ಉಪ್ಪಿನಂಗಡಿ: ಇಲ್ಲಿನ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ಇಬ್ಬರು ಶಿಕ್ಷಕಿಯರು ಹಾಗೂ ಓರ್ವ ಕಚೇರಿ ಸಹಾಯಕಿಯವರು ಮೇ 31ರಂದು ಸೇವಾ ನಿವೃತ್ತಿ ಹೊಂದಿದ್ದು, ಅವರಿಗೆ ಜೂ.5ರಂದು ಶಾಲೆಯಲ್ಲಿ ಬೀಳ್ಕೊಡುಗೆ ಸಮಾರಂಭ ನಡೆಯಲಿದೆ.
ಶೋಭಾ ಬಿ. :
1989ರಲ್ಲಿ ಬಾಳಿಲದ ವಿದ್ಯಾ ಬೋಧಿನಿ ಪ್ರೌಢಶಾಲೆ ಹಾಗೂ 1990ರಿಂದ ಸುಳ್ಯದ ಶಾರದಾ ಪದವಿ ಪೂರ್ವ ಕಾಲೇಜಿನಲ್ಲಿ ಗೌರವ ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸಿದ ಶೋಭಾ ಅವರು 1994ರಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಸಹ ಶಿಕ್ಷಕರಾಗಿ ಉಪ್ಪಿನಂಗಡಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗಕ್ಕೆ ಸೇರ್ಪಡೆಗೊಂಡಿದ್ದು, 2024ರ ಜ.1ರವರೆಗೆ ಗಣಿತ ಶಿಕ್ಷಕಿಯಾಗಿ 29 ವರ್ಷ ಕಾರ್ಯ ನಿರ್ವಹಿಸಿದ್ದಾರೆ. ಜ.4ರಂದು ಭಡ್ತಿ ಹೊಂದಿ ಸಂಸ್ಥೆಯ ಉಪಪ್ರಾಂಶುಪಾಲರಾಗಿ 5 ತಿಂಗಳು ಕರ್ತವ್ಯ ನಿರ್ವಹಿಸಿ ಮೇ 31ರಂದು ನಿವೃತ್ತಿಯನ್ನು ಹೊಂದಿದ್ದಾರೆ. ಉಜಿರೆಯ ಎಸ್ಡಿಎಂ ಕಾಲೇಜಿನಲ್ಲಿ ಪದವಿ ಪಡೆದಿರುವ ಇವರು ಉತ್ತಮ ಕ್ರೀಡಾಪಟುವಾಗಿ ವಿ.ವಿ. ಮಟ್ಟದ ಕ್ರೀಡಾಕೂಟಗಳಲ್ಲಿ ಭಾಗವಹಿಸಿದ್ದಾರೆ.
ವನಲಕ್ಷ್ಮೀ:
ಪದವಿ ಪೂರ್ವ ಶಿಕ್ಷಣ, ಟಿ.ಸಿ.ಎಚ್. ತರಬೇತಿಯನ್ನು ಪಡೆದು 1992ರಲ್ಲಿ ಬೆಳ್ತಂಗಡಿ ತಾಲೂಕಿನ ಕಿಲ್ಲೂರು ಶಾಲೆಯಲ್ಲಿ ಶಿಕ್ಷಕಿಯಾಗಿ ಸರಕಾರಿ ಸೇವೆಗೆ ಸೇರಿದ ಇವರು ಶ್ರೀಮತಿ ವನಲಕ್ಷ್ಮೀ ಅವರು ಬಿಳಿನೆಲೆ ಕೈಕಂಬ, ಮರ್ಧಾಳದಲ್ಲಿ ಸೇವೆ ಸಲ್ಲಿಸಿ 2005ರಲ್ಲಿ ಭಡ್ತಿ ಹೊಂದಿ ಉಪ್ಪಿನಂಗಡಿ ಶಾಲೆಯಲ್ಲಿ ಆಂಗ್ಲ ಭಾಷಾ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸಿದರು. ತನ್ನ ಸೇವಾ ಅವಧಿಯಲ್ಲಿ ಬಿ.ಎ., ಎಂ.ಎ., ಬಿ.ಇಡಿ ಪದವಿಯನ್ನು ಪಡೆದಿರುವ ಇವರು ಕಳೆದ ಮೇ 31ರಂದು ನಿವೃತಿ ಹೊಂದಿದ್ದಾರೆ.
ನಳಿನಿ ಎಸ್. ಪಿ.:
2004ರಲ್ಲಿ ಪುತ್ತೂರಿನ ಡಾ. ಶಿವರಾಮ ಕಾರಂತ ಪ್ರೌಢಶಾಲೆಯಲ್ಲಿ ಕಚೇರಿ ಸಿಬ್ಬಂದಿಯಾಗಿ ಸರಕಾರಿ ಸೇವೆಗೆ ಸೇರಿದ ಇವರು 2010ರಲ್ಲಿ ಭಡ್ತಿ ಹೊಂದಿ ಉಪ್ಪಿನಂಗಡಿ ಶಾಲೆಗೆ ಬಂದರು. ಅವರು ಕೂಡಾ ಮೇ 31ರಂದು ಸೇವಾ ನಿವೃತ್ತಿ ಪಡೆದಿದ್ದಾರೆ.
ಈ ಮೂವರಿಗೆ ಜೂ.5ರಂದು ಉಪ್ಪಿನಂಗಡಿ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ಬೀಳ್ಕೊಡುಗೆ ಸಮಾರಂಭ ನಡೆಯಲಿದೆ.