ರಕ್ತದಾನ ಮಾಡಿ ರೋಗಿಗೆ ಮರುಜನ್ಮ ನೀಡಿ-ಮಧು ಎಸ್.ಮನೋಹರ್
ಪುತ್ತೂರು: ಓರ್ವ ವ್ಯಕ್ತಿ ನೀಡುವ ರಕ್ತ ಅದು ಮೂರು ಜನರಿಗೆ ಪ್ರಯೋಜನವಾಗುತ್ತದೆ. ರಕ್ತದಾನ ಮಾಡಿದ ವ್ಯಕ್ತಿಯ ಆರೋಗ್ಯದಲ್ಲಿ ಬಹಳಷ್ಟು ಚೇತರಿಕೆ ಕಾಣಬಲ್ಲುದು. ಆದ್ದರಿಂದ ರಕ್ತದಾನ ಮಾಡಿದಾಗ ರೋಗಿಗೆ ಮರುಜನ್ಮ ನೀಡಿದಂತಾಗುತ್ತದೆ ಎಂದು ಪುತ್ತೂರು ನಗರಸಭಾ ಪೌರಾಯುಕ್ತ ಮಧು ಎಸ್.ಮನೋಹರ್‌ರವರು ಹೇಳಿದರು.
ಪುತ್ತೂರಿನ ಹಿರಿಯ ಕ್ಲಬ್ ಎನಿಸಿದ ರೋಟರಿ ಕ್ಲಬ್ ಪುತ್ತೂರು ಇದರ ಆಶ್ರಯದಲ್ಲಿ ಇನ್ನರ್‌ವ್ಹೀಲ್ ಕ್ಲಬ್ ಪುತ್ತೂರು, ರೋಟರ‍್ಯಾಕ್ಟ್ ಕ್ಲಬ್ ಪುತ್ತೂರು, ರೋಟರ‍್ಯಾಕ್ಟ್ ಕ್ಲಬ್ ಪ್ರಗತಿ ಪ್ಯಾರಾಮೆಡಿಕಲ್ ಕಾಲೇಜು ಪುತ್ತೂರು, ರೋಟರ‍್ಯಾಕ್ಟ್ ಕ್ಲಬ್ ಪುತ್ತೂರು ಸ್ವರ್ಣ ಇವುಗಳ ಸಹಭಾಗಿತ್ವದಲ್ಲಿ ಜೂ.14 ರಂದು ವಿಶ್ವ ರಕ್ತದಾನಿಗಳ ದಿನದ ಅಂಗವಾಗಿ ಪುತ್ತೂರು ರಾಧಾಕೃಷ್ಣ ಬಿಲ್ಡಿಂಗ್ ನಲ್ಲಿನ ಎರಡನೇ ಮಹಡಿಯಲ್ಲಿನ ಪುತ್ತೂರು ರೋಟರಿ ಕ್ಯಾಂಪ್ಕೋ ಬ್ಲಡ್ ಸೆಂಟರ್‌ನಲ್ಲಿ ಬೆಳಿಗ್ಗೆಯಿಂದ ಅಪರಾಹ್ನದವರೆಗೆ ಜರಗಿದ ಶಿಬಿರವನ್ನು ಅವರು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು. ನಾನೂ ಕೂಡ ನನ್ನ ಜೀವನದಲ್ಲಿ ಕಳೆದ 20 ವರ್ಷದಲ್ಲಿ 22 ಸಲ ರಕ್ತದಾನ ಮಾಡಿದ್ದೇನೆ. ಕಾಲೇಜು ದಿನಗಳಲ್ಲಿ ಓರ್ವ ರೋಗಿಗೆ ರಕ್ತದಾನ ಮಾಡಿದ ಸಂದರ್ಭದಲ್ಲಿ ರಕ್ತದಾನದ ಮಹತ್ವದ ಬಗ್ಗೆ ತಿಳಿದಿದ್ದೆ. ಈಗಲೂ ಮಂಗಳೂರಿನ ರಕ್ತದಾನಿಗಳ ಲಿಸ್ಟ್‌ನಲ್ಲಿ ನನ್ನ ಹೆಸರು ಇದೆ. ನಾವೆಲ್ಲರೂ ರಕ್ತದಾನ ಮಾಡುವ ಮೂಲಕ ಮತ್ತೋರ್ವರ ಬಾಳಿನಲ್ಲಿ ಆಶಾಕಿರಣವನ್ನು ರೂಪಿಸುವ ಮಹತ್ಕಾರ್ಯದಲ್ಲಿ ಕೈಜೋಡಿಸೋಣ ಎಂದರು.
ಇನ್ನರ್‌ವ್ಹೀಲ್ ಕ್ಲಬ್ ಪುತ್ತೂರು ನಿಯೋಜಿತ ಅಧ್ಯಕ್ಷೆ ರಾಜೇಶ್ವರಿ ಆಚಾರ್ ಮಾತನಾಡಿ, ರಕ್ತದಾನ ಶಿಬಿರವು ಪುತ್ತೂರು ರೋಟರಿ ಕ್ಲಬ್‌ನ ಚರಿತ್ರೆಯಲ್ಲಿಯೇ ಇದೊಂದು ಮಹತ್ಕಾರ್ಯ ಕೊಡುಗೆಯಾಗಿದೆ. ಪುತ್ತೂರು ರೋಟರಿ ಕ್ಲಬ್ ಅತ್ತ್ಯುತ್ತಮ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರಲ್ಲಿ ಸದಾ ಮುಂದು ಎಂದರು.
ಈ ಸಂದರ್ಭದಲ್ಲಿ ರೋಟರಿ ಬ್ಲಡ್ ಬ್ಯಾಂಕ್‌ನ ವೈದ್ಯಾಧಿಕಾರಿ ಡಾ.ರಾಮಚಂದ್ರ ಕೆ, ಡಾ.ಕೆ.ಎಸ್ ಭಟ್, ರೋಟರಿ ಮಾಜಿ ಅಸಿಸ್ಟೆಂಟ್ ಗವರ್ನರ್ ಆಸ್ಕರ್ ಆನಂದ್, ರೋಟರ‍್ಯಾಕ್ಟ್ ಕ್ಲಬ್ ಪ್ರಗತಿ ಪ್ಯಾರಾಮೆಡಿಕಲ್ ಕಾಲೇಜು ಪುತ್ತೂರು ಚೇರ್‌ಮ್ಯಾನ್ ಪ್ರೀತಾ ಹೆಗ್ಡೆ, ಕಾರ್ಯದರ್ಶಿ ದೀಕ್ಷಿತಾ, ರೋಟರ‍್ಯಾಕ್ಟ್ ಕ್ಲಬ್ ಪುತ್ತೂರು ಚೇರ್‌ಮ್ಯಾನ್ ಪ್ರೇಮಾನಂದ, ರೋಟರಿ ಕ್ಲಬ್ ಪುತ್ತೂರು ನಿಯೋಜಿತ ಕಾರ್ಯದರ್ಶಿ ದಾಮೋದರ್, ಬಾಲಕೃಷ್ಣ ಕೊಳತ್ತಾಯ, ಇನ್ನರ್‌ವ್ಹೀಲ್ ಕ್ಲಬ್ ಮಾಜಿ ಅಧ್ಯಕ್ಷೆ ವೀಣಾ ಕೊಳತ್ತಾಯ, ರೋಟರಿ ಪುತ್ತೂರು ಸದಸ್ಯ ಗುರುರಾಜ್, ರೋಟರಿ ಬ್ಲಡ್ ಬ್ಯಾಂಕ್ ಸಿಬ್ಬಂದಿಗಳಾದ ಸಜಿನಿ ಮಾರ್ಟಿಸ್, ನಮೃತಾ, ಶ್ರುತಿ, ಪಿಆರ್‌ಒ ಕುಲ್‌ದೀಪ್, ಬ್ಲಡ್ ಹೆಲ್ಪ್‌ಲೈನ್ ಸದಸ್ಯರು ಸಹಿತ ಮತ್ತೀತರರು ಉಪಸ್ಥಿತರಿದ್ದರು. ರೋಟರಿ ಕ್ಲಬ್ ಪುತ್ತೂರು ಅಧ್ಯಕ್ಷ ಜೈರಾಜ್ ಭಂಡಾರಿ ಸ್ವಾಗತಿಸಿ, ಕ್ಲಬ್ ಕಾರ್ಯದರ್ಶಿ ಸುಜಿತ್ ಡಿ.ರೈ ವಂದಿಸಿದರು.
ಜನಮಾನಸದಲ್ಲೂ ಮೆಚ್ಚುಗೆಗೆ ಪಾತ್ರವಾಗಿದೆ ಕಾರ್ಯಕ್ರಮಗಳು..
ರೋಟರಿ ಕ್ಲಬ್ ಪುತ್ತೂರು ಪುತ್ತೂರಿನಲ್ಲಿ ಸಮಾಜಮುಖಿ ಸೇವೆಯನ್ನು ನೀಡುವ ಮೂಲಕ ಜನರ ಮೆಚ್ಚುಗೆಗೆ ಪಾತ್ರವಾಗಿದೆ. ಪುತ್ತೂರಿನ ಹಿರಿಯ ಕ್ಲಬ್ ಎನಿಸಿರುವ ಈ ಕ್ಲಬ್ ಇಲ್ಲಿಯವರೆಗೆ ಅನೇಕ ಜನಮಾನಸದಲ್ಲಿ ಅಚ್ಚಳಿಯದೆ ಉಳಿಯುವಂತಹ ಕಾರ್ಯವನ್ನು ಮಾಡಿದೆ. ಪ್ರತಿ ವರ್ಷ ಕ್ಲಬ್ ವಿಶ್ವ ರಕ್ತದಾನಿಗಳ ದಿನದಂದು ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳುತ್ತಾ ಬಂದಿದೆ.
-ಜೈರಾಜ್ ಭಂಡಾರಿ, ಅಧ್ಯಕ್ಷರು, ರೋಟರಿ ಕ್ಲಬ್ ಪುತ್ತೂರು
ಗೆಳೆತನ, ಫೆಲೋಶಿಪ್, ಸೇವೆಯಿಂದ ಕ್ಲಬ್ ಮುಂಚೂಣಿಯಲ್ಲಿದೆ..
ಪುತ್ತೂರು ರೋಟರಿ ಕ್ಲಬ್ ಈಗಾಗಲೇ 80 ಮನೆಗಳನ್ನು ಫಲಾನುಭವಿಗಳಿಗೆ ನಿರ್ಮಿಸಿಕೊಟ್ಟಿದೆ. ರಕ್ತ ಸಂಸ್ಕರಣ ಕೇಂದ್ರ ಬ್ಲಡ್ ಬ್ಯಾಂಕ್ ಅನ್ನು ಸ್ಥಾಪಿಸಿ ಮೇಲ್ದರ್ಜೆಗೇರಿಸಿದೆ. ಡಯಾಲಿಸಿಸ್ ಕೇಂದ್ರವನ್ನು ಸ್ಥಾಪಿಸಿದೆ. ಪ್ರಸಾದ್ ನೇತ್ರಾಲಯದವರ ಸಂಯೋಜನೆಯಲ್ಲಿ ರೋಟರಿ ಕಣ್ಣಿನ ಆಸ್ಪತ್ರೆಯನ್ನು ಇತ್ತೀಚೆಗೆ ಲೋಕಾರ್ಪಣೆಗೊಳಿಸಿದ್ದು ಗೆಳೆತನ, ಫೆಲೋಶಿಪ್ ಹಾಗೂ ಸೇವೆಯ ಮೂಲಕ ಕ್ಲಬ್ ಮುಂಚೂಣಿಯಲ್ಲಿದೆ.
-ಎ.ಜೆ ರೈ, ಮಾಜಿ ಅಸಿಸ್ಟೆಂಟ್ ಗವರ್ನರ್, ರೋಟರಿ ಜಿಲ್ಲೆ 3181, ವಲಯ 5