ನೆಲ್ಯಾಡಿ: ಶೌರ್ಯ ಬಳಗದಿಂದ ಮನೆ ನಿರ್ಮಾಣಕ್ಕೆ ಶ್ರಮದಾನ-ಸ್ವಯಂ ಸೇವಕರಿಗೆ ಸಮವಸ್ತ್ರ ವಿತರಣೆ

0

ನೆಲ್ಯಾಡಿ: ನೆಲ್ಯಾಡಿ ಶೌರ್ಯ ಘಟಕದ ಸದಸ್ಯರಿಂದ ಶ್ರಮದಾನ, ಸ್ವಯಂ ಸೇವಕರಿಗೆ ಸಮವಸ್ತ್ರ ವಿತರಣೆ ಸಮಾರಂಭ ನೆಲ್ಯಾಡಿ ಗ್ರಾಮದ ಪಡುಬೆಟ್ಟುವಿನಲ್ಲಿ ನಡೆಯಿತು.

ಪಡುಬೆಟ್ಟು ಹೊಸಮನೆ ನಿವಾಸಿ ಮೋಹಿನಿ ಅವರ ಪತಿ ಅಪಘಾತದಲ್ಲಿ ಮರಣ ಹೊಂದಿದ್ದು ಇವರು ಸಣ್ಣ ಮಕ್ಕಳೊಂದಿಗೆ ಬಾಡಿಗೆ ಮನೆಯಲ್ಲಿ ವಾಸವಿದ್ದಾರೆ. ಇವರಿಗೆ ದಾನಿಗಳ ನೆರವಿನಲ್ಲಿ ಹೊಸ ಮನೆ ನಿರ್ಮಾಣ ಮಾಡಲಾಗುತ್ತಿದ್ದು ಇಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನೆಲ್ಯಾಡಿ ವಲಯದ ಶೌರ್ಯ ಘಟಕದ ಸ್ವಯಂ ಸೇವಕರು ಶ್ರಮದಾನದ ಮೂಲಕ ವಿವಿಧ ಕೆಲಸ ನಿರ್ವಹಿಸಿದರು. ಮನೆಯ ಆವರಣದಲ್ಲಿ ತೆಂಗಿನ ಸಸಿಯನ್ನು ಕೂಡ ನೆಡಲಾಯಿತು.

ಇದೇ ವೇಳೆ ಘಟಕದ ಪ್ರತಿನಿಧಿ ರಮೇಶ್ ಬಾಣಜಾಲು ಅವರ ಅಧ್ಯಕ್ಷತೆಯಲ್ಲಿ ನಡೆದ ತಿಂಗಳ ಮಾಸಿಕ ಸಭೆಯಲ್ಲಿ ಘಟಕದ ಸ್ವಯಂಸೇವಕರಿಗೆ ಧರ್ಮಸ್ಥಳ ಕ್ಷೇತ್ರದ ವತಿಯಿಂದ ನೀಡಿದ ಸಮವಸ್ತ್ರವನ್ನು ವಿತರಣೆ ಮಾಡಲಾಯಿತು. ನೆಲ್ಯಾಡಿ ವಲಯ ಜನಜಾಗೃತಿ ವೇದಿಕೆ ಅಧ್ಯಕ್ಷರಾದ ಜಯಾನಂದ ಬಂಟ್ರಿಯಾಲ್, ನೆಲ್ಯಾಡಿ ಗ್ರಾ.ಪಂ.ಮಾಜಿ ಅಧ್ಯಕ್ಷ, ಜನಜಾಗೃತಿ ವೇದಿಕೆ ಮಾಜಿ ಅಧ್ಯಕ್ಷರಾದ ಗಂಗಾಧರ ಶೆಟ್ಟಿ ಹೊಸಮನೆ, ಶ್ರೀ ಶಾಸ್ತಾರೇಶ್ವರ ದೇವಸ್ಥಾನದ ಟ್ರಸ್ಟ್‌ನ ಕೋಶಾಧಿಕಾರಿ ಸೀತಾರಾಮ ಗೌಡ, ನೆಲ್ಯಾಡಿ ವಲಯ ಮೇಲ್ವಿಚಾರಕ ವಿಜೇಶ್ ಜೈನ್, ಪಡುಬೆಟ್ಟು ಒಕ್ಕೂಟದ ಅಧ್ಯಕ್ಷ ಜೋನ್ ಮೊಂತೇರೋ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಅತಿಥಿಗಳು ಶೌರ್ಯ ಘಟಕದ ಸ್ವಯಂ ಸೇವಕರಿಗೆ ಸಮವಸ್ತ್ರ ವಿತರಿಸಿದರು. ಮುಂದಿನ ತಿಂಗಳ ಶ್ರಮದಾನ ಸ್ಥಳದ ಆಯ್ಕೆ, ಸ್ವಯಂ ಸೇವಕರ ಭಾಗವಹಿಸುವಿಕೆ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು.

ಸಭೆಯಲ್ಲಿ ಊರಿನ ಹಿರಿಯರಾದ ಚುಕ್ಕಣ್ಣ ಗೌಡ, ಆಶೋಕ್ ಆಚಾರ್ಯ, ಘಟಕದ ಸ್ವಯಂ ಸೇವಕರು ಉಪಸ್ಥಿತರಿದ್ದರು. ಘಟಕ ಸಂಯೋಜಕಿ ನಮಿತಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಪಡುಬೆಟ್ಟು ಕಾರ್ಯಕ್ಷೇತ್ರದ ಸೇವಾಪ್ರತಿನಿಧಿ ಮೋಹಿನಿ ಸ್ವಾಗತಿಸಿ, ಘಟಕದ ಸ್ವಯಂ ಸೇವಕಿ ಕುಸುಮ ವಂದಿಸಿದರು.

LEAVE A REPLY

Please enter your comment!
Please enter your name here