ವಳಕಡಮ-ಗುಂಡಿಕಂಡ ರಸ್ತೆ ಕೆಸರುಮಯ-ಬಾಳೆಗಿಡ ನೆಟ್ಟು ಗ್ರಾಮಸ್ಥರ ಆಕ್ರೋಶ

0

ಉಪ್ಪಿನಂಗಡಿ: ಕೊಲ ಗ್ರಾಮದ ವಳಕಡಮ-ಗುಂಡಿಕಂಡ ರಸ್ತೆಯು ಕೆಸರುಮಯಗೊಂಡಿದ್ದು ಗ್ರಾಮಸ್ಥರು ರಸ್ತೆಯಲ್ಲಿ ಬಾಳೆಗಿಡ ನೆಟ್ಟು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಳಕಡಮ ಅಂಗನವಾಡಿಯಿಂದ ಗುಂಡಿಕಂಡಕ್ಕೆ ತೆರಳುವ ರಸ್ತೆಯೂ ತೀರ ಹದಗೆಟ್ಟಿದ್ದು ಕಳೆದ ನಾಲ್ಕೈದು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ರಸ್ತೆ ಸಂಪೂರ್ಣ ಕೆಸರುಮಯಗೊಂಡಿದೆ. ಇದರಿಂದಾಗಿ ಈ ರಸ್ತೆಯಲ್ಲಿ ಸರ್ಕಸ್ ಮಾಡಿಕೊಂಡು ಸಂಚಾರ ಮಾಡಬೇಕಾದ ಪರಿಸ್ಥಿತಿ ಇಲ್ಲಿನ ಜನರಿಗೆ ಒದಗಿಬಂದಿದೆ. ಈ ಭಾಗದಲ್ಲಿ ಹಲವು ಮನೆಗಳಿದ್ದು ಇವರೆಲ್ಲರೂ ಸದ್ರಿ ರಸ್ತೆಯನ್ನೇ ಅವಲಂಭಿಸಿದ್ದಾರೆ. ದ್ವಿಚಕ್ರವಾಹನ, ರಿಕ್ಷಾ, ಜೀಪು ಈ ರಸ್ತೆಯಲ್ಲಿ ದಿನನಿತ್ಯ ಓಡಾಟ ನಡೆಸುತ್ತಿವೆ. ರಸ್ತೆ ಕಾಂಕ್ರಿಟೀಕರಣ ಮಾಡುವಂತೆ ಗ್ರಾಮಸ್ಥರು ಜನಪ್ರತಿನಿಧಿಗಳು, ಅಧಿಕಾರಿಗಳಿಗೆ ಮನವಿ ಸಲ್ಲಿಸುತ್ತಲೇ ಬಂದಿದ್ದಾರೆ. ಆದರೆ ಈ ಮನವಿಗೆ ಈ ತನಕವೂ ಸ್ಪಂದನೆ ಸಿಕ್ಕಿಲ್ಲ. ಆದ್ದರಿಂದ ಮಳೆಗಾಲದಲ್ಲಿ ಈ ರಸ್ತೆಯಲ್ಲಿ ಎದ್ದುಬಿದ್ದು ಸಂಚರಿಸಬೇಕಾದ ಪರಿಸ್ಥಿತಿಯೂ ಗ್ರಾಮದ ಜನರಿಗೆ ತಪ್ಪಿಲ್ಲ. ಈ ಭಾಗದಲ್ಲಿ ಕೃಷಿಕರು, ಹೈನುಗಾರರೇ ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ಹೈನುಗಾರರು, ಕೃಷಿಕರು ತಮ್ಮ ಉತ್ಪನ್ನಗಳ ಮಾರಾಟಕ್ಕೆ ಸದ್ರಿ ರಸ್ತೆಯನ್ನೇ ಅವಲಂಭಿಸಿರುವುದರಿಂದ ಈಗ ಸಂಕಷ್ಟ ಅನುಭವಿಸುತ್ತಿದ್ದಾರೆ. ಶಾಲಾ ಮಕ್ಕಳೂ ಕೆಸರುಮಯ ರಸ್ತೆಯಲ್ಲಿಯೇ ಶಾಲೆಗೆ ಹೋಗಬೇಕಾದ ಪರಿಸ್ಥಿತಿ ಉಂಟಾಗಿದೆ. ಈ ರಸ್ತೆಯ ದುಸ್ಥಿತಿಯಿಂದ ರೋಸಿ ಹೋಗಿರುವ ಗ್ರಾಮಸ್ಥರು ಕೆಸರುಮಯ ರಸ್ತೆಯಲ್ಲಿ ಬಾಳೆಗಿಡ ನೆಟ್ಟು ಆಕ್ರೋಶ ವ್ಯಕ್ತಪಡಿಸಿ, ಸಂಬಂಧಪಟ್ಟವರು ಇನ್ನಾದರೂ ರಸ್ತೆಯ ಬಗ್ಗೆ ಗಮನ ಹರಿಸಿ ರಸ್ತೆ ಕಾಂಕ್ರಿಟೀಕರಣಕ್ಕೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

ರಸ್ತೆ ಅಭಿವೃದ್ಧಿಗೊಳಿಸಿ:
ಸದ್ರಿ ರಸ್ತೆಯ ಮಣ್ಣು ಸೇಡಿ ಮಣ್ಣು ಆಗಿರುವುದರಿಂದ ಈಗ ನಡೆದು ಹೋಗಲೂ ಆಗುವುದಿಲ್ಲ. ರಸ್ತೆಗೆ ಚರಂಡಿ ವ್ಯವಸ್ಥೆಯೂ ಇಲ್ಲ. ಸುಮಾರು 30 ರಿಂದ 50 ಮನೆಗೆ ಇದು ಸಂಪರ್ಕ ರಸ್ತೆಯಾಗಿದೆ. ಈ ರಸ್ತೆಗೆ ಬಂದ ಹಣವನ್ನು ಬೇರೆ ರಸ್ತೆಯ ಅಭಿವೃದ್ಧಿಗೆ ಬಳಕೆ ಮಾಡಿದ್ದಾರೆ. ಈಗ ರಸ್ತೆ ಕೆಸರುಮಯಗೊಂಡಿರುವುದರಿಂದ ಸಂಪರ್ಕವೇ ಕಡಿತಗೊಂಡಿದ್ದು ಜನರಿಗೆ ಓಡಾಟಕ್ಕೆ ತೊಂದರೆಯಾಗಿದೆ. ಈ ಬಗ್ಗೆ ಶಾಸಕರ ಗಮನಕ್ಕೂ ತರುತ್ತೇವೆ. ಆದಷ್ಟು ಬೇಗ ರಸ್ತೆ ಅಭಿವೃದ್ಧಿಗೆ ಸಂಬಂಧಪಟ್ಟವರು ಗಮನ ಹರಿಸಬೇಕು.
ಚೇತನ್ ವಳಕಡಮ,ಗ್ರಾಮಸ್ಥರು

LEAVE A REPLY

Please enter your comment!
Please enter your name here