕೃಷ್ಣಪ್ರಸಾದ್ ಟಿ. ಕಾರ್ಯಕ್ರಮ ನಿರೂಪಿಸಿದರು.
ಯಕ್ಷಗಾನ ಬಯಲಾಟ
ಸಭಾ ಕಾರ್ಯಕ್ರಮದ ಬಳಿಕ ಸಂಘದ ಸದಸ್ಯರು ಮತ್ತು ಅತಿಥಿ ಕಲಾವಿದರ ಕೂಡುವಿಕೆಯಲ್ಲಿ ʻಮಹಾಶೂರ ಭೌಮಾಸುರʼ ಯಕ್ಷಗಾನ ಬಯಲಾಟ ಜರಗಿತು.