ಮಂಗಳೂರು: ಗೇರು ರೈತರಿಗೆ ತರಬೇತಿ ಶಿಬಿರ

0

ಬರಡು ಭೂಮಿಯಲ್ಲಿ ಬಂಗಾರದ ಬೆಳೆ ಗೇರು – ಕಡಮಜಲು ಸುಭಾಸ್‌ ರೈ


ಪುತ್ತೂರು: ಕರ್ನಾಟಕ ಸರಕಾದ ಅಧೀನ ಸಂಸ್ಥೆಯಾದ ಕರ್ನಾಟಕ ಗೇರು ಅಭಿವೃದ್ದಿ ನಿಗಮದಿಂದ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯ ಪ್ರಾಯೋಜಕತ್ವದಲ್ಲಿ ʻಗೇರು ಬೆಳೆಯ ಬಗ್ಗೆ ರೈತರಿಗೆ ತರಬೇತಿ ಶಿಬಿರವು ಜೂ.7 ರಂದು ಮಂಗಳೂರಿನ ನಿಗಮದ ರೈತ ತರಬೇತಿ ಕೇಂದ್ರದಲ್ಲಿ ನಡೆಯಿತು.


ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿದ್ದ, ಗೇರು ಕೃಷಿಯ ಮಾಹಿತಿದಾರರಾದ ವೈಜ್ಞಾನಿಕ ಗೇರು ಕೃಷಿಕ ಕಡಮಜಲು ಸುಭಾಸ್‌ ರೈಯವರು ಮಾತನಾಡಿ ʻಜಮೀನಿಗೆ ಪೂರಕವಾದ ಮತ್ತು ಬದುಕಿಗೆ ಪೂರಕವಾದ ಕೃಷಿಯನ್ನು ವೈಜ್ಞಾನಿಕವಾಗಿ ಬರಡು ಭೂಮಿಯಲ್ಲಿ ಬಂಗಾರದ ಬೆಳೆ, ಗೇರು ಕೃಷಿಯನ್ನು ಮಾಡುವ ಮೂಲಕ ರೈತ ತನ್ನ ಸಂಪತ್ತನ್ನು ದ್ವಿಗುಣಗೊಳಿಸಿ, ಸಂತೃಪ್ತ ಜೀವನವನ್ನು ನಡೆಸಬಹುದು. ಸಮಗ್ರ ಕೃಷಿಯಲ್ಲಿ ಗೇರು ಬೆಳೆಯನ್ನು ಬೆಳೆಸಬಹುದು, ವಿವಿಧ ಗೇರು ತಳಿಗಳಾದ ವಿಆರ್‌ಐ3, ಭಾಸ್ಕರ, ಉಳ್ಳಾಲ-3, ವೆಂಗುರ್ಲಾ-7 ಮೊದಲಾದ ತಳಿಗಳು ಕರಾವಳಿ ಪ್ರದೇಶಕ್ಕೆ ಸೂಕ್ತವಾಗಿದೆ. ವಿಆರ್‌ಐ-3 ಯನ್ನು ಘನಸಾಂದ್ರ ಪದ್ದತಿಯಲ್ಲಿ ಬೆಳೆಸಿ, ಪ್ರತೀ ವರ್ಷ ಗೆಲ್ಲು ಸವರುವ ಮೂಲಕ ಹೆಚ್ಚು ಇಳುವರಿಯನ್ನು ಪಡೆಯಬಹುದು. ಉಳ್ಳಾಲ-3, ಭಾಸ್ಕರ, ವೆಂಗುರ್ಲಾವನ್ನು ಕೂಡಾ ಸಾಮಾನ್ಯ ಪದ್ದತಿ ಅಂದರೆ 8*8 ಅಥವಾ 7*7 ಅಡಿ ಚೌಕಾಕಾರದಲ್ಲಿ ನೆಟ್ಟು ಕರಾವಳಿ ಪ್ರದೇಶದಲ್ಲಿ ಆದಾಯ ಗಳಿಸಬಹುದು. ಪಂಚಸೂತ್ರಗಳಾದ ಪರಿಜ್ಞಾನ, ಪರಿಶ್ರಮ, ಪರಿಪೂರ್ಣ ನಿರ್ವಹಣೆ, ಪತಿ-ಪತ್ನಿಯ ಸಹಕಾರ ಹಾಗೂ ಫಲಿತಾಂಶದ ನಿರೀಕ್ಷೆಯೊಂದಿಗೆ ಲವಲವಿಕೆಯಿಂದ ರೈತ ಕೆಲಸ ಮಾಡಿದರೆ ಕೃಷಿ ಪರಾಕ್ರಮಿಯಾಗಬಹುದೆಂದು ಗೇರು ಕೃಷಿಕರಿಗೆ ಉತ್ತೇಜನದ ಮಾತುಗಳನ್ನಾಡಿ ಸಮಗ್ರ ಮಾಹಿತಿ ನೀಡಿದರು.


ಸಮಾರಂಭದ ಅಧ್ಯಕ್ಷರೂ, ಉದ್ಘಾಟಕರೂ ಆದ ನಿಗಮದ ಅಧ್ಯಕ್ಷೆ ಮಮತಾ ಡಿ.ಎಸ್‌. ಗಟ್ಟಿಯವರು ಮಾತನಾಡಿ ʻಗೇರು ಪ್ರತಿಯೊಂದು ಮನೆಯ ಆಹಾರ ವಸ್ತುವಾಗಿದೆ. ಭಾರತೀಯ ಖಾದ್ಯಗಳಲ್ಲಿ ಗೇರು ಪ್ರತಿಯೊಬ್ಬರೂ ಬಳಸುವ ವಸ್ತುವಾಗಿದೆ. ಪ್ರತೀ ತಾಲೂಕಿನಲ್ಲಿ ಇಂತಹ ಶಿಬಿರಗಳನ್ನು ಆಯೋಜಿಸುವ ಮೂಲಕ ರೈತರಿಗೆ ಹೊಸ ಚೈತನ್ಯವನ್ನು ನೀಡಲಾಗುವುದು ಎಂದರು.


ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ಕಮಲರವರು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಉದ್ಘಾಟನೆಯ ಬಳಿಕ ಡಿಸಿಆರ್‌ ನಿರ್ದೇಶಕ ಡಾ. ದಿನಕರ ಅಡಿಗ ಮತ್ತು ಡಿಸಿಆರ್‌ ವಿಜ್ಞಾನಿ ಟಿ.ಎನ್.‌ ರವಿಪ್ರಸಾದ್ ರವರಿಂದ ಗೇರು ಕೃಷಿಯ ಬಗ್ಗೆ ತಾಂತ್ರಿಕ ತರಬೇತಿ ನಡೆಯಿತು.
ಅಪರಾಹ್ನ ಮಾನವ ಸಂಪನ್ಮೂಲ ಮತ್ತು ಮಾನಸಿಕ ಒತ್ತಡ ನಿವಾರಣೆʼ ವಿಷಯಗಳಲ್ಲಿ ಡಾ. ಮಸ್ಕರೇನ್ಹಸ್‌ ಪ್ಯಾಟ್ರಿಕ್‌ ಸಿಪ್ರಿಯನ್‌ ಮತ್ತು ರಾಮಚಂದ್ರ ಭಟ್‌ ಮಾಹಿತಿ ನೀಡಿದರು.
ರೈತರಿಗೆ ಕಸಿಗೇರು ವಿತರಣೆ ಮಾಡಲಾಯಿತು. ನಿಗಮದ ಉಪಅರಣ್ಯ ಸಂರಕ್ಷಣಾಧಿಕಾರಿ ಮತ್ತು ವಿಭಾಗೀಯ ವ್ಯವಸ್ಥಾಪಕಾರದ ಉದಯ ಕುಮಾರ್‌ ಜೋಗಿ ವಂದಿಸಿದರು. ವಿಶ್ವನಾಥ್‌ ಪ್ರಾರ್ಥಿಸಿದರು. ಕುಸುಮ ನಾರಾಯಣ್‌ ಕೆಸಿಡಿಸಿ ರವರು ಕಾರ್ಯಕ್ರಮ ನಿರ್ವಹಿಸಿದರು. ನಿಗಮದ ಪುತ್ತೂರು ಅರಣ್ಯಾಧಿಕಾರಿ ರವಿಪ್ರಸಾದ್‌ ರವರು ಸಹಕರಿಸಿದರು.

LEAVE A REPLY

Please enter your comment!
Please enter your name here