ಪುತ್ತೂರು:ಖಾತೆಗೆ ಬಂದಿರುವ ಬೋನಸ್ ಸಂದೇಶಕ್ಕೆ ಸಂಬಂಧಿಸಿ ಹಣವನ್ನು ಪಡೆಯಲು ಒಟಿಪಿ ನೀಡಿದ ವ್ಯಕ್ತಿಯೋರ್ವರು ತನ್ನ ಖಾತೆಯಿಂದ ಲಕ್ಷಾಂತರ ರೂಪಾಯಿ ಕಳೆದುಕೊಂಡು ಮೋಸಹೋಗಿರುವ ಕುರಿತು ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೆಮ್ಮಿಂಜೆ ಗ್ರಾಮದ ಪ್ರಗತಿ ಲೇ ಔಟ್ ನಿವಾಸಿ ಶ್ರೀನಿವಾಸ ಗೌಡ ಅವರು ಮೋಸ ಹೋದವರು.ಅವರ ಮೊಬೈಲ್ಗೆ ಮೇ .26ರಂದು ಸಂಜೆ ಆಕ್ಸಿಸ್ ಬ್ಯಾಂಕ್ ಎಂಬ ಹೆಸರಿನಲ್ಲಿ ಬಂದಿರುವ ಸಂದೇಶವನ್ನು ತೆರೆದಾಗ ಆಕ್ಸಿಸ್ ಬ್ಯಾಂಕ್ ಹೋಲುವ ಪೇಜ್ ತೆರೆದಿತ್ತು.ಅದರಲ್ಲಿ ನಿಮ್ಮ ಖಾತೆಗೆ ರೂ13,879 ಬೋನಸ್ ಬಂದಿರುವುದಾಗಿ ಸಂದೇಶವಿತ್ತಲ್ಲದೆ,ಈ ಬೋನಸ್ ಪಡೆಯಲು ವೆಬ್ಸೈಟ್ನಲ್ಲಿ ಕೇಳಿರುವಂತೆ ಅವರು ತನ್ನ ಬ್ಯಾಂಕ್ ಖಾತೆ ಸಂಖ್ಯೆ ಸಹಿತ ಎಲ್ಲಾ ಮಾಹಿತಿಯೊಂದಿಗೆ ಮೊಬೈಲ್ಗೆ ಒಟಿಪಿ ಸಂಖ್ಯೆಯನ್ನೂ ನೀಡಿದರು.ಸ್ವಲ್ಪ ಸಮಯದ ಬಳಿಕ ಅವರ ಬ್ಯಾಂಕ್ ಖಾತೆಯಿಂದ ರೂ.90,850 ಮತ್ತು ರೂ.24,500 ಸೇರಿ ಒಟ್ಟು ರೂ.1,15,358 ಕಡಿತಗೊಂಡಿತ್ತು.ತಕ್ಷಣ ಬ್ಯಾಂಕ್ ಖಾತೆಯನ್ನು ಪರಿಶೀಲಿಸಿದಾಗ ಅವರ ಖಾತೆಯಿಂದ ಅಪರಿಚಿತ ಖಾತೆಗೆ ಹಣ ವರ್ಗಾವಣೆಗೊಂಡ ಬಗ್ಗೆ ಮಾಹಿತಿ ತಿಳಿಯಿತು.ತಾನು ವಂಚನೆಗೊಳಗಾದ ಕುರಿತು ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.