ಪುತ್ತೂರು ಶಾಂತೇಶ್ವರನ ವಚನಗಳು ಕೃತಿ ಲೋಕಾರ್ಪಣಾ ಕಾರ್ಯಕ್ರಮ

0

*ದಿಕ್ಕು ತಪ್ಪಿದ ಯುವ ಜನಾಂಗಕ್ಕೆ, ಮಾನಸಿಕವಾಗಿ ಕುಗ್ಗಿದವರಿಗೆ ಸ್ಪೂರ್ತಿ ಶಾಂತೇಶ್ವರನ ವಚನಗಳು – ಡಾ.ವರದರಾಜ್ ಚಂದ್ರಗಿರಿ

*ಕಾಲೇಜು ಹಂತದಲ್ಲಿಯೇ ನಾಯಕತ್ವದ ಚಾಪು ಮೂಡಿಸಿದ್ದ ಜನಾರ್ದನರು- ಫ್ರೊ.ಝೇವಿಯರ್ ಡಿ’ ಸೋಜಾ.

 *ಇವರಿಂದ ಇನ್ನಷ್ಟು ಚಿಂತನಶೀಲ ಕೃತಿಗಳು ಮೂಡಿ ಬರಲಿ- ಲೋಕೇಶ್ ಎಸ್.ಆರ್.

 *ಬಾಲ್ಯದಲ್ಲೇ ಓದಿನ ಆಸಕ್ತಿ ಹೊಂದಿದ್ದರು- ರಾಮ.ಕೆ 

*ಇದು ಒಂದು ಉತ್ಕ್ರಷ್ಟ ಕೃತಿ ಎನ್ನುವುದಕ್ಕೆ ಎರಡು ಮಾತಿಲ್ಲ- ಉಮೇಶ್ ನಾಯಕ್

ನಿಡ್ಪಳ್ಳಿ: ದಿಕ್ಕು ತಪ್ಪಿದ ಈಗಿನ ಯುವ ಜನಾಂಗಕ್ಕೆ ಮತ್ತು ಮಾನಸಿಕವಾಗಿ ಕುಗ್ಗಿದವರಿಗೆ ಸ್ಪೂರ್ತಿ ಈ ಶಾಂತೇಶ್ವರನ ವಚನಗಳು ಎಂದು ಸಾಹಿತಿ ವಿಮರ್ಶಕ ಹಾಗೂ ಬೆಟ್ಟಂಪಾಡಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲರಾದ ಡಾ.ವರದರಾಜ್ ಚಂದ್ರಗಿರಿ ಹೇಳಿದರು.

ಪುತ್ತೂರು ಅನುರಾಗ ವಠಾರದಲ್ಲಿ ಮೇ.27ರಂದು ನಡೆದ ಹಾರಾಡಿ ಶಾಲಾ ಶಿಕ್ಷಕ ಜನಾರ್ದನ ದುರ್ಗ ಅವರ ‘ಶಾಂತೇಶ್ವರನ ವಚನಗಳು’ ಕೃತಿ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಕೃತಿ ಪರಿಚಯಿಸಿ  ಮಾತನಾಡಿದ ಅವರು ಶಾಂತೇಶ್ವರನ ವಚನಗಳು ಸಮಾಜದ ಓರೆಕೋರೆಗಳನ್ನು ತಿದ್ದುವ, ಆತ್ಮವಿಮರ್ಶೆಗೆ ಹಚ್ಚುವ ಮೂಲಕ ಮನುಜ ಈ ಪ್ರಕೃತಿಯಲ್ಲಿರುವ ಎಲ್ಲಾ ಜೀವಿಗಳಂತೆ ಸಹಜ ಜೀವನ ನಡೆಸದೆ ಪ್ರಕೃತಿಯನ್ನು ತನ್ನಂಕೆಗೆ ಇಡುವ ದುಷ್ಪ್ರ ವೃತ್ತಿಯ ಪರಿಣಾಮಗಳನ್ನು ತೆರೆದಿಡುತ್ತವೆ. ಕರ್ನಾಟಕ ಸರಕಾರದ ಕನ್ನಡ ಪುಸ್ತಕ ಪ್ರಾಧಿಕಾರದಿಂದ ಆಯ್ಕೆಯಾದಾಗಲೇ ಈ ಕೃತಿ ಗೆದ್ದಾಗಿದೆ ಎಂದರು. ಅಂತಿಮವಾಗಿ ಈ ಕೃತಿಯು ಗುರಿಯೇ ಇಲ್ಲದೆ ಬದುಕುವ ಯುವ ಜನಾಂಗ, ಪ್ರಚಾರ ಪ್ರಸಿದ್ಧಿಗಳೇ ಯಶಸ್ಸೆಂಬ ಭ್ರಮೆಯಲ್ಲಿರುವ ಹೊಸ ತಲೆಮಾರು, ಹಾಗೂ ಬದುಕಿನಲ್ಲಿ ಆತ್ಮ ಸ್ಥೈರ್ಯ ಕಳೆದುಕೊಂಡು ಸೋತ ಜನ ವರ್ಗವನ್ನು ಗುರಿಯಾಗಿಸಿದ್ದು ಅಂತಹವರಿಗೆ ಈ ಕೃತಿಯು ದೊರೆತರೆ ಕವಿಯ ಉದ್ದೇಶ ಸಾಕ್ಷಾತ್ಕರಿಸುತ್ತದೆ ಎಂದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ನಿವೃತ್ತ ಪ್ರಾಂಶುಪಾಲರಾದ ಫ್ರೊ.ಝೇವಿಯರ್ ಡಿ’ಸೋಜ ಮಾತನಾಡಿ ಕಾಲೇಜು ಹಂತದಲ್ಲಿಯೆ ನಾಯಕತ್ವದ ಚಾಪು ಮೂಡಿಸಿದ್ದ ಜನಾರ್ದನರದ್ದು ಅಹಂ ಇಲ್ಲದ ವಿನಯವುಳ್ಳ ವ್ಯಕ್ತಿತ್ವ. ಅವರಿಂದ ಇನ್ನಷ್ಟು ಕೃತಿಗಳು ಮೂಡಿಬರಲಿ ಎಂದು ಶುಭ ಹಾರೈಸಿದರು.

ಕೃತಿ ಲೋಕಾರ್ಪಣೆ ಮಾಡಿ ಮಾತನಾಡಿದ  ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್.ಆರ್ ಅವರು  ಶಿಕ್ಷಕರು ಚಟುವಟಿಕೆಯಿಂದ ಇದ್ದು ಓದುವ ಹವ್ಯಾಸ ಹಾಗೂ ಸಾಹಿತ್ಯದ ಮೇಲಿನ ಅಭಿರುಚಿಯನ್ನು ಹೊಂದಿದಾಗ ವಿದ್ಯಾರ್ಥಿಗಳಿಗದು ಸ್ಪೂರ್ತಿದಾಯಕ.ಇವರಿಂದ ಇನ್ನಷ್ಟು ಚಿಂತನಶೀಲ ಕೃತಿಗಳು ಮೂಡಿ ಬರಲಿ ಎಂದರು.

ಕವಿ ಪರಿಚಯ ಮಾಡಿದ ಬೆಟ್ಟಂಪಾಡಿ ಕಾಲೀಜಿನ ಗ್ರಂಥಪಾಲಕ ರಾಮ. ಕೆ ಮಾತನಾಡುತ್ತ ಬಾಲ್ಯದಲ್ಲಿಯೇ ಓದಿನ ಆಸಕ್ತಿ ಹೊಂದಿದ ಇವರ ಬರಹಗಳು ಪ್ರೌಢಶಾಲಾ ಹಂತದಲ್ಲಿಯೆ ತುಷಾರ, ಮಂಗಳ ಮೊದಲಾದ ವಾರಪತ್ರಿಕೆಗಳಲ್ಲಿ ಪ್ರಕಟಗೊಂಡಿದ್ದವು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪುತ್ತೂರು ತಾಲೂಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಉಮೇಶ್ ನಾಯಕ್ ಮಾತನಾಡಿ ತಾನು ಮಾಡಿದೆ ಎನ್ನುವ ಬದಲು ಕೃತಿಯೇ ಮಾತನಾಡಿದಾಗ ಅದರ ಉದ್ದೇಶ ಈಡೇರಿದಂತೆ. ಅದು ವಚನಗಳಲ್ಲಿ ವ್ಯಕ್ತವಾಗಿದ್ದು ಇದೊಂದು ಉತ್ಕೃಷ್ಟ ಕೃತಿ ಎನ್ನುವುದಕ್ಕೆ ಎರಡು ಮಾತಿಲ್ಲ ಎಂದರು. ಸಾಹಿತ್ಯ ಚಟುವಟಿಕೆಗಳಿಗೆ ಪರಿಷತ್ತು ವಿಶೇಷ ಕಾರ್ಯ ಚಟುವಟಿಕೆಗಳನ್ನು ಹಮ್ಮಿಕೊಂಡಿದ್ದು ಈ ನಿಟ್ಟಿನಲ್ಲಿ ರಾಜ್ಯದಲ್ಲಿಯೆ ಪ್ರಥಮವಾಗಿ ವೈಬ್ ಸೈಟ್ ಅನ್ನು ಪುತ್ತೂರು ಘಟಕ ಆರಂಭಿಸಿದೆ ಎಂದರು.
ನಂತರ ವಳಕಡಮ ಶಾಲಾ ಶಿಕ್ಷಕ ಸಾಹಿತಿ  ನಾರಾಯಣ ಭಟ್ ಅಧ್ಯಕ್ಷತೆಯಲ್ಲಿ ಕವಿಗೋಷ್ಟಿ ನಡೆಯಿತು.

ಶಿಕ್ಷಕರು ಹಾಗೂ ವಿದ್ಯಾರ್ಥಿಗಳ ಕವಿಗೋಷ್ಠಿಯು ವಿಶೇಷ ಗಮನ ಸೆಳೆಯಿತು. ಇಪ್ಪತ್ತು ಕವಿಗಳು ತಮ್ಮ ಕವನಗಳನ್ನು ವಾಚಿಸಿದರು. ಶಂಕರ್ ಮಹಾದೇವನ್ ಅಕಾಡೆಮಿಯ ತರಬೇತುದಾರರಾದ  ನಂದಿನಿ ವಿನಾಯಕ್ ಅವರಿಂದ ನಡೆದ ಗಾಯನ ವಿಶೇಷ ಆಕರ್ಷಣೆಯಾಗಿತ್ತು. ಕವನ ವಾಚಿಸಿದ ಕವಿಗಳಿಗೆ ಪ್ರಮಾಣಪತ್ರ ಹಾಗೂ ಶಾಂತೇಶ್ವರನ ವಚನಗಳು ಪುಸ್ತಕ ನೀಡಿ ಗೌರವಿಸಲಾಯಿತು.

ವಚನಕಾರ ಶಿಕ್ಷಕ ಜನಾರ್ದನ ದುರ್ಗ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.ಮುಖಪುಟ ವಿನ್ಯಾಸಕ ಜಗನ್ನಾಥ ಅರಿಯಡ್ಕ ವಂದಿಸಿದರು.ಗಿರೀಶ್ ದರ್ಬೆತ್ತಡ್ಕ ಹಾಗೂ ಶಾರದಾ ತುಳುನಾಡು ಕಾರ್ಯಕ್ರಮ ನಿರೂಪಿಸಿದರು.

ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ ವಿ.ಬಿ ಅರ್ತಿಕಜೆ, ನಾರಾಯಣ ರೈ ಕುಕ್ಕುವಳ್ಳಿ, ಪೂವರಿ ಸಂಪಾದಕರಾದ ವಿಜಯಕುಮಾರ್ ಹೆಬ್ಬಾರ ಬೈಲು, ನಿವೃತ್ತ ದೈಹಿಕ ಶಿಕ್ಷಕ ದಯಾನಂದ ರೈ ಕೊರ್ಮಂಡ, ದ.ಕ.ಜಿ.ಮ.ಸಂ.ಸ. ಅಧ್ಯಕ್ಷ ಅಶೋಕ್ ನಾಯ್ಕ ಕೆದಿಲ, ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಜಯಂತ್ ವೈ,ಪ್ರಗತಿಪರ ಕೃಷಿಕ ವಿವೇಕ್ ಆಳ್ವ, ತಾ.ಪ್ರಾ‌.ಶಾ.ಶಿ.ಸಂಘದ ಅಧ್ಯಕ್ಷ ನಾಗೇಶ್ ಪಾಟಾಳಿ, ತಾ.ದೈ.ಶಿ.ಸಂಘದ ಅಧ್ಯಕ್ಷ  ದ.ಕ.ಜಿ.ಪಿ.ಟಿ ಸಂಘದ ಅಧ್ಯಕ್ಷ ದಿಲೀಪ್ ಕುಮಾರ್ ರೈ, ಸ.ನೌ.ಸಂಘದ ಪದಾಧಿಕಾರಿ ತನುಜ, ಹಾರಾಡಿ ಶಾಲೆಯ ಮುಖ್ಯ ಶಿಕ್ಷಕ ಕೆ.ಕೆ ಸರ್, ನವೋದಯ ಪ್ರೌಢಶಾಲಾ ಮುಖ್ಯ ಶಿಕ್ಷಕಿ ಪುಷ್ಪಾವತಿ  ಮೊದಲಾದ ಹಿರಿಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here