ದ.ಕ.ಜಿಲ್ಲೆಯಲ್ಲಿ ಕುಸಿಯುತ್ತಿದೆ ಅಂತರ್ಜಲ ಮಟ್ಟ-ಪಾತಾಳಕ್ಕಿಳಿಯುತ್ತಿದೆ ನೀರು – ಪುತ್ತೂರು,ಕಡಬ ಸಹಿತ ನಾಲ್ಕು ತಾಲೂಕುಗಳಲ್ಲಿ ಗರಿಷ್ಠ ಕುಸಿತ – ಮಳೆ ಕೊಯ್ಲು ಅನುಷ್ಟಾನಕ್ಕೆ ರಾಜಧಾನಿಯಲ್ಲಿ ಏಳು ಸಾವಿರಕ್ಕೂ ಹೆಚ್ಚು ಕಟ್ಟಡಗಳಿಗೆ ನೊಟೀಸ್

0

ಪುತ್ತೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಂತರ್ಜಲ ಮಟ್ಟ ವರ್ಷದಿಂದ ವರ್ಷಕ್ಕೆ ಕುಸಿಯುತ್ತಿರುವ ಆತಂಕಕಾರಿ ವಿದ್ಯಮಾನ ದಾಖಲಾಗಿದೆ.ಕಳೆದ ಐದು ವರ್ಷಗಳ ಪೈಕಿ ಏಪ್ರಿಲ್ ತಿಂಗಳ ಅಂತರ್ಜಲ ಮಟ್ಟವನ್ನು ಗಮನಿಸಿದರೆ ದಕ್ಷಿಣ ಕನ್ನಡ ಜಿಲ್ಲೆ ಅಸುರಕ್ಷಿತ ಸ್ಥಿತಿಯಲ್ಲಿರುವುದು ಕಂಡು ಬರುತ್ತಿದೆ.ಕೊಳವೆಬಾವಿ, ತೆರೆದ ಬಾವಿಯಲ್ಲಿ ಅಂತರ್ಜಲ ಮಟ್ಟದ ಪ್ರಮಾಣದ ಅಧ್ಯಯನ ವರದಿ ಈ ಅಂಶವನ್ನು ದೃಢೀಕರಿಸಿದೆ.ವರ್ಷಕ್ಕೆ 3600 ಮಿ.ಮೀ.ಮಳೆ ಸುರಿಯುವ ಜಿಲ್ಲೆಯಲ್ಲೇ ಜಲಮಟ್ಟ ನಿರಂತರ ಕುಸಿತದತ್ತ ಸಾಗಿರುವುದು ಆತಂಕಕಾರಿ ಸಂಗತಿಯಾಗಿದೆ.ಮಳೆ ನೀರಿನ ಸದ್ಬಳಕೆ ಬಗ್ಗೆ ಗಂಭೀರ ಪ್ರಯತ್ನ ಆಗುತ್ತಿಲ್ಲ ಅನ್ನುವ ಎಚ್ಚರಿಕೆಯ ಕರೆಗಂಟೆ ಇದಾಗಿದೆ.

ಕಳೆದ ವರ್ಷ ಏಪ್ರಿಲ್ ತಿಂಗಳಲ್ಲಿ ದಾಖಲಾಗಿದ್ದ ಅಂತರ್ಜಲ ಮಟ್ಟ ಈ ವರ್ಷದ ಏಪ್ರಿಲ್ ತಿಂಗಳಲ್ಲಿ ದಾಖಲಾಗಿರುವ ಅಂತರ್ಜಲ ಮಟ್ಟ ಗಮನಿಸಿದರೆ ಕಳೆದ ವರ್ಷಕ್ಕಿಂತ ಈ ವರ್ಷ ಕುಸಿತ ಕಂಡಿರುವುದು ದಾಖಲಾಗಿದೆ.2023ರ ಏಪ್ರಿಲ್‌ನಲ್ಲಿ ತೆರೆದ ಬಾವಿಯಲ್ಲಿ 6.63 ಮೀ., ಕೊಳವೆ ಬಾವಿಯಲ್ಲಿ 26.39 ಮೀ. ಅಂತರ್ಜಲ ಮಟ್ಟ ಇದ್ದರೆ, 2024ರಲ್ಲಿ ತೆರೆದ ಬಾವಿ 7.05 ಮೀ., ಕೊಳವೆಬಾವಿ 29.29 ಮೀ.ಗೆ ಇಳಿದಿದೆ.ಅಂದರೆ ಕಳೆದ ವರ್ಷಕ್ಕಿಂತ ಈ ವರ್ಷ ತೆರೆದ ಬಾವಿಯಲ್ಲಿ 0.42 ಮೀ., ಕೊಳವೆಬಾವಿಯಲ್ಲಿ 2.09 ಮೀ.ನಷ್ಟು ಅಂತರ್ಜಲ ಕುಸಿದಿದೆ.

ಪುತ್ತೂರು, ಕಡಬ ಸಹಿತ ನಾಲ್ಕು ತಾಲೂಕುಗಳಲ್ಲಿ ಗರಿಷ್ಠ ಕುಸಿತ: ಪುತ್ತೂರು, ಕಡಬ, ಮಂಗಳೂರು, ಮೂಡಬಿದಿರೆ ತಾಲೂಕಿನಲ್ಲಿ ಅಂತರ್ಜಲ ಕುಸಿತದ ಪ್ರಮಾಣ ತೀವ್ರವಾಗಿದೆ.ಇಲ್ಲಿ ಒಂದೇ ವರ್ಷದಲ್ಲಿ ಕುಸಿದ ಪ್ರಮಾಣ ಹೀಗಿದೆ.ಮಣ್ಣಿನ ರಂಧ್ರಗಳ ಮೂಲಕ ನಿಧಾನವಾಗಿ ಕೆಳಗಿಳಿಯುವ ನೀರು ತಳದಲ್ಲಿರುವ ಶಿಲಾರಂಧ್ರಗಳಲ್ಲಿ ಬಿರುಕುಗಳಲ್ಲಿ ಸಂಗ್ರಹವಾಗುವುದೇ ಅಂತರ್ಜಲ.ಅರಣ್ಯ ನಾಶ, ಪ್ರಕೃತಿ ವಿರೋಽ ಕೃತ್ಯ, ನೀರಿಂಗಿಸಲು ಪೂರಕ ಕ್ರಮಗಳು ಇಲ್ಲದಿರುವುದರಿಂದ ಅಂತರ್ಜಲ ಸುರಕ್ಷಿತವಾಗಿಲ್ಲ.ಓಡುವ ಮಳೆ ನೀರನ್ನು ನಿಲ್ಲಿಸಿ ಇಂಗಿಸಿ, ಅಂತರ್ಜಲ ಹೆಚ್ಚಿಸುವ ಅಗತ್ಯತೆ ಬಗ್ಗೆ ನಡೆದ ಜಾಗೃತಿ ಕಾರ್ಯಕ್ರಮಗಳು ಫಲ ನೀಡಿಲ್ಲ. ಈ ಬಾರಿಯೂ ಮಳೆ ಕೊಯ್ಲುನಂತಹ ಪರಿಸರ ಸ್ನೇಹಿ ಪ್ರಯತ್ನಗಳು ಹೆಚ್ಚೆಚ್ಚು ಆಗದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿಯಾಗಿದೆ.

ಬಂಟ್ವಾಳ ಬಿಟ್ಟು ಉಳಿದ ತಾಲೂಕಿನಲ್ಲಿ ಕುಸಿತ: ತಾಲೂಕು ವ್ಯಾಪ್ತಿಯಲ್ಲಿ ಎರಡು ವರ್ಷದ ಅಂಕಿ ಅಂಶ ಗಮನಿಸಿದರೆ ಬಂಟ್ವಾಳ ಹೊರತುಪಡಿಸಿ ಉಳಿದ ಎಲ್ಲ ತಾಲೂಕಿನಲ್ಲಿ ಕುಸಿತವೇ ದಾಖಲಾಗಿದೆ.ಬಂಟ್ವಾಳದಲ್ಲಿ 2023 ಏಪ್ರಿಲ್‌ನಲ್ಲಿ 10.68 ಮೀಟರ್‌ನಲ್ಲಿದ್ದ ಅಂತರ್ಜಲ 9.47 ಮೀ.ದಾಖಲಾಗಿ ಏರಿಕೆ ಮಾಪನ ತೋರಿಸಿದೆ.ಬೆಳ್ತಂಗಡಿಯಲ್ಲಿ 9.73 ಮೀ.ನಿಂದ 10.44 ಮೀ., ಕಡಬದಲ್ಲಿ 6.42 ಮೀ.ನಿಂದ 9.02ಕ್ಕೆ, ಮಂಗಳೂರಿನಲ್ಲಿ 13.49 ಮೀ.ನಿಂದ 14.37ಕ್ಕೆ ಮೂಲ್ಕಿಯಲ್ಲಿ 9.21 ಮೀ.ನಿಂದ 10.7ಕ್ಕೆ, ಮೂಡಬಿದಿರೆಯಲ್ಲಿ 19.8 ಮೀ.ನಿಂದ 22.4ಕ್ಕೆ ಪುತ್ತೂರಿನಲ್ಲಿ 12.83 ಮೀ.ನಿಂದ 16.01ಕ್ಕೆ ಸುಳ್ಯದಲ್ಲಿ 9.59ನಿಂದ 11.09ಕ್ಕೆ ಉಳ್ಳಾಲದಲ್ಲಿ 19.79 ಮೀ.ನಿಂದ 24.37 ಮೀ.ಗೆ ಇಳಿದಿದೆ. ಒಂಬತ್ತು ಕಂದಾಯ ತಾಲೂಕಿನ ಪೈಕಿ ಎಂಟರಲ್ಲಿ ಅಂತರ್ಜಲ ಮಟ್ಟ ಕುಸಿತ ದಾಖಲಾಗಿರುವುದು ಗಂಭೀರ ಸಂಗತಿಯಾಗಿದೆ.

ಮಳೆ ಕೊಯ್ಲು ಅನುಷ್ಟಾನಕ್ಕೆ ರಾಜಧಾನಿಯಲ್ಲಿ ಏಳು ಸಾವಿರಕ್ಕೂ ಹೆಚ್ಚು ಕಟ್ಟಡಗಳಿಗೆ ನೊಟೀಸ್

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಈ ವರ್ಷ ನೀರಿನ ಸಮಸ್ಯೆಯ ಬಿಸಿ ಉಂಟಾಗಿದೆ. ಈ ಸಮಸ್ಯೆ ಉಂಟಾಗಬಾರದೆಂದು ದಶಕಗಳ ಹಿಂದೆಯೇ ಮಳೆನೀರು ಕೊಯ್ಲನ್ನು ಕಡ್ಡಾಯಗೊಳಿಸಿದ್ದರೂ ಅನೇಕರು ಇದನ್ನು ಅಳವಡಿಸಿಕೊಂಡಿಲ್ಲ. ಕೊಯ್ಲು ಅಳವಡಿಸಿಕೊಳ್ಳದ ದೊಡ್ಡ ದೊಡ್ಡ ಕಟ್ಟಡಗಳ ಮಾಲೀಕರಿಗೆ ನೋಟಿಸ್ ನೀಡಿದ ಬೆಂಗಳೂರು ಜಲ ಮಂಡಳಿ ಐದು ಸಾವಿರಕ್ಕೂ ಹೆಚ್ಚು ಕಟ್ಟಡಗಳ ನೀರಿನ ಸಂಪರ್ಕವನ್ನು ರದ್ದುಗೊಳಿಸುವ ಮೂಲಕ ಎಚ್ಚರಿಕೆ ನೀಡಿದೆ.

ನಗರದಲ್ಲಿ ಈ ಹಿಂದೆಂದೂ ಕಂಡಿರದಂತೆ ನೀರಿನ ಕೊರತೆ ಜನರನ್ನು ಕಾಡಿದ್ದು ಕಾವೇರಿ ಜಲಾನಯನ ಪ್ರದೇಶದಲ್ಲಿಯೂ ಸಮರ್ಪಕವಾಗಿ ನೀರಿನ ಸೌಕರ್ಯ ದೊರೆತಿರಲಿಲ್ಲ. ನಗರದ ಕೊಳವೆ ಬಾವಿಗಳೂ ಕೈಕೊಟ್ಟ ಬೆನ್ನಲ್ಲೇ ಮುಂದಿನ ಬೇಸಿಗೆಯಲ್ಲಿ ಈ ರೀತಿ ಜನರು ಹನಿ ನೀರಿಗೂ ಪರದಾಡುವಂತಹ ಸ್ಥಿತಿ ನಿರ್ಮಾಣವಾಗಬಾರದು ಎನ್ನುವ ಉದ್ದೇಶದಿಂದ ಜಲಮಂಡಳಿಯು ಮಳೆ ನೀರು ಕೊಯ್ಲನ್ನು ಇನ್ನಷ್ಟು ಸಮರ್ಪಕವಾಗಿ ಅನುಷ್ಠಾನಗೊಳಿಸಲು ಮುಂದಾಗಿದ್ದು ಎಲ್ಲಾ ಸರಕಾರಿ ಕಚೇರಿಗಳು ಹಾಗೂ ಸಾರ್ವಜನಿಕರಿಗೆ ಮಳೆ ನೀರು ಕೊಯ್ಲು ವ್ಯವಸ್ಥೆಯನ್ನು ಅಳವಡಿಸಿಕೊಳ್ಳುವಂತೆ ಮನವಿ ಮಾಡಿದೆ. ಮಳೆ ನೀರು ಕೊಯ್ಲು ಅಳವಡಿಸಿಕೊಳ್ಳಬೇಕು ಎನ್ನುವ ಸೂಚನೆಯನ್ನು ವರ್ಷಗಳಿಂದ ಜಲ ಮಂಡಳಿ ನೀಡುತ್ತಿದ್ದರೂ ಅನೇಕರು ಈ ಬಗ್ಗೆ ಗಮನಹರಿಸಿಲ್ಲ. ಆದ್ದರಿಂದ ಬೆಂಗಳೂರಿನಾದ್ಯಂತ ಸಮೀಕ್ಷೆ ನಡೆಸಿರುವ ಜಲ ಮಂಡಳಿ ಅಕ್ರಮವಾಗಿ ನೀರು ಹರಿಸುತ್ತಿರುವ ಕಟ್ಟಡಗಳ ನೀರಿನ ಸಂಪರ್ಕವನ್ನು ರದ್ದುಗೊಳಿಸಿದೆ ಎಂದು ತಿಳಿದುಬಂದಿದೆ.

1,98,5೦೦ ಕಟ್ಟಡಗಳ ಸಮೀಕ್ಷೆ:
ಜಲ ಮಂಡಳಿ ವತಿಯಿಂದ ಬೆಂಗಳೂರಿನಲ್ಲಿ 1,98,5೦೦ ಕಟ್ಟಡಗಳ ಸಮೀಕ್ಷೆ ನಡೆಸಿದ್ದು ಜಲಮಂಡಳಿಯ ಮಾರ್ಗಸೂಚಿಯ ಪ್ರಕಾರ ಈ ಕಟ್ಟಡಗಳಲ್ಲಿ ಮಳೆ ನೀರು ಕೊಯ್ಲು ಕಡ್ಡಾಯವಾಗಿರಬೇಕು. ಆದರೆ ಇದರಲ್ಲಿ ಕೇವಲ 8404 ಕಟ್ಟಡಗಳಲ್ಲಿ ಮಳೆ ನೀರು ಕೊಯ್ಲು ಯೋಜನೆ ಸಮರ್ಪಕವಾಗಿ ಜಾರಿಯಾಗಿದೆ. ಇನ್ನುಳಿದ 7091 ಕಟ್ಟಡಗಳಿಗೆ ನೋಟಿಸ್ ನೀಡಿದ್ದು ನಿಯಮ ಬಾಹಿರವಾಗಿರುವ 5063 ಕಟ್ಟಡಗಳ ನೀರಿನ ಸಂಪರ್ಕವನ್ನು ರದ್ದುಪಡಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇಂಗುಗುಂಡಿ ತೋಡಲು ಜನರಲ್ಲಿ ನಿರುತ್ಸಾಹ:
ನಗರದಲ್ಲಿ ಮನೆಗಳಿಗೆ ಮಳೆ ನೀರು ಕೊಯ್ಲು ಯೋಜನೆ ಅಳವಡಿಸಿಕೊಳ್ಳಲು ಜಲಮಂಡಳಿ ಸೂಚನೆ ನೀಡಿದ್ದು ನಗರದ ಅಪಾರ್ಟ್ ಮೆಂಟ್‌ಗಳಲ್ಲಿ ಕಡ್ಡಾಯವಾಗಿ ಮಳೆ ನೀರು ಕೊಯ್ಲು ಮಾಡುವ ವ್ಯವಸ್ಥೆ ಮಾಡಲು ಸೂಚನೆ ನೀಡಲಾಗಿದೆ.ಎಲ್ಲೆಲ್ಲಿ ಬೋರ್‌ವೆಲ್‌ಗಳು ಇವೆಯೋ ಅದರ ಪಕ್ಕದಲ್ಲೇ ಇಂಗುಗುಂಡಿ ನಿರ್ಮಿಸಲು ಸಾರ್ವಜನಿಕರಿಗೆ ಸೂಚನೆ ನೀಡಲಾಗಿದೆ. ಆದರೆ ಜನರು ಇಂಗುಗುಂಡಿ ತೋಡಲು ನೀರಸ ಪ್ರತಿಕ್ರಿಯೆ ತೋರಿಸಿದ್ದಾರೆ ಎಂದು ಅಽಕಾರಿಗಳು ಹೇಳಿದ್ದಾರೆ.ಬೆಂಗಳೂರಿನಲ್ಲಿ ಸೈಟ್‌ನಲ್ಲಿ ಕಟ್ಟಡ ನಿರ್ಮಿಸುವಾಗ ಮಳೆ ನೀರು ಕೊಯ್ಲು ಕಡ್ಡಾಯವಾಗಿರಬೇಕು ಎಂದು 2016 ರಲ್ಲಿಯೇ ಜಲಮಂಡಳಿ ಆದೇಶ ಹೊರಡಿಸಿದೆ.

LEAVE A REPLY

Please enter your comment!
Please enter your name here