ಪುಣಚ ಶ್ರೀದೇವಿ ವಿದ್ಯಾ ಕೇಂದ್ರದಲ್ಲಿ ಪ್ರವೇಶೋತ್ಸವ- ಎಸ್.ಎಸ್.ಎಲ್.ಸಿ.ಸಾಧಕ ವಿದ್ಯಾರ್ಥಿಗಳಿಗೆ ಅಭಿನಂದನಾ ಸಭೆ

0

ಪುಣಚ: ಪುಣಚ ದೇವಿನಗರ ಶ್ರೀದೇವಿ ವಿದ್ಯಾ ಕೇಂದ್ರದಲ್ಲಿ 2023-24ನೇ ಶಾಲಾ ಶೈಕ್ಷಣಿಕ ಪ್ರವೇಶೋತ್ಸವ ಹಾಗೂ ಎಸ್.ಎಸ್.ಎಲ್.ಸಿ. ಯಲ್ಲಿ ಶೇ.100 ಫಲಿತಾಂಶ ದಾಖಲಿಸಿದ ವಿದ್ಯಾರ್ಥಿಗಳಿಗೆ ಅಭಿನಂದನಾ ಕಾರ್ಯಕ್ರಮ ನಮೋ ಭಾರತಿ ಸಭಾಂಗಣದಲ್ಲಿ ಜೂ.10ರಂದು ನಡೆಯಿತು.
ಅತಿಥಿಗಳು ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಮುಖ್ಯ ಅತಿಥಿ‌ಯಾಗಿ ಮುಳಿಯ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ಮುಳಿಯ ಕೇಶವ ಪ್ರಸಾದ್ ಮಾತನಾಡಿ ಗ್ರಾಮೀಣ ಪ್ರದೇಶದಲ್ಲಿ ಇಂತಹ ಒಂದು ಉತ್ತಮ ಶಾಲೆ ಇರುವುದೇ ಊರಿನ ಭಾಗ್ಯ. ಈ ಸಂಸ್ಥೆಯ ಸ್ಥಾಪನೆಗೆ ಕಾರಣರಾದ ಹಿರಿಯರ ಆಶಯ ಹಾಗೂ ಈಗ ಈ ಸಂಸ್ಥೆಯನ್ನು ಮುನ್ನಡೆಸುತ್ತಿರುವ ಆಡಳಿತ ಮಂಡಳಿಯ ಶ್ರಮವನ್ನು ಶ್ಲಾಘಿಸಿದರು.

ಮಂಗಳೂರು ಎಂ.ಆರ್.ಪಿ.ಎಲ್.ನ ಹಣಕಾಸು ವಿಭಾಗದ ಸಹಾಯಕ ಕಾರ್ಯ ನಿರ್ವಾಹಕ ಮಹೇಶ್ ಬಿ.ಮಾತನಾಡಿ ವಿದ್ಯಾರ್ಥಿಗಳು ಜೀವನದಲ್ಲಿ ದೊಡ್ಡ ಗುರಿಯನ್ನು ಇಟ್ಟುಕೊಂಡು ಶಿಕ್ಷಣ ಪಡೆದು,ನಮ್ಮ ಶಕ್ತಿ ಮತ್ತು ಕೊರತೆಯನ್ನು ಅರ್ಥಮಾಡಿಕೊಂಡು ಸಾಧನೆಗೆ ತೊಡಗಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು. ಸಂಸ್ಥೆಯ ನಿವೃತ್ತ ಮುಖ್ಯ ಶಿಕ್ಷಕ, ಆಡಳಿತ ಸಮಿತಿ ಕೋಶಾಧಿಕಾರಿ ಶ್ರೀರಾಮಚಂದ್ರ ಭಟ್ ಸಭಾಧ್ಯಕ್ಷತೆ ವಹಿಸಿದ್ದರು.ಆಡಳಿತ ಸಮಿತಿ ಸದಸ್ಯ ಮಲ್ಯ ಶಂಕರ ನಾರಾಯಣ ಭಟ್, ಪ್ರೌಢಶಾಲಾ ಮುಖ್ಯ ಶಿಕ್ಷಕಿ ರಜನಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿದ್ಯಾಕೇಂದ್ರಕ್ಕೆ ನೂತನವಾಗಿ ಸೇರ್ಪಡೆಗೊಂಡ ವಿದ್ಯಾರ್ಥಿಗಳನ್ನು ತಿಲಕವಿಟ್ಟು ಸ್ವಾಗತಿಸಲಾಯಿತು.ವಿದ್ಯಾರ್ಥಿಗಳು ಭಾರತಮಾತೆಗೆ ಪುಷ್ಪಾರ್ಚನೆ ಮಾಡಿ,ಅಕ್ಷತೆ ಹಾಕಿಸಿಕೊಂಡು ಆಶೀರ್ವಾದ ಪಡೆದುಕೊಂಡರು. ಬಳಿಕ 2023-24ನೇ ಶೈಕ್ಷಣಿಕ ವರ್ಷದ SSLC ಪರೀಕ್ಷೆಯಲ್ಲಿ 100% ಫಲಿತಾಂಶ ಪಡೆದು ಶಾಲೆಗೆ ಕೀರ್ತಿ ತಂದ ಎಲ್ಲಾ ವಿದ್ಯಾರ್ಥಿಗಳನ್ನು ವೇದಿಕೆಯಲ್ಲಿ ಅಭಿನಂದಿಸಲಾಯಿತು.

ಆಡಳಿತ ಸಮಿತಿ ಅಧ್ಯಕ್ಷ ಜಯಶ್ಯಾಂ ನೀರ್ಕಜೆ ಸ್ವಾಗತಿಸಿ, ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕ ಲೋಕೇಶ್ ಎಸ್. ಧನ್ಯವಾದಗೈದರು. ಶಿಕ್ಷಕಿ ಶ್ವೇತ ಕುಮಾರಿ ಕಾರ್ಯಕ್ರಮ ನಿರೂಪಿಸಿದರು. ಆಡಳಿತ ಸಮಿತಿ, ಶಿಕ್ಷಕ ವೃಂದ, ಶಿಕ್ಷಕೇತರ ವೃಂದ, ವಿದ್ಯಾರ್ಥಿಗಳು ಪೋಷಕರು ಉಪಸ್ಥಿತರಿದ್ದರು. ಶಾಂತಿಮಂತ್ರದೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.

LEAVE A REPLY

Please enter your comment!
Please enter your name here